ಸೃಷ್ಟಿ ತೋಮರ್
ಇಂದು ವಿಶ್ವ ನದಿಗಳ ದಿನ
‘ಅನೇಕಾನೇಕ ವರ್ಷಗಳಿಂದ ನಮ್ಮ ಪ್ರದೇಶವು ಒಣಗಿದ, ಬರಪೀಡಿತ ಆಗಿತ್ತು. 1000 ಅಡಿಗಳವರೆಗೆ ಕೊರೆಸಲಾಗಿದ್ದ ಬೋರ್‌ವೆಲ್‌ಗಳು ಬೇಸಿಗೆಯಲ್ಲಂತೂ ಒಣಗಿ ಹೋಗುತ್ತಿದ್ದವು. ಕೃಷಿ ಮಾಡುವುದೇ ದೊಡ್ಡ ಹೋರಾಟವಾಗಿತ್ತು’ ಎಂದು ಹೇಳುತ್ತಾರೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರದ 35 ವರ್ಷದ ರೈತ ಶೇಷಾದ್ರಿ. ಅವರು ಗುಟ್ಟಹಳ್ಳಿಯ ಸಮೀಪದಲ್ಲಿರುವ ಒಂದು ಗ್ರಾಮದವರು. ಈ ಹಿಂದೆ ಗುಟ್ಟಹಳ್ಳಿಯ ಚಿಲುಮೆಯು ತುಂಬಿ ಹರಿಯುತ್ತಿತ್ತು. ಅನೇಕ ವರ್ಷಗಳ ಹಿಂದೆ ಜಾಗತಿಕ ಆಧ್ಯಾತ್ಮಿಕ ಗುರುಗಳಾದ ಗುರುದೇವ ಶ್ರೀ ಶ್ರೀ ರವಿಶಂಕರರು ಕೈವಾರದಲ್ಲಿರುವ ಗುಟ್ಟಹಳ್ಳಿಯ ಅಮರನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲಿ ದೇವಸ್ಥಾನದ ಅರ್ಚಕರನ್ನು ಮತ್ತು ಕೆಲ ರೈತರನ್ನು ಭೇಟಿ ಮಾಡಿದ್ದರು. ಅವರೆಲ್ಲರೂ ಆ ಪ್ರದೇಶವನ್ನು ಕಾಡುತ್ತಿದ್ದ ತೀವ್ರ ನೀರಿನ ಅಭಾವದ ಬಗ್ಗೆ ತಮ್ಮ ಚಿಂತೆಯನ್ನು ಗುರುದೇವರೊಂದಿಗೆ ಹಂಚಿಕೊಂಡಾಗ, ಗುರುದೇವರು ಕಾಳಜಿಯಿಂದ ಸ್ಪಂದಿಸಿದ ರೀತಿಯನ್ನು ಆದರದಿಂದ ಸ್ಮರಿಸಿಕೊಳ್ಳುತ್ತಾರೆ. ಆ ಸಮಯದಲ್ಲಿ ಅವರ ಪ್ರದೇಶದ ಜಲವು ಗುರುದೇವರ ಯತ್ನಗಳಿಂದಾಗಿ ಮತ್ತೆ ಜೀವಂತವಾಗುತ್ತದೆಂದು ಅವರು ಊಹಿಸಿರಲೇ ಇಲ್ಲ.
ಕಾಡು ವಿನಾಶದಿಂದ ಬರಿದಾಗಿದ್ದ ಬೆಟ್ಟಗಳು
ಕೈವಾರವು ಕೈವಾರ ತಾತಯ್ಯ ಅವರ ಕ್ಷೇತ್ರವಾಗಿದೆ. ಅಲ್ಲಿನ ಅಂಬಾಜಿ ದುರ್ಗಾ ಪರ್ವತ ಶ್ರೇಣಿಯಲ್ಲಿ ಪಾಂಡವರು ತಮ್ಮ ಅಜ್ಞಾತವಾಸದ ಸಮಯದಲ್ಲಿ ಕೆಲಕಾಲ ವಾಸ ಮಾಡಿದ್ದರು ಎಂಬ ಪ್ರತೀತಿಯಿದೆ. ಈ ಪ್ರದೇಶದಲ್ಲಿ ಭೀಮನು ಬಕಾಸುರನ ವಧೆಯನ್ನು ಮಾಡಿದ್ದನು. ಗುಟ್ಟಹಳ್ಳಿಯ ಕಲ್ಲುಬಂಡೆಯ ಪ್ರದೇಶದಲ್ಲಿ ಒಂದು ಪವಾಡವು ಮೆಲ್ಲನೆ ಅನಾವರಣಗೊಂಡಿದೆ. ಪೂರ್ಣವಾಗಿ ಬತ್ತಿ ಹೋಗಿದ್ದ ನೀರು ಈಗ ಮತ್ತೆ ಹರಿಯಲಾರಂಭಿಸಿದೆ. ಆ ಭೂಮಿಯಲ್ಲಿ ಆ ಜನರಲ್ಲಿ ಅಲ್ಲಿನ ಪರಿಸರದಲ್ಲಿ ಮತ್ತೆ ಜೀವವನ್ನು ತುಂಬತೊಡಗಿದೆ. ಇದು ಸಾಧಾರಣವಾದ ಜಲದ ಮೂಲವಲ್ಲ. ಇದು ಪಾಲಾರ್ ನದಿಯ ಉಗಮ ಸ್ಥಾನವಾಗಿದೆ. ಇದು ಅಂತಾರಾಜ್ಯ ನದಿಯಾಗಿದ್ದು, ಅನೇಕಾನೇಕ ಸಮುದಾಯಗಳನ್ನು ಪಾಲಿಸುತ್ತಿರುವ ನದಿಯಾಗಿದೆ. ಅನೇಕ ಪೀಳಿಗೆಯ ಜನರಿಗೆ ಗುಟ್ಟಹಳ್ಳಿಯ ಚಿಲುಮೆಯು ಜೀವಾಧಾರಕವಾಗಿತ್ತು. ಅದರ ನೀರು ಹೊಲಗಳನ್ನು ಪೋಷಿಸುತ್ತಿತ್ತು, ಜಲಸಂಪನ್ಮೂಲಗಳ ಪುನರ್ಜಲೀಕರಣವನ್ನು ಮಾಡುತ್ತಿತ್ತು ಮತ್ತು ಹಸಿರನ್ನು ಹಚ್ಚಹಸಿರಾಗಿಡುತ್ತಿತ್ತು. ಆದರೆ ನಿರಂತರವಾಗಿ ಕಾಡಿನ ವಿನಾಶ ಸಾಗುತ್ತಾ ಬಂದಿದ್ದರಿಂದ, ನಿರಂತರವಾಗಿ ಪರಿಸರದ ಶೋಷಣೆ ಸಾಗುತ್ತಾ ಬಂದಿದ್ದರಿಂದ, ಬೆಟ್ಟಗಳೆಲ್ಲವೂ ಬರಿದಾದವು.
ಗುರುದೇವರಿಂದ ಮಹತ್ಕಾರ್ಯ:
ಗಿಡಗಳೇ, ಮರಗಳೇ ಇಲ್ಲದೆ ಹೋಗಿದ್ದರಿಂದ ಬರಿದಾದ ಬೆಟ್ಟದ ತಲಗಳಿಗೆ ಮಳೆಯನ್ನು ತಡೆದು ನಿಲ್ಲಿಸಲಾಗಲಿಲ್ಲ. ಚಿಲುಮೆಯು ಬತ್ತಿ ಹೋಯಿತು ಮತ್ತು ಅದರೊಡನೆ ಪರಿಸರಕ್ಕೆ ತಡೆದು ಉಳಿದುಕೊಳ್ಳುವ ಸಾಮರ್ಥ್ಯವೂ ಹೊರಟು ಹೋಯಿತು. ಗುರುದೇವರ ದೃಷ್ಟಿಕೋನವು ಇಲ್ಲಿ ಸ್ಫೂರ್ತಿಯಾಗಿ ಬಂದಿತು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಪಾಲಾರ್ ನದಿಯ ಪುನಶ್ಚೇತನ ಕಾರ್ಯವನ್ನು ಆರಂಭಿಸಿತು. ಗುರುದೇವರೇ ಸ್ವಯಂ ಈ ಕಾರ್ಯಕ್ಕೆ ಕೈವಾರದಲ್ಲಿ ಚಾಲನೆ ಮಾಡಿದರು. ಇದರೊಡನೆ ಬೆಂಗಳೂರಿನ ರೋಟರಿ ಕ್ಲಬ್ ಸಹ ಕೈಜೋಡಿಸಿತು. ಪಾಲಾರ್ ನದಿಯನ್ನು ಜೀವಂತವಾಗಿಸುವ ಕಾರ್ಯ ಆರಂಭವಾಯಿತು.
ಒಂದು ದಶಕದ ಹಿಂದೆ ಆರಂಭವಾದ ಈ ಕಾರ್ಯವು ಒಂದು ಸಲ ಮಾತ್ರ ಮಾಡಿ ಮುಗಿಸಿದಂತಹ ಕಾರ್ಯವಾಗಿರಲಿಲ್ಲ. ಪರಿಸರ ವಿಜ್ಞಾನ ಮತ್ತು ಸಮುದಾಯದ ಸಹಭಾಗಿತ್ವದಿಂದ ಅನೇಕ ಹೆಜ್ಜೆಗಳಲ್ಲಿ ಪುನಶ್ಚೇತನದ ಕಾರ್ಯವೂ ಸಾಗಿತು. ರಿಮೋಟ್ ಸೆನ್ಸಿಂಗ್‌ನ ಮಾಹಿತಿ ಮತ್ತು ಡ್ರೋನ್ ಮ್ಯಾಪಿಂಗ್‌ನಿಂದ ಮಳೆನೀರನ್ನು ಅತಿ ಉತ್ತಮವಾಗಿ ಎಲ್ಲಿ ಸೆರೆ ಹಿಡಿಯಬೇಕೆಂಬ ಮಾಹಿತಿಯು ದೊರಕಿತು. ಬರಿದಾದ ಕಲ್ಲುಬಂಡೆಗಳಿದ್ದ ಸ್ಥಳದಲ್ಲಿ ಆರ್ಟ್ ಆಫ್ ಲಿವಿಂಗ್ ನೀರು ಮತ್ತು ಆವಿಯನ್ನು ಇಂಗಿಸುವ ರಚನೆಗಳನ್ನು ನಿರ್ಮಿಸಿ, ಮರಗಳನ್ನು ನೆಟ್ಟಿತು. ಈ ರಚನೆಗಳ ನಿರ್ಮಾಣದಿಂದಾಗಿ ಮಣ್ಣಿನ ಸವಕಳಿಯನ್ನು ತಡೆಯಲು ಸಾಧ್ಯವಾಯಿತು ಮತ್ತು ಅಂತರ್ಜಲವನ್ನು ಮತ್ತೆ ತುಂಬಲು ಸಾಧ್ಯವಾಯಿತು. ಎಲ್ಲಕ್ಕಿಂತ ಮುಖ್ಯವಾಗಿ, ಬೆಟ್ಟಗಳು ಮತ್ತೆ ಹಸಿರಿನಿಂದ ಕಂಗೊಳಿಸುವಂತಾಯಿತು.
60 ಹೆಕ್ಟೇರ್‌ನಲ್ಲಿ ಮರ ಬೆಳೆಸಿದ ಕತೆ
2014 ಮತ್ತು 2017ರ ನಡುವೆ ಮರೆತು ಹೋಗಿದ್ದಂತಹ, ಸ್ಥಳೀಯವಾದ ಘನವಾದ ಮರಗಳನ್ನು ನೆಡಲಾಯಿತು. ಬರಿದಾಗಿದ್ದ 60 ಹೆಕ್ಟೇರ್‌ಗಳಷ್ಟು ಬೆಟ್ಟದಲ್ಲಿ ಆ ಮರಗಳನ್ನು ಬೆಳೆಸಲಾಯಿತು. ಪ್ರತಿ ಮಳೆಗಾಲದಲ್ಲೂ ಅವುಗಳ ಬೇರುಗಳು ಮಣ್ಣನ್ನು ತಡೆಹಿಡಿಯುತ್ತವೆ. ಮರಗಳ ನೆರಳು ಹಕ್ಕಿಗಳನ್ನು ದುಂಬಿಗಳನ್ನು ಆಕರ್ಷಿಸುತ್ತವೆ. ಅವುಗಳ ಇರುವಿಕೆಯಿಂದಾಗಿ ಮಳೆಯು ಸಮಯಕ್ಕೆ ಸರಿಯಾಗಿ ಬರುತ್ತದೆ. ಈ ಹಸಿರಿಗೆ ಬೆಂಬಲ ನೀಡುವ ಸಲುವಾಗಿ 76 ಗಲ್ಲಿ ಚೆಕ್‌ಗಳ ನಿರ್ಮಾಣವಾಗಿದೆ. ಈ ಪುಟ್ಟ ಚೆಕ್ ಡ್ಯಾಂನಂತಹ ಕಟ್ಟಡಗಳನ್ನು ಸ್ಥಳೀಯವಾಗಿ ಲಭ್ಯವಾಗಿರುವ ವಸ್ತುಗಳಿಂದಲೇ ನಿರ್ಮಿಸಲಾಗಿದೆ. ಮಳೆನೀರು ಬೆಟ್ಟದಿಂದ ಹಾಗೆಯೇ ಜಾರಿ ಹೋಗಿಬಿಡದೆ, ಭೂಮಿಯೊಳಗೆ ಇಳಿಯುತ್ತದೆ. ಪಾರಂಪರಿಕವಾದ ಕಲ್ಯಾಣಿಯನ್ನು ಕೋಳಾಲಮ್ಮನ ದೇವಸ್ಥಾನದಲ್ಲಿ ಆರ್ಟ್ ಆಫ್ ಲಿವಿಂಗ್ ನಿರ್ಮಿಸಿದ್ದು, ಅದು ಬೆಟ್ಟದ ಅಡಿಯಲ್ಲಿದೆ ಮತ್ತು ನೀರನ್ನು ಶೇಖರಿಸುತ್ತದೆ. ಹೀಗೆ ಇದು ಪರಿಸರದ ದೃಷ್ಟಿಯಿಂದಲೂ ಮುಖ್ಯವಾಗಿದೆ ಮತ್ತು ಸಮುದಾಯದ ಪ್ರಾರ್ಥನೆಗೂ ಪೂರಕವಾಗಿದೆ.
ಸಾರ್ವಜನಿಕರಿಂದಲೂ ನೆರವು
ಈ ಯೋಜನೆಯು ಕೇವಲ ಮರಗಳು ಮತ್ತು ಗುಂಡಿಗಳ ಬಗ್ಗೆ ಮಾತ್ರ ಆಗಿಲ್ಲ. ಇದು ಜನರ ಬಗ್ಗೆಯೂ ಆಗಿದೆ. ಮಾಸ್ತೇನಹಳ್ಳಿಯ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತಿಯೂ ಇದರ ಭಾಗವಾಗಿದ್ದರು. ಅವರು ಈ ಯೋಜನೆಯಿಂದ ಕೇವಲ ಲಾಭ ಪಡೆದವರು ಮಾತ್ರ ಆಗಿರದೆ, ಇದರ ಸಂರಕ್ಷಣೆಯ ಹೊಣೆಯನ್ನೂ ಹೊತ್ತರು. ಮರಗಳನ್ನು ನೆಡಲು ಗ್ರಾಮ ಸಭೆಗಳನ್ನು ಆಯೋಜಿಸಲಾಯಿತು ಮತ್ತು ಮೇಯುವ ಹಸುಗಳಿಂದ ಹಾಗೂ ಕಾಡ್ಗಿಚ್ಚಿನಿಂದ ಮರಗಳನ್ನು ಸಂರಕ್ಷಿಸಲು ಒಂದು ತಂಡವನ್ನು ರಚಿಸಲಾಯಿತು. ಹೊರಗಿನವರು ಬಂದು ಮಾಡಿದ ಯತ್ನವಾಗಿ ಈ ಕಾರ್ಯವು ಉಳಿಯದೆ, ಒಳಗಿನವರೂ ಹಂಚಿಕೊಂಡ ಜವಾಬ್ದಾರಿ ಇದಾಯಿತು. ಇದರಿಂದ ಬಹಳ ದೊಡ್ಡ ಬದಲಾವಣೆಯಾಯಿತು.
ಆರ್ಟ್ ಆಫ್ ಲಿವಿಂಗ್‌ನ ನದಿಗಳ ಪುನಶ್ಚೇತನದ ರಾಷ್ಟ್ರೀಯ ನಿರ್ದೇಶಕರಾದ ಡಾ. ಲಿಂಗರಾಜು ಯಾಲೆಯವರು, ‘ಹಿಂದೆ ಇದೆಲ್ಲವೂ ಅರಣ್ಯ ಪ್ರದೇಶವಾಗಿತ್ತು. ನಂತರ ಮಣ್ಣಿನ ಸವಕಳಿಯಿಂದಾಗಿ, ಅರಣ್ಯದ ನಾಶದಿಂದಾಗಿ ಅವೆಲ್ಲವೂ ಮಾಯವಾಯಿತು. ಆದರೆ ಅದರ ಪುನಶ್ಚೇತನ ಸಾಧ್ಯವಾಯಿತು. ನಮ್ಮ ಯತ್ನದಿಂದ ಈ ಚಿಲುಮೆಯು ಮತ್ತೆ ಜೀವಂತವಾಯಿತು ಎಂದೇ ಹೇಳಬಹುದು. ನಾವು ನೆಟ್ಟಿರುವ ಗಿಡಗಳಿಂದ ಮಳೆಗಾಲದಲ್ಲಿ ನೀರು ಭೂಮಿಯೊಳಗೆ ಇಂಗಿ, ಮತ್ತೆ ನದಿಯು ಜೀವಂತವಾಗಲು ಕಾರಣವಾಯಿತು’ ಎನ್ನುತ್ತಾರೆ.
ಬೋರ್‌ವೆಲ್‌ಗಳಲ್ಲಿ ಮತ್ತೆ ಬಂತು ನೀರು
ಈ ಪಯಣದ ಆರಂಭವನ್ನು ಡಾ. ಲಿಂಗರಾಜುರವರು ಸ್ಮರಿಸುತ್ತಾರೆ, ‘ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಕುಮುದ್ವತಿ ನದಿಯ ಪುನಶ್ಚೇತನದ ಕಾರ್ಯವನ್ನು ಮಾಡುತ್ತಿರುವಾಗಲೇ ಗುರುದೇವರು, ನಾವು ಕೈವಾರದ ಪ್ರದೇಶದಲ್ಲಿ ಕೆಲಸ ಮಾಡಬೇಕೆಂಬ ಮಾರ್ಗದರ್ಶನವನ್ನು ಮಾಡಿದರು. ಹೀಗೆ 2013ರಲ್ಲಿ ಪಾಲಾರ್ ನದಿಯ ಪುನಶ್ಚೇತನ ಕಾರ್ಯವು ಆರಂಭವಾಯಿತು. ಇದರ ಭಾಗವಾಗಿ ಅಂತರ್ಜಲದ ಪುನರ್ಜಲೀಕರಣದ ಕಾರ್ಯವನ್ನು, ನದಿಯು ಹರಿಯುತ್ತಿದ್ದ ಮಾರ್ಗದಲ್ಲಿಯೇ ಅಂತರ್ಜಲದ ನೀರಿನ ಮಟ್ಟವನ್ನು ಹೆಚ್ಚಿಸುವ ಕಾರ್ಯವನ್ನು ಮತ್ತು ಮಳೆನೀರಿನ ಕೊಯ್ಲನ್ನು ಕೈಗೊಂಡೆವು. ಪುನರ್ಜಲೀಕರಣ ಬಾವಿಗಳ ಹಾಗೂ ಇಂಜೆಕ್ಷನ್ ಬೋರ್ವೆಲ್‌ಗಳ ನಿರ್ಮಾಣದ ಮೂಲಕ ಇದನ್ನು ಸಾಧಿಸಿದೆವು’ ಎನ್ನುತ್ತಾರೆ.
ಗುಟ್ಟಹಳ್ಳಿಯಲ್ಲಿ ಪುನರ್ಜಲೀಕರಣ ಬಾವಿಗಳನ್ನು ಮತ್ತು ಬೌಲ್ಡರ್ ಚೆಕ್‌ಗಳನ್ನು ನಿರ್ಮಿಸಿದಾಗಿನಿಂದಲೂ, ನೀರು ಹರಿದು ಹೋಗದೆ ಭೂಮಿಯೊಳಗೇ ನಿಲ್ಲುತ್ತದೆಂದು ಶೇಷಾದ್ರಿಯವರು ಹೇಳುತ್ತಾರೆ. ‘ಈಗ ಬೋರ್ವೇಲ್ ಮೇಲ್ಭಾಗದಲ್ಲೇ ನೀರು ಸಿಗುತ್ತದೆ. ಮೊದಲು ಒಂದೆರಡು ವರ್ಷಗಳ ಬಳಿಕ ಬೋರ್ವೆಲ್‌ಗಳು ಬತ್ತುತ್ತಿದ್ದವು. ಈಗ ಬೋರ್ವೆಲ್‌ಗಳಲ್ಲಿ ನೀರು ನಿರಂತರವಾಗಿ ಹರಿಯುತ್ತದೆ. ನೀರು ಬೇಸಿಗೆಯಲ್ಲಿ ಬತ್ತಿ ಹೋಗಬಹುದೆಂಬ ಭೀತಿಯಿಲ್ಲದೆಯೇ ನಾವು ಟೊಮೆಟೊ, ಎಲೆಕೋಸು, ಬೀನ್ಸ್ ಮತ್ತು ಮಾವನ್ನು ಬೆಳೆಯುತ್ತೇವೆ. ಈ ಪುನಶ್ಚೇತನದಿಂದಾಗಿ ಕೇವಲ ನಮ್ಮ ಬೋರ್ವೆಲ್‌ಗಳು ತುಂಬಿರುವುದಲ್ಲದೆ, ರೈತರಲ್ಲಿ ಆಶಾಕಿರಣವನ್ನು ಮೂಡಿಸಿದೆ. ಇದರಿಂದ ಇನ್ನೂ ಅನೇಕ ಸಾವಿರ ಜೀವಗಳು ಬೆಳಗಲಿವೆ. ನಮ್ಮ ಭೂಮಿಗಳಿಗೆ ಮತ್ತೆ ಜೀವವನ್ನು ತುಂಬಿದ್ದಕ್ಕಾಗಿ ಗುರುದೇವರಿಗೆ ಮತ್ತು ಆರ್ಟ್ ಆಫ್ ಲಿವಿಂಗ್‌ನ ಆಶ್ರಮದ ತಂಡಕ್ಕೆ ನಾವು ಚಿರಋಣಿಗಳಾಗಿದ್ದೇವೆ’ ಎನ್ನುತ್ತಾರೆ ಶೇಷಾದ್ರಿಯವರು.