ದೇಶಕ್ಕೆ ಉತ್ತಮ ಆಡಳಿತ ಯಾಕೆ ಮುಖ್ಯ ?

Published : Nov 02, 2026, 11:45 AM IST
Rajeev Chandrasekhar

ಸಾರಾಂಶ

ಕಳೆದ ದಶಕದಲ್ಲಿ ಯುವಕನೊಬ್ಬನ ಜೀವನವನ್ನು ನಿರ್ಧರಿಸುತ್ತಿದ್ದ ಪ್ರಶ್ನೆ ‘ನೀನು ಏನು ಮಾಡಬಲ್ಲೆ?’ ಎಂಬುದಾಗಿರಲಿಲ್ಲ. ಬದಲಾಗಿ, ‘ನಿನಗೆ ಯಾರ ಪರಿಚಯವಿದೆ?’ ಎಂಬುದಾಗಿತ್ತು. ಗುತ್ತಿಗೆಗಳು ಅರ್ಹತೆಯ ಆಧಾರದ ಮೇಲೆ ದೊರೆಯುತ್ತಿರಲಿಲ್ಲ. ಅತ್ಯುತ್ತಮ ಆಲೋಚನೆ ಹೊಂದಿರುವವರಿಗೆ ಬಂಡವಾಳ ಹರಿದುಬರುತ್ತಿರಲಿಲ್ಲ. ಬದಲಾಗಿ, ಉತ್ತಮ ಸಂಪರ್ಕ ಹೊಂದಿರುವವರಿಗೆ ಅದು ದೊರೆಯುತ್ತಿತ್ತು.

-ರಾಜೀವ್ ಚಂದ್ರಶೇಖರ್, ಕೇರಳ ಬಿಜೆಪಿ ರಾಜ್ಯಾಧ್ಯಕ್ಷ

ನಾನು ಸಾರ್ವಜನಿಕ ಜೀವನದಲ್ಲಿ 2 ದಶಕಗಳನ್ನು ಕಳೆದಿದ್ದೇನೆ. ಈ ಅವಧಿಯಲ್ಲಿ ರಾಜಕೀಯ ಚರ್ಚೆಗಳು ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸುವ ವಿಷಯಗಳಿಂದ, ಅಂದರೆ ಚುನಾಯಿತ ಸರ್ಕಾರ ತನ್ನ ಕೆಲಸವನ್ನು ಸರಿಯಾಗಿ ಮಾಡುತ್ತಿದೆಯೇ ಎಂಬ ಪ್ರಶ್ನೆಯನ್ನು ಬಿಟ್ಟು ಬೇರೆ ಗದ್ದಲಗಳಿಂದಲೇ ತುಂಬಿಕೊಂಡಿರುವುದನ್ನು ಗಮನಿಸಿದ್ದೇನೆ.

ಇದರ ಪ್ರಾಮಾಣಿಕ ಉತ್ತರವನ್ನು ತಿಳಿಯಲು ವಿಶ್ಲೇಷಕರು ಅಥವಾ ವ್ಯಾಖ್ಯಾನಕಾರರ ಅಗತ್ಯವಿಲ್ಲ. ಬದಲಿಗೆ 2014ರಿಂದ ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುವ 15 ಕೋಟಿ ಭಾರತೀಯರು ಮತ್ತು ಮುಂದಿನ ದಶಕದಲ್ಲಿ ಮತದಾರರಾಗಲಿರುವ ನೂರಾರು ಕೋಟಿ ಜನರು ಇದನ್ನು ಸ್ಪಷ್ಟವಾಗಿ ಹೇಳುತ್ತಾರೆ. ವೃತ್ತಿಜೀವನ ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳುತ್ತಿರುವ ಯುವ ಭಾರತೀಯರ ಭವಿಷ್ಯ ಉಜ್ವಲವಾಗಿರುತ್ತದೆಯೇ ಅಥವಾ ಸೀಮಿತವಾಗಿರುತ್ತದೆಯೇ ಎಂಬುದನ್ನು ದೇಶದ ಆಡಳಿತದ ದಿಕ್ಕು ನಿರ್ಧರಿಸಲಿದೆ.

ಜನಜೀವನದ ಮೇಲೆ ಆಡಳಿತದ ಪ್ರಭಾವ

ಇಲ್ಲಿ ಕೇಳಬೇಕಾದ ಪ್ರಮುಖ ಪ್ರಶ್ನೆ ಏನೆಂದರೆ, 2004ರಿಂದ 2014ರವರೆಗಿನ ಭಾರತಕ್ಕೂ, ಈಗ ನಿರ್ಮಾಣವಾಗುತ್ತಿರುವ ಭಾರತಕ್ಕೂ ಇರುವ ವ್ಯತ್ಯಾಸವೇನು? ಇದಕ್ಕೆ ಉತ್ತರ ಕೇವಲ ಯೋಜನೆಗಳ ಪಟ್ಟಿಯಲ್ಲಿರದೆ, ನಾಗರಿಕ ಮತ್ತು ಸರ್ಕಾರದ ನಡುವಿನ ಮೂಲಭೂತ ಸಂಬಂಧದಲ್ಲಿನ ಬದಲಾವಣೆಯಲ್ಲಿದೆ ಎಂಬುದನ್ನು ನಾವು ಗುರುತಿಸಬಹುದು.

ಕಳೆದ ದಶಕದಲ್ಲಿ ಯುವಕನೊಬ್ಬನ ಜೀವನವನ್ನು ನಿರ್ಧರಿಸುತ್ತಿದ್ದ ಪ್ರಶ್ನೆ ‘ನೀನು ಏನು ಮಾಡಬಲ್ಲೆ?’ ಎಂಬುದಾಗಿರಲಿಲ್ಲ. ಬದಲಾಗಿ, ‘ನಿನಗೆ ಯಾರ ಪರಿಚಯವಿದೆ?’ ಎಂಬುದಾಗಿತ್ತು. ಗುತ್ತಿಗೆಗಳು ಅರ್ಹತೆಯ ಆಧಾರದ ಮೇಲೆ ದೊರೆಯುತ್ತಿರಲಿಲ್ಲ. ಅತ್ಯುತ್ತಮ ಆಲೋಚನೆ ಹೊಂದಿರುವವರಿಗೆ ಬಂಡವಾಳ ಹರಿದುಬರುತ್ತಿರಲಿಲ್ಲ. ಬದಲಾಗಿ, ಉತ್ತಮ ಸಂಪರ್ಕ ಹೊಂದಿರುವವರಿಗೆ ಅದು ದೊರೆಯುತ್ತಿತ್ತು.

2010ರಲ್ಲಿ ಪ್ರಕಟವಾದ ವರದಿಯೊಂದು, ಕೇವಲ 10 ಉದ್ಯಮ ಸಮೂಹಗಳು ಭಾರತದ ಸಂಪೂರ್ಣ ಬ್ಯಾಂಕಿಂಗ್ ವ್ಯವಸ್ಥೆಯ ನಿವ್ವಳ ಆಸ್ತಿಯ ಸುಮಾರು ಶೇ.98ಕ್ಕೆ ಸಮಾನವಾದ ಮೊತ್ತವನ್ನು ಸಾಲವಾಗಿ ಪಡೆದಿದ್ದವು ಎಂಬುದನ್ನು ಬಹಿರಂಗಪಡಿಸಿತ್ತು. ಆದರೆ, ತ್ರಿಶ್ಶೂರಿನಲ್ಲಿನ ಸಣ್ಣ ಅಂಗಡಿ ಹೊಂದಿರುವ ಮಹಿಳೆ ಅಥವಾ ಸೂರತ್‌ನಲ್ಲಿ ಎಂಎಸ್‌ಎಂಇ ನಡೆಸುವ ಯುವ ಎಂಜಿನಿಯರ್‌ಗೆ ಸಾಲ ನಿರಾಕರಿಸಲಾಗುತ್ತಿತ್ತು. ಈ ಅಂಕಿ-ಅಂಶವು, ಸಮಾಜದಲ್ಲಿ ಮುಂದುವರಿಯಲು ಯಾರಿಗೆ ಅವಕಾಶ ಸಿಗುತ್ತಿದೆ ಎಂಬುದನ್ನೂ ತೋರಿಸುವಂತಿದೆ.

ಕಲ್ಯಾಣ ಯೋಜನೆಗಳಿಗಾಗಿ ಸರ್ಕಾರ ಖರ್ಚು ಮಾಡುವ ಪ್ರತಿ 1 ರು.ನಲ್ಲಿ 15 ಪೈಸೆಗಿಂತ ಕಡಿಮೆ ಮೊತ್ತ ಫಲಾನುಭವಿಯನ್ನು ತಲುಪುತ್ತಿತ್ತು ಎಂದು ಸ್ವತಃ ಮಾಜಿ ಪ್ರಧಾನಿಯೊಬ್ಬರು ಒಪ್ಪಿಕೊಂಡಿದ್ದರು. ಅಂದರೆ, ನಾಗರಿಕರು ಮತ್ತು ಸರ್ಕಾರದ ನಡುವೆ ಕುಳಿತಿದ್ದ ಮಧ್ಯವರ್ತಿಗಳು ಪ್ರತಿದಿನವೂ ಈ ಹಣವನ್ನು ಕಬಳಿಸುತ್ತಿದ್ದರು ಹಾಗೂ ಇದರ ಹೊರೆಯನ್ನು ಒಂದು ತಲೆಮಾರಿನ ಭಾರತೀಯರು ಹೆಚ್ಚುವರಿ ತೆರಿಗೆ ರೂಪದಲ್ಲಿ ಅನುದಿನ ಪಾವತಿಸಿದ್ದರು.

ಉತ್ತಮ ಆಡಳಿತಕ್ಕೆ ಜಾಮ್‌: (ಇಂಗ್ಲಿಷಿದೆ)

ಜಾಮ್‌ (JAM) ವ್ಯವಸ್ಥೆ ಎಂದರೆ ಜನ್‌ಧನ್‌, ಆಧಾರ್‌ ಮತ್ತು ಮೊಬೈಲ್‌. ಇದು ತಂತ್ರಜ್ಞಾನದ ಜತೆಗೆ ಆಡಳಿತಕ್ಕೆ ಸಂಬಂಧಿಸಿದ ಸುಧಾರಣೆಯಾಗಿತ್ತು. ಈ ವ್ಯವಸ್ಥೆಯು ಮಧ್ಯವರ್ತಿಗಳ ಆಟ ನಡೆಯದಂತೆ ಮಾಡಿತು. 2014ರಿಂದ ಈವರೆಗೆ ₹53 ಲಕ್ಷ ಕೋಟಿಗೂ ಅಧಿಕ ಮೊತ್ತವನ್ನು ನೇರವಾಗಿ ನಾಗರಿಕರ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಲಾಗಿದೆ. ಇದು ಯಾವುದೇ ಪಕ್ಷದ ಕಾರ್ಯಕರ್ತನ ಮೂಲಕ ನಡೆಯದೆ, ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಿದೆ. 15 ಪೈಸೆಯ ಜಾಗದಲ್ಲೀಗ ಇಡೀ 1 ರು. ಅರ್ಹರನ್ನು ತಲುಪುತ್ತಿದೆ.

ಪರಿಣಾಮ, ವಿಶ್ವದಲ್ಲೇ ಅತ್ಯಂತ ವೇಗವಾಗಿ ಬಡತನ ಕಡಿಮೆಯಾದ ದೇಶಗಳಲ್ಲಿ ಭಾರತವೂ ಒಂದು ಎಂದು ವಿಶ್ವ ಬ್ಯಾಂಕ್‌ ಹೇಳಿದೆ. ಅತ್ತ ನೀತಿ ಆಯೋಗದ ಅಂಕಿ-ಅಂಶಗಳ ಪ್ರಕಾರ, 9 ವರ್ಷಗಳಲ್ಲಿ ಸುಮಾರು 25 ಕೋಟಿ ಭಾರತೀಯರು ಬಡತನದಿಂದ ಹೊರಬಂದಿದ್ದಾರೆ. 2013-14ರಲ್ಲಿ ಶೇ.29.17ರಷ್ಟಿದ್ದ ಬಹುಆಯಾಮದ ಬಡತನದ ಪ್ರಮಾಣ 2022-23ರಲ್ಲಿ ಶೇ.11.28ಕ್ಕೆ ಇಳಿದಿದೆ.

ಆಯುಷ್ಮಾನ್‌ ಭಾರತ್‌ ಆರೋಗ್ಯ ವಿಮಾ ಯೋಜನೆಯಡಿ 50 ಕೋಟಿ ಜನರು ನೋಂದಾಯಿಸಿಕೊಂಡಿದ್ದಾರೆ. ರೈತರಿಗೆ ಮಧ್ಯವರ್ತಿಯ ಹಸ್ತಕ್ಷೇಪವಿಲ್ಲದೆ ₹4.47 ಲಕ್ಷ ಕೋಟಿ ನೆರವು ನೀಡಲಾಗಿದೆ. ಈ ಅಂಕಿ-ಅಂಶಗಳು ಕೇವಲ ಸಾಧನೆಗಳನ್ನು ಸೂಚಿಸುವುದರ ಜತೆಗೆ, ಉತ್ತಮ ಆಡಳಿತದ ಲಾಭ ವೃದ್ಧಿಸುತ್ತಾ ಹೋಗುತ್ತದೆ ಎಂಬುದನ್ನು ಸಾಬೀತುಪಡಿಸಿದೆ.

ಬಡತನದಿಂದ ಹೊರಬಂದ ಕುಟುಂಬವೊಂದು ಮತ್ತೆ ಆ ಸ್ಥಿತಿಗೆ ಮರಳುವ ಸಾಧ್ಯತೆ ಕಡಿಮೆ. ತಾಯಿಗೆ ನೇರವಾಗಿ ಹಣ ವರ್ಗಾವಣೆಯಾಗಿ, ಮಗು ಶಾಲೆಯಲ್ಲಿ ಶಿಕ್ಷಣ ಮುಂದುವರಿಸಿದರೆ, ಆ ಮಗು ಕಲಿತದ್ದನ್ನು ಮರೆಯುವುದಿಲ್ಲ. ಯೋಜನೆಯ ಮೇಲೆ ಅವಲಂಬಿತವಾಗದೆ ಆದಾಯ ಗಳಿಸುವ ಸಾಮರ್ಥ್ಯ ಗಳಿಸುವ ರೈತನಿಗೊಂದು ಘನತೆ ದೊರೆಯುತ್ತದೆ. ಇದು ಉತ್ತಮ ಆಡಳಿತದ ಫಲ.

ಕೆಟ್ಟ ಆಡಳಿತದಿಂದ ಏನಾಗುತ್ತದೆ?

ಕರ್ನಾಟಕದ ಪರಿಸ್ಥಿತಿ ಗಮನಿಸಿ. ₹52,000 ಕೋಟಿ ಮೊತ್ತದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ರಾಜ್ಯದ ಸಾಲದ ಪ್ರಮಾಣ ಒಂದೇ ವರ್ಷದಲ್ಲಿ ₹90,280 ಕೋಟಿಯಿಂದ ₹1,04,000 ಕೋಟಿಗೆ ಏರಿಕೆಯಾಗಿದೆ. ಈ ಯೋಜನೆಗಳ ಉದ್ದೇಶವನ್ನು ನಾನು ಪ್ರಶ್ನಿಸುತ್ತಿಲ್ಲ. ಆದರೆ, ರಸ್ತೆಗಳು, ಆಸ್ಪತ್ರೆಗಳು ಮತ್ತು ಕೈಗಾರಿಕಾ ಸಾಮರ್ಥ್ಯವನ್ನು ನಿರ್ಮಿಸುವುದಕ್ಕೆ ಮೀಸಲಿಡಬೇಕಾದ ಹಣದ ಪ್ರಮಾಣ ಕಡಿಮೆಯಾಗುತ್ತಿದೆ.

ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಬುಡಕಟ್ಟು ಸಮುದಾಯಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ₹187ರಿಂದ ₹194 ಕೋಟಿ ಹಣವನ್ನು ಅಕ್ರಮವಾಗಿ ಬೇರೆಡೆಗೆ ವರ್ಗಾಯಿಸಿರುವ ಪ್ರಕರಣದ ಕುರಿತು ಕರ್ನಾಟಕ ಹೈಕೋರ್ಟ್‌ ಸಿಬಿಐ ತನಿಖೆಗೆ ಆದೇಶಿಸಿದೆ.

ಕೇರಳದ ಎಡಪಕ್ಷಗಳ ಆಡಳಿತದ 1 ದಶಕದ ಅವಧಿಯಲ್ಲಿ ಸಂಗ್ರಹವಾದ ₹5.07 ಲಕ್ಷ ಕೋಟಿ ಸಾಲದ ಕುರಿತು ರಾಜ್ಯದ ಹೊಸ ಸರ್ಕಾರವು 2026ರ ಜೂನ್‌ನಲ್ಲಿ ಶ್ವೇತಪತ್ರ ಮಂಡಿಸಿದೆ. 2025ರಲ್ಲಿ ರಾಜ್ಯವು 84 ದಿನಗಳ ಕಾಲ ಆರ್‌ಬಿಐನ ಓವರ್‌ಡ್ರಾಫ್ಟ್‌ ಸೌಲಭ್ಯವನ್ನು ಅವಲಂಬಿಸಿತ್ತು. ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಎಸ್‌ಡಿಪಿ) ಹೋಲಿಸಿದರೆ ವೆಚ್ಚ ಕೇವಲ ಶೇ.1.3ರಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿಯ ಅರ್ಧಕ್ಕಿಂತಲೂ ಕಡಿಮೆ.

ಇದರರ್ಥ, ಸರ್ಕಾರದ ಸಾಲ ಪಡೆಯುವ ಸಾಮರ್ಥ್ಯವನ್ನು ಹಿಂದಿನ ಸಾಮಾನ್ಯ ವೆಚ್ಚಗಳಿಗೆ ಬಳಸಿಕೊಳ್ಳಲಾಗಿದೆ. ಹೀಗಾಗಿ, ನಾಳೆಗಾಗಿ ಕಾರ್ಖಾನೆ, ರಸ್ತೆ, ಆಸ್ಪತ್ರೆ, ಕೌಶಲ ಕೇಂದ್ರ ಮತ್ತು ಉತ್ತಮ ಅವಕಾಶಗಳನ್ನು ನಿರ್ಮಿಸಲು ಹಣ ಉಳಿದೇ ಇಲ್ಲ.

ಉದ್ದೇಶಪೂರ್ವಕ ಅರಾಜಕತೆ

ಅನ್ಯಾಯದ ವಿರುದ್ಧದ ಪ್ರಾಮಾಣಿಕ ಪ್ರತಿಭಟನೆ ಪ್ರಜಾಪ್ರಭುತ್ವದ ಜೀವಾಳವಾಗಿದೆ. ಆದರೆ ರಾಜಕೀಯ ಕಾರ್ಯತಂತ್ರವಾಗಿ ಆಡಳಿತವನ್ನು ಅಸ್ತವ್ಯಸ್ತಗೊಳಿಸುವುದು, ಸಮಸ್ಯೆಯನ್ನು ಪ್ರಸ್ತಾಪಿಸುವ ಬದಲು ಕಾನೂನು ಅಂಗೀಕಾರವನ್ನು ತಡೆಯಲು ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವುದು, ಒತ್ತಡ ಹೇರುವ ತಂತ್ರವಾಗಿ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆಯುವುದು, ಮಾಧ್ಯಮಗಳಲ್ಲಿ ಗಮನ ಸೆಳೆಯುವ ಉದ್ದೇಶದಿಂದ ಪ್ರತಿಭಟಿಸುವುದನ್ನು ಹೊಣೆಗಾರಿಕೆ ಎನ್ನಲಾಗದು.

ಇದರಿಂದ ಅತಿ ಹೆಚ್ಚು ಹಾನಿಯಾಗುವುದು ಯುವಜನರಿಗೆ. ಅರಾಜಕತೆ ಸೃಷ್ಟಿಸುವ ಸಾಮರ್ಥ್ಯವನ್ನೇ ಆಡಳಿತ ನಡೆಸುವ ಸಾಮರ್ಥ್ಯವೆಂದು ತಪ್ಪಾಗಿ ಬಿಂಬಿಸುವ ಸಂಸ್ಕೃತಿಯು, ರಾಜಕೀಯವೆಂದರೆ ಕೇವಲ ನಾಟಕೀಯ ಪ್ರದರ್ಶನ, ಗಮನ ಸೆಳೆಯಲು ನಡೆಸುವ ಸಂಘರ್ಷಗಳ ಸರಣಿ ಎಂಬ ಪಾಠವನ್ನು ತಲೆಮಾರೊಂದಕ್ಕೆ ಕಲಿಸುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ.

ಯುವಕರಿಗಿದು ಅರ್ಥವಾಗಬೇಕು

ವಿಶ್ವದಲ್ಲೇ ಅತಿ ಹೆಚ್ಚು ಯುವಜನಸಂಖ್ಯೆಯನ್ನು ಹೊಂದಿರುವ ದೇಶ ಭಾರತ. ಸರ್ಕಾರದ ಉದ್ದೇಶವೇನು, ಹೊಣೆಗಾರಿಕೆ ಎಂದರೆ ಏನು, ಆಡಳಿತದ ಸಾಧನೆ ಮತ್ತು ರಾಜಕೀಯ ನಾಟಕೀಯತೆಯ ನಡುವಿನ ವ್ಯತ್ಯಾಸವೇನು ಎಂಬುದರ ಕುರಿತು ಈ ತಲೆಮಾರು ಬೆಳೆಸಿಕೊಳ್ಳುವ ರಾಜಕೀಯ ಮೌಲ್ಯಗಳು ಮುಂದಿನ 50 ವರ್ಷಗಳ ಕಾಲ ಭಾರತೀಯ ಪ್ರಜಾಪ್ರಭುತ್ವದ ದಿಕ್ಕನ್ನು ನಿರ್ಧರಿಸಲಿವೆ.

ಉತ್ತರ ಪ್ರದೇಶವನ್ನು ಗಮನಿಸಿ. 9 ವರ್ಷಗಳಲ್ಲಿ ‘ಬಿಮಾರು’ ರಾಜ್ಯದ ಹಣೆಪಟ್ಟಿಯಿಂದ ಹೊರಬಂದು ₹36 ಲಕ್ಷ ಕೋಟಿ ಆರ್ಥಿಕತೆಯಾಗಿ ಬೆಳೆದಿದೆ. ರಾಜ್ಯದ ಆದಾಯ ಹೆಚ್ಚಾಗಿದೆ. ಗಲಭೆಗಳು ಸಂಪೂರ್ಣವಾಗಿ ನಿರ್ಮೂಲನೆಯಾಗಿವೆ. ಹೂಡಿಕೆದಾರರ ವಿಶ್ವಾಸದಲ್ಲಿ ದೊಡ್ಡ ಬದಲಾವಣೆಯಾಗಿದೆ.

ಅಂತೆಯೇ ಮಹಾರಾಷ್ಟ್ರವನ್ನು ಗಮನಿಸಿ. ಒಂದೇ ತ್ರೈಮಾಸಿಕದಲ್ಲಿ ದೇಶದ ಒಟ್ಟು ವಿದೇಶಿ ಹೂಡಿಕೆಯ ಅರ್ಧಕ್ಕಿಂತಲೂ ಹೆಚ್ಚಿನ ಪಾಲನ್ನು ಆಕರ್ಷಿಸುವ ಮೂಲಕ ಭಾರತದಲ್ಲಿ ಅತಿ ಹೆಚ್ಚು ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಪಡೆದ ರಾಜ್ಯವಾಗಿ ಹೊರಹೊಮ್ಮಿದೆ.

ಇದಕ್ಕೆ ಪರ್ಯಾಯವಾಗಿ ಕೇರಳ ಮತ್ತು ಕರ್ನಾಟಕದಲ್ಲಿ ಏನಾಗಿದೆ ಎಂದು ನೋಡಿ. ಭವಿಷ್ಯದ ಹೂಡಿಕೆಗೆ ಅಡ್ಡಿಯಾಗುತ್ತಿರುವ ಸಾಲದ ಹೊರೆ, ಬಂಡವಾಳ ಸೃಷ್ಟಿಗೆ ಅಡ್ಡಿಯಾಗುತ್ತಿರುವ ವಿವೇಚನಾರಹಿತ ವೆಚ್ಚಗಳು ಮತ್ತು ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಬೇರೆಡೆಗೆ ವರ್ಗಾಯಿಸುತ್ತಿರುವ ಭ್ರಷ್ಟಾಚಾರ ಕಾಣುತ್ತದೆ.

ಗಮನಿಸಬೇಕಾದ ಅಂಶಗಳು:

ಒಂದು ಕಡೆ ನಿಮ್ಮ ಕೌಶಲ, ನಿಮ್ಮ ಆಲೋಚನೆ ಮತ್ತು ನಿಮ್ಮ ಕಠಿಣ ಪರಿಶ್ರಮದ ಮೇಲೆ ನಿಮ್ಮ ಯಶಸ್ಸು ಅವಲಂಬಿತವಾಗಿರುವ, ಹಳ್ಳಿಗೆ ರಸ್ತೆ ನಿರ್ಮಿಸುವ ಮತ್ತು ನಿಮಗೆ ಉದ್ಯೋಗ ಒದಗಿಸಬಹುದಾದ ಕೈಗಾರಿಕಾ ಪಾರ್ಕ್‌ ನಿರ್ಮಿಸುವ ವ್ಯವಸ್ಥೆ ಇರುತ್ತದೆ. ಇನ್ನೊಂದು ಕಡೆ ನಿಮಗೆ ಯಾರ ಪರಿಚಯವಿದೆ ಮತ್ತು ನೀವು ಯಾವ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದೀರಿ ಎಂಬುದರ ಮೇಲೆ ನಿಮ್ಮ ಯಶಸ್ಸು ಅವಲಂಬಿತವಾಗಿರುತ್ತದೆ. ಇವರೆಡರಲ್ಲಿ ಎಂಥ ವ್ಯವಸ್ಥೆ ಉತ್ತಮ ಎಂದು ಯುವಕರು ತಮ್ಮನ್ನೇ ತಾವು ಕೇಳಿಕೊಳ್ಳಬೇಕು.

ಇದಕ್ಕೆ ಉತ್ತರ, ಸ್ವಹಿತಾಸಕ್ತಿ ಕೇಂದ್ರಿತ ವ್ಯವಸ್ಥೆಗಿಂತ, ಪಾರದರ್ಶಕವಾಗಿ ಮತ್ತು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸುವಂತೆ ರೂಪಿಸಲಾದ ವ್ಯವಸ್ಥೆಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ.

PREV
Read more Articles on

Recommended Stories

ಸ್ವಿಗ್ಗಿ-ಝೊಮೆಟೋ ಬಂದ್ಮೇಲೆ ಜನ ಅಡಿಗೆ ಮಾಡ್ತಿಲ್ಲ!
ಲಂಡನ್ ಪ್ರವೇಶ: ಮುಳುಗದ ಸೂರ್ಯನ ಅಚ್ಚರಿ