;Resize=(412,232))
ನರಸಿಂಹರಾಜಪುರ : ಸರ್ಕಾರದ ಗ್ಯಾರಂಟಿ ಯೋಜನೆಗಳೂ ಒಂದು ವಿಧದ ಅಭಿವೃದ್ಧಿಯಾಗಿದ್ದು, ಗ್ಯಾರಂಟಿ ನಡುವೆಯೂ ರಾಜ್ಯದ ಆರ್ಥಿಕ ಸ್ಥಿತಿ ಕೇಂದ್ರಕ್ಕಿಂತ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಚಿಕ್ಕಮಗಳೂರಿನ ಹಂದೂರು ಗ್ರಾಮದಿಂದ ನರಸಿಂಹರಾಜಪುರಕ್ಕೆ ಸಂಪರ್ಕಿಸುವ ಭದ್ರಾ ಹಿನ್ನೀರಿಗೆ ನಿರ್ಮಿಸಿರುವ ಸೇತುವೆ ಉದ್ಘಾಟನೆ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಗ್ಯಾರಂಟಿಗಳೂ ಒಂದು ವಿಧದ ಅಭಿವೃದ್ಧಿಯಾಗಿದೆ. ಡಾ। ಬಿ.ಆರ್.ಅಂಬೇಡ್ಕರ್ ರಾಜಕೀಯ ಸ್ವಾತಂತ್ರ್ಯ ಯಶಸ್ವಿಯಾಗಲು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ವಾತಂತ್ರ್ಯ ಅತ್ಯಗತ್ಯ ಎಂದಿದ್ದರು. ಸರ್ಕಾರದಿಂದ ಗ್ಯಾರಂಟಿಗಳಿಗೆ ಇದುವರೆಗೆ ₹1.30 ಲಕ್ಷ ಕೋಟಿ ವೆಚ್ಚವಾಗಿದೆ. ರಾಜ್ಯದ ಗ್ಯಾರಂಟಿಗಳನ್ನು ಟೀಕಿಸುವ ಬಿಜೆಪಿಯವರು ಇತರೆ ರಾಜ್ಯಗಳಲ್ಲಿ ಅವುಗಳನ್ನೇ ಏಕೆ ಅನುಸರಿಸುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಕೇಂದ್ರಕ್ಕಿಂತ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದರು.
ಕೇಂದ್ರ ಸರ್ಕಾರದ ಜಿಡಿಪಿ ದರ 7.14ರಷ್ಟಿದ್ದರೆ, ರಾಜ್ಯದ ಜಿಡಿಪಿ 8.1ರಷ್ಟಿದೆ. ದೇಶದಲ್ಲಿ ₹53.11 ಲಕ್ಷ ಕೋಟಿಗಳಿದ್ದ ಸಾಲದ ಮೊತ್ತ, ಪ್ರಧಾನಿ ಮೋದಿ ಅಧಿಕಾರಾವಧಿಯಲ್ಲಿ ₹218 ಲಕ್ಷ ಕೋಟಿಗೆ ಏರಿಕೆಯಾಗಿದೆ. ರಾಜ್ಯದ ಆರ್ಥಿಕ ಬೆಳವಣಿಗೆ ಕೇಂದ್ರಕ್ಕಿಂತ ಗಣನೀಯವಾಗಿ ಹೆಚ್ಚಿದೆ. ಕರ್ನಾಟಕದ ಆರ್ಥಿಕ ಸ್ಥಿತಿ ಸದೃಢವಾಗಿದ್ದು, ಆರ್ಥಿಕ ಹೊಣೆಗಾರಿಕೆ ಕಾಯ್ದೆ ಮಾನದಂಡಗಳಿಗೆ ಪೂರಕವಾಗಿದೆ. ಆದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಅಪಪ್ರಚಾರ ನಡೆಸುವ ಬಿಜೆಪಿಯವರಿಗೆ ಸುಳ್ಳೇ ಮನೆ ದೇವರಾಗಿದೆ ಎಂದು ವಾಗ್ದಾಳಿ ನಡೆಸಿದರು. ವಿರೋಧ ಪಕ್ಷದವರು ಅಂಬೇಡ್ಕರ್ ಅವರ ಈ ಚಿಂತನೆಯ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 2023-24ರ ಆಯವ್ಯಯದಲ್ಲಿ ₹5,300 ಕೋಟಿ ಘೋಷಿಸಿತು. ಆದರೆ ಇದುವರೆಗೆ ಈ ಅನುದಾನ ನೀಡಿಲ್ಲ. ಈ ಮೂಲಕ ರಾಜ್ಯದ ಜನರಿಗೆ ಕೇಂದ್ರ ದ್ರೋಹವೆಸಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜ್ಯದ ಆರ್ಥಿಕತೆ ವಸ್ತು ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಹೇಳಿದ್ದಾರೆ. ಅವರು ಬಜೆಟ್‌ನ ಅಂಶಗಳ ಬಗ್ಗೆ ಮನನ ಮಾಡಿಕೊಳ್ಳದೇ, ಕೇವಲ ಪ್ರಚಾರಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ. 15ನೇ ಹಣಕಾಸಿನ ಆಯೋಗದಲ್ಲಿ ಶಿಫಾರಸ್ಸು ಮಾಡಿದ್ದ ಅನುದಾನವನ್ನು ಕೇಂದ್ರ ನೀಡದೇ, ರಾಜ್ಯದ ಜನರಿಗೆ ಅನ್ಯಾಯ ಮಾಡಲಾಗಿದೆ. ಬಿಜೆಪಿಯ ಪ್ರಧಾನಿ ಮೋದಿಯವರು ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಅವರ ಅಚ್ಚೇದಿನ್ (ಒಳ್ಳೆಯ ದಿನಗಳು) ಬರಲೇ ಇಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ, ನುಡಿದಂತೆ ನಡೆದಿದೆ. ಜನರ ದಾರಿತಪ್ಪಿಸುವ ಬಿಜೆಪಿಯನ್ನು ಜನರು ನಂಬಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.