ಕೃಷಿ ಸೋಲಾರ್ ಪಂಪ್ ಸೆಟ್ ವಿತರಣೆಗೆ ಸರ್ಕಾರ ನಿರ್ಧಾರ

KannadaprabhaNewsNetwork | Published : Dec 6, 2023 1:15 AM

ಸಾರಾಂಶ

ಕೃಷಿ ಪಂಪ್‌ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡುವಂತೆ ರೈತರು ಆಗಿಂದಾಗೆ ಪ್ರತಿಭಟನೆ ನಡೆಸುತ್ತಲೇ ಇರುತ್ತಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ರಾಜ್ಯಸರ್ಕಾರ ಸಬ್ಸಿಡಿ ದರದಲ್ಲಿ ಸೋಲಾರ್ ಪಂಪ್ ಸೆಟ್‌ ಗಳನ್ನು ವಿತರಿಸಲು ತೀರ್ಮಾನಿಸಿದೆ.ವಿದ್ಯುತ್ ಕೊರತೆಯ ಕಾರಣ ಕೃಷಿ ಪಂಪ್‌ ಸೆಟ್‌ ಗಳಿಗೆ ರೈತರ ಬೇಡಿಕೆ ಅನುಸಾರ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಇದೀಗ ಸೋಲಾರ್‌ ಪಂಪ್ ಸೆಟ್‌ ಅಳವಡಿಸಿಕೊಂಡು ವಿದ್ಯುತ್ ಸಮಸ್ಯೆಯಿಂದ ಪಾರಾಗಬಹುದಾಗಿದೆ. ಜಿಲ್ಲೆಯಲ್ಲಿರುವ ಸುಮಾರು 86,033 IP ಸೆಟ್‌ ಗಳು ಸೋಲಾರ್ ಪಂಪ್‌ ಸೆಟ್‌ ಗಳಾಗಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ವಿದ್ಯುತ್ ಸಮಸ್ಯೆ ನೀಗಿಸಲು ಸೋಲಾರ್ ಪಂಪ್ ಸೆಟ್ ಮೊರೆ । ಜಿಲ್ಲೆಯಲ್ಲಿರುವ ಸುಮಾರು 86,033 ಐಟಿ ಸೆಟ್‌ ಗಳಿಗೂ ಲಾಭ

ರಾಜ್ಯ ಸರ್ಕಾರ ಕೊಡುವ ಸಬ್ಸಿಡಿ ಶೇ.30ರಿಂದ ಶೇ.50ಕ್ಕೆ ಹೆಚ್ಚಳ

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಕೃಷಿ ಪಂಪ್‌ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡುವಂತೆ ರೈತರು ಆಗಿಂದಾಗೆ ಪ್ರತಿಭಟನೆ ನಡೆಸುತ್ತಲೇ ಇರುತ್ತಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ರಾಜ್ಯಸರ್ಕಾರ ಸಬ್ಸಿಡಿ ದರದಲ್ಲಿ ಸೋಲಾರ್ ಪಂಪ್ ಸೆಟ್‌ ಗಳನ್ನು ವಿತರಿಸಲು ತೀರ್ಮಾನಿಸಿದೆ.

ವಿದ್ಯುತ್ ಕೊರತೆಯ ಕಾರಣ ಕೃಷಿ ಪಂಪ್‌ ಸೆಟ್‌ ಗಳಿಗೆ ರೈತರ ಬೇಡಿಕೆ ಅನುಸಾರ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಇದೀಗ ಸೋಲಾರ್‌ ಪಂಪ್ ಸೆಟ್‌ ಅಳವಡಿಸಿಕೊಂಡು ವಿದ್ಯುತ್ ಸಮಸ್ಯೆಯಿಂದ ಪಾರಾಗಬಹುದಾಗಿದೆ. ಜಿಲ್ಲೆಯಲ್ಲಿರುವ ಸುಮಾರು 86,033 IP ಸೆಟ್‌ ಗಳು ಸೋಲಾರ್ ಪಂಪ್‌ ಸೆಟ್‌ ಗಳಾಗಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.

ನೀರಾವರಿ ಪಂಪ್ ಸೆಟ್ ಗಳನ್ನು ವಿದ್ಯುತ್ ಜಾಲಕ್ಕೆ ವ್ಯವಸ್ಥಿತವಾಗಿ ಸೇರ್ಪಡೆಗೊಳಿಸಲು ಮತ್ತು ಸೌರ ವಿದ್ಯುತನ್ನು ಸಮರ್ಪಕವಾಗಿ ಬಳಸಲು Stand - alone / off grid ಸೋಲಾರ್ ಪಂಪ್ ಸೆಟ್ ಗಳನ್ನು ಹಾಗೂ IP ಸೆಟ್‌ ಫೀಡರ್ ಗಳ ಸೌರೀಕರಣವನ್ನು ಅನುಷ್ಠಾನಗೊಳಿಸಿ ಕೃಷಿ ಪಂಪ್ ಸೆಟ್ ಗಳಿಗೆ ಹಗಲಿನ ವೇಳೆ ವಿದ್ಯುತ್ ಸೌಕರ್ಯ ಕಲ್ಪಿಸಲು ಇಂಧನ ಇಲಾಖೆ ಅಕ್ಟೋಬರ್ ತಿಂಗಳಲ್ಲಿಯೇ ಹೊಸ ಮಾರ್ಗ ಸೂಚಿಯನ್ನು ಹೊರಡಿಸಿದೆ.

ಅಲ್ಲದೆ, ವಿದ್ಯುತ್ ಸರಬರಾಜು ಕಂಪನಿಗಳು 2015ರಿಂದ ಈಚೆಗೆ IP ಸೆಟ್‌ ಗಳಿಗೆ ವಿದ್ಯುತ್ ಮೂಲಸೌಕರ್ಯ ಕಲ್ಪಿಸಿರುವುದಕ್ಕೆ ಅನುಮೋದನೆ ನೀಡಿದೆ. ಜೊತೆಗೆ ನೋಂದಾಯಿಸ್ಪಲ್ಟ IP ಸೆಟ್‌ ಸಂಖ್ಯೆಗಳನ್ನು ಕೂಡಲೇ ದೃಢಪಡಿಸಿಕೊಂಡು ಟೆಂಡರ್ ಪ್ರಕ್ರಿಯೆಯನ್ನು ನಿಯಮಾನುಸಾರ ಕ್ರಮ ವಹಿಸಲು ಅನುಮೋದಿಸಿದೆ.

ಏನಿದು ಸೋಲಾರ್ ಪಂಪ್‌ಸೆಟ್?

ರೈತರ ಪಂಪ್‌ಸೆಟ್‌ಗಳಿಗೆ ಕೇಂದ್ರ ಸರ್ಕಾರ ಈಗಾಗಲೇ ಶೇ.30, ರಾಜ್ಯ ಸರ್ಕಾರ ಶೇ.30 ಸಬ್ಸಿಡಿ ನೀಡುತ್ತಿದೆ. ಇದರಲ್ಲಿ ರಾಜ್ಯ ಸರ್ಕಾರ ಕೊಡುವ ಶೇ.30 ಸಬ್ಸಿಡಿಯನ್ನು ಶೇ.50ಕ್ಕೆ ಹೆಚ್ಚಳ ಮಾಡಿ, ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡಿದೆ. ಸೋಲಾರ್ ಪಂಪ್‌ಸೆಟ್‌ಗಳಿಗೆ ಸಬ್ಸಿಡಿಯ ಮೊತ್ತ ಶೇ.80ಕ್ಕೆ ಏರಿಕೆಯಾಗಿದೆ. ಇದರಿಂದ ರೈತರು ಶೇ.20 ತಮ್ಮ ಪಾಲನ್ನು ಹಾಕಿ, ಸೋಲಾರ್ ಪಂಪ್‌ಸೆಟ್ ಅಳವಡಿಸಿಕೊಳ್ಳಬಹುದಾಗಿದೆ.

ರಾಜ್ಯ ಸರ್ಕಾರ ಈಗ ತೆಗೆದುಕೊಂಡಿರುವ ತೀರ್ಮಾನದ ಅನುಸಾರ ಗರಿಷ್ಠ 10 ಎಚ್‌ಪಿವರೆಗೂ ಸೋಲಾರ್ ಪಂಪ್‌ಸೆಟ್ ಅಳವಡಿಸಿಕೊಳ್ಳಬಹುದಾಗಿದೆ. ಇದಕ್ಕೆ ತಗಲುವ ವೆಚ್ಚದ ಶೇ.80ರಷ್ಟನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಕೊಡುತ್ತದೆ. ಉಳಿದಿರುವುದನ್ನು ರೈತರು ಪಾವತಿ ಮಾಡಬೇಕಿದೆ.

ಸೌರ ವಿದ್ಯುತ್ ಚಾಲಿತ ಪಂಪ್ ಸಟ್‌ ಅಳವಡಿಸಿದ ನಂತರ ಅಂತಹ ರೈತರು ವಿದ್ಯುತ್ ಜಾಲದಿಂದ ಪಡೆದ ಸಂಪರ್ಕವನ್ನು ಕಡಿತಗೊಳಿಸಬೇಕು. ಸ್ಥಳೀಯ ಬೇಡಿಕೆಗೆ ಅನುಗುಣವಾಗಿ 10 ಎಚ್ ಪಿ ವರೆಗಿನ ಸೌರ ವಿದ್ಯುತ್ ಚಾಲಿತ ಪಂಪ್ ಸೆಟ್‌ ಅಳವಡಿಸಬಹುದು. ಆದರೆ, 7.5 ಎಚ್ ಪಿವರೆಗೆ ಮಾತ್ರ ಸಹಾಯಧನ ಸೀಮಿತವಾಗಿರುತ್ತದೆ.

ನೀರಾವರಿ ಪಂಪ್ ಸೆಟ್ ಗಳಿಗೆ ಸೋಲಾರ್ ಪಂಪ್‌ಸೆಟ್ ಗಳನ್ನು ಒದಗಿಸುವ ಕುರಿತು ಟೆಂಡರ್ ಪ್ರಕ್ರಿಯೆಯಷ್ಟೇ ಬಾಕಿ ಉಳಿದಿದೆ. ಟೆಂಡರ್‌ಗೆ ಮುಂದೆ ಬರುವ ಕಂಪನಿಗಳು ದರ ಕೋಟ್ ಮಾಡಿದರೆ ರೈತರ ಪಂಪ್‌ಸೆಟ್ ದರ ಎಷ್ಟು ಎಂಬುದು ಖಾತ್ರಿಯಾಗಲಿದೆ.

ಈಗಾಗಲೇ ರಾಜ್ಯದ ಹಲವೆಡೆ ಸೋಲಾರ್ ಪಂಪ್‌ಸೆಟ್‌ ಸಹ ಅಳವಡಿಸಿಕೊಂಡು ರೈತರು ಬೆಳೆ ಬೆಳೆಯುತ್ತಿದ್ದಾರೆ. ಘಟಕದ ವೆಚ್ಚವನ್ನು ತಾವೇ ಭರಿಸಬೇಕಾಗಿದ್ದರಿಂದ ರೈತರಿಗೆ ಹೊರೆಯಾಗುತ್ತಿತ್ತು. ಆದರೆ, ಈಗ ಶೇ.80 ಸಬ್ಸಿಡಿ ನೀಡಿದಲ್ಲಿ ರೈತರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ರೈತ ನಾಯಕರು.

--

ಬಾಕ್ಸ್ ....

ರಾಜ್ಯದಲ್ಲಿ ವಿದ್ಯುತ್‌ ಉತ್ಪಾದನೆ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ತ್ರೀಫೇಸ್‌ ವಿದ್ಯುತ್‌ ಪೂರೈಕೆ ಕಡಿತಗೊಳಿಸಲಾಗಿತ್ತು. ನಂತರ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೊದಲಿನ 7 ತಾಸು ಬದಲು 5 ತಾಸು ನಿರಂತರ ತ್ರೀಫೇಸ್‌ ವಿದ್ಯುತ್‌ ಪೂರೈಸಲು ಹೇಳಿದ್ದರು. ಅದೂ ಸರಿಯಾಗಿ ಜಾರಿಗೆ ಬಾರದೆ, ರೈತರು ಚಳವಳಿ ಹಾದಿ ಹಿಡಿದಿದ್ದರು.

ಆನಂತರ ರಾಜ್ಯಾದ್ಯಂತ ಎರಡು ಗಂಟೆ ವಿದ್ಯುತ್ ಕಡಿತ ಮಾಡುವ ಆದೇಶವನ್ನು ಮೌಖಿಕವಾಗಿ ಹಿಂದೆ ಪಡೆದ ರಾಜ್ಯ ಸರ್ಕಾರ, ಸ್ಥಳೀಯ ಹೊಂದಾಣಿಕೆಯ ಆಧಾರದಲ್ಲಿ ಏಳು ಗಂಟೆ ವಿದ್ಯುತ್ ಪೂರೈಕೆಯನ್ನು ಪ್ರಾರಂಭಿಸಬೇಕು ಮತ್ತು ಲೋಡ್ ಸಹ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದು ಸೂಚಿಸಿತು.

ಜೆಸ್ಕಾಂ, ಹೆಸ್ಕಾಂ, ಬೆಸ್ಕಾಂ ಸೇರಿದಂತೆ ರಾಜ್ಯಾದ್ಯಂತ ಎಸ್ಕಾಂಗಳಲ್ಲಿ ಸ್ಟೇಷನ್ ಆಧಾರದಲ್ಲಿ ವಿದ್ಯುತ್ ಪೂರೈಕೆಯನ್ನು ಏಳು ಗಂಟೆಗೆ ಹೆಚ್ಚಳ ಮಾಡುವಂತೆ ಸೂಚಿಸಿತ್ತು.

---

ಬಾಕ್ಸ್ ....

ಸೋಲಾರ್ ಪಂಪ್ ಸೆಟ್ ವೆಚ್ಚ ಎಷ್ಟು ?

ಈಗ ಮಾರುಕಟ್ಟೆಯಲ್ಲಿ 5 ಎಚ್‌ ಪಿ , 7.5 ಎಚ್ ಪಿ ಹಾಗೂ 10 ಎಚ್‌ಪಿ ಸೋಲಾರ್ ಪಂಪ್‌ಸೆಟ್ ಗಳಿಗೆ ಲಕ್ಷಾಂತರ ರು. ಆಗುತ್ತದೆ. ಈ ದರ ಕಂಪನಿಯಿಂದ ಕಂಪನಿಗೆ ಬೇರೆ ಬೇರೆಯಾಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಈಗಿರುವ ರೈತ ಪಂಪ್‌ಸೆಟ್‌ಗಳಿಗೆ ಸೋಲಾರ್ ಅಳವಡಿಸಲು ಸಾಧ್ಯವಾಗುವುದಿಲ್ಲ. ಸೋಲಾರ್‌ಗಾಗಿಯೇ ಇರುವ ಪಂಪ್‌ಗಳನ್ನೇ ನೀಡಲಾಗುತ್ತದೆ. ಪಂಪ್‌ ಸಹ ಘಟಕ ವೆಚ್ಚದಲ್ಲಿಯೇ ಸೇರಿಕೊಂಡಿರುತ್ತದೆ. ಹಾಗೊಂದು ವೇಳೆ ಈಗಿರುವ ಪಂಪ್‌ಸೆಟ್‌ಗಳಿಗೂ ಸೋಲಾರ್ ಡ್ರೈವ್ ಅಳವಡಿಸುವುದಕ್ಕೂ ತಂತ್ರಜ್ಞಾನದಲ್ಲಿ ಅವಕಾಶವಿದ್ದು, ಇದಕ್ಕೆ ತಗಲುವ ವೆಚ್ಚ ಹೆಚ್ಚಳವಾಗುತ್ತದೆ.

----

Share this article