ಇತ್ತೀಚೆಗೆ ಅಕ್ಷಯ್ ಕುಮಾರ್ ಅವರು ಟಿವಿಯೊಂದರಲ್ಲಿ ಮಾತನಾಡುತ್ತಾ, ‘ಒಮ್ಮೆ ಪತ್ರಿಕೆಯಲ್ಲಿ ನಟ ಜಿತೇಂದ್ರ 100 ಕೋಟಿ ರು. ಎಫ್‌ಡಿ ಇಟ್ಟಿರುವ ಬಗ್ಗೆ ಓದಿದೆ. 1980ರ ಆ ವೇಳೆಗೆ ಎಫ್‌ಡಿಗೆ ಶೇ.13ರಷ್ಟು ಬಡ್ಡಿದರ ಇತ್ತು. 100 ಕೋಟಿ ರು.ಗಳ ಎಫ್‌ಡಿ ಇದ್ದರೆ ತಿಂಗಳಿಗೆ ಅಂದಾಜು 1.3 ಕೋಟಿ ರು. ಬಡ್ಡಿಯ ಮೂಲಕವೇ ಬರುತ್ತಿತ್ತು. ನನಗೆ ಆಗ ರಿಯಲೈಸೇಶನ್ ಆಗಿದ್ದು, ನೀವು ಎಷ್ಟು ಸಂಪಾದಿಸುತ್ತೀರಿ ಎಂಬುದಕ್ಕಿಂತ, ನೀವು ಹೇಗೆ ಹೂಡಿಕೆ ಮಾಡುತ್ತೀರಿ ಎಂಬುದೇ ಮುಖ್ಯ ಅನ್ನೋದು’ ಎಂದು ಹೇಳಿದ್ದು ವೈರಲ್ ಆಗಿದೆ. ಈ ನಿಟ್ಟಿನಲ್ಲಿ ಗರಿಷ್ಠ ಎಷ್ಟು ಎಫ್‌ಡಿ ಇಡಬಹುದು ಎಂಬುದನ್ನು ಇಲ್ಲಿ ನೋಡೋಣ.
ಎಫ್‌ಡಿಯಲ್ಲಿ ಇಡಬಹುದಾದ ಗರಿಷ್ಠ ಮೊತ್ತ
ರಿಸರ್ವ್ ಬ್ಯಾಂಕ್‌ನ ನಿಯಮಾವಳಿಯ ಪ್ರಕಾರ ಫಿಕ್ಸ್‌ಡ್ ಡೆಪಾಸಿಟ್‌ನಲ್ಲಿ ಇಡಬಹುದಾದ ಕನಿಷ್ಠ ಮೊತ್ತ 1000 ರು.ನಿಂದ 10,000 ರು.ತನಕ ಇದೆ. ಆದರೆ ಗರಿಷ್ಠ ಮಿತಿ ಇಲ್ಲ.
ಸಮಸ್ಯೆ ಏನು?
ಉಳಿದ ಹೂಡಿಕೆಗಳಿಗೆ ಹೋಲಿಸಿದರೆ ಎಫ್‌ಡಿಯಲ್ಲಿ ಹಣ ಇಡುವುದು ಸುರಕ್ಷಿತವೇನೋ ಹೌದು. ಆದರೆ ರಿಸ್ಕ್ ಇಲ್ಲದಿಲ್ಲ. ನೀವು ಎಫ್‌ಡಿಯಲ್ಲಿ ಎಷ್ಟೇ ಹಣ ಇಡಿ, ಅದಕ್ಕೆ ಇನ್ಶೂರೆನ್ಸ್ ಸಿಗುವುದು ಬಡ್ಡಿ ಸೇರಿ 5 ಲಕ್ಷದವರೆಗಿನ ಮೊತ್ತಕ್ಕೆ ಮಾತ್ರ! ಅಂದರೆ ನೀವು ಎಷ್ಟೇ ದೊಡ್ಡ ಮೊತ್ತದ ಹಣ ಇಟ್ಟಿದ್ದರೂ ಏನಾದರೂ ಸಮಸ್ಯೆ ಆದರೆ, ನಿಮಗೆ ಸಿಗೋದು ಕೇವಲ 5 ಲಕ್ಷ ರು. ಮಾತ್ರ.
ಎಫ್‌ಡಿ ಅವಧಿ
ಫಿಕ್ಸ್‌ಡ್ ಡೆಪಾಸಿಟ್ ಅನ್ನು 7 ದಿನಗಳಿಂದ 10 ವರ್ಷದವರೆಗೂ ಇಡಬಹುದು. ಒಂದು ವೇಳೆ ಅವಧಿಗೂ ಮುನ್ನ ಹಣವನ್ನು ತೆಗೆಯಬೇಕಾದ ಪ್ರಸಂಗ ಬಂದರೆ ಬ್ಯಾಂಕ್ ಅದಕ್ಕೆ ದಂಡ ಹಾಕಿ, ಬಡ್ಡಿ ದರದಲ್ಲೂ ಕಡಿತ ಮಾಡುತ್ತದೆ. ಎಷ್ಟು ಅವಧಿಗೆ ಫಿಕ್ಸ್‌ಡ್ ಡೆಪಾಸಿಟ್‌ನಲ್ಲಿ ಹಣ ಇಡುತ್ತೀರಿ ಎಂಬುದರ ಮೇಲೆ ಬಡ್ಡಿದರ ನಿಗದಿಯಾಗುತ್ತದೆ. ಕೆಲವೊಂದು ಪ್ಲಾನ್‌ಗಳಲ್ಲಿ ಸೆಕ್ಷನ್ 80ಸಿ ಅಡಿ ತೆರಿಗೆ ಹಣ ಉಳಿಸುವುದಕ್ಕೆ ಅವಕಾಶವಿದೆ. ಗ್ರಾಹಕ ಇಹಲೋಕ ತ್ಯಜಿಸಿದರೆ ನಾಮಿನಿಗೆ ಎಫ್‌ಡಿ ಮೊತ್ತ ಹೋಗುತ್ತದೆ.
ಆಟೋ ರಿನ್ಯೂಯಲ್ ವ್ಯವಸ್ಥೆ
ಹೂಡಿಕೆ ಅವಧಿ ಪೂರ್ಣಗೊಂಡ ಬಳಿಕ ಆಟೋಮ್ಯಾಟಿಕ್ ಆಗಿ ಆ ಮೊತ್ತ ರಿನ್ಯೂಯಲ್ ಆಗುವ ಸೌಲಭ್ಯ ಈಗ ಬ್ಯಾಂಕ್‌ಗಳಲ್ಲಿದೆ. ಎಫ್‌ಡಿಯಲ್ಲಿರುವ ಹಣವನ್ನು ಹಿಂಪಡೆಯುವುದಾ, ಅದರಲ್ಲೇ ಮುಂದುವರಿಸುವುದಾ ಅನ್ನೋದನ್ನು ಮೊದಲೇ ಖಚಿತಪಡಿಸಿಕೊಂಡರೆ ಉತ್ತಮ.
ಯಾರೆಲ್ಲ ಹೂಡಿಕೆ ಮಾಡಬಹುದು!
ಎಫ್‌ಡಿಯಲ್ಲಿ 18 ವರ್ಷಕ್ಕಿಂತ ಕೆಳಗಿನವರಿಂದ 60 ವರ್ಷ ಮೇಲ್ಪಟ್ಟವರವರೆಗೆ ಯಾರು ಬೇಕಿದ್ದರೂ ದೃಢೀಕರಣ ಪತ್ರಗಳನ್ನು ನೀಡಿ ಹೂಡಿಕೆ ಮಾಡಬಹುದು.
ಎಫ್‌ಡಿಯಲ್ಲಿ ಹೂಡಿಕೆ ಮಾಡುವುದು ಸುರಕ್ಷಿತವೇನೋ ಹೌದು. ಆದರೆ ಸ್ಟಾಕ್ ಮಾರ್ಕೆಟ್ಟಿನಲ್ಲಿ ಹೂಡಿಕೆ ಮಾಡಿದರೆ ಸಿಗುವಷ್ಟು ಲಾಭ ಇದರಲ್ಲಿ ಬರುವುದಿಲ್ಲ. ಇಲ್ಲಿ ಇಡುವ ಹಣಕ್ಕೆ ಸ್ಥಿರತೆ, ಸುರಕ್ಷತೆ ಇರುತ್ತದೆ. ಎಷ್ಟು ಬೇಕಿದ್ದರೂ ಹೂಡಿಕೆ ಮಾಡಬಹುದು. ಆದರೆ ಇನ್ಶೂರೆನ್ಸ್ ರೂ.5 ಲಕ್ಷ ಮಾತ್ರ ಅನ್ನುವುದು ಗಮನಾರ್ಹ.