ಪಾಕನ್ನು ನಾವು ಬಗ್ಗು ಬಡಿಯಬೇಕೆನ್ನೋದು ವಿಧಿ ಲಿಖಿತ!

Published : Sep 30, 2025, 07:08 AM IST
Captain Suryakumar Yadav

ಸಾರಾಂಶ

ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದೆವು. ಇದು ಎಲ್ಲಕ್ಕಿಂತ ಮುಖ್ಯ. ಕೊನೆಯಲ್ಲಿ ನಮಗೆ ಟ್ರೋಫಿ ಸಿಗಲಿಲ್ಲ, ಟ್ರೋಫಿ ಕೊಡಲಿಲ್ಲ. ಇದನ್ನೆಲ್ಲಾ ಪಕ್ಕಕ್ಕಿಡೋಣ. ನಮ್ಮ ಗೆಲುವಿನಿಂದ ಇಡೀ ದೇಶ ಸಂಭ್ರಮಿಸುತ್ತಿದೆ. ನಾವು ಏಷ್ಯಾ ಚಾಂಪಿಯನ್‌ ಆಗಿದ್ದು ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳಿಗೆ ಖುಷಿ ನೀಡಿದೆ.

* ಸೂರ್ಯಕುಮಾರ್‌ ಯಾದವ್‌

ಭಾರತ ಟಿ20 ತಂಡದ ನಾಯಕ

ನಾವು ಈ ಹಿಂದೆ ಯಾವತ್ತೂ ಪಾಕಿಸ್ತಾನವನ್ನು ಒಂದು ಟೂರ್ನಿಯಲ್ಲಿ ಮೂರು ಬಾರಿ ಸೋಲಿಸಿಲ್ಲ. ಸಂಭ್ರಮಿಸಲು ಇದು ಮೊದಲನೇ ಕಾರಣ. ಇದು ವಿಧಿ ಲಿಖಿತ. ಪಾಕಿಸ್ತಾನವನ್ನು ನಾನು ಕೆಲ ದಿನಗಳ ಹಿಂದೆ ಅವರು ನಮಗೆ ಪ್ರತಿಸ್ಪರ್ಧಿಗಳೇ ಅಲ್ಲ ಎಂದು ಹೇಳಿದ್ದೆ. ಆ ಮಾತನ್ನು ಮತ್ತೆ ಹೇಳಲಾರೆ, ಏಕೆಂದರೆ ಪದೇಪದೆ ಹೇಳಿದರೆ ಆ ಮಾತಿಗೆ ಬೆಲೆ ಇರುವುದಿಲ್ಲ. ಟೂರ್ನಿಯುದ್ದಕ್ಕೂ ನಾವು ಉತ್ತಮ ಕ್ರಿಕೆಟ್‌ ಆಡಿದೆವು. ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದೆವು. ಇದು ಎಲ್ಲಕ್ಕಿಂತ ಮುಖ್ಯ. ಕೊನೆಯಲ್ಲಿ ನಮಗೆ ಟ್ರೋಫಿ ಸಿಗಲಿಲ್ಲ, ಟ್ರೋಫಿ ಕೊಡಲಿಲ್ಲ. ಇದನ್ನೆಲ್ಲಾ ಪಕ್ಕಕ್ಕಿಡೋಣ. ನಮ್ಮ ಗೆಲುವಿನಿಂದ ಇಡೀ ದೇಶ ಸಂಭ್ರಮಿಸುತ್ತಿದೆ. ನಾವು ಏಷ್ಯಾ ಚಾಂಪಿಯನ್‌ ಆಗಿದ್ದು ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳಿಗೆ ಖುಷಿ ನೀಡಿದೆ. ಇದಕ್ಕಿಂತ ಇನ್ನೇನು ಬೇಕು.

ಬಹಳ ಒತ್ತಡ ಇತ್ತು, ಸುಳ್ಳು ಹೇಳಲ್ಲ

ಪಾಕಿಸ್ತಾನ ವಿರುದ್ಧ ಫೈನಲ್‌ ನಿಗದಿಯಾದಾಗಿನಿಂದ ಬಹಳ ಒತ್ತಡದಲ್ಲಿದ್ದೆ. ಒತ್ತಡ ಎಲ್ಲಾ ಏನಿಲ್ಲಾ ಎಂದು ನಾನು ಸುಳ್ಳು ಹೇಳಲ್ಲ. ಪಂದ್ಯ ಆರಂಭಗೊಂಡ ಮೇಲಂತೂ ಒತ್ತಡ ಹೆಚ್ಚಾಯಿತು. ಪಂದ್ಯ ಅತ್ತಿತ್ತ ಹೊರಳುತ್ತಿದ್ದಾಗ ಸಹಜವಾಗಿಯೇ ಆತಂಕಗೊಳ್ಳುತ್ತಿದ್ದೆ. ಆಗೇನಾದರೂ ನನ್ನ ಹೃದಯ ಬಡಿತವನ್ನು ಪರೀಕ್ಷಿಸಿದ್ದರೆ ನಿಮಿಷಕ್ಕೆ 150ಕ್ಕಿಂತ ಹೆಚ್ಚೇ ಇರುತ್ತಿತ್ತು.

ಬ್ಯಾಟರ್‌ಗಳು ಪಂದ್ಯ ಗೆಲ್ಲಿಸ್ತಾರೆ, ಬೌಲರ್‌ಗಳು ಟೂರ್ನಿ ಗೆಲ್ಲಿಸ್ತಾರೆ

ನನ್ನ ಇಷ್ಟು ವರ್ಷದ ಕ್ರಿಕೆಟಿಂಗ್‌ ಅನುಭವದಲ್ಲಿ, ಪ್ರೇಕ್ಷಕನಾಗಿ, ಆಟಗಾರನಾಗಿ, ರೋಹಿತ್‌ ಭಾಯ್‌ (ರೋಹಿತ್‌ ಶರ್ಮಾ)ರ ನಾಯಕತ್ವದಲ್ಲಿ ಹಲವು ವರ್ಷ ಆಡಿದ ಮೇಲೆ ನನಗೆ ಒಂದು ವಿಷಯ ಮನವರಿಕೆಯಾಗಿದೆ. ಬ್ಯಾಟರ್‌ಗಳು ಪಂದ್ಯ ಗೆಲ್ಲಿಸುತ್ತಾರೆ, ಆದರೆ ಬೌಲರ್‌ಗಳು ಟೂರ್ನಮೆಂಟ್‌ ಗೆಲ್ಲಿಸುತ್ತಾರೆ ಎಂದು. ನಾವು ಏಷ್ಯಾಕಪ್‌ ಗೆಲ್ಲುವಲ್ಲಿ ಬೌಲರ್‌ಗಳ ಪಾತ್ರವೇ ನಿರ್ಣಾಯಕ. ನಾಯಕನಾದವನು ಬೌಲರ್‌ಗಳನ್ನು ಎಷ್ಟು ಚೆನ್ನಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾನೆ ಎನ್ನುವುದರ ಮೇಲೆ ಆ ತಂಡದ ಪ್ರದರ್ಶನ ನಿಂತಿರಲಿದೆ.

ಸೇನೆಗೆ ಅರ್ಪಿಸಿದ್ದು ನನ್ನ ವೈಯಕ್ತಿಕ

ಪಾಕಿಸ್ತಾನ ವಿರುದ್ಧದ ಗೆಲುವು, ಏಷ್ಯಾಕಪ್‌ನ ಮ್ಯಾಚ್‌ ಫೀಯನ್ನು ಭಾರತೀಯ ಸೇನೆಗೆ, ಪಹಲ್ಗಾಂ ಸಂತ್ರಸ್ತರಿಗೆ ಅರ್ಪಿಸಬೇಕು ಎನ್ನುವುದು ನನ್ನ ವೈಯಕ್ತಿಕ ನಿರ್ಧಾರ. ಫೈನಲ್‌ ಗೆಲುವಿನ ಬಳಿಕ ನಾನು ಊಟ ಮಾಡುತ್ತಾ ಕೂತಿದ್ದಾಗ ಟೂರ್ನಿಯ ಆರಂಭದಿಂದ ನಡೆದ ಘಟನೆಗಳಿಲ್ಲಾ ನನ್ನ ಕಣ್ಣ ಮುಂದೆ ಬಂದವು. ಮೊದಲ ದಿನ ನಾನು ಬಹಿರಂಗವಾಗಿ ಹೇಳಿಕೆ ನೀಡಿ ನನ್ನ ನಿಲುವನ್ನು ಸ್ಪಷ್ಟಪಡಿಸಿದ್ದೆ. ಅದಕ್ಕಿಂತ ಹೆಚ್ಚು ಮಾಡಬಹುದು ಎನಿಸಿತು. ಪಂದ್ಯದ ಸಂಭಾವನೆಯನ್ನು ಸೇನೆ, ಪಹಲ್ಗಾಂ ಸಂತ್ರಸ್ತರಿಗೆ ಕೊಡಲು ನಿರ್ಧರಿಸಿದೆ.

ಬಿಸಿಸಿಐ ನಮ್ಮ ಮುಂದೆ ನಿಂತು ರಕ್ಷಿಸ್ತಿದೆ

ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ)ಗೆ ತನ್ನ ಆಟಗಾರರನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂದು ಗೊತ್ತಿದೆ. ಎಲ್ಲರೂ ನಾವು ನಿಮ್ಮ ಬೆನ್ನಿಗೆ ನಿಲ್ಲುತ್ತೇವೆ ಎನ್ನುತ್ತಾರೆ. ಆದರೆ, ಬಿಸಿಸಿಐ ನಮ್ಮೆಲ್ಲರ ಮುಂದೆ ನಿಂತು ನಮ್ಮನ್ನು ಕಾಯುತ್ತಿದೆ.

ಪಾಕ್‌ ಕುಚೇಷ್ಟೆಗೆ ತಲೆ ಕೆಡಿಸಿಕೊಳ್ಳಲಿಲ್ಲ ಪಂದ್ಯದುದ್ದಕ್ಕೂ ಪಾಕಿಸ್ತಾನಿ ಆಟಗಾರರು ವಿಮಾನ ಬೀಳುವ ರೀತಿ, 6-0 ಹೀಗೆ ಹಲವು ರೀತಿಯ ಕೈ ಸನ್ನೆಗಳನ್ನು ಮಾಡುತ್ತಾ ನಮ್ಮನ್ನು ಕೆಣಕಲು ಯತ್ನಿಸುತ್ತಿದ್ದರು. ಆದರೆ ನಾವು ಗೌರಯುತವಾಗಿ ಆಡಿದೆವು, ನಡೆದುಕೊಂಡೆವು. ಅವರಂತೆಯೇ ನಾವು ವರ್ತಿಸಿದರೆ, ನಮಗೂ ಅವರಿಗೂ ವ್ಯತ್ಯಾಸವಿರುವುದಿಲ್ಲ. ಪ್ರಾಮಾಣಿಕವಾಗಿ, 100% ಪರಿಶ್ರಮದೊಂದಿಗೆ ಆಡಬೇಕು. ರೂಂಗೆ ಹೋಗಿ ಕನ್ನಡಿಯಲ್ಲಿ ನಮ್ಮನ್ನು ನಾವು ನೋಡಿಕೊಂಡಾಗ, ನಾನು ಗೌರವಯುತವಾಗಿ ಆಡಿದ್ದೇನೆ ಎಂದು ಗರ್ವಪಟ್ಟುಕೊಳ್ಳುವಂತಿರಬೇಕು.

ನನ್ನ ಬದುಕಿನ ಅತ್ಯಂತ ಕಠಿಣ ಟೂರ್ನಿ

ಕಿರಿಯರ ಕ್ರಿಕೆಟ್‌ ಸೇರಿ 20 ವರ್ಷಗಳಿಂದ ನಾನು ಕ್ರಿಕೆಟ್‌ ಆಡುತ್ತಿದ್ದೇನೆ. ಏಷ್ಯಾಕಪ್‌ ನನ್ನ ಜೀವನದ ಅತ್ಯಂತ ಕಠಿಣ ಟೂರ್ನಿಗಳಲ್ಲಿ ಒಂದು. ಕ್ರಿಕೆಟ್‌ ಜೊತೆಗೆ ಹಲವು ಬೇರೆ ಬೇರೆ ವಿಚಾರಗಳಿಂದಲೂ ಈ ಟೂರ್ನಿ ಮಹತ್ವದ್ದಾಗಿತ್ತು. ಎಲ್ಲವನ್ನೂ ಮೀರಿ ನಾವು ಚಾಂಪಿಯನ್‌ ಆಗಿದ್ದೇವೆ. ನಾಯಕನಾಗಿ ನಾನು ನಿರಾಳನಾಗಿದ್ದೇನೆ!

PREV
Read more Articles on

Recommended Stories

ಬ್ಯಾಂಕ್‌ ಎಫ್‌ಡಿಯಲ್ಲಿ ಗರಿಷ್ಠ ಎಷ್ಟು ಹಣ ಇಡಬಹುದು ! ಸಂಪೂರ್ಣ ವಿವರ
ದಸರಾ ಹಬ್ಬಕ್ಕೆ ಬೆಂಗಳೂರಲ್ಲಿ ಖರೀದಿ ಭರಾಟೆ ಜೋರು : ಆಯುಧಪೂಜೆಗೆ ನಗರ ಸಜ್ಜು