ಪುಣೆ : ಜಿಇ ಏರೋಸ್ಪೇಸ್ ಸಂಸ್ಥೆಯು ತನ್ನ ಪುಣೆಯ ಉತ್ಪಾದನಾ ಘಟಕದ ಸಾಮರ್ಥ್ಯವನ್ನು ಹೆಚ್ಚಿಸಲು 14 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹117 ಕೋಟಿ) ಹೂಡಿಕೆ ಮಾಡುತ್ತಿರುವುದಾಗಿ ಘೋಷಿಸಿದೆ. ಈ ಘಟಕ ಯಶಸ್ವಿಯಾಗಿ 10 ವರ್ಷ ಪೂರೈಸುತ್ತಿದ್ದು, ಈ ಸಂದರ್ಭದಲ್ಲಿ ಈ ಮಹತ್ವದ ಘೋಷಣೆ ಮಾಡಲಾಗಿದೆ.
ಸಂಸ್ಥೆಯು ಕಳೆದ ವರ್ಷ 30 ಮಿಲಿಯನ್ ಡಾಲರ್ ಹೂಡಿಕೆಯನ್ನು ಘೋಷಿಸಿದ್ದು, ಇದೀಗ ಹೆಚ್ಚುವರಿ ಹೂಡಿಕೆ ಘೋಷಿಸಲಾಗಿದೆ. ಈ ಹೊಸ ಹೂಡಿಕೆಯಿಂದ ಉತ್ಪಾದನಾ ಪ್ರಕ್ರಿಯೆಗಳನ್ನು ಆಧುನಿಕಗೊಳಿಸಲಾಗುವುದು, ಸ್ವಯಂಚಾಲಿತ ವ್ಯವಸ್ಥೆಗಳನ್ನು (ಅಟೋಮೇಷನ್) ಹೆಚ್ಚಿಸಲಾಗುವುದು ಮತ್ತು ಅತ್ಯಾಧುನಿಕ ಎಂಜಿನ್ ಭಾಗಗಳ ತಯಾರಿಕೆಗೆ ಬೇಕಾದ ಸೌಲಭ್ಯಗಳನ್ನು ಬಲಪಡಿಸಲಾಗುವುದು.
ಈ ಕುರಿತು ಮಾತನಾಡಿರುವ ಜಿಇ ಏರೋಸ್ಪೇಸ್ ನ ಪುಣೆ ಘಟಕದ ವ್ಯವಸ್ಥಾಪಕ ನಿರ್ದೇಶಕರಾದ ವಿಶ್ವಜಿತ್ ಸಿಂಗ್ ಅವರು, ‘ಪುಣೆಯ ನಮ್ಮ ತಂಡವು ಅತ್ಯುತ್ತಮ ಸಾಮರ್ಥ್ಯವನ್ನು ಬೆಳೆಸಿಕೊಂಡಿದೆ. ದೇಶಾದ್ಯಂತ ಇರುವ ಪೂರೈಕೆದಾರರ ಜಾಲದ ಬೆಂಬಲದಿಂದ ನಾವು ಅತ್ಯಾಧುನಿಕ ವಾಣಿಜ್ಯ ವಿಮಾನ ಎಂಜಿನ್‌ಗಳ ಭಾಗಗಳನ್ನು ಸುರಕ್ಷತೆ ಮತ್ತು ಗುಣಮಟ್ಟದೊಂದಿಗೆ ತಯಾರಿಸುತ್ತಿದ್ದೇವೆ.
ಈ ಹೂಡಿಕೆ ‘ಮೇಕ್ ಇನ್ ಇಂಡಿಯಾ’ ಯೋಜನೆ ಕಡೆಗಿನ ನಮ್ಮ ಬದ್ಧತೆಯನ್ನು ಮತ್ತು ಜಾಗತಿಕ ಏರೋಸ್ಪೇಸ್ ಉತ್ಪಾದನೆಯಲ್ಲಿ ಭಾರತದ ಪಾತ್ರವನ್ನು ಹೆಚ್ಚಿಸುವ ನಮ್ಮ ಇಚ್ಛೆಯನ್ನು ತೋರಿಸುತ್ತದೆ’ ಎಂದು ಹೇಳಿದರು.ಪುಣೆ ಘಟಕವು ಆರಂಭದಲ್ಲಿ ಬಹು-ಉದ್ಯಮ ಉತ್ಪಾದನಾ ಕೇಂದ್ರವಾಗಿತ್ತು. ಈಗ ಅದು ಜಿಇ ಏರೋಸ್ಪೇಸ್‌ನ ಜಾಗತಿಕ ವಾಣಿಜ್ಯ ಎಂಜಿನ್ ಕಾರ್ಖಾನೆಗಳಿಗೆ ಅತ್ಯಾಧುನಿಕ ಏರೋಸ್ಪೇಸ್ ಭಾಗಗಳನ್ನು ಸರಬರಾಜು ಮಾಡುವ ಹೈಟೆಕ್ ಕೇಂದ್ರವಾಗಿ ಬೆಳೆದಿದೆ.
ಇಡೀ ಭಾರತದಲ್ಲಿ ಜಿಇ ಏರೋಸ್ಪೇಸ್‌ನೊಂದಿಗೆ ಕೆಲಸ ಮಾಡುತ್ತಿರುವ 2,200ಕ್ಕೂ ಹೆಚ್ಚು ಸಪ್ಲೈಯರ್ ಗಳಲ್ಲಿ ಇಂದು 300ಕ್ಕೂ ಹೆಚ್ಚು ಸ್ಥಳೀಯ ಪೂರೈಕೆದಾರರು ಈ ಘಟಕಕ್ಕೆ ಬೆಂಬಲ ನೀಡುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ಈ ಘಟಕವು 5,000ಕ್ಕೂ ಹೆಚ್ಚು ಉತ್ಪಾದನಾ ಸಿಬ್ಬಂದಿಗಳಿಗೆ ನಿಖರ ಉತ್ಪಾದನಾ ತರಬೇತಿ ನೀಡಿ ಸ್ಥಳೀಯ ಪ್ರತಿಭೆಗಳನ್ನು ಬೆಳೆಸಿದೆ.
ಘಟಕವು ISO14001 (ಪರಿಸರ) ಮತ್ತು ISO45001 (ಕಾರ್ಮಿಕ ಸುರಕ್ಷತೆ) ಪ್ರಮಾಣೀಕರಣ ಪಡೆದಿದ್ದು, ಸುಸ್ಥಿರತೆ ಮತ್ತು ಕಾರ್ಯಕ್ಷಮತೆಯಲ್ಲಿ ಜಿಇ ಏರೋಸ್ಪೇಸ್‌ನ ಬದ್ಧತೆಯನ್ನು ತೋರಿಸುತ್ತದೆ.ಘಟಕದ ಯಶಸ್ಸಿಗೆ ಫ್ಲೈಟ್ ಡೆಕ್ ಎಂಬ ಜಿಇ ಏರೋಸ್ಪೇಸ್‌ನ ಸ್ವಾಮ್ಯದ ಲೀನ್ ಆಪರೇಟಿಂಗ್ ಮಾದರಿಯೇ ಮುಖ್ಯ ಕಾರಣವಾಗಿದೆ. ಇದು ಸುರಕ್ಷತೆ, ದಕ್ಷತೆ ಮತ್ತು ಗುಣಮಟ್ಟ ಒದಗಿಸುತ್ತದೆ. ಇದರಿಂದಲೇ ತ್ಯಾಜ್ಯ ಕಡಿಮೆಯಾಗಿದೆ, ಪ್ರಕ್ರಿಯೆಗಳ ದಕ್ಷತೆ ಹೆಚ್ಚಿದೆ, ಉತ್ಪಾದನೆ ಜಾಸ್ತಿಯಾಗಿದೆ ಮತ್ತು ಕಾರ್ಖಾನೆಯ ಸುರಕ್ಷತೆ ಸುಧಾರಿಸಿದೆ. ಹೊಸ ಉತ್ಪಾದನಾ ಲೈನ್ ನಲ್ಲಿ ಒಂದು ಮುಖ್ಯ ಭಾಗ ತಯರಿಕಾ ಕೆಲಸಗಳು ನಡೆಯುತ್ತಿದ್ದು, ಅಲ್ಲಿ ಕೂಡ ಕಡಿಮೆ ಸಮಯದಲ್ಲಿ, ಹೆಚ್ಚು ಉತ್ಪಾದಕತೆ ಸಾಧಿಸಲಾಗಿದೆ.