ಹಲ್ದ್ವಾನಿ ಶುದ್ಧೀಕರಣ: ಸಮಾಜ ತಲೆತಗ್ಗಿಸುವ ಘಟನೆ

Published : Aug 20, 2026, 01:17 PM IST
Mallikarjun Kharge Uttarakhand

ಸಾರಾಂಶ

ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಘಟನೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಇದೆ. ಚಂದ್ರನಿಂದ ಮಂಗಳನವರೆಗೆ ಉಪಗ್ರಹಗಳನ್ನು ಕಳಿಸುವ ವೈಜ್ಞಾನಿಕ ಮುನ್ನಡೆ ನಡುವೆ ಮನುಷ್ಯ- ಮನುಷ್ಯರ ನಡುವೆ ತಾರತಮ್ಯ ಮಾಡುವ ಮನುಸ್ಮೃತಿ ಕಾಲದ ನಡವಳಿಕೆಗಳು ಈಗಲೂ ಜೀವಂತವಾಗಿರುವುದು ನಾಚಿಕೆಗೇಡಿನ ಸಂಗತಿ.

ಶರತ್ ಬಚ್ಚೇಗೌಡ

ಕಿಯಾನಿಕ್ಸ್‌, ಅಧ್ಯಕ್ಷ

ಹೊಸಕೋಟೆ ಕಾಂಗ್ರೆಸ್ ಶಾಸಕ

ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಘಟನೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಇದೆ. ಚಂದ್ರನಿಂದ ಮಂಗಳನವರೆಗೆ ಉಪಗ್ರಹಗಳನ್ನು ಕಳಿಸುವ ವೈಜ್ಞಾನಿಕ ಮುನ್ನಡೆ ನಡುವೆ ಮನುಷ್ಯ- ಮನುಷ್ಯರ ನಡುವೆ ತಾರತಮ್ಯ ಮಾಡುವ ಮನುಸ್ಮೃತಿ ಕಾಲದ ನಡವಳಿಕೆಗಳು ಈಗಲೂ ಜೀವಂತವಾಗಿರುವುದು ನಾಚಿಕೆಗೇಡಿನ ಸಂಗತಿ.

ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮಾತ್ರವಲ್ಲ, ಅವರು ಈ ನಾಡಿನ ಮಣ್ಣಿನ ಮಗ. ಇಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳೆದು ದೇಶದಲ್ಲಿ ಎತ್ತರಕ್ಕೆ ಬೆಳೆದು ನಿಂತವರು. ಅವರು ಲೋಕಸಭೆಯಲ್ಲಿಯೂ ಪ್ರಧಾನಿ ವಿರುದ್ಧ ನಿಂತು ಮಾತನಾಡಿದ್ದಾರೆ, ಈಗ ರಾಜ್ಯಸಭೆಯಲ್ಲಿಯೂ ನಿಂತು ಮಾತನಾಡಿದ್ದಾರೆ. ಇದನ್ನು ಸಹಿಸದ ಶಕ್ತಿಗಳು ಹಲ್ದ್ವಾನಿಯಲ್ಲಿ ಇವೆಯೇ ಎಂದು ಕೇಳಬೇಕಾಗಿದೆ. ಅಲ್ಲಿ ನಡೆದ ಶುದ್ಧೀಕರಣ ಘಟನೆಯನ್ನು ತಿಳಿದ ನಂತರ ನನ್ನ ಮನಸ್ಸು ಎಷ್ಟು ವಿಹ್ವಲಗೊಂಡಿತು ಎಂದರೆ, ಎರಡು ದಿನ ಸರಿಯಾಗಿ ನಿದ್ದೆ ಮಾಡಲು ಆಗಲಿಲ್ಲ. ನಾವು ಎಂಥ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ನನಗೆ ಸಂಕಟವಾಯಿತು.

ಇದು ಮನುಷ್ಯ ಕುಲದ ವಿರುದ್ಧ ಷಡ್ಯಂತ್ರ

ಖರ್ಗೆ ಅವರು ತೆರಳಿದ ನಂತರ ಈ ಶುದ್ಧೀಕರಣ ಆಗಿದ್ದು ರಾಮಲೀಲಾ ಮೈದಾನದಲ್ಲಿ. ಮಾಡಿದವರು ರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸ ಸಂಘಟನೆಯವರು. ರಾಮ ರಾಜ್ಯದ ಬಗ್ಗೆ ಮಾತನಾಡುವ, ರಾಮಮಂದಿರ ನಿರ್ಮಾಣವನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿದ್ದ ಒಂದು ಪಕ್ಷದ ಅಧಿಕಾರ ಇರುವ ಈ ಕಾಲದಲ್ಲಿ ರಾಮಲೀಲಾ ಮೈದಾನದಲ್ಲಿ ರಾಮನ ಹೆಸರು ಇಟ್ಟುಕೊಂಡಿರುವ ಧರ್ಮಾರ್ಥ ಸಂಸ್ಥೆ ಮಾಡಿದ ಕೆಲಸ ಇದು. ಇಲ್ಲಿ ರಾಮನ ಹೆಸರಿಗೆ ನ್ಯಾಯ ಸಿಕ್ಕಿದೆಯೇ? ಧರ್ಮಕ್ಕೆ ಬೆಲೆ ಇದೆಯೇ? ಒಂದಕ್ಕೆ ಒಂದು ಸಂಬಂಧ ಇಲ್ಲದ ಘಟನೆ ಇದು. ಅಂದರೆ- ನಾವು ಹೇಳುವುದು ಒಂದು ಮಾಡುವುದು ಒಂದು. ಇಂಥ ಸಭೆಯಲ್ಲಿ ಯಾರಾದರೂ ಏನಾದರೂ ಘೋಷಣೆ ಕೂಗಿದರೆ ಮೈದಾನ ಹೇಗೆ ಅಶುದ್ಧವಾಗುತ್ತದೆ ಎಂಬುದನ್ನು ತಿಳಿದವರು ಹೇಳಬೇಕು. ಇದು ಮನಃಸ್ಥಿತಿಯ ಸಮಸ್ಯೆ. ಇಂಥ ನೆಪಗಳನ್ನು ಇಟ್ಟುಕೊಂಡು ಅಸ್ಪೃಶ್ಯತೆಯನ್ನು ಚಾಲ್ತಿಯಲ್ಲಿ ಇಡಬೇಕು ಎಂದು ಇಂಥ ಸಂಘಟನೆಗಳು ಮನುಷ್ಯ ಕುಲದ ವಿರುದ್ಧ ಕುತಂತ್ರ ಮಾಡುತ್ತಾ ಇರುತ್ತವೆ.

ಇಂಥ ಮನಸ್ಥಿತಿ ಹುಟ್ಟುವುದು ಎಲ್ಲಿಂದ? (ಇಂಗ್ಲಿಷ್ ಇದೆ)

ನಮ್ಮ ಹುಟ್ಟು ಆಕಸ್ಮಿಕ. ಯಾರೂ ಜಾತಿಯನ್ನು ಕೇಳಿಕೊಂಡು ಹುಟ್ಟಿ ಬಂದಿರುವುದಿಲ್ಲ. ಆದರೆ, ಭಾರತದ ದುರಂತ ಏನು ಎಂದರೆ, ಹುಟ್ಟಿನ ಆಧಾರದ ಮೇಲೆ ಅವರ ಸ್ಥಾನಮಾನವನ್ನು ನಿರ್ಧಾರ ಮಾಡಲಾಗುತ್ತದೆ. ಇದು ಅತ್ಯಂತ ದೌರ್ಭಾಗ್ಯದ ವಿಚಾರ. ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಇಂಥ ಅಪಮಾನಗಳನ್ನು ಜೀವನದ ಉದ್ದಕ್ಕೂ ಅನುಭವಿಸಿದ್ದರು. ಅಂತಲೇ ಅವರು Annihilation of Caste ಎನ್ನುವಂಥ ಕೃತಿಯನ್ನು ರಚಿಸಿದರು. ಅವರು ರಚಿಸಿದ ಸಂವಿಧಾನದ ಮೂಲ ಆಶಯ ಕೂಡ ಸಮಾನತೆ. ಜಾತಿ, ಲಿಂಗ, ಧರ್ಮ ಅಥವಾ ಹುಟ್ಟಿನ ಆಧಾರದ ಮೇಲೆ ಯಾವುದೇ ತಾರತಮ್ಯ ಇರಬಾರದು ಎಂದೇ ಸಂವಿಧಾನ ಹೇಳಿತು. ಇದು ಅಂಬೇಡ್ಕರ್‌ ಅವರು ಈ ಎಲ್ಲ ಆಧಾರಗಳ ಮೇಲೆ ತಾರತಮ್ಯ ಮಾಡುವವರಿಗೆ ಕೊಟ್ಟ ಎಚ್ಚರಿಕೆಯಾಗಿತ್ತು. ಹಲ್ದ್ವಾನಿ ಘಟನೆಯನ್ನು ನೋಡಿದಾಗ ಮನಸ್ಸಿಗೆ ತೀವ್ರ ನೋವಾಗುತ್ತದೆ. ನಮ್ಮ ಎಲ್ಲರ ಮೈ ಒಳಗೆ ಹರಿಯುವ ರಕ್ತದ ಬಣ್ಣದಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಆದರೆ, ಈ ಹುಟ್ಟಿನ ಆಧಾರದ ಮೇಲೆ ಹೀಗೆ ತಾರತಮ್ಯ ಮಾಡಬೇಕು ಎನ್ನುವ ಮನಃಸ್ಥಿತಿ ಎಲ್ಲಿಂದ ಹುಟ್ಟುತ್ತದೆ?

ದುರುಳರ ವಿರುದ್ಧ ಕ್ರಮ ಕೈಗೊಳ್ಳಿ (ಇಂಗ್ಲಿಷ್‌ ಇದೆ)

ನಾವು ಯಾವ ಸಮಾಜವನ್ನು ಕಟ್ಟಲು ಬಯಸುತ್ತೇವೆ? ಮನುಷ್ಯನನ್ನು ಮನುಷ್ಯನಾಗಿ ಗೌರವಿಸುವ ಸಮಾಜವೋ? ಅಥವಾ ಮನುಷ್ಯನ ಸ್ಪರ್ಶದಿಂದ ಸ್ಥಳ ಅಪವಿತ್ರವಾಗುತ್ತದೆ ಎಂದು ನಂಬುವ ಸಮಾಜವೋ? ಸಂವಿಧಾನದ 17ನೇ ವಿಧಿ ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಿದೆ. ಅದು ಕೇವಲ ಸರ್ಕಾರಿ ಕಚೇರಿಗಳ ಒಳಗಿನ ಅಸ್ಪೃಶ್ಯತೆಯನ್ನು ಮಾತ್ರ ರದ್ದುಪಡಿಸಿಲ್ಲ; ಎಲ್ಲ ರೂಪಗಳ ಅಸ್ಪೃಶ್ಯತೆಯನ್ನು ರದ್ದುಪಡಿಸಿದೆ. ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಸಚಿವಾಲಯದ ಪ್ರಕಾರ, ಸಂವಿಧಾನದ 17ನೇ ವಿಧಿಯು ಯಾವುದೇ ರೂಪದಲ್ಲಿನ ಅಸ್ಪೃಶ್ಯತೆಯನ್ನು ರದ್ದುಪಡಿಸುತ್ತದೆ. ಅಸ್ಪೃಶ್ಯತೆಯಿಂದ ಉಂಟಾಗುವ ನಿರ್ಬಂಧಗಳನ್ನು ಜಾರಿಗೊಳಿಸುವುದನ್ನು 1955ರ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ (Protection of Civil Rights Act) ಅಪರಾಧವೆಂದು ಪರಿಗಣಿಸುತ್ತದೆ. ಹಾಗಾದರೆ ಹಲ್ದ್ವಾನಿಯ ದುರುಳರ ವಿರುದ್ಧ ಈ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು. ಆಗ ಕೇಂದ್ರ ಸರ್ಕಾರ ಅಸ್ಪೃಶ್ಯತೆ ನಿವಾರಣೆಯಲ್ಲಿ ಪ್ರಾಮಾಣಿಕವಾಗಿದೆ ಎಂದು ನಮಗೆ ಮನವರಿಕೆಯಾಗುತ್ತದೆ.

ಏಕೆಂದರೆ ಇದು ಕೇವಲ ರಾಜಕೀಯ ಅವಮಾನಕ್ಕೆ ಸಂಬಂಧಿಸಿದ ವಿಷಯವಲ್ಲ. ನೆಲಮಟ್ಟದಲ್ಲಿ ಜಾತಿ ಪೂರ್ವಾಗ್ರಹ ಮುಂದುವರಿಯುತ್ತಿರುವಾಗ, ಸಂವಿಧಾನವನ್ನು ಕೇವಲ ಒಂದು ಪುಸ್ತಕವಾಗಿ ಉಳಿಸಿಬಿಡಬೇಕೇ ಎಂಬ ಪ್ರಶ್ನೆ ಇದು. ಒಬ್ಬ ರಾಷ್ಟ್ರೀಯ ನಾಯಕ ವೇದಿಕೆಯ ಮೇಲೆ ನಿಂತಿದ್ದಕ್ಕಾಗಿ ಆತನನ್ನು ‘ಅಶುದ್ಧ’ ಎಂದು ಪರಿಗಣಿಸಲು ಸಾಧ್ಯವಾದರೆ, ಒಬ್ಬ ಬಡ ದಲಿತ ಕಾರ್ಮಿಕ, ವಿದ್ಯಾರ್ಥಿ, ರೈತ ಅಥವಾ ಕೂಲಿ ಕಾರ್ಮಿಕನಿಗೆ ನೇರವಾಗಿ ಅಥವಾ ಪರೋಕ್ಷವಾಗಿ- ನಿನ್ನ ಸ್ಪರ್ಶ, ನಿನ್ನ ಉಪಸ್ಥಿತಿ ಅಥವಾ ನಿನ್ನ ಗುರುತೇ ಒಂದು ಸ್ಥಳವನ್ನು ಅಶುದ್ಧಗೊಳಿಸುತ್ತದೆ ಎಂದು ಹೇಳಿದಾಗ, ಆತನ ಮನಸ್ಸಿಗೆ ಏನಾಗಬಹುದು ಎಂಬುದನ್ನು ಊಹಿಸಿ.

ಅಶುದ್ಧ ಘೋಷಣೆ ಹಕ್ಕು ಕೊಟ್ಟಿದ್ದು ಯಾರು?

ಇದು ಕೇವಲ ಮಲ್ಲಿಕಾರ್ಜುನ ಖರ್ಗೆ ಅವರ ವಿಷಯವಲ್ಲ. ತಲೆತಲಾಂತರಗಳಿಂದ ಅಸ್ಪೃಶ್ಯತೆಯ ಅವಮಾನವನ್ನು ಎದುರಿಸಿ ಬಂದಿರುವ ಕೋಟ್ಯಂತರ ಸಾಮಾನ್ಯ ಭಾರತೀಯರಿಗೆ ಈ ಘಟನೆ ಯಾವ ಸಂದೇಶವನ್ನು ನೀಡುತ್ತದೆ ಎಂಬುದೇ ನಿಜವಾದ ಪ್ರಶ್ನೆ. ಅದಕ್ಕಾಗಿ ಇದು ಇಡೀ ರಾಷ್ಟ್ರ ಎದುರಿಸುತ್ತಿರುವ ಪ್ರಶ್ನೆ. ಇದು ನಮ್ಮ ಎಲ್ಲರ ಅಂತಃಕರಣ ಕಲಕಬೇಕು ಎನ್ನುವುದು ನನ್ನ ಆಗ್ರಹ.

ಖರ್ಗೆ ಅವರ ಸಭೆಯಲ್ಲಿ ಕೇಳಿಬಂದಿತೆನ್ನಲಾದ ಘೋಷಣೆಗಳು ಸನಾತನ ಧರ್ಮವನ್ನು ನಂಬುವವರ ಭಾವನೆಗಳಿಗೆ ನೋವುಂಟು ಮಾಡಿವೆ ಎಂದು ಬಿಜೆಪಿ ಹೇಳಿದೆ. ಅಂಥ ಆಕ್ಷೇಪಾರ್ಹ ಘೋಷಣೆಗಳು ಕೇಳಿಬಂದಿದ್ದರೆ, ಅವುಗಳನ್ನು ಕೂಗಿದವರ ವಿರುದ್ಧ ಕ್ರಮ ಕೈಗೊಳ್ಳಿ. ಕಾನೂನು ಇದೆ. ಪೊಲೀಸರು ಇದ್ದಾರೆ. ಸಂವಿಧಾನ ಇದೆ. ಅಲ್ಲಿ ಅವರದ್ದೇ ಸರ್ಕಾರ ಇದೆ. ಆದರೆ ಯಾರಿಗಾದರೂ ಉಂಟಾದ ರಾಜಕೀಯ ಅಥವಾ ಧಾರ್ಮಿಕ ಆಕ್ಷೇಪವನ್ನು ಆಧಾರವಾಗಿಟ್ಟುಕೊಂಡು ಮತ್ತೊಬ್ಬ ಮನುಷ್ಯನನ್ನು ಅಶುದ್ಧ ಎಂದು ಘೋಷಿಸಲು ಯಾರಿಗಾದರೂ ಹೇಗೆ ಹಕ್ಕು ಸಿಗುತ್ತದೆ?

ಇಂಥ ಕೊಳಕು ಮನಃಸ್ಥಿತಿಯ ವಿರುದ್ಧ ಕರ್ನಾಟಕ ಹೋರಾಟ ಮಾಡಿಕೊಂಡು ಬಂದಿದೆ. ಅದಕ್ಕೆ ಸಾವಿರ ವರ್ಷಗಳ ಇತಿಹಾಸ ಇದೆ. ನಮ್ಮದು ಪಂಪನ ನಾಡು, ಬಸವಣ್ಣನ ನಾಡು, ಕನಕದಾಸರ ನಾಡು, ಸರ್ವಜ್ಞನ ನಾಡು. ಕುವೆಂಪು ಅವರು ಇಲ್ಲಿ ಮನುಜಮತ ವಿಶ್ವಪಥ ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದರು. ಈ ಸರ್ವ ಸಮಾನತೆಯ ತಾತ್ವಿಕತೆ ಮತ್ತು ಸಿದ್ಧಾಂತವೇ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಆದರ್ಶವಾಗಿದೆ. ನಾವು ಇದನ್ನೇ ಅನುಸರಿಸಿಕೊಂಡು ಬಂದಿದ್ದೇವೆ.

ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಬಿ. ಬಸವಲಿಂಗಪ್ಪ ಅವರಂಥ ಕ್ರಾಂತಿಕಾರಿ ಆಲೋಚನೆ ಇದ್ದವರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಬಸವಲಿಂಗಪ್ಪ ಅವರೇ ತಲೆಯ ಮೇಲೆ ಮಲ ಹೊರುವ ಪದ್ಧತಿಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದಾಗ ಅರಸು ಅವರು ಅದಕ್ಕೆ ತಕ್ಷಣ ಸಮ್ಮತಿಸಿ ಈ ಪದ್ಧತಿಯೇ ಇರಬಾರದು ಎಂದರು. ಅದಕ್ಕಾಗಿಯೇ ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಯುತ್ತೇವೆ. ಅರಸು ಅವರೇ 1971ರಲ್ಲಿ ಮಲ್ಲಿಕಾರ್ಜುನ ಖರ್ಗೆಯವರನ್ನು ಚುನಾವಣಾ ರಾಜಕೀಯಕ್ಕೆ ಕರೆದುಕೊಂಡು ಬಂದು ಗುರುಮಿಟ್ಕಲ್‌ ಕ್ಷೇತ್ರದಿಂದ ನಿಲ್ಲಿಸಿ ಗೆಲ್ಲಿಸಿಕೊಂಡು ಬಂದರು. ಈಗಿನ ಸರ್ಕಾರದಲ್ಲಿಯೂ ನಾವು ದಲಿತ ಸಮಾಜದ ಬಸವಂತಪ್ಪ ಅವರನ್ನು ಮುಜರಾಯಿ ಸಚಿವರನ್ನಾಗಿ ಮಾಡಿದ್ದೇವೆ. ಇದು ನಮ್ಮ ಕಾಂಗ್ರೆಸ್‌ ಪಕ್ಷದ ಜಾತಿ ವ್ಯವಸ್ಥೆ ವಿರೋಧಿ ನಿಲುವಿಗೆ ಪೂರಕವಾಗಿಯೇ ಇದೆ. ಇದಕ್ಕಾಗಿ ನಾನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಅಭಿನಂದಿಸುತ್ತೇನೆ.

ಒಬ್ಬ ದೊಡ್ಡ ಮತ್ತು ಕಳೆದ ಆರು ದಶಕಗಳಿಂದ ರಾಜಕೀಯದಲ್ಲಿ ಬೆಳೆದ ಒಬ್ಬ ನಾಯಕ ಭಾಗವಹಿಸಿದ ಒಂದು ವೇದಿಕೆಯನ್ನು ಶುದ್ಧೀಕರಣ ಮಾಡುವುದಾದರೆ ಸಾಮಾನ್ಯ ದಲಿತರ ಪಾಡು ಏನು ಈ ದೇಶದಲ್ಲಿ ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಾವು ಎಂಥ ಸಮಾಜವನ್ನು ನಿರ್ಮಿಸಲು ಹೊರಟಿದ್ದೇವೆ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.

ದೌರ್ಜನ್ಯ ಮರುಕಳಿಸಲು ಪ್ರೇರಣೆ (ಇಂಗ್ಲಿಷ್‌ ಇದೆ)

ಏಕೆಂದರೆ ಈಗಲೂ ಪ್ರತಿ ವರ್ಷ 50,000 ರಿಂದ 57,000 ಇಂಥ ಪ್ರಕರಣಗಳು ದೇಶದಲ್ಲಿ ವರದಿಯಾಗುತ್ತಿವೆ. ಉತ್ತರ ಪ್ರದೇಶ, ರಾಜಸ್ಥಾನ ಮೊದಲ ಎರಡು ಸ್ಥಾನದಲ್ಲಿ ಇವೆ. ನಿತ್ಯವೂ 16 ನಿಮಿಷಕ್ಕೆ ಒಮ್ಮೆ ಇಂಥ ಘಟನೆಗಳು ನಡೆಯುತ್ತವೆ ಎಂದು NCRB (NATIONAL CRIME RECORD BUREAU) ದಾಖಲೆಗಳು ಹೇಳುತ್ತವೆ. ಬಹುತೇಕ ಪ್ರಕರಣಗಳು ತನಿಖಾ ಹಂತದಲ್ಲಿಯೇ ಇರುವುದರಿಂದ ಇಂಥ ದೌರ್ಜನ್ಯ ಪ್ರಕರಣಗಳು ಮತ್ತೆ ಮತ್ತೆ ಮರುಕಳಿಸುತ್ತವೆ. ಅದಕ್ಕಾಗಿ ಇಂಥ ಘಟನೆಗಳ ವಿರುದ್ಧ ಕೇಂದ್ರ ಸರ್ಕಾರ ಕೇವಲ ಬಾಯುಪಚಾರದ ಮಾತುಗಳನ್ನು ಆಡುವುದು ಅಥವಾ ನಾವು ಇಂಥ ಘಟನೆಗಳಿಂದ ಅಂತರ ಕಾಯ್ದುಕೊಳ್ಳುತ್ತೇವೆ ಅಂತ ಹೇಳುವುದು ಪರೋಕ್ಷವಾಗಿ ಇಂಥ ದೌರ್ಜನ್ಯಗಳನ್ನು ಮರುಕಳಿಸಲು ಪ್ರೇರೇಪಿಸುತ್ತದೆ.

ನಾವು ಇಲ್ಲಿ ಹೋರಾಟ ಮಾಡಬೇಕಾಗಿರುವುದು ಈ ಒಂದು ಘಟನೆಯ ವಿರುದ್ಧವಲ್ಲ, ಇಂಥ ಮನಃಸ್ಥಿತಿಯ ವಿರುದ್ಧ. ಕೇಂದ್ರದಲ್ಲಿ ಬಲಪಂಥೀಯ ಆಲೋಚನೆಯ ಸರ್ಕಾರ ಇದೆ ಎಂತಲೇ ಇಂಥ ಮನಃಸ್ಥಿತಿಯ ಜನರು ಶುದ್ಧೀಕರಣದ ನೆಪದಲ್ಲಿ ಜಾತಿ ಪದ್ಧತಿಯನ್ನು ಆಚರಿಸುತ್ತಾರೆ. ವರ್ಣ ವ್ಯವಸ್ಥೆಯನ್ನು ಮುಂದುವರಿಸುತ್ತಾರೆ.ಈ ಘಟನೆಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ತಮ್ಮಕಟು ವಿರೋಧವನ್ನು ವ್ಯಕ್ತಪಡಿಸಬೇಕಿತ್ತು ಎನ್ನುವುದು ನನ್ನ ಅಭಿಪ್ರಾಯ. ಅದು ದಲಿತ ಸಮಾಜದ ಕುರಿತು ಅವರಿಗೆ ಇರುವ ಕಳಕಳಿಯನ್ನು ತೋರಿಸಿದಂತೆ ಆಗುತ್ತಿತ್ತು.

PREV
Read more Articles on

Recommended Stories

ಹನೂರು ಎನ್‌ಕೌಂಟರ್‌ನಲ್ಲಿ ಕಂಡಿದ್ದು, ಕಾಣದ್ದು
ಸೊಳ್ಳೆಗಳ ಸಾಮ್ರಾಜ್ಯದತ್ತ ಇಣುಕು ನೋಟ - ವಿಶ್ವ ಸೊಳ್ಳೆಗಳ ದಿನ –ಆಗಸ್ಟ್20