ನಾಯಕನಿಲ್ಲದೇ ಭಾರವಾದ ಹೆಜ್ಜೆಗಳೊಂದಿಗೆ ಗಜಪಡೆ ವಾಪಸ್

KannadaprabhaNewsNetwork | Published : Dec 7, 2023 1:15 AM

ಸಾರಾಂಶ

ಜಿಲ್ಲೆಯ ವಿವಿಧ ಭಾಗಗಳಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡುವುದು ಮತ್ತು ರೇಡಿಯೋ ಕಾಲರ್‌ ಅಳವಡಿಸುವ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಯಿಂದ ಅರ್ಜುನ ಮೃತಪಟ್ಟ ಹಿನ್ನೆಲೆ ಕಾರ್ಯಾಚರಣೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಉಳಿದ ಸಾಕಾನೆಗಳನ್ನು ಬುಧವಾರ ಬೀಳ್ಕೊಡಲಾಯಿತು.ಬೇಲೂರು ತಾಲೂಕಿನ ಬಿಕ್ಕೋಡು ಬಳಿಯ ತಾತ್ಕಾಲಿಕ ಆನೆ ಶಿಬಿರದಲ್ಲಿ ಸಿಸಿಎಫ್ ರವಿಶಂಕರ್, ಡಿಸಿಎಫ್ ಮೋಹನ್ ಕುಮಾರ್, ಎಸಿಎಫ್ ಮಹದೇವ್ ಸಾಕಾನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಬೀಳ್ಕೊಟ್ಟರು.

ಕಾಡಾನೆ ಸೆರೆ ವೇಳೆ ಅರ್ಜುನ ಮೃತಪಟ್ಟ ಹಿನ್ನೆಲೆ ಕಾರ್ಯಾಚರಣೆ ಸ್ಥಗಿತ । ಬೇಲೂರು ತಾಲೂಕಿನ ಬಿಕ್ಕೋಡು ಶಿಬಿರದಲ್ಲಿ ಆನೆಗಳಿಗೆ ಬೀಳ್ಕೊಡುಗೆ

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯ ವಿವಿಧ ಭಾಗಗಳಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡುವುದು ಮತ್ತು ರೇಡಿಯೋ ಕಾಲರ್‌ ಅಳವಡಿಸುವ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಯಿಂದ ಅರ್ಜುನ ಮೃತಪಟ್ಟ ಹಿನ್ನೆಲೆ ಕಾರ್ಯಾಚರಣೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಉಳಿದ ಸಾಕಾನೆಗಳನ್ನು ಬುಧವಾರ ಬೀಳ್ಕೊಡಲಾಯಿತು.

ಬೇಲೂರು ತಾಲೂಕಿನ ಬಿಕ್ಕೋಡು ಬಳಿಯ ತಾತ್ಕಾಲಿಕ ಆನೆ ಶಿಬಿರದಲ್ಲಿ ಸಿಸಿಎಫ್ ರವಿಶಂಕರ್, ಡಿಸಿಎಫ್ ಮೋಹನ್ ಕುಮಾರ್, ಎಸಿಎಫ್ ಮಹದೇವ್ ಸಾಕಾನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಬೀಳ್ಕೊಟ್ಟರು.

ಕಾಡಾನೆ ಹಿಡಿಯುವುದು ಹಾಗೂ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆಗೆ ನವೆಂಬರ್ 23 ರಂದು ಅರ್ಜುನ ನೇತೃತ್ವದಲ್ಲಿ ಕರ್ನಾಟಕ ಭೀಮ, ಅಶ್ವತ್ಥಾಮ, ಸುಗ್ರೀವ, ಧನಂಜಯ, ಪ್ರಶಾಂತ ಆನೆಗಳು ಬಂದಿದ್ದವು.ಇವುಗಳ ಸಹಾಯದಿಂದ ಮೂರು ಸಲಗಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿತ್ತು. ಮೂರು ಹೆಣ್ಣಾನೆಗಳನ್ನು ಹಿಡಿದು ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ನಾಲ್ಕನೇ ಸಲಗವನ್ನು ಸೆರೆ ಹಿಡಿಯುವ ವೇಳೆ ಕಾದಾಟದಲ್ಲಿ ಅರ್ಜುನ ಸಾವಿಗೀಡಾಗಿತ್ತು. ಹಾಗಾಗಿ ಅರ್ಜುನನ ಸಾವಿನಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.

10 ದಿನಗಳ ನಂತರ ಪುನ: ಕಾರ್ಯಾಚರಣೆ:

ಅರ್ಜುನನ ಸಾವಿನಿಂದ ಕಾವಾಡಿಗಳು ಹಾಗೂ ಅರಣ್ಯ ಸಿಬ್ಬಂದಿಗಳು ನೋವಿನಲ್ಲಿದ್ದಾರೆ. ಹಾಗಾಗಿ ಈ ದಿನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಾಕಾನೆಗಳನ್ನು ವಾಪಾಸ್ ಕಳುಹಿಸುತ್ತಿದ್ದೇವೆ ಎಂದು ಹಾಸನ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ರವಿಶಂಕರ್ ಹೇಳಿದ್ದಾರೆ.

ಈಗಾಗಲೇ ಅರ್ಜುನ ಮರಣ ಹೊಂದಿರುವುದರಿಂದ ಎಲ್ಲಾ ಮಾವುತರು, ಕಾವಾಡಿ ಸಿಬ್ಬಂದಿಯೂ ದು:ಖದಲ್ಲಿದ್ದಾರೆ. ಅವರೆಲ್ಲರೂ ಸುಧಾರಿಸಿಕೊಳ್ಳಲಿ. ಮಾವುತರು, ಕಾವಾಡಿಗರು ದೂರದಿಂದ ಬಂದಿದ್ದಾರೆ. ಹದಿನೈದು ದಿನದಿಂದ ಮನೆ ಬಿಟ್ಟಿದ್ದಾರೆ. ಸ್ವಲ್ಪ ದಿನ ಸುಧಾರಿಸಿಕೊಂಡ ನಂತರ ಮತ್ತೆ ಕಾರ್ಯಾಚರಣೆ ಶುರು ಮಾಡುತ್ತೇವೆ.

ಒಂಭತ್ತು ಕಾಡಾನೆಗೆ ರೇಡಿಯೋ ಕಾಲರ್ ಮಾಡಬೇಕಿತ್ತು. ಈಗಾಗಲೇ ಐದು ಕಾಡಾನೆಗಳಿಗೆ ರೇಡಿಯೋ ಕಾಲರ್ ಹಾಕಲಾಗಿದೆ.

ಖಂಡಿತ ಅದನ್ನು ಪೂರ್ಣಗೊಳಿಸುತ್ತೇವೆ. ಐದು ಸಾಕಾನೆಗಳು ದುಬಾರೆ ಕ್ಯಾಂಪ್‌ಗೆ ಹೋಗುತ್ತವೆ. ಹಾಸನ ಪಶುವೈದ್ಯಕೀಯ ಕಾಲೇಜಿನ ಡಾ.ಗಿರೀಶ್ ಅವರ ತಂಡ ಬಂದು ಅರ್ಜುನನ ಮರಣೋತ್ತರ ಪರೀಕ್ಷೆಯನ್ನು ಜನರ ಮುಂದೆಯೇ ಮಾಡಿದ್ದಾರೆ, ಅದರಲ್ಲಿ ಬೇರೆನೂ ಸಂದೇಹವಿಲ್ಲ ಎಂದು ಮುಖ್ಯ ಅರಣ್ಯಾಧಿಕಾರಿ ರವಿಶಂಕರ್ ತಿಳಿಸಿದರು.

ಬಾಕ್ಸ್....

ಮುಂದಿನ ದಿನಗಳಲ್ಲಿ ತನಿಖೆ ನಡೆಯಲಿದೆ

ಅರ್ಜುನನ ಕಾಲಿಗೆ ಗುಂಡು ತಗುಲಿದ ವಿಚಾರವಾಗಿ ಮಾತನಾಡಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಮುಂದಿನ ದಿನಗಳಲ್ಲಿ ಅಂತಹದ್ದೇನಾದರೂ ಇದ್ದರೆ ತನಿಖೆ ನಡೆಸುತ್ತೇವೆ. ಅದು ಏನೇ ಆಗಿದ್ದರೂ ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗುತ್ತದೆ. ನಾಲ್ಕು ಕಾಲುಗಳು ಹೊರಗಡೆ ಕಾಣುತ್ತಿತ್ತು. ವೈದ್ಯರು ಎಲ್ಲಾ ಅವಲೋಕನೆ ಮಾಡಿಯೇ ಮರಣೋತ್ತರ ಪರೀಕ್ಷೆ ಮಾಡಿದ್ದಾರೆ. ಎಲ್ಲಾ ನೋಡಿಯೇ ನಾವು ಮರಣೋತ್ತರ ಪರೀಕ್ಷೆ ಮುಗಿಸಿದ್ದೇವೆ. ಪಶು ವೈದ್ಯರು ಯಾವ ರೀತಿ ಪರೀಕ್ಷೆ ಮಾಡಬೇಕೋ ಆ ರೀತಿ ಮಾಡಿ ಮುಗಿಸಿದ್ದಾರೆ. ಅದರಲ್ಲಿ ನಾವು ಹೋಗಿ ಇದು ಮಾಡಿ, ಅದು ಮಾಡಿ ಅಂತ ಹೇಳಲು ಸಾಧ್ಯವಿಲ್ಲ ಎಂದರು.

ಸಾಕಾನೆ ಪ್ರಶಾಂತನಿಗೆ ಅರವಳಿಕೆ ಚುಚ್ಚು ಮದ್ದು ಹೊಡೆದ ವಿಚಾರ ಮಾತನಾಡಿ, ಜನರು ಏನು ಆರೋಪ ಮಾಡುತ್ತಿದ್ದಾರೋ ಅದರ ಬಗ್ಗೆ ತನಿಖೆ ಮಾಡಿಸುತ್ತೇವೆ. ಘಟನೆಯಲ್ಲಿ ಏನಾಗಿದೆ ಎಂಬುದನ್ನು ಖಚಿತಪಡಿಸಿಕೊಂಡು ನಿಮಗೆ ಮಾಹಿತಿ ಕೊಡುತ್ತೇನೆ ಎಂದು ಹೇಳಿದರು.

ಬಾಕ್ಸ್....

ಬಿಕ್ಕಿಬಿಕ್ಕಿ ಅತ್ತ ಮಾವುತ

ಅರ್ಜುನನನ್ನು ಕಳೆದುಕೊಂಡ ನಂತರ ಬಿಕ್ಕೋಡಿನ ತಾತ್ಕಾಲಿಕ ಆನೆ ಕ್ಯಾಂಪಿನಿಂದ ದುಬಾರೆಯತ್ತ ವಾಪಸ್ ಹೋಗುವ ಸಂದರ್ಭದಲ್ಲಿ ಅರ್ಜುನನ ಕಾವಾಡಿ ವಿನೋದ್ ಸಿಸಿಎಫ್, ಡಿಎಫ್‌ಓ ಎದುರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಹಿರಿಯ ಅಧಿಕಾರಿಗಳು ಧೈರ್ಯವಾಗಿರು, ಧೈರ್ಯವಾಗಿರು ಎಂದು ಎಷ್ಟೇ ಸಮಾಧಾನಪಡಿಸಿದರೂ ವಿನೋದ್‌ ಅಳುತ್ತಲೇ ‘ಸಾರ್ ಹೇಗೆ ಮರೆಯಲಿ ನನ್ನ ಅರ್ಜುನನ್ನು’ ಎಂದು ತನ್ನ ನೋವು ತೋಡಿಕೊಂಡಿದ್ದಾರೆ.

Share this article