ಮರ್ಸಿಡಿಸ್‌ ಬೆನ್ಜ್‌ ಎಲೆಕ್ಟ್ರಿಕ್‌ ಜಿಎಲ್‌ಸಿ ಎಸ್‌ಯುವಿ ಮಾರುಕಟ್ಟೆಗೆ

Published : Nov 07, 2026, 11:09 AM IST
Mercedes-Benz Launches Made-in-India Electric GLC SUV

ಸಾರಾಂಶ

ಐಷಾರಾಮಿ ಕಾರು ಕಂಪನಿ ಮರ್ಸಿಡಿಸ್‌ ಬೆನ್ಸ್‌ ಇದೀಗ ಭಾರತದ ಪ್ರೀಮಿಯಂ ಎಲೆಕ್ಟ್ರಿಕ್‌ ಎಸ್‌ಯುವಿ ಮಾರುಕಟ್ಟೆಯಲ್ಲೂ ಸಂಚಲನ ಮೂಡಿಸಲು ಸಜ್ಜಾಗಿದೆ. ಹೊಸ ಎಲೆಕ್ಟ್ರಿಕ್ ಜಿಎಲ್‌ಸಿ (ಜಿಎಲ್ಸಿ 400 4 ಮ್ಯಾಟಿಕ್‌) ಎಸ್‌ಯುವಿಯನ್ನು ಇದೇ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

 ಅಜಿತ್ ಕುಮಾರ್

 ಪುಣೆ : ಐಷಾರಾಮಿ ಕಾರು ಕಂಪನಿ ಮರ್ಸಿಡಿಸ್‌ ಬೆನ್ಸ್‌ ಇದೀಗ ಭಾರತದ ಪ್ರೀಮಿಯಂ ಎಲೆಕ್ಟ್ರಿಕ್‌ ಎಸ್‌ಯುವಿ ಮಾರುಕಟ್ಟೆಯಲ್ಲೂ ಸಂಚಲನ ಮೂಡಿಸಲು ಸಜ್ಜಾಗಿದೆ. ಹೊಸ ಎಲೆಕ್ಟ್ರಿಕ್ ಜಿಎಲ್‌ಸಿ (ಜಿಎಲ್ಸಿ 400 4 ಮ್ಯಾಟಿಕ್‌) ಎಸ್‌ಯುವಿಯನ್ನು ಇದೇ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಎಲೆಕ್ಟ್ರಿಕ್‌ ಜಿಎಲ್ಸಿಯು ಮರ್ಜಿಡಿಸ್‌ ಬೆನ್ಜ್‌ನ ಎಂಬಿ.ಇಎ-ಎಂ ಎಲೆಕ್ಟ್ರಿಕ್‌ ಪ್ಲಾಟ್‌ಫಾರ್ಮ್‌ ಆಧಾರಿತ ಮೊದಲ ಮೇಡ್‌ ಇನ್‌ ಇಂಡಿಯಾ ಹಾಗೂ ಮೇಡ್‌ ಫಾರ್‌ ಇಂಡಿಯಾ ಎಸ್‌ಯುವಿ ಆಗಿದ್ದು, ಒಮ್ಮೆ ಚಾರ್ಜ್‌ ಮಾಡಿದರೆ 711 ಕಿ.ಮೀ. ದೂರ ಕ್ರಮಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಅಂದರೆ ಒಮ್ಮೆ ಚಾರ್ಜ್‌ ಮಾಡಿದರೆ ಬೆಂಗಳೂರಿಂದ ಎರಡೆರಡು ಬಾರಿ ಆರಾಮವಾಗಿ ಮೈಸೂರು ಸುತ್ತಾಡಿಕೊಂಡು ಬರಬಹುದು.

ದೀಪಾವಳಿ ಗಿಫ್ಟ್‌:

ಈ ಎಲೆಕ್ಟ್ರಿಕ್‌ ಜಿಎಲ್‌ಸಿ ಎಸ್‌ಯುವಿಯು ಭಾರತದ ಐಷಾರಾಮಿ ಕಾರು ಪ್ರಿಯರಿಗೆ ಮರ್ಸಿಡಿಸ್‌ ಬೆನ್ಜ್‌ ನೀಡುತ್ತಿರುವ ದೀಪಾವಳಿ ಗಿಫ್ಟ್‌ ಎಂದೇ ಹೇಳಿಕೊಂಡಿರುವ ಕಂಪನಿ, ಈ ಕಾರು ಕೇವಲ 10 ನಿಮಿಷದ ಡಿಸಿ ಚಾರ್ಜ್‌ನಲ್ಲಿ 303 ಕಿ.ಮೀ. ದೂರ ಕ್ರಮಿಸು(ಪರೀಕ್ಷೆ ವೇಳೆ)ವುದಾಗಿ ತಿಳಿಸಿದೆ. ಅಂದರೆ ಕೇವಲ ಹತ್ತೇ ನಿಮಿಷದ ಚಾರ್ಜ್‌ ಮಾಡಿದ್ರೆ ಸಾಕು ಬೆಂಗಳೂರಿಂದ ಮೈಸೂರಿಗೆ ಹೋಗಿ ಬರಬಹುದು.

ಐಷಾರಾಮಿ ಪ್ರೀಮಿಯಂ ಲುಕ್‌, ಸುಂದರವಾದ ಒಳವಿನ್ಯಾಸ, ಆರಾಮದಾಯಕ ಸೌಲಭ್ಯಗಳ ಈ ಕಾರಿನ ಆರಂಭಿಕ ದರ 78.50 ಲಕ್ಷ (ಎಕ್ಸ್‌ಷೋರೂಂ ದರ). ಸದ್ಯ ಮಾರುಕಟ್ಟೆಯಲ್ಲಿರುವ ಪೆಟ್ರೋಲ್‌-ಡೀಸೆಲ್‌ ಮಾದರಿಯ ಜಿಎಲ್‌ಸಿ ಕಾರುಗಳ ಸರಿಸಮಾನ ದರವನ್ನೇ ಈ ಇವಿಗೂ ಇಟ್ಟಿರುವುದು ವಿಶೇಷ.

ಸಿಎಂ ಫಡ್ನವೀಸ್‌ರಿಂದ ಲೋಕಾರ್ಪಣೆ:

ಪುಣೆಯ ಚಕನ್‌ನಲ್ಲಿರುವ ಕಂಪನಿಯ ಅತ್ಯಾಧುನಿಕ ಉತ್ಪಾದನಾ ಘಟಕದಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ ಅವರು ಜಿಎಲ್‌ಸಿ 400 4 ಮ್ಯಾಟಿಕ್‌ ಇವಿ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಡಿಸಿಎಂ ಸುನೀತಾ ಪವಾರ್‌, ಮರ್ಸಿಡಿಸ್‌ ಬೆನ್ಜ್‌ನ ಮ್ಯಾನೇಜ್‌ಮೆಂಟ್‌ ಬೋರ್ಡ್‌ ಅಧ್ಯಕ್ಷ, ಸಿಇಒ ಓಲಾ ಕೆಲ್ಲೆನಿಯಸ್‌, ಸಿಟಿಒ ಡಾ.ಜೋರ್ಗ್‌ ಬರ್ಜರ್‌, ಮರ್ಸಿಡಿಸ್‌ ಬೆನ್ಜ್ ಇಂಡಿಯಾದ ಎಂಡಿ ಸಂತೋಷ್‌ ಐಯ್ಯರ್‌, ಇತರರು ಇದ್ದರು.

2015ರಲ್ಲಿ ಬೆನ್ಜ್‌ನ ಪುಣೆಯ ಪ್ಲಾಂಟ್‌ನ ವಿಸ್ತರಣೆಯನ್ನು ನಾನು ಉದ್ಘಾಟಿಸುವ ಹೊತ್ತಿಗೆ 2 ದಶಕಗಳಲ್ಲಿ ಕಂಪನಿ 50,000 ಕಾರುಗಳನ್ನಷ್ಟೇ ದೇಶದಲ್ಲಿ ಮಾರಾಟ ಮಾಡಿತ್ತು. ಆ ಬಳಿಕ ಕಂಪನಿ 1.78 ಲಕ್ಷಕ್ಕೂ ಹೆಚ್ಚು ಕಾರು ಮಾರಾಟ ಮಾಡಿದೆ ಎಂದು ಫಡ್ನವೀಸ್‌ ಇದೇ ವೇಳೆ ಸ್ಮರಿಸಿದರು.

ವಿಶೇಷತೆ ಏನು?:

ಈ ಕಾರು ಸಿಲಿಕಾನ್‌ ಆಕ್ಸೈಡ್‌ ಆನೋಡ್‌, 800 ವೋಲ್ಟ್‌ ಆರ್ಕಿಟೆಕ್ಚರ್‌ ಆಧಾರಿತ 94 ಕಿಲೋ ವ್ಯಾಟ್‌ ಪರ್‌ ಹವರ್‌ ಲಿಥಿಯಂ ಆಯಾನ್‌ ಹೈವೋಲ್ಟೋಜ್‌ ಬ್ಯಾಟರಿ ಹೊಂದಿದೆ. 482.4 ಬಿಎಚ್‌ಪಿ ಶಕ್ತಿ ಮತ್ತು 800ಎನ್‌ಎಂ ಟಾರ್ಕ್‌ ಉತ್ಪಾದಿಸುವ ಈ ಕಾರು, 0 ದಿಂದ 100 ಕಿ.ಮೀ. ವರೆಗಿನ ವೇಗವನ್ನು ಕೇವಲ 4.3 ಸೆಕುಂಡುಗಳಲ್ಲಿ ತಲುಪುತ್ತದೆ. ಹೆಚ್ಚಿನ ಗ್ರೌಂಡ್‌ ಕ್ಲಿಯರೆನ್ಸ್‌, 570 ಲೀಟರ್‌ ಬೂಟ್‌ ಸ್ಪೇಸ್‌, 39.1 ಇಂಚಿನ ವಿಶಾಲವಾದ ಎಂಬಿಯುಎಕ್ಸ್‌ ಹೈಪರ್‌ಸ್ಕ್ರೀನ್‌, ಬರ್ನ್‌ಮಾಸ್ಟರ್‌ ಆಡಿಸೋ ಸಿಸ್ಟಂ ಹೊಂದಿದ್ದು, 330 ಕಿ.ವ್ಯಾ. ಡಿಸಿ ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ಬಿಳಿ, ಕಪ್ಪು, ನೀಲಿ(ಶೀರ್‌ ಬ್ಲೂ) ಸೇರಿ 6 ಬಣ್ಣಗಳಲ್ಲಿ ಈ ಕಾರು ಲಭ್ಯವಿದೆ.

ಮಾರ್ಚ್‌ವರೆಗೆ ಸೋಲ್ಡ್‌ಔಟ್‌

ಮರ್ಸಿಡಿಸ್‌ ಬೆನ್ಜ್‌ ದೇಶದಲ್ಲಿ ಮೊದಲ ಬಾರಿ ಪರಿಚಯಿಸುತ್ತಿರುವ ಈ ಎಸ್‌ಯುವಿಗೆ ಗ್ರಾಹಕರಿಂದ ಭಾರೀ ಬೇಡಿಕೆ ಬಂದಿದೆ. ಕಾರು ಖರೀದಿಗೆ ಕೇವಲ 36 ಗಂಟೆಗಳಲ್ಲೇ 500ಕ್ಕೂ ಹೆಚ್ಚು ಮಂದಿ ಆಸಕ್ತಿ ತೋರಿದ್ದು, ನ.4ರ ವರೆಗೆ 1 ಸಾವಿರ ಕಾರುಗಳ ಬುಕ್ಕಿಂಗ್ ಆಗಿದೆ. ಮಾರ್ಚ್‌ 27ರ ವರೆಗೆ ಈ ಕಾರು ಸಂಪೂರ್ಣ ಸೋಲ್ಡ್‌ಔಟ್‌ ಆಗಿದೆ.

ಕಾರಿನಲ್ಲಿ ರೀಸೈಕಲ್ಡ್‌ ಪ್ಲಾಸ್ಟಿಕ್‌ ಬಳಕೆ

ಜಿಎಲ್‌ಸಿ ಇವಿಯಲ್ಲಿ 61 ಕೆ.ಜಿ. ಪ್ಲಾಸ್ಟಿಕ್‌ ಬಳಸಲಾಗಿದೆ. ಸಾಧ್ಯವಾದಷ್ಟು ರೀಸೈಕಲ್ಡ್‌ ಪ್ಲಾಸ್ಟಿಕ್‌ ಮತ್ತು ಅಲ್ಯುಮಿನಿಯಂ ಬಳಸಲಾಗಿದೆ. ಸೀಟ್‌ ಕವರ್‌ ಸೇರಿ ಕೆಲ ಪ್ಲಾಸ್ಟಿಕ್‌ ಭಾಗಗಳಿಗೆ ಬಳಸಿ ಎಸೆದ ಪೆಟ್‌ಬಾಟಲಿಗಳನ್ನು ರೀಸೈಕಲ್‌ ಮಾಡಿ ಉತ್ಪಾದಿಸಿದ ಪ್ಲಾಸ್ಟಿಕ್‌ ಬಳಕೆ ಮಾಡಲಾಗಿದೆ ಎಂಬುದು ಮತ್ತೊಂದು ವಿಶೇಷ.

PREV
Read more Articles on

Recommended Stories

ಡಿಜಿಟಲ್ ಜಗತ್ತಲ್ಲಿ ಖರ್ಚಿಗೆ ಕಡಿವಾಣ ಹಾಕುವುದು ಹೇಗೆ!
ಸಾವಿನ ದುಃಖದ ನಡುವೆಯೂ ಬದುಕಿಗೆ ಬೆಳಕಾಗುವ ಅವಕಾಶ!