ಸಾವಿನ ದುಃಖದ ನಡುವೆಯೂ ಬದುಕಿಗೆ ಬೆಳಕಾಗುವ ಅವಕಾಶ!

Published : Nov 03, 2026, 12:38 PM IST
pooja gandhi

ಸಾರಾಂಶ

ನೇತ್ರದಾನದ ಮಹತ್ವ ತಿಳಿದಿದ್ದರೂ, ಸಾವಿನ ಆಘಾತದಲ್ಲಿ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗದ ಕುಟುಂಬಗಳಿವೆ. ಇಂತಹ ಸಂದರ್ಭಗಳಲ್ಲಿ ಒಂದು ಮಹಾದಾನದ ಅವಕಾಶ ಕೈತಪ್ಪದಂತೆ ನೋಡಿಕೊಳ್ಳುವ ಮಾನವೀಯ ಪ್ರಯತ್ನವೇ ‘ಅಂತಿಮ’.

ಪೂಜಾ ಗಾಂಧಿ, ಚಲನಚಿತ್ರ ನಟಿ

ಭಾನುವಾರದ ಬೆಳಗ್ಗೆ ಹತ್ತು ಗಂಟೆಯ ಸಮಯ. ತಿಂಡಿ ತಿನ್ನುತ್ತಿದ್ದ 34 ವರ್ಷದ ಮಗ ಕುಳಿತಲ್ಲೇ ಹೃದಯಾಘಾತಕ್ಕೆ ಒಳಗಾಗಿ ನೆಲಕ್ಕುರುಳುತ್ತಾನೆ. ಆತಂಕಗೊಂಡ ತಂದೆ ಮತ್ತು ಭಾವ ಆತನನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಾಗಲೇ ಎಲ್ಲವೂ ಮುಗಿದಿತ್ತು. ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದರು. ಒಬ್ಬನೇ ಮಗನನ್ನು ಕಳೆದುಕೊಂಡ ತಾಯಿಗೆ ಆಕಾಶವೇ ಕಳಚಿಬಿದ್ದಂತಾಗಿತ್ತು. ಅಂದು ರಜಾದಿನವಾದ್ದರಿಂದ ಆಸ್ಪತ್ರೆಯ ಪ್ರಕ್ರಿಯೆಗಳು, ಮರಣೋತ್ತರ ಪರೀಕ್ಷೆ ಮುಗಿದು, ಅಂತ್ಯಸಂಸ್ಕಾರಕ್ಕಾಗಿ ಮಗನ ಪಾರ್ಥಿವ ಶರೀರ ಮನೆ ತಲುಪುವಷ್ಟರಲ್ಲಿ ರಾತ್ರಿ ಎಂಟು ಗಂಟೆಯಾಗಿತ್ತು. ಆ ತಾಯಿಯನ್ನು ಭೇಟಿಯಾಗಿ ಆಕೆಯ ದುಃಖದಲ್ಲಿ ಭಾಗಿಯಾದೆ. ಮೂರು ದಿನಗಳ ನಂತರ ಮತ್ತೊಮ್ಮೆ ಸಾಂತ್ವನ ಹೇಳಲು ಹೋದಾಗ ಆಕೆ ಆಡಿದ ಮಾತುಗಳು ಇಂದಿಗೂ ನನ್ನ ನೆನಪಿನಲ್ಲಿ ಉಳಿದಿದೆ.

‘ಅಂದು ನನ್ನ ಮಗನನ್ನು ಮನೆಗೆ ತರಲು ತಡವಾದಾಗ, ಅವನ ನೇತ್ರದಾನ ಮಾಡಿರಬಹುದ ಎಂದು ನನಗೆ ಅನಿಸಿತು. ನನ್ನ ಮಗನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಅವನ ಕಣ್ಣುಗಳನ್ನಾದರೂ ಮತ್ತೊಬ್ಬರಿಗೆ ನೀಡಿದ್ದರೆ, ಯಾರದೋ ಬದುಕಿಗೆ ಬೆಳಕಾಗುತ್ತಿದ್ದ. ನನ್ನ ಮಗ ಈ ಲೋಕದಿಂದ ಮರೆಯಾದರೂ, ಅವನ ಕಣ್ಣುಗಳು ಮತ್ತೊಬ್ಬರ ಕಣ್ಣುಗಳಾಗಿ ಈ ಜಗತ್ತನ್ನು ನೋಡುತ್ತಿರಬಹುದಿತ್ತು. ಮಗನನ್ನು ಕಳೆದುಕೊಂಡ ನೋವು ಎಂದಿಗೂ ಮಾಸುವುದಿಲ್ಲ. ಆದರೆ ಅವನಿಂದ ಮತ್ತೊಬ್ಬರ ಬಾಳಿನಲ್ಲಿ ಬೆಳಕು ಮೂಡಿದ್ದರೆ, ಆ ನೋವಿನ ನಡುವೆಯೂ ನನಗೆ ಸಣ್ಣ ಸಮಾಧಾನವಾದರೂ ಇರುತ್ತಿತ್ತು’.

ಎಣಿಸಲಾರದಷ್ಟು ದುಃಖದಲ್ಲಿದ್ದ ಮಾತೃ ಹೃದಯದ ಪುತ್ರಶೋಕದಲ್ಲಿಯೂ ಆಡಿದ ಮಾತುಗಳಿವು. ನನ್ನನ್ನು ಕಾಡಿದ ಮತ್ತೊಂದು ಘಟನೆ. ನೇತ್ರದಾನದ ಮಹತ್ವದ ಬಗ್ಗೆ ಜಾಗೃತಿಯಿದ್ದ ನನ್ನ ಗೆಳೆಯನೊಬ್ಬನ ಕುಟುಂಬ ಭೀಕರ ಕಾರು ಅಪಘಾತಕ್ಕೀಡಾಯಿತು. ಆತನ ಅಣ್ಣತಮ್ಮಂದಿರು ಸೇರಿದಂತೆ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟರು. ಅಂದಿನ ಆಘಾತ, ನೋವು, ಆಸ್ಪತ್ರೆ ಮತ್ತು ಪೊಲೀಸ್ ಪ್ರಕ್ರಿಯೆಗಳ ನಡುವೆ ನೇತ್ರದಾನದ ಬಗ್ಗೆ ಯೋಚಿಸುವಷ್ಟು ಸ್ಥೈರ್ಯವನ್ನೂ ಆತ ಕಳೆದುಕೊಂಡಿದ್ದನ್ನು, ನನ್ನ ಬಳಿ ಹಂಚಿಕೊಂಡಿದ್ದ. ಇಂತಹ ಹಲವು ಘಟನೆಗಳಿಗೆ ನಾನು ಸಾಕ್ಷಿಯಾಗಿದ್ದೇನೆ.

ನೇತ್ರದಾನದ ಮಹತ್ವ ತಿಳಿದಿರುವುದಕ್ಕೂ, ತನ್ನವರ ಸಾವಿನ ಕ್ಷಣದಲ್ಲಿ ಅದನ್ನು ಕಾರ್ಯರೂಪಕ್ಕೆ ತರುವುದಕ್ಕೂ ಬಹಳ ದೊಡ್ಡ ಅಂತರವಿದೆ.

ಜಾಗೃತಿಯಿದೆ. ಆದರೆ ಅವಕಾಶ ಕೈತಪ್ಪುವುದೇಕೆ?

ಹಲವು ದಶಕಗಳಿಂದ ನಾವು ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ನೇತ್ರದಾನ ಮಹಾದಾನ ಎಂದು ಸಾರುತ್ತಿದ್ದೇವೆ. ಪ್ರತಿಜ್ಞೆಗಳನ್ನು ಮಾಡಿಸುತ್ತಿದ್ದೇವೆ. ಇವೆಲ್ಲವೂ ಅತ್ಯಂತ ಅಗತ್ಯವಾದ ಪ್ರಯತ್ನಗಳು. ಆದರೆ ನೇತ್ರದಾನದ ಮಹತ್ವವನ್ನು ತಿಳಿಸುವುದರಲ್ಲೇ ಹೆಚ್ಚು ಗಮನಹರಿಸಿರುವ ನಾವು, ಅದನ್ನು ಕಾರ್ಯರೂಪಕ್ಕೆ ತರಲು ಎದುರಾಗುವ ಸಣ್ಣಪುಟ್ಟ ಸಮಸ್ಯೆಗಳನ್ನು ಕಡೆಗಣಿಸಿದ್ದೇವೆ. ಆಸ್ಪತ್ರೆಯ ಬಿಲ್ ಪಾವತಿಸುವುದು, ವಿಧಿವಿಧಾನಗಳನ್ನು ಪೂರೈಸುವುದು, ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಸಾವಿನ ಸುದ್ದಿ ತಲುಪಿಸುವುದು, ಅಂತ್ಯಕ್ರಿಯೆಗೆ ವ್ಯವಸ್ಥೆ ಕಲ್ಪಿಸುವುದು - ಹೀಗೆ ಹತ್ತಾರು ಜವಾಬ್ದಾರಿಗಳ ನಡುವೆ, ಯಾರ ಇರುವಿಕೆಯನ್ನೂ ಲೆಕ್ಕಿಸದೆ ರೋಧಿಸುವ, ದುಃಖದಿಂದ ಕುಸಿದುಹೋಗುವ ಆ ಕ್ಷಣದಲ್ಲಿ ನೇತ್ರದಾನದ ವಿಚಾರವನ್ನು ನೆನಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ.

ಅಷ್ಟೇ ಅಲ್ಲ, ಅಂತಹ ಸಂದರ್ಭದಲ್ಲಿಯೂ ನೇತ್ರದಾನಕ್ಕೆ ಮುಂದಾದರೆ, ‘ಸಾವಿನ ದುಃಖವನ್ನೂ ಮರೆತು ನೇತ್ರದಾನದ ಬಗ್ಗೆ ಯೋಚಿಸುತ್ತಿದ್ದಾಳೆ’ ಎಂದು ಸಂಬಂಧಿಕರು, ಸ್ನೇಹಿತರು ತಪ್ಪಾಗಿ ಅರ್ಥೈಸಿಕೊಳ್ಳಬಹುದೇ ಎಂಬ ಆತಂಕವೂ ಕುಟುಂಬದ ಸದಸ್ಯರನ್ನು ಕಾಡಬಹುದು. ಹೀಗೆ ನೇತ್ರದಾನ ಮಾಡುವ ಉದಾತ್ತ ಮನೋಭಾವ ಕುಟುಂಬದ ಸದಸ್ಯರಲ್ಲಿದ್ದರೂ, ಆ ಕ್ಷಣದ ಆಘಾತ, ಅನಿವಾರ್ಯ ಜವಾಬ್ದಾರಿಗಳು ಮತ್ತು ಸಾಮಾಜಿಕ ಅಂಜಿಕೆಗಳ ನಡುವೆ ಒಂದು ಮಹಾದಾನದ ಅವಕಾಶ ಕೈತಪ್ಪಿಹೋಗುತ್ತದೆ. ನೇತ್ರದಾನವು ಮರಣದ ನಂತರ ನಿಗದಿತ ಅವಧಿಯೊಳಗೆ ವೈದ್ಯಕೀಯವಾಗಿ ನಿರ್ವಹಿಸಬೇಕಾದ ಪ್ರಕ್ರಿಯೆ. ಆ ಸಮಯ ಮೀರಿದರೆ, ನಂತರ ಕುಟುಂಬಕ್ಕೆ ಮನಸ್ಸಾದರೂ

ಅವಕಾಶವನ್ನು ಮರಳಿ ಪಡೆಯಲು ಸಾಧ್ಯವಿಲ್ಲ.

ಆದರೆ ಆ ಕ್ಷಣದಲ್ಲಿ ಮರೆತುಹೋದ ವಿಚಾರ, ನಂತರದ ದಿನಗಳಲ್ಲಿ ನೆನಪಾಗಿ, ‘ನಮ್ಮ ಬಳಿ ಅಂದೇ ಯಾರಾದರೂ ನೇತ್ರದಾನದ ವಿಚಾರವನ್ನು ಪ್ರಸ್ತಾಪಿಸಿದ್ದರೆ…’ ಎಂಬ ಪಶ್ಚಾತ್ತಾಪವಾಗಿ ವರ್ಷಗಳವರೆಗೂ ಉಳಿಯಬಹುದು. ಇಲ್ಲಿ ಯಾರನ್ನೂ ತಪ್ಪಿತಸ್ಥರನ್ನಾಗಿ ಮಾಡಲಾಗದು. ತನ್ನವರನ್ನು ಕಳೆದುಕೊಂಡ ದುಃಖದಲ್ಲಿ ಎಲ್ಲವನ್ನೂ ನೆನಪಿಸಿಕೊಂಡು, ತಾನೇ ವಿಚಾರಿಸಿ, ತಾನೇ ನಿರ್ಧಾರ ಕೈಗೊಳ್ಳಬೇಕೆಂದು ಕುಟುಂಬದಿಂದ ನಿರೀಕ್ಷಿಸುವುದು ಎಷ್ಟು ಸಮಂಜಸ?

ಅದೇ ಅದೇ ರೀತಿ, ಸಾಮಾಜಿಕ ಪ್ರಜ್ಞೆಯುಳ್ಳ ಹಲವು ವೈದ್ಯಕೀಯ ಸಿಬ್ಬಂದಿಯೂ ಸಹ, ಆಡಳಿತಾತ್ಮಕ ಅನುಮೋದನೆಯಿಲ್ಲದೆ ನೇತ್ರದಾನಕ್ಕೆ ಪ್ರೇರೇಪಿಸುವ ಇಚ್ಛೆಯಿದ್ದರೂ, ಅನಗತ್ಯ ಅನುಮಾನಗಳಿಗೆ ಒಳಗಾಗಬೇಕಾಗಬಹುದು ಎಂಬ ಆತಂಕದಿಂದ ಹಿಂದೆ ಸರಿಯುವಂತಹ ಸನ್ನಿವೇಶಗಳ ಬಗ್ಗೆಯೂ ಅವರೊಂದಿಗೆ ಚರ್ಚಿಸಿ ಅರಿತುಕೊಂಡಿದ್ದೇನೆ.

ಇಂತಹ ನೈಜ ಅನುಭವಗಳು ಮತ್ತು ಪ್ರಶ್ನೆಗಳ ಹಿನ್ನೆಲೆಯಲ್ಲಿ ರೂಪುಗೊಂಡ ಪರಿಕಲ್ಪನೆಯೇ ‘ಅಂತಿಮ’ ಯೋಜನೆ. ಇದರ ಆಶಯ ಸರಳವಾದದ್ದು. ಆಸ್ಪತ್ರೆಯಲ್ಲಿ ಮರಣ ಸಂಭವಿಸಿದಾಗ, ವೈದ್ಯಕೀಯ ಸಾಧ್ಯತೆ ಮತ್ತು ಕುಟುಂಬದ ಮನಸ್ಥಿತಿಯನ್ನು ಪರಿಗಣಿಸಿ, ನೇತ್ರದಾನ ಹಾಗೂ ದೇಹದಾನದ ಬಗ್ಗೆ ಕುಟುಂಬದವರಿಗೆ ಗೌರವಪೂರ್ವಕವಾಗಿ ಮಾಹಿತಿ ನೀಡುವ, ನೀಡಿದ ಮಾಹಿತಿಯನ್ನು ದಾಖಲಿಸುವ ವ್ಯವಸ್ಥಿತ ಪ್ರಕ್ರಿಯೆಯೊಂದು ಇರಬೇಕು. ಮಾಹಿತಿ ನೀಡುವುದು, ಮಾಹಿತಿ ನೀಡಿದ್ದೇವೆ ಎಂದು ದಾಖಲಿಸುವುದು ಆಸ್ಪತ್ರೆಯ ವ್ಯವಸ್ಥೆಯ ಜವಾಬ್ದಾರಿ ಆಗಬೇಕು. ಕುಟುಂಬದ ನಿರ್ಧಾರ ದಾಖಲೆಯ ಭಾಗವಾಗಬಾರದು. ಏಕೆಂದರೆ ದಾನ ಮಾಡಬೇಕೇ ಬೇಡವೇ ಎಂಬ ನಿರ್ಧಾರ ಕುಟುಂಬದ ಸ್ವಾತಂತ್ರ್ಯವಾಗಿಯೇ ಉಳಿಯಬೇಕು. ಕುಟುಂಬ ಒಪ್ಪಿದರೆ ಅಗತ್ಯವಾದ ವೈದ್ಯಕೀಯ ಮತ್ತು ಕಾನೂನು ಪ್ರಕ್ರಿಯೆಗಳಿಗೆ ಮಾರ್ಗದರ್ಶನ ದೊರೆಯಬೇಕು. ನಿರಾಕರಿಸಿದರೆ ಆ ನಿರ್ಧಾರವನ್ನೂ ಅಷ್ಟೇ ಗೌರವದಿಂದ ಸ್ವೀಕರಿಸಬೇಕು.

‘ಅಂತಿಮ’ ಯೋಜನೆ ನೇತ್ರದಾನವನ್ನು ಕಡ್ಡಾಯಗೊಳಿಸುವ ಪ್ರಸ್ತಾವನೆಯಲ್ಲ. ಯಾವುದೇ ಬಲವಂತವಿಲ್ಲದೆ, ದುಃಖದಲ್ಲಿರುವ ಕುಟುಂಬದ ಭಾವನೆಗಳಿಗೆ ಧಕ್ಕೆಯಾಗದಂತೆ, ತಿಳಿವಳಿಕೆಯಿಂದ ನಿರ್ಧಾರ ಕೈಗೊಳ್ಳುವ ಅವಕಾಶವನ್ನು ಒದಗಿಸುವ ಪ್ರಯತ್ನ. ಇದಕ್ಕೆ ತರಬೇತಿ ಪಡೆದ ಸಿಬ್ಬಂದಿ, ಸೂಕ್ಷ್ಮ ಸಂವಹನ, ಸ್ಪಷ್ಟವಾದ ಕಾರ್ಯವಿಧಾನ ಮತ್ತು ಆಸ್ಪತ್ರೆಗಳ ನಡುವಿನ ಸಮನ್ವಯ ಅಗತ್ಯ. ಆಸ್ಪತ್ರೆಗಳ ಸಿಬ್ಬಂದಿ ಕೊರತೆ, ಕೆಲಸದ ಒತ್ತಡ ಹಾಗೂ ವೈದ್ಯಕೀಯ ಮತ್ತು ಕಾನೂನು ಸವಾಲುಗಳನ್ನೂ ಪರಿಗಣಿಸಬೇಕು. ಆಯ್ದ ಆಸ್ಪತ್ರೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿ, ಅನುಭವದ ಆಧಾರದ ಮೇಲೆ ಯೋಜನೆಯನ್ನು ವಿಸ್ತರಿಸುವ ಸಾಧ್ಯತೆಯನ್ನೂ ಪರಿಶೀಲಿಸಬಹುದು.

ಉದ್ದೇಶ ಎಷ್ಟೇ ಉದಾತ್ತವಾಗಿದ್ದರೂ, ಅದನ್ನು ಅನುಷ್ಠಾನಗೊಳಿಸುವ ವಿಧಾನ ಮಾನವೀಯವಾಗಿರುವುದು ಅಷ್ಟೇ ಮುಖ್ಯ.

ಮತ್ತೊಬ್ಬ ತಾಯಿಗೆ ಇದೇ ಪಶ್ಚಾತ್ತಾಪ ಉಳಿಯದಿರಲಿ. ನಾವು ಜೀವ ಉಳಿಸುವ ವೈದ್ಯಕೀಯ ತಂತ್ರಜ್ಞಾನದಲ್ಲಿ ನಿರಂತರ ಪ್ರಗತಿ ಸಾಧಿಸುತ್ತಿದ್ದೇವೆ. ಆದರೆ ಜೀವ ಉಳಿಸಲು ಸಾಧ್ಯವಾಗದ ಸಂದರ್ಭದಲ್ಲಿಯೂ ಮತ್ತೊಬ್ಬರ ಬದುಕಿಗೆ ನೆರವಾಗಬಹುದಾದ ಅವಕಾಶವನ್ನು ಒದಗಿಸುವ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ವೈದ್ಯಕೀಯವಾಗಿ ಸೂಕ್ತವಾದ ಸಂದರ್ಭಗಳಲ್ಲಿ ದಾನವಾದ ಕಣ್ಣಿನ ಅಂಗಾಂಶವು ದೃಷ್ಟಿದೋಷ ಹೊಂದಿರುವ ಮತ್ತೊಬ್ಬ ವ್ಯಕ್ತಿಗೆ ದೃಷ್ಟಿ ಮರಳಿ ಪಡೆಯಲು ನೆರವಾಗಬಹುದು. ಇಲ್ಲಿ ಪ್ರಶ್ನೆ ಕೇವಲ ಎಷ್ಟು ನೇತ್ರದಾನಗಳಾಗುತ್ತವೆ ಎಂಬುದಲ್ಲ. ಎಷ್ಟು ಕುಟುಂಬಗಳಿಗೆ ಸರಿಯಾದ ಸಮಯದಲ್ಲಿ ಮಾಹಿತಿ ದೊರೆಯಿತು? ಎಷ್ಟು ಕುಟುಂಬಗಳಿಗೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಅವಕಾಶ ಸಿಕ್ಕಿತು? ಎಷ್ಟು ಕುಟುಂಬಗಳು ನಂತರ ಪಶ್ಚಾತ್ತಾಪ ಪಡುವುದನ್ನು ತಪ್ಪಿಸಲು ಸಾಧ್ಯವಾಯಿತು ಎಂಬುದೂ ಅಷ್ಟೇ ಮುಖ್ಯ.

‘ನನ್ನ ಮಗನ ಕಣ್ಣುಗಳಿಂದ ಮತ್ತೊಬ್ಬರ ಬದುಕಿನಲ್ಲಿ ಬೆಳಕು ಮೂಡಿದ್ದರೆ, ನನಗೆ ಸಣ್ಣ ಸಮಾಧಾನವಾದರೂ ಇರುತ್ತಿತ್ತು’.

ಆ ತಾಯಿ ತನ್ನ ಮಗನನ್ನು ಮರಳಿ ಕೇಳುತ್ತಿರಲಿಲ್ಲ. ಮರಳಿ ಬರಲಾರದ ಮಗನ ನೆನಪು ಮತ್ತೊಬ್ಬರ ಬದುಕಿಗೆ ಬೆಳಕಾಗಬಹುದಿತ್ತಲ್ಲ ಎಂಬ ವಿಷಾದವನ್ನು ವ್ಯಕ್ತಪಡಿಸುತ್ತಿದ್ದಳು. ಆಕೆಯ ನೋವನ್ನು ನಿವಾರಿಸಲು ನಮ್ಮಿಂದ ಸಾಧ್ಯವಿಲ್ಲ. ಆದರೆ ಮುಂದಿನ ದಿನಗಳಲ್ಲಿ ಮತ್ತೊಬ್ಬ ತಾಯಿ, ಮತ್ತೊಬ್ಬ ತಂದೆ, ಮತ್ತೊಂದು ಕುಟುಂಬ ಇದೇ ರೀತಿಯ ಪಶ್ಚಾತ್ತಾಪವನ್ನು ಅನುಭವಿಸದಂತೆ ಮಾಡುವ ಪ್ರಯತ್ನವನ್ನಾದರೂ ನಾವು ಮಾಡಬಹುದಲ್ಲವೇ?

ಸರ್ಕಾರ, ವೈದ್ಯಕೀಯ ತಜ್ಞರು, ಆಸ್ಪತ್ರೆಗಳು, ನೇತ್ರಬ್ಯಾಂಕುಗಳು ಮತ್ತು ಸಮಾಜ ಒಟ್ಟಾಗಿ ಚರ್ಚಿಸಿ, ಇಂತಹ ಮಾನವೀಯ ವ್ಯವಸ್ಥೆಯನ್ನು ರೂಪಿಸಬೇಕಿದೆ. ಸಾವು ಅನಿವಾರ್ಯ. ಆದರೆ ಸಾವಿನ ನಂತರ ಮತ್ತೊಬ್ಬರ ಬದುಕಿಗೆ ಬೆಳಕಾಗಬಹುದಾದ ಅವಕಾಶ ಕೈತಪ್ಪಿಹೋಗುವುದು ಅನಿವಾರ್ಯವಾಗಬೇಕಿಲ್ಲ.

ನೇತ್ರದಾನ ಮಾಡಬೇಕೇ ಬೇಡವೇ ಎಂಬುದು ಕುಟುಂಬದ ನಿರ್ಧಾರವಾಗಿರಲಿ. ಆದರೆ ಆ ನಿರ್ಧಾರವನ್ನು ತಿಳಿವಳಿಕೆಯಿಂದ ಕೈಗೊಳ್ಳುವ ಅಂತಿಮ ಅವಕಾಶ ಒದಗಿಸುವುದು ನಮ್ಮ ವ್ಯವಸ್ಥೆಯ ಜವಾಬ್ದಾರಿಯಾಗಲಿ.

ನೇತ್ರದಾನ ಮಾಡದಿರುವುದು ಒಂದು ನಿರ್ಧಾರವಾಗಬಹುದು. ಆದರೆ ನೇತ್ರದಾನದ ಅವಕಾಶವಿತ್ತು ಎಂಬುದು ಅರಿವಿಗೆ ಬರುವಷ್ಟರಲ್ಲಿ, ಅವಕಾಶವೇ ತಪ್ಪಿದರೆ ಅದು ವ್ಯವಸ್ಥೆಯ ಸೋಲು. ಇದೇ ‘ಅಂತಿಮ’ ಯೋಜನೆಯ ಹಿಂದಿರುವ ಕಳಕಳಿ. ಇಂತಹ ಯೋಜನೆಯೊಂದಿಗೆ ಕರ್ನಾಟಕ ರಾಜ್ಯದ ಆರೋಗ್ಯ ಸಚಿವರಾದ ಯು.ಟಿ.ಖಾದರ್ ಅವರನ್ನು

ಭೇಟಿಯಾದಾಗ, ಸುಮಾರು 2 ಗಂಟೆ ಚರ್ಚಿಸಿ, ತಕ್ಷಣವೇ ಈ ಯೋಜನೆಯ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಲು ಸಮಿತಿ ರಚಿಸುವುದಾಗಿ ಭರವಸೆ ನೀಡಿದ್ದಲ್ಲದೆ, ಈಗಾಗಲೇ ಕೆಲವು ನುರಿತ ವೈದ್ಯರನ್ನು ಸಂಪರ್ಕಿಸಿ ಈ ಯೋಜನೆಯ ಕುರಿತು ಚರ್ಚಿಸಿರುವುದು ಮತ್ತು ಸಮಿತಿಯ ಭಾಗವಾಗಲು ಆಹ್ವಾನಿಸಿರುವುದು, ಸಚಿವರ ಮಾನವೀಯ ಕಾಳಜಿಗೆ ಸಾಕ್ಷಿಯಾಗಿದೆ.

PREV
Read more Articles on

Recommended Stories

ಡಿಜಿಟಲ್ ಜಗತ್ತಲ್ಲಿ ಖರ್ಚಿಗೆ ಕಡಿವಾಣ ಹಾಕುವುದು ಹೇಗೆ!
ಅಮೆರಿಕ ಮಧ್ಯಂತರ ಚುನಾವಣೆ- ಭಾರತದ ಮೇಲೇನು ಎಫೆಕ್ಟ್‌?