;Resize=(412,232))
ಎಸ್ಐಆರ್ ಎಂದರೆ ಕಚೇರಿಯಲ್ಲಿ ಕುಳಿತು ಕಾಗದಪತ್ರಗಳನ್ನು ಬದಲಾಯಿಸುವುದಲ್ಲ. ಇದು ಪ್ರತಿ ನಾಗರಿಕನ ಮನೆ ಬಾಗಿಲಿಗೆ ಖುದ್ದಾಗಿ ತೆರಳಿ ನಡೆಸುವ ವೈಜ್ಞಾನಿಕ ಮತ್ತು ಪಾರದರ್ಶಕ ಪರಿಶೀಲನೆ. ಪರಿಷ್ಕರಣೆಯನ್ನು ತನ್ನದೇ ವಿವೇಚನೆಯ ಪ್ರಕಾರ ಆದೇಶಿಸುವ ಸಂಪೂರ್ಣ ಅಧಿಕಾರ ಆಯೋಗಕ್ಕಿದೆ. ಸುಪ್ರೀಂಕೋರ್ಟ್ ಕೂಡ ಆಯೋಗದ ಈ ಸಾಂವಿಧಾನಿಕ ಕರ್ತವ್ಯವನ್ನು ಎತ್ತಿಹಿಡಿದಿದೆ.
ದೇಶದ ಸಂವಿಧಾನವು ಪ್ರಜೆಗಳಿಗೆ ನೀಡಿರುವ ಅತಿ ದೊಡ್ಡ ಹಕ್ಕು ಮತದಾನದ ಹಕ್ಕು. ನ್ಯಾಯಸಮ್ಮತ ಮತ್ತು ಮುಕ್ತ ಚುನಾವಣೆಯಿಲ್ಲದೆ ಪ್ರಜಾಪ್ರಭುತ್ವಕ್ಕೆ ಯಾವುದೇ ಅರ್ಥವೂ ಇರುವುದಿಲ್ಲ. ಆದರೆ, 2 ದಶಕಗಳಿಂದ ಮತಪಟ್ಟಿಯಲ್ಲಿ ಉಳಿದುಕೊಂಡಿದ್ದ ನಕಲಿ ಮತದಾರರು, ಮೃತಪಟ್ಟವರ ಹೆಸರುಗಳು, ಶಾಶ್ವತವಾಗಿ ವಲಸೆ ಹೋದವರು ಹಾಗೂ ಗಡಿ ಆಚೆಯಿಂದ ನುಸುಳಿದವರ ಹಾವಳಿಯನ್ನು ಬೇರುಸಹಿತ ಕಿತ್ತೊಗೆಯಲು ಭಾರತೀಯ ಚುನಾವಣಾ ಆಯೋಗದ ಎಸ್ಐಆರ್ ಪ್ರಸ್ತುತ ಭಾರತೀಯ ರಾಜಕಾರಣದಲ್ಲಿ ಅತ್ಯಂತ ಮಹತ್ವದ ಮತ್ತು ಸ್ವಾಗತಾರ್ಹ ಹೆಜ್ಜೆಯಾಗಿದೆ.
ಎಸ್ಐಆರ್ ಎಂದರೆ ಕೇವಲ ಕಚೇರಿಯಲ್ಲಿ ಕುಳಿತು ಕಾಗದಪತ್ರಗಳನ್ನು ಬದಲಾಯಿಸುವುದಲ್ಲ. ಪ್ರತಿಯೊಬ್ಬರ ಮನೆಗೆ ಖುದ್ದಾಗಿ ತೆರಳಿ ನಡೆಸುವ ವೈಜ್ಞಾನಿಕ ಮತ್ತು ಪಾರದರ್ಶಕ ಪರಿಶೀಲನೆ. ಪ್ರತಿವರ್ಷ ನಡೆಯುವ ‘ವಿಶೇಷ ಸಂಕ್ಷಿಪ್ತ ಪರಿಷ್ಕರಣೆ’ಯಲ್ಲಿ (ಎಸ್ಎಸ್ಆರ್) ಹೊಸದಾಗಿ 18 ವರ್ಷ ತುಂಬಿದವರು, ವಿಳಾಸ ಬದಲಾಯಿಸಿದವರು ಮಾತ್ರ ನಮೂನೆ ಸಲ್ಲಿಸುತ್ತಾರೆ. ಆದರೆ ಎಸ್ಐಆರ್ನಲ್ಲಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಪ್ರತಿ ಮನೆಗೂ ತೆರಳಿ ಕುಟುಂಬದ ಪ್ರತಿಯೊಬ್ಬರ ದಾಖಲೆಗಳನ್ನು ಪರಿಶೀಲಿಸಿ, 2002ರ ಮೂಲ ದಾಖಲೆಗಳೊಂದಿಗೆ ಪ್ರಸ್ತುತ ಮತದಾರರ ವಿವರವನ್ನು ತಾಳೆ ನೋಡಿ ಅಸ್ತಿತ್ವ ಮತ್ತು ಅರ್ಹತೆಯನ್ನು ದೃಢೀಕರಿಸುತ್ತಾರೆ. ಅರ್ಹರನ್ನು ಖಾತ್ರಿಪಡಿಸುವುದು ಮತ್ತು ನಕಲಿ, ಅನರ್ಹರನ್ನು ಮತಪಟ್ಟಿಯಿಂದ ತೆಗೆಯುವುದು ಇದರ ಉದ್ದೇಶ. ಕಳೆದ ಎರಡು ದಶಕಗಳಲ್ಲಿ (ಯುಪಿಎ ಸರ್ಕಾರದ ಹತ್ತು ವರ್ಷಗಳ ಅವಧಿ ಸೇರಿದಂತೆ) ಕೇವಲ ವಾರ್ಷಿಕ ಸಂಕ್ಷಿಪ್ತ ಪರಿಷ್ಕರಣೆ ಮಾತ್ರ ನಡೆದಿದ್ದರಿಂದ ಮತದಾರರ ಪಟ್ಟಿಯಲ್ಲಿ ಅಕ್ಷರಶಃ ಕಸ ತುಂಬಿಕೊಂಡಿತ್ತು.
ಸಾಂವಿಧಾನಿಕ ಬಲ, ಐತಿಹಾಸಿಕ ಹಿನ್ನೆಲೆ
ಸಂವಿಧಾನದ 3ನೇ ವಿಧಿಯು ಮುಕ್ತ, ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಸಂಪೂರ್ಣ ಅಧಿಕಾರವನ್ನು ಚುನಾವಣೆ ಆಯೋಗಕ್ಕೆ ನೀಡಿದೆ. ಇದರೊಂದಿಗೆ ಪ್ರಜಾಪ್ರಭುತ್ವ ಕಾಯ್ದೆ 1950ರ ಸೆಕ್ಷನ್ 21(3) ರ ಅಡಿಯಲ್ಲಿ ಯಾವುದೇ ರಾಜ್ಯ ಅಥವಾ ಕ್ಷೇತ್ರದಲ್ಲಿ ಎಸ್ಐಆರ್ ಅನ್ನು ತನ್ನದೇ ವಿವೇಚನೆ ಪ್ರಕಾರ ಆದೇಶಿಸುವ ಸಂಪೂರ್ಣ ಅಧಿಕಾರ ಆಯೋಗಕ್ಕಿದೆ. ಸುಪ್ರೀಂ ಕೋರ್ಟ್ ಕೂಡ ತನ್ನ ತೀರ್ಪುಗಳಲ್ಲಿ ಚುನಾವಣಾ ಆಯೋಗದ ಈ ಸಾಂವಿಧಾನಿಕ ಕರ್ತವ್ಯವನ್ನು ಎತ್ತಿಹಿಡಿದಿದೆ.
ಇದೆಲ್ಲ ಹೊಸದೇನಲ್ಲ. ಜವಾಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಪಿ.ವಿ. ನರಸಿಂಹ ರಾವ್ ಅವರ ಕಾಲದಲ್ಲೂ ನಡೆದಿವೆ. ಕೊನೆಯದಾಗಿ ನಡೆದದ್ದು ವಾಜಪೇಯಿ ಅವರ ಎನ್ಡಿಎ ಅವಧಿಯಲ್ಲಿ. ತದನಂತರ ದೀರ್ಘಕಾಲದವರೆಗೆ ಸ್ಥಗಿತಗೊಂಡಿತ್ತು. ದೇಶದಲ್ಲಿ ಒಟ್ಟು 12 ಬಾರಿ ಎಸ್ಐಆರ್ ನಡೆದಿದೆ. ಅದರಲ್ಲಿ ಎಂಟು ಬಾರಿ ಕಾಂಗ್ರೆಸ್ ನೇತೃತ್ವದ ಯುಪಿಎ ಕಾಲದಲ್ಲಿ ನಡೆದಿದೆ. ಬಿಜೆಪಿ ನೇತೃತ್ವದ ಎನ್ಡಿಎ ಅವಧಿಯಲ್ಲಿ ಎರಡು ಬಾರಿ ಮಾತ್ರ ಆಗಿದೆ.
ಯಶಸ್ವಿ ಅನುಷ್ಠಾನ ಮತ್ತು ವಾಸ್ತವಿಕ ಅಂಕಿಅಂಶ
2025ರ ಜೂನ್ನಲ್ಲಿ ಬಿಹಾರದಿಂದ ಆರಂಭವಾದ ಮತಪಟ್ಟಿ ಪರಿಷ್ಕರಣೆ ಅಭಿಯಾನವು ಯಶಸ್ಸು ಕಂಡಿತು. ಬಿಹಾರದಲ್ಲಿ 47 ಲಕ್ಷ ನಕಲಿ, ಮೃತಪಟ್ಟ ಮತ್ತು ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರನ್ನು ಕೈಬಿಡಲಾಯಿತು. ದೇಶದ ಇತರ ರಾಜ್ಯಗಳಲ್ಲಿ ವಿವಿಧ ಹಂತಗಳಲ್ಲಿ ಎಸ್ಐಆರ್ ನಡೆದಾಗ ಸುಮಾರು 95 ಕೋಟಿ ಮತದಾರರ ಪೈಕಿ 82 ಕೋಟಿ ಮತದಾರರು ಯಶಸ್ವಿಯಾಗಿ ನೋಂದಾಯಿಸಿಕೊಂಡರು.
ಬಿಎಲ್ಒಗಳು, ಐಎಎಸ್, ಪಿಎಸ್ಎಸ್ ಅಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಸುಮಾರು 25 ಲಕ್ಷಕ್ಕೂ ಅಧಿಕ ಕಾರ್ಯಕರ್ತರು (ಬಿಜೆಪಿ, ಕಾಂಗ್ರೆಸ್, ಇತ್ಯಾದಿ) ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಆಡಳಿತಾರೂಢ ಟಿಎಂಸಿ ಸರಕಾರದ ಅಸಹಕಾರ, ರಾಜಕೀಯ ಗೂಂಡಾಗಳ ಅಡಚಣೆಗಳ ನಡುವೆಯೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಆರ್ಪಿಎಫ್) ರಕ್ಷಣೆಯೊಂದಿಗೆ ಎಸ್ಐಆರ್ ನಡೆಸಿ, 83.86 ಲಕ್ಷಕ್ಕೂ ಹೆಚ್ಚು ಅನರ್ಹ, ನಕಲಿ ಹೆಸರುಗಳನ್ನು ರದ್ದುಗೊಳಿಸಲಾಯಿತು.
ವಿಪಕ್ಷಗಳ ಅಪಪ್ರಚಾರ ಮತ್ತು ವಾಸ್ತವ
ಪ್ರತಿಪಕ್ಷಗಳು ‘ದೇಶಾದ್ಯಂತ 13.39 ಕೋಟಿ ಮತದಾರರ ಹೆಸರನ್ನು ಎಸ್ಐಆರ್ ವೇಳೆ ಏಕಾಏಕಿ ರದ್ದುಪಡಿಸಲಾಗಿದೆ’ ಎಂದು ಅಪಪ್ರಚಾರ ನಡೆಸಿದವು. ಆದರೆ ಆಯೋಗದ ಅಧಿಕೃತ ಅಂಕಿಅಂಶಗಳ ಪ್ರಕಾರ, 13.39 ಕೋಟಿ ಎಂಬುದು ಮೂರು ಹಂತಗಳ ಕರಡು ಪರಿಶೀಲನೆಯಲ್ಲಿ ಗುರುತಿಸಲ್ಪಟ್ಟ ಒಟ್ಟಾರೆ ಸಂಶಯಾಸ್ಪದ ವರ್ಗಗಳ ಸಂಖ್ಯೆಯಾಗಿದೆ. ಇದರಲ್ಲಿ 2.80 ಕೋಟಿ ಮೃತರು, 6.30 ಕೋಟಿ ಸ್ಥಳಾಂತರಗೊಂಡವರು, 1 ಕೋಟಿ ಪುನರಾವರ್ತಿತ ನಮೂನೆಗಳು ಹಾಗೂ 3.01 ಕೋಟಿ ಪತ್ತೆಯಾಗದ ಅಥವಾ ವಿಳಾಸ ಹೊಂದಾಣಿಕೆಯಾಗದವರು ಸೇರಿದ್ದಾರೆ. ಅರ್ಹ ನಾಗರಿಕರು ಆಯೋಗದ ನೋಟಿಸ್ಗೆ ಪ್ರತಿಕ್ರಿಯಿಸಿ, ದಾಖಲೆ ನೀಡಿ ನಮೂನೆ 6 ರ ಮೂಲಕ ಹೆಸರನ್ನು ಉಳಿಸಿಕೊಂಡಿದ್ದಾರೆ. ಫಾರ್ಮ್-7 ರ ಮೂಲಕ ಕಾನೂನುಬದ್ಧವಾಗಿ ಕೇವಲ 29 ಲಕ್ಷ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಸುಪ್ರೀಂ ತೀರ್ಪು ಮತ್ತು ಕಾಂಗ್ರೆಸ್ ದ್ವಂದ್ವ ನೀತಿ
ಎಸ್ಐಆರ್ಗೆ ತಡೆ ನೀಡಬೇಕೆಂದು ಕೋರಿ ಪ್ರತಿಪಕ್ಷಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದವು. ಆದರೆ 2026ರ ಮೇ 27ರಂದು ಸಿಜೆಐ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಎಲ್ಲಾ ಮನವಿಗಳನ್ನು ತಿರಸ್ಕರಿಸಿ, ಆಯೋಗದ ಪ್ರಕ್ರಿಯೆಯನ್ನು ಎತ್ತಿಹಿಡಿಯಿತು. ನ್ಯಾಯಾಲಯವು ಸ್ಪಷ್ಟವಾಗಿ ‘ಚುನಾವಣೆಗಳೆಂದರೆ ಕೇವಲ ಮತದಾನದ ದಿನವಲ್ಲ. ಅವುಗಳ ಅಡಿಪಾಯವೇ ಒಂದು ಸ್ವಚ್ಛ ಮತ್ತು ವಿಶ್ವಾಸಾರ್ಹ ಮತದಾರರ ಪಟ್ಟಿ’ ಎಂದಿತು.
ಆದರೆ ರಾಜಕೀಯ ಪಕ್ಷಗಳ, ವಿಶೇಷವಾಗಿ ಕಾಂಗ್ರೆಸ್ನ ನಿಲುವು ಮಾತ್ರ ಯಾವಾಗಲೂ ಅನುಮಾನಾಸ್ಪದ ಹಾಗೂ ಅವಕಾಶವಾದಿ. 2018ರಲ್ಲಿ ಮಧ್ಯಪ್ರದೇಶದಲ್ಲಿ ಕಮಲ್ನಾಥ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿ ‘ರಾಜ್ಯದಲ್ಲಿ 40 ಲಕ್ಷ ನಕಲಿ ಮತದಾರರಿದ್ದಾರೆ’ ಎಂದು ಆರೋಪಿಸಿದ್ದರು. ಆಯೋಗ 24 ಲಕ್ಷ ಹೆಸರುಗಳನ್ನು ಅಳಿಸಿದಾಗ ಅದನ್ನು ಸ್ವಾಗತಿಸಿದ್ದರು. ಆದರೆ ಸುಪ್ರೀಂ ಕೋರ್ಟ್ನಲ್ಲಿ ವಾದಿಸುವಾಗ ದ್ವಂದ್ವ ಧೋರಣೆ ತೋರಿದರು.
ಕೇರಳದಲ್ಲಿ ರಮೇಶ್ ಚೆನ್ನಿತಲ ಅವರು ‘ಆಪರೇಷನ್ ಟ್ರೈನ್ಸ್’ ಮೂಲಕ ನಕಲಿ ಮತದಾರರ ವಿರುದ್ಧ ಹೋರಾಡಿ, ನಂತರ ಯುಡಿಎಫ್ ಗೆದ್ದಾಗ ಅದೇ ವ್ಯವಸ್ಥೆಯನ್ನು ಕೊಂಡಾಡಿದರು. ತೆಲಂಗಾಣದಲ್ಲಿ ರೇವಂತ್ ರೆಡ್ಡಿ ಸರಕಾರವು ವೋಟು ಕಳೆದುಕೊಳ್ಳುವ ಭೀತಿಯಿಂದ ಹೊಸ ಕ್ರಮಗಳನ್ನು ವಿರೋಧಿಸಿತು.
ಸ್ವತಃ ರಾಹುಲ್ ಗಾಂಧಿಯವರು ಕರ್ನಾಟಕ ಸೇರಿದಂತೆ ಹಲವು ಕಡೆ ಮತದಾರರ ಪಟ್ಟಿಯಲ್ಲಿ ಕಸ ತುಂಬಿದೆ ಎಂದು ಹಿಂದೆ ಟೀಕಿಸಿದ್ದರು. ಇಂದು ಅದೇ ಕಸವನ್ನು (ನಕಲಿ ಮತಗಳನ್ನು) ತೆಗೆಯುವ ಪ್ರಕ್ರಿಯೆಯನ್ನು ‘ವೋಟ್ ಚೋರ್’ ಎಂದು ಕರೆಯುತ್ತಿರುವುದು ವಿಪರ್ಯಾಸ. ಗೆದ್ದಾಗ ‘ಶುದ್ಧೀಕರಣ’, ಸೋತಾಗ ‘ವೋಟ್ ಚೋರ್’ ಎನ್ನುವ ಇಬ್ಬಗೆ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಾ ಬಂದಿದೆ.
ಮತದಾರರ ಪಟ್ಟಿ ಎನ್ನುವುದು ಪ್ರಜಾಪ್ರಭುತ್ವದ ಕನ್ನಡಿ. ಆ ಕನ್ನಡಿಯ ಮೇಲೆ ಧೂಳು ಬಿದ್ದರೆ ಇಡೀ ವ್ಯವಸ್ಥೆಯೇ ಮಸುಕಾಗುತ್ತದೆ. ಎಸ್ಐಆರ್ ಎನ್ನುವುದು ಯಾವುದೇ ರಾಜಕೀಯ ಪಕ್ಷದ ಹಿತಾಸಕ್ತಿಗಾಗಿ ಮಾಡಿದ ತಂತ್ರವಲ್ಲ, ಬದಲಿಗೆ ಸಂವಿಧಾನದ ಆಶೋತ್ತರಗಳನ್ನು ಉಳಿಸಲು ಕೈಗೊಂಡಿರುವ ಅನಿವಾರ್ಯ ಸಾಂವಿಧಾನಿಕ ಪ್ರಕ್ರಿಯೆ. ಪಾರದರ್ಶಕತೆ ಮತ್ತು ನಿಖರತೆಯಿಂದ ಕೂಡಿರುವ ಈ ವ್ಯವಸ್ಥೆಯಿಂದಾಗಿ ನೈಜ ಮತದಾರರ ಹಕ್ಕುಗಳಿಗೆ ನಿಜವಾದ ನ್ಯಾಯ ಸಿಕ್ಕಂತಾಗಿದೆ
ಕರ್ನಾಟಕದಲ್ಲಿ ಎಸ್ಐಆರ್ ಬಹುತೇಕ ಪೂರ್ಣಗೊಂಡಿದೆ. ಕಾಂಗ್ರೆಸ್ ಸರ್ಕಾರ ಆಡಳಿತವಿರುವ ಸರ್ಕಾರದ ಸಿಬ್ಬಂದಿಗಳನ್ನು ಬಳಸಿಕೊಂಡು ಕಾರ್ಯ ಪೂರೈಸಲಾಗಿದೆ. 99.32 ಲಕ್ಷ ಮತದಾರರನ್ನು ಅನರ್ಹರು ಎಂದು ಆಯೋಗ ಘೋಷಿಸಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವವರು, ತಮ್ಮ ಹೆಸರು ಸೇರಿಸಲು ಅವಕಾಶ ಮಾಡಿಕೊಡಲಾಗಿದೆ. ಎಸ್ಐಆರ್ ಪ್ರಕ್ರಿಯೆಯನ್ನು ಹಿರಿಯ ಸಚಿವ ಸತೀಶ್ ಜಾರಕಿಹೊಳಿ ಅವರು ಸಂತೃಪ್ತಿಯ ಭಾವದಿಂದ ಮೆಚ್ಚುಗೆ ಸೂಚಿಸಿದ್ದಾರೆ.
ಆದರೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ರವರು ಈ ಬಗ್ಗೆ ತುಟಿಕ್-ಪಿಟಿಕ್ ಎನ್ನುತ್ತಿಲ್ಲ. ಅದೇ ಕಾಲಕ್ಕೆ ಎಸ್ಐಆರ್ ವಿರುದ್ಧ ದೆಹಲಿಯ ಜಂತರ್ ಮಂತರ್ನಲ್ಲಿ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿರುವುದು ಅದರ ಗೊಂದಲದ ನಡೆಯನ್ನು ಪ್ರತಿಬಿಂಬಿಸುತ್ತಿದೆ. ಸದಾ ಎಡಚಿಂತನೆಯತ್ತಲೇ ತಮ್ಮ ಮಾತು ಹೊರಳಿಸುವ ಸತೀಶ ಜಾರಕಿಹೊಳಿ ಅವರು ಕರ್ನಾಟಕದ ಎಸ್ಐಆರ್ ಪ್ರಕ್ರಿಯೆಯನ್ನು ಸ್ವಾಗತಿಸಿರುವುದು ಚುನಾವಣಾ ಆಯೋಗದ ಪಾರದರ್ಶಕ ನಡೆಯನ್ನು ಮೆಚ್ಚಿದಂತಾಗಿದೆ. ಸತೀಶ್ ಜಾರಕಿಹೊಳಿಯವರ ಎಸ್ಐಆರ್ ಕುರಿತ ಮಾತುಗಳು ರಾಹುಲ್ ಗಾಂಧಿ ಹಾಗೂ ಇತರ ‘ಇಂಡಿ’ ಮುಖಂಡರ ಕಣ್ಣು ತೆರೆಸಲಿ, ವಾಸ್ತವ ಪರಿಸ್ಥಿತಿಯ ಅರಿಯುವ ಬುದ್ಧಿ ನೀಡಲಿ. ರಾಹುಲ್ ಗಾಂಧಿಯವರು ದೇಶದ ಸಾಂವಿಧಾನಿಕ ಹುದ್ದೆಗಳ ಮೇಲೆ ನಿರಂತರವಾಗಿ ಸುಳ್ಳು ಆಪಾದನೆಗಳನ್ನು ಮಾಡುತ್ತಾ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸುವ ಹುನ್ನಾರದ ಭಾಗವಾಗಿದ್ದಾರೆ. ಇಂತಹ ನಕಾರಾತ್ಮಕ ಕೆಲಸ ಬಿಟ್ಟು ದೇಶದ ಜನತೆಯ ಬಗ್ಗೆ ಕಾಳಜಿ ಗೌರವ, ದೇಶಭಕ್ತಿಭರಿತ ಸಮರ್ಪಣೆ, ಸಂವಿಧಾನ ರಕ್ಷಣೆ ಮತ್ತು ಅದರ ಮೌಲ್ಯಗಳನ್ನು ರಕ್ಷಿಸುವ ಕೆಲಸ ಮಾಡಿದರೆ ಮಾತ್ರ ದೇಶದ ಜನತೆ ಸ್ವೀಕಾರ ಮಾಡಬಹುದು.