;Resize=(412,232))
ಅರಣ್ಯ ಸಂರಕ್ಷಣಾ ಕಾಯ್ದೆ ಅದೆಷ್ಟು ಕಠಿಣವಾಗಿದೆ ಎಂದರೆ, ಅರಣ್ಯದ ಭೂಮಿಯನ್ನು ಯಾವುದೇ ಕಾರಣಕ್ಕೂ ಅನ್ಯ ಉದ್ದೇಶಕ್ಕೆ ಬಳಸಲಾಗದು. ಅದರಲ್ಲೂ ಅರಣ್ಯ ಭೂಮಿ ಹಂಚಿಕೆ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವೇ ಇಲ್ಲ. ಬಳಸಲೇ ಬೇಕಾದ ಅನಿವಾರ್ಯ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರದ ಅನುಮತಿ ಪಡೆಯಲೇ ಬೇಕು. ಬಹುತೇಕ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರ ಅನುಮತಿ ನೀಡುವುದಿಲ್ಲ. ನೀಡಿದರೂ, ಅನೇಕ ಕಠಿಣ ಷರತ್ತುಗಳನ್ನು ವಿಧಿಸುತ್ತದೆ.
ಬೆಂಗಳೂರು ಮಹಾನಗರದಲ್ಲಿ ಒಂದು ಅಡಿ ಭೂಮಿಗೂ ಸಾವಿರಾರು ರೂಪಾಯಿ ಬೆಲೆ ಇದೆ. ಇಲ್ಲಿ ಭೂಮಿಗಾಗಿ ಅದೆಷ್ಟೋ ಹಗರಣಗಳೇ ನಡೆದಿವೆ. ಖಾಸಗಿ ಭೂಮಿಗೇ ಕನ್ನ ಹಾಕುವ ಜನರಿರುವಾಗ, ಇನ್ನು, ಸರ್ಕಾರಿ ಭೂಮಿಯನ್ನು ಕೇಳಬೇಕೇ..? ಭೂಗಳ್ಳರಿಗೆ ಸರ್ಕಾರಿ ಭೂಮಿ ಕಬಳಿಸೋದು ಅಂದರೆ ಫ್ರಿ ಚಾಕಲೇಟ್ ಸಿಕ್ಕ ಹಾಗೆ. ಹೀಗಿರುವಾಗ ಬೆಂಗಳೂರಿನ ಭೂಗಳ್ಳರಿಗೆ ಅರಣ್ಯ ಇಲಾಖೆಯ ದಿಟ್ಟ ಕ್ರಮಗಳು ನಡುಕ ಹುಟ್ಟಿಸಿದೆ.
ಬೆಂಗಳೂರು ಹೊರವಲಯದ ಬನ್ನೇರುಘಟ್ಟದ ಸಮೀಪದಲ್ಲಿರುವ ಭೂತಾನಹಳ್ಳಿ ಗುಡ್ಡ ಬೆಟ್ಟಗಳಿಂದ ಕೂಡಿರುವ ಸುಂದರ ಪ್ರದೇಶ. ಇಲ್ಲಿ ಸುಮಾರು 20 ವರ್ಷಗಳ ಹಿಂದೆಯೇ ಅತಿಥಿ ಲೇಔಟ್ ಎನ್ನುವ ಬೃಹತ್ ವಸತಿ ಪ್ರದೇಶ ನಿರ್ಮಾಣವಾಗಿದೆ. ಇಲ್ಲಿ 16 ಸಾವಿರ ಸೈಟ್ಗಳನ್ನು ಮಾಡಿ ಹಂಚಿಕೆ ಮಾಡಲಾಗಿತ್ತು. ಈ ಜಮೀನಿನ ಹಳೆಯ ದಾಖಲೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಿಕ್ಕಾಗ ಆಶ್ಚರ್ಯ ಮತ್ತು ಆಘಾತ ಆಗಿದೆ.
ಏಕೆಂದರೆ ಇದು ಸಂಪೂರ್ಣ ಅರಣ್ಯ ಭೂಮಿ. 1934ರಲ್ಲಿ ಅಂದಿನ ಮೈಸೂರು ಮಹಾರಾಜರು ಸುಮಾರು 547 ಎಕರೆ ಭೂಮಿಯನ್ನು ಅರಣ್ಯ ಎಂದು ಘೋಷಣೆ ಮಾಡಿದ್ದರು. ಆದರೆ, ಕಂದಾಯ ಇಲಾಖೆ ಈ ಭೂಮಿಯನ್ನು ಕೆಲವರ ಹೆಸರಿಗೆ ಪಹಣಿ ಮಾಡಿಕೊಟ್ಟಿತ್ತು. ಯಾವಾಗ ಅರಣ್ಯಾಧಿಕಾರಿಗಳಿಗೆ ಈ ದಾಖಲೆ ಸಿಕ್ಕಿಯೋ, ಆಗ ಕಾರ್ಯಾಚರಣೆ ಶುರು ಮಾಡಿ ಈಗ ಸುಮಾರು 20 ವರ್ಷಗಳಿಂದ ನಿರಂತರವಾಗಿ ಕ್ರಮ ಜರುಗಿಸಿ ಹಂತ ಹಂತವಾಗಿ 350 ಎಕರೆ ಭೂಮಿಯನ್ನು ಇಲಾಖೆ ವಶಕ್ಕೆ ಪಡೆಯಲಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಇನ್ನೂ 60 ರಿಂದ 70 ಎಕರೆ ಭೂಮಿ ಇಲಾಖೆಗೆ ವಾಪಸ್ ಕೊಡುವಂತೆ ಕೋರ್ಟ್ ನಿರ್ದೇಶನ ನೀಡಿದೆ. ಇದನ್ನು ಮರಳಿ ಪಡೆದ ಇಲಾಖೆ ಇಲ್ಲಿ ನೆಡುತೋಪು ನಿರ್ಮಾಣ ಮಾಡಿದ್ದು, ಇಡೀ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದೆ.
ಬೆಂಗಳೂರಿನಲ್ಲಿ ಅರಣ್ಯ ಇಲಾಖೆ ಒಂದರದ್ದೇ ಬರೋಬ್ಬರಿ 264 ಎಕರೆ ಭೂಮಿ ಒತ್ತುವರಿಯಾಗಿತ್ತು. ಈ ಜಾಗದ ಮೌಲ್ಯ ಸರಿ ಸುಮಾರು 11 ಸಾವಿರ ಕೋಟಿ. ಅರಣ್ಯ ಇಲಾಖೆ ಯಾರ ಮುಲಾಜಿಗೂ ಜಗ್ಗದೇ, ಯಾರ ಒತ್ತಡಕ್ಕೂ ಮಣಿಯದೇ ಮಾರುಕಟ್ಟೆಯ ದರದಲ್ಲಿ ಸಾವಿರಾರು ಕೋಟಿ ಮೌಲ್ಯದ, ಪರಿಸರದ ಕೊಡುಗೆಯ ದೃಷ್ಟಿಯಿಂದ ಅಗಣಿತ ಹಾಗೂ ಊಹೆಗೂ ನಿಲುಕದ ಮೌಲ್ಯ ಹೊಂದಿದ್ದ 264 ಎಕರೆ ಭೂಮಿಯನ್ನು ಕಳೆದ 3 ವರ್ಷಗಳಲ್ಲಿ ತನ್ನ ವಶಕ್ಕೆ ವಾಪಸ್ ತೆಗೆದುಕೊಂಡಿದೆ.
ಬಿಎಂ ಕಾವಲ್, ತುರಹಳ್ಳಿ ಅರಣ್ಯ, ಕಾಡುಗೊಂಡನಹಳ್ಳಿ, ಯಲಹಂಕ, ಕೆ ಆರ್ ಪುರಂ, ಕಗ್ಗಲಿಪುರ, ಆನೇಕಲ್, ಹೀಗೆ 24 ಕಡೆ ದಶಕಗಳಿಂದ ಆಗಿದ್ದ ಒತ್ತುವರಿಯನ್ನು ಕಡೆಗೂ ಬಿಡಿಸಲಾಯಿತು. ಕಾಡುಗೋಡಿಯ ಒತ್ತುವರಿ ಪ್ರಕರಣದಲ್ಲಿ ಕೆಐಎಡಿಬಿ ಖುದ್ದು ಅರಣ್ಯ ಭೂಮಿಯನ್ನು ಬೇರೆಯವರಿಗೆ ಪರಭಾರೆ ಮಾಡಿದೆ. ಅದನ್ನೆಲ್ಲ ವಾಪಸ್ ಬಿಡಿಸಿಕೊಳ್ಳಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಹೀಗೆ ಮರು ವಶಕ್ಕೆ ತೆಗೆದುಕೊಂಡ ಭೂಮಿಯನ್ನು ಯಾವುದೇ ದಾಖಲೆಗಳಿಲ್ಲದಿದ್ದರೂ, ತಮ್ಮದೇ ಎಂದು ವಾದಿಸಿ ಅರಣ್ಯ ಇಲಾಖೆಯ ಮೇಲೆ 35ಕ್ಕೂ ಹೆಚ್ಚು ಕೇಸುಗಳನ್ನು ದಾಖಲಿಸಲಾಗಿದೆ.
ಅರಣ್ಯ ಇಲಾಖೆಯ ಬೆಂಗಳೂರು ನಗರ ವಿಭಾಗ ತನ್ನ ಹಳೆಯ ಕಡತಗಳನ್ನೆಲ್ಲಾ ಜಾಲಾಡತೊಡಗಿದಾಗ ಅನೇಕ ಕಡೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ದಾಖಲೆಗಳು ಸಿಕ್ಕವು. ಸರ್ಕಾರದ ಕೆಲವು ನಿಗಮ/ಮಂಡಳಿಗಳೇ ಕೆಲವೊಂದು ಕಡೆ ಅರಣ್ಯ ಭೂಮಿಯನ್ನು ಯಾರು ಯಾರಿಗೋ ಹಂಚಿಬಿಟ್ಟಿದ್ದರು. ಸರ್ಕಾರಿ ಜಾಗ ಒತ್ತುವರಿ ತೆರವುಗೊಳಿಸಲು ದಕ್ಷ ಅಧಿಕಾರಿಗಳ ತಂಡ ಬರಬೇಕಾಯಿತು. ಆ ತಂಡದ ಬೆನ್ನಿಗೆ ಸರ್ಕಾರವೂ ಬಿಗಿಯಾಗಿ ನಿಂತಿತು. ಒತ್ತುವರಿ ವಿವರಗಳನ್ನೆಲ್ಲ ಅಂದಿನ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಗಮನಕ್ಕೆ ತರಲಾಯಿತು. ಈಶ್ವರ್ ಖಂಡ್ರೆ ತಕ್ಷಣ ಕಾರ್ಯಾಚರಣೆ ಶುರು ಮಾಡಿಸಿಯೇ ಬಿಟ್ಟರು.
ಅರಣ್ಯದ ಕಾನೂನುಗಳು ಏನು ಹೇಳುತ್ತವೆ ಎಂದರೆ, ಒಮ್ಮೆ ಅರಣ್ಯ ಭೂಮಿ ಎಂದು ಘೋಷಣೆಯಾದರೆ ಮುಗಿಯಿತು, ಅದನ್ನು ಯಾರೂ, ಯಾವುದೇ ಕಾರಣಕ್ಕೂ ಬದಲಾಯಿಸಲು ಸಾಧ್ಯವೇ ಇಲ್ಲ. ಆದರೂ, ಅನೇಕ ಪ್ರಕರಣಗಳಲ್ಲಿ ಸರ್ಕಾರದ ಅನೇಕ ಇಲಾಖೆಗಳೇ ಭೂಮಿಯನ್ನು ಅಕ್ರಮವಾಗಿ ಹಂಚಿಕೆ ಮಾಡಿವೆ. ಕೆಲ ಪ್ರಕರಣಗಳಲ್ಲಂತೂ ಅರಣ್ಯ ಇಲಾಖೆಯ ಭೂಮಿಗೆ ಪರಿಹಾರ ನೀಡಲಾಗಿದೆ. ಸರ್ಕಾರಿ ಭೂಮಿಗೆ ಮಾಲೀಕರನ್ನು ಸೃಷ್ಟಿಸಿ ಅದ್ಹೇಗೆ ಪರಿಹಾರ ಕೊಟ್ಟರೋ ಗೊತ್ತಿಲ್ಲ. ಇದೊಂದು ಬಹುದೊಡ್ಡ ಹಗರಣವಂತೂ ಹೌದು. ಇಲಾಖೆ ಅಧಿಕಾರಿಗಳು ಸ್ವಾಧೀನ ಕ್ರಮ ಆರಂಭಿಸಿದಾಗ, ಶಾಸಕರು, ಮಂತ್ರಿಗಳು, ಸಂಸದರು ಹೀಗೆ ಅನೇಕರು ಭಾರಿ ಒತ್ತಡ ಹಾಕಿದ್ದಾರೆ. ಕೆಲವರು ಆತ್ಮಹತ್ಯೆ ಬೆದರಿಕೆಗಳನ್ನೂ ಹಾಕಿದ್ದಾರೆ. ಆದರೆ, ಇದಕ್ಕೆಲ್ಲ ಸೊಪ್ಪು ಹಾಕದೇ ದಿಟ್ಟತನದಿಂದ ಕ್ರಮ ಜರುಗಿಸಿ, ಸರ್ಕಾರದ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ.
ಅನೇಕ ಪ್ರಕರಣಗಳಲ್ಲಿ ಅರಣ್ಯಾಧಿಕಾರಿಗಳ ಈ ಕ್ರಮ ಕೆಲವರಿಗೆ ಅತಿರೇಕ ಎನಿಸಬಹುದು. ಆದರೆ, ಅರಣ್ಯ ಭೂಮಿ ಇಡೀ ಸಮಾಜಕ್ಕೆ ಸೇರಿದ ಸ್ವತ್ತು. ಆ ಭೂಪ್ರದೇಶ, ಅಲ್ಲಿ ಬೆಳೆಯುವ, ಬೆಳೆಸುವ ಹಸಿರ ಹೊದಿಕೆ ಮುಂದಿನ ದಿನಗಳಲ್ಲಿ ಎಲ್ಲರಿಗೂ ಸಮಾನವಾಗಿ ನೀರು, ನೆರಳು ಮತ್ತು ಅನೇಕ ಪಾರಿಸಾರಿಕ ಕೊಡುಗೆಗಳನ್ನು ನೀಡುತ್ತದೆ. ಹಾಗಾಗಿ, ಇಂತಹ ಕ್ರಮಗಳನ್ನು ಜರುಗಿಸುವ ಪರಿಸ್ಥಿತಿ ಬಂದಾಗ, ಸರ್ಕಾರ ಮತ್ತು ಸಮಾಜ ಅರಣ್ಯ ಇಲಾಖೆ ಜೊತೆಗೆ ನಿಲ್ಲಬೇಕು.
ಸರ್ಕಾರ ಮನಸ್ಸು ಮಾಡಿದರೆ ಅದೆಷ್ಟು ಉತ್ತಮ ಕೆಲಸ ಮಾಡಬಹುದು ಎನ್ನುವುದಕ್ಕೆ ಅರಣ್ಯ ಭೂಮಿ ಒತ್ತುವರಿ ತೆರವು ಪ್ರಕರಣಗಳೇ ಸಾಕ್ಷಿ. ಅಂದಿನ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆಯವರು ಮತ್ತು ಸರ್ಕಾರ ನಮ್ಮ ಕಾರ್ಯಾಚರಣೆಗೆ ಬೆನ್ನೆಲುಬಾಗಿ ನಿಂತಿದ್ದರಿಂದಲೇ ಅರಣ್ಯ ಇಲಾಖೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಅರಣ್ಯ ಭೂಮಿಯನ್ನು ತೆರವು ಮಾಡಿ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಇಲಾಖೆ ಒಂದು ತಂಡವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದೆ.