ಕಾಶೀಯಾತ್ರೆ ಕನಸು ನನಸಾದಾಗ! ಹಿಂದೂಗಳ ಪವಿತ್ರ ಕ್ಷೇತ್ರಕ್ಕೆ ಹೋಗೋದು ಹೇಗೆ?

ಸಾರಾಂಶ

ಕಾಶಿಗೆ ಪ್ರಯಾಣಿಸಿದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ , ಔಟ್‌ಪುಟ್ ಎಡಿಟರ್‌ ಎಂ.ಸಿ. ಶೋಭಾ ಅವರ ಬರಹ ಇಲ್ಲಿದೆ.

- ಎಂ.ಸಿ. ಶೋಭಾ, ಔಟ್‌ಪುಟ್ ಎಡಿಟರ್‌, ಏಷ್ಯಾನೆಟ್ ಸುವರ್ಣ ನ್ಯೂಸ್

‘ಕಾಶಿಯಲ್ಲಿಯೇ ಈ ಬಾರಿ ನಿನ್ನ ಹುಟ್ಟುಹಬ್ಬ’

ಗೆಳತಿ ಸೌಮ್ಯಳ ಈ ಮಾತು ಕೇಳಿ ಅಚ್ಚರಿಯಿಂದ ನೋಡಿದೆ. ಎಷ್ಟೋ ಬಾರಿ ಸೌಮ್ಯಾ ಕಾಶಿಗೆ ಕರೆದಿದ್ದಳು. ಅವಳು ಅದೆಷ್ಟೋ ಪುಣ್ಯಕ್ಷೇತ್ರಗಳನ್ನ ನೋಡಿದ್ದಾಳೆ. ಸಾಕಷ್ಟು ಜನರನ್ನ ಕರೆದೊಯ್ಯುತ್ತಾಳೆ. ಅವಳಿಗೆ ಅದೊಂದು ಬ್ಯುಸಿನೆಸ್ ಅಲ್ಲ. ಅವಳಿಗೆ ಅದೊಂದು passion. ತನ್ನಂತೆ ಎಲ್ಲರೂ ಇಂಥ ಕ್ಷೇತ್ರಗಳ ದರ್ಶನ ಮಾಡಲಿ, ಅಲ್ಲಿನ ಮಹತ್ವ-ಮಹಿಮೆಗಳನ್ನ ಮನಸ್ಸಿಗೆ ತುಂಬಿಕೊಳ್ಳಲಿ ಎಂಬ ನಿಸ್ವಾರ್ಥ ಅಪೇಕ್ಷೆ ಅವಳದ್ದು. ಈ ಕಾರಣದಿಂದ ನನ್ನನ್ನು ಹಲವು ಬಾರಿ ಒತ್ತಾಯಿಸಿದ್ದಳು. ಕನಿಷ್ಟ ಏನನ್ನು ನೋಡದಿದ್ದರೂ ಒಮ್ಮೆಯಾದರೂ ಕಾಶಿಯನ್ನ ನೋಡು ಎಂದು ಹೇಳಿದ್ದುಂಟು. ನನಗೂ ತುಂಬ ಆಸೆ ಇತ್ತು.

ಆದರೆ, ಕಾಶಿಗೆ ಹೋಗಬೇಕು ಎಂದುಕೊಂಡಾಗೆಲ್ಲ, ಕಾಶಿ ಬಗೆಗಿನ ನೆಗೆಟಿವ್ ಮಾತು ಕೇಳಿ, ಕೇಳಿಯೇ ಕಾಶಿಗೆ ಭೇಟಿ ನೀಡುವ ಆಸಕ್ತಿ ಕಳೆದುಕೊಂಡಿದ್ದೆ.ಕಾಶಿಯ ಗಲೀಜು, ಕಿರಿದಾದ ರಸ್ತೆಗಳು, ಗಲ್ಲಿ , ಗಲ್ಲಿಗಳು, ಕಸ, ಶವಗಳಿಂದ ತುಂಬಿ ನರಳುತ್ತಿದ್ದ ಗಂಗೆ, ಜನದಟ್ಟಣೆ, ಸೈಕಲ್​ ಸವಾರರ ಕಿರಿಕಿರಿ.. ಅಬ್ಬಬ್ಬ ಒಂದೇ ಎರಡೇ ಕಾಶಿ ಬಗೆಗಿನ ಕಂಪ್ಲೆಂಟ್​. ಆದ್ರೆ, ಈಗ ಕಾಶಿ ಹೇಗಿದೆ ? ನಿಜಕ್ಕೂ ಕ್ಲೀನ್ ಆಗಿದೆಯಾ ? ಗಂಗೆ ಪವಿತ್ರವಾಗಿದ್ದಾಳಾ ? ನೋಡೇಬಿಡಬೇಕೆಂದು ಮನಸ್ಸು ಒತ್ತಾಯಿಸುತ್ತಿತ್ತು.

ಸೌಮ್ಯಾಳ ಸಂಕಲ್ಪ ಸಿದ್ಧಿಯೋ, ನನ್ನ ಸೌಭಾಗ್ಯವೋ, ಕಾಶಿ ವಿಶ್ವನಾಥನ ಅನುಗ್ರಹವೋ ಅಂತೂ ಕಾಶಿ ಪ್ಲಾನ್​ ಜಾರಿಗೆ ಬಂದಿತ್ತು. ನಮ್ಮ ಸುವರ್ಣ ನ್ಯೂಸ್​ ಜಾತಕಫಲದ ಶ್ರೀಕಂಠಶಾಸ್ತ್ರಿಗಳ ಕುಟುಂಬವೂ ಸೇರಿ ಒಟ್ಟು 14 ಜನರ ತಂಡ ನಾಲ್ಕು ದಿನಗಳ ಪ್ರವಾಸಕ್ಕೆ ವಿಮಾನ ಹತ್ತೇ ಬಿಟ್ಟೆವು. ಅಯೋಧ್ಯೆ, ಪ್ರಯಾಗ್ ರಾಜ್ , ಚಿತ್ರಕೂಟ ಎಲ್ಲವನ್ನೂ ನೋಡಿಕೊಂಡು ಕಾಶಿ ತಲುಪುವ ವೇಳೆಗೆ ಮಧ್ಯಾಹ್ನ 3 ದಾಟಿತ್ತು. ಎಲ್ಲರೂ ಸುಸ್ತಾಗಿದ್ದರು. ವೃದ್ಧರೇ ಹೆಚ್ಚು ಇದ್ದರು. ಎಲ್ಲರಿಗೂ ಹೊಟ್ಟೆ ಹಸಿದಿತ್ತಾದರೂ ಕಾಶಿ ಕ್ಷೇತ್ರದ ಮಂಗಳಮಣ್ಣಿನ ಸ್ಪರ್ಶವಾಗುತ್ತಿದ್ದಂತೆ ಇಂದ್ರಿಯಗಳ ಸಾಮಾನ್ಯ ತಂಟೆ-ತಕರಾರುಗಳೆಲ್ಲಾ ಮಾಯವಾಗಿದ್ದವು ನೋಡಿ. ಹಸಿವು-ಬಾಯಾರಿಕೆ-ನಿದ್ರೆ ಇವುಗಳ ಪರಿವೇ ಇಲ್ಲದೆ ಕಾಶಿಯತುಂಬ ಬರಿಗಾಲಲ್ಲಿ ಓಡಾಡಿಬಿಟ್ಟೆವು.

ಅಲ್ಲಿನ ಜನ ತುಂಬ ಶ್ರಮಜೀವಿಗಳು. ಆಟೋ, ಟೆಂಪೋಗಳಿದ್ದರೂ ಅವುಗಳಿಗೆ ಸಮವಾಗಿ ದೇಹ ದಂಡಿಸಿ ಸೈಕಲ್ ನಲ್ಲಿ ಯಾತ್ರಿಕರನ್ನ ಒಂದು ಕಡೆಯಿಂದ ಮತ್ತೊಂದು ಕಡೆಗೆ ತಲುಪಿಸುತ್ತಾರೆ ಅಲ್ಲಿನ ಜನ. ವಿಶ್ವನಾಥನ ಸನ್ನಿಧಾನದಲ್ಲೂ ಶ್ರಮವಿಲ್ಲದ ಬದುಕಿಲ್ಲವಲ್ಲಾ ಎನ್ನಿಸಿದ್ದು ಸುಳ್ಳಲ್ಲ..! ಕಿಷ್ಕಿಂಧೆಯಂಥ ರಸ್ತೆಗಳಲ್ಲಿ ಆಟೋ, ಬೈಕ್, ಸೈಕಲ್ ಒಂದಾ ಎರಡಾ ಜೊತೆಗೆ ದಂಡು ದಂಡಿನಂತೆ ಓಡಾಡುವ ಜನ ಸಾಗರ, ಯಾತ್ರಿಕರೋ, ವ್ಯಾಪಾರಿಗಳೋ, ಅಲ್ಲಿನ ನಿವಾಸಿಗಳೋ ಅಂತೂ ಜನ ಸಾಗರ ತುಂಬಿದ ಆ ಕಿರಿದಾದ ರಸ್ತೆಗಳನ್ನು ನೋಡುತ್ತಿದ್ದರೆ ನಮ್ಮ ಬೆಳಗಳೂರಿನ ಚಿಕ್ಕಪೇಟೆ, ಬಳೆ ಪೇಟೆ, ತಿಳಗರಪೇಟೆಗಳೇ ನೆನಪಾಗುತ್ತಿದ್ದವು. ಸಹಿಸಲಾಗದ ಕರ್ಕಶ ಶಬ್ದ, ಅಬ್ಬಬ್ಬಾ..! ಇದೆಲ್ಲವನ್ನೂ ನೋಡುತ್ತಾ ಸಾಗುತ್ತಾ ಅದೇ ರಸ್ತೆಯಲ್ಲಿ ಒಂದು ಕಡೆ ಪುಟ್ಟ ಮಡಕೆಯಲ್ಲಿ ಕೊಡುವ ಅದ್ಭುತ ಘಮದ ಚಹ ಹೀರಿ ಇಕ್ಕಟ್ಟು - ಬಿಕ್ಕಟ್ಟಿನ ರಸ್ತೆಯನ್ನು ದಾಟುವಷ್ಟರಲ್ಲಿ ನಮಗೂ ಬೆವರು ಹರಿದುಹೋಯಿತು. ಅಷ್ಟು ಕಷ್ಟಪಟ್ಟಿದ್ದಕ್ಕೆ ಸಾರ್ಥಕ ಎನ್ನಿಸುವ ಹಾಗೆ ಕೇದಾರ ಘಾಟ್ ಕಣ್ಣಿಗೆ ಕಾಣಿಸಿತು. ಅಬ್ಭಾ..! ಈಗ ಬೆಂಗಳೂರಿಂದ ಕಾಶಿಗೆ ಬಂದೆವೇನೋ ಅನ್ನಿಸಿದ್ದು ಆ ಗಂಗೆಯನ್ನು ಕಂಡಾಗಲೇ. ನಮ್ಮ ಗುಂಪಿಗಾಗಿ ಸೌಮ್ಯಾ ಒಂದು ಬೋಟ್ ಬುಕ್ ಮಾಡಿದ್ದಳು. ಎಲ್ಲರೂ ಬೋಟ್ ಹತ್ತಿ ಘಾಟ್ ಗಳ ದರ್ಶನ ಶುರುಮಾಡಿದೆವು.

ಈ ಕೇದಾರ ಘಾಟ್, ಇದು ಕಾಶಿ ಕೇದಾರ ಖಂಡ ಅಂತ ಕರೀತಾರೆ. ಪಾರ್ವತಿಗೆ ಪರಮೇಶ್ವರ ಈ ಘಾಟನ್ನು ಉಡುಗೊರೆಯಾಗಿ ಕೊಟ್ಟಿದ್ದ. ಹೀಗಾಗಿ ಗೌರೀ ಕೇದಾರೇಶ್ವರ ದೇವಸ್ಥಾನವನ್ನು ಇಲ್ಲಿ ನಿರ್ಮಿಸಲಾಗಿದೆ. ಇದನ್ನು ಪೂರ್ವಕಾಶಿ ಅಂತಲೂ ಕರೀತಾರೆ. ನಾವು ಈ ಘಾಟ್ ಗಳನ್ನು ಮನಸ್ಸಿಗೆ ತುಂಬಿಕೊಳ್ಳಬೇಕಾದರೆ ಈ ಘಾಟ್ ಗಳಿಗೆಲ್ಲಾ ಸ್ಥಾನವನ್ನು ಕಲ್ಪಿಸಿರುವ ಕಾಶಿ ಅಂದರೆ ಈ ವಾರಾಣಸಿ ಕ್ಷೇತ್ರದ ಮಹಿಮೆ ತಿಳಿಯಬೇಕು :

ಇದು ಪ್ರಪಂಚದ ಅತ್ಯಂತ ಪ್ರಾಚೀನ 10 ನಗರಗಳಲ್ಲಿ ಒಂದು. ಇದನ್ನ ಸಾಕ್ಷಾತ್ ಪರಮೇಶ್ವರನೇ ಸೃಷ್ಟಿಸಿದ ನಗರ ಅಂತಾರೆ. ಇದು ಪರಶಿವನಿಗೆ ಅತ್ಯಂತ ಆನಂದವನ್ನು ಉಂಟುಮಾಡುವ ಪುಣ್ಯ ಭೂಮಿಯಾಗಿತ್ತು. ಆದ್ದರಿಂದ ಪರಮೇಶ್ವರ ಇದನ್ನು ಆನಂದವನ ಅಂತ ಕರೆದ. ಆನಂತರ ಒಮ್ಮೆ ಬ್ರಹ್ಮನಿಗೂ-ವಿಷ್ಣುವಿಗೂ ಯಾರು ದೊಡ್ಡವರು ಎನ್ನುವುದರ ಕುರಿತಾಗಿ ವಾದ-ಚರ್ಚೆ ಏರ್ಪಟ್ಟಿತು. ಆಗ ಇದೇ ಜಾಗದಲ್ಲಿ ಒಂದು ಅಗ್ನಿ ಸ್ಥಂಭ ಉದ್ಭವವಾಗಿ ಬ್ರಹ್ಮ-ವಿಷ್ಣುಗಳನ್ನು ಕುರಿತು ಆ ಅಗ್ನಿಕಂಭ ನುಡಿಯಿತಂತೆ ನಿಮ್ಮಲ್ಲಿ ಯಾರು ನನ್ನ ಆದಿ ಅಂತ್ಯಗನ್ನು ಗುರುತಿಸುತ್ತಾರೋ ಅವರೇ ಶ್ರೇಷ್ಠರು ದೊಡ್ಡವರು ಅಂತ ಹೇಳಿತಂತೆ. ವಿಷ್ಣು ಮೂಲವನ್ನು ಹುಡುಕಿ ಹೊರಟ, ಬ್ರಹ್ಮ ತುದಿಯನ್ನು ಹುಡುಕಿ ಹೊರಟ.

ವಿಷ್ಣು ಎಷ್ಟು ವರ್ಷಗಳು ಹುಡುಕಿದರೂ ಮೂಲ ಸಿಗದೆ ಮರಳಿ ಬಂದ. ಬ್ರಹ್ಮ ಮಾತ್ರ ಕೇದಗೆ ಹೂವಿನ ಜೊತೆ ತುದಿಯನ್ನು ಕಂಡೆ ಎಂದು ಸುಳ್ಳು ಹೇಳಿದ. ಆಗ ಕೋಪಗೊಂಡ ಅಗ್ನಿ ಕಂಭ ನುಡಿಯಿತು: ಸುಳ್ಳುಹೇಳಿದರೆ ಲೋಕಮಾನ್ಯತೆ ಹೋಗಲಿದೆ. ಇದು ಆದಿ ಅಂತ್ಯಗಳಿಲ್ಲದ ಅಗ್ನಿಸ್ಥಂಭ. ಇದನ್ನು ಪ್ರಕಾಶ ಸ್ಥಂಭ ಅಂತಾರೆ. ಎಂದು ನುಡಿದು ತನ್ನ ಗಾತ್ರವನ್ನು ಕಿರಿದು ಮಾಡಿಕೊಂಡಿತು. ಪ್ರಕಾಶ ಅಂದ್ರೆ ವಿಶೇಷವಾದ ಬೆಳಕು. ಕಾಶ ಅಂದ್ರೆ ಪುಟ್ಟ ಬೆಳಕು. ಬೃಗತ್ತಾದ ಅಗ್ನಿಸ್ಥಂಭ ಪುಟ್ಟದಾಗಿ ಪ್ರಕಟವಾದ ಕಾರಣದಿಂದ ಈ ಕ್ಷೇತ್ರವನ್ನು ಕಾಶಿ ಅಂತಾರೆ. ಯಾವುದು ಬೆಳಕಿಗೆ ಸಂಬಂಧಿಸಿದ ಕಥೆಯನ್ನು ಹೇಳುತ್ತದೆಯೋ ಅದು ಕಾಶಿ. ಕಾಶಿ ಅಂದರೆ ಬೆಳಕು, ಕಾಶಿ ಅಂದರೆ ಜ್ಯೋತಿ ಹೀಗಾಗಿಯೇ ಇದು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಮೂಲ ಜ್ಯೋತಿರ್ಲಿಂಗವಾಗಿದೆ ಎಂಬ ಕಥೆಯನ್ನು ಹೇಳಿದ್ದು ನಮ್ಮ ಜೊತೆ ಬಂದಿದ್ದ ನಮ್ಮ ವಾಹಿನಿಯ ಜತೆಗಾರರಾದ ಶ್ರೀಕಂಠಶಾಸ್ತ್ರಿಗಳು. ಅವರಿಂದ ಕಾಶಿಯ ಕುರಿತಾದ ಎಷ್ಟೋ ಮಹತ್ವದ ವಿಚಾರಗಳು ನಮಗೆ ತಿಳಿದು ನಾವೂ ಪುಳಕಿತರಾದ್ವಿ.

ಅದರಲ್ಲಿ ಇನ್ನೊಂದು ಘಟನೆ ಮಣಿಕರ್ಣಿಕೆಗೆ ಸಂಬಂಧಿಸಿದ್ದು : ಪ್ರಲಯ ಕಾಲದಲ್ಲಿ ಅಖಂಡಮಂಡಲಾಕಾರನಾದ ಈಶ್ವರ ವಿಷ್ಣುವನ್ನು ಸೃಷ್ಟಿಸಿ ಇದೇ ಕ್ಷೇತ್ರದಲ್ಲಿ ತಪಸ್ಸನ್ನು ಮಾಡಲು ಹೇಳಿದನಂತೆ. ವಿಷ್ಣುವಾದರೂ ಅಖಂಡವಾಗಿ ತಪೋನಿರತನಾದನಂತೆ. ಆ ತಪಸ್ಸಿನ ಗಂಭೀರತೆಯನ್ನು ಪಾರ್ವತಿಗೆ ತೋರಿಸುತ್ತಾ ಪರಮೇಶ್ವರ ತಲೆದೂಗಿದನಂತೆ. ಆಗ ಅವನ ಕರ್ಣಗಳಿಂದ ಕುಂಡಲಗಳು ಇಲ್ಲಿ ಉದುರಿದವಂತೆ ಆಕಾರಣಕ್ಕೆ ಇದನ್ನು ಮಣಿಕರ್ಣಿಕಾ ಘಾಟ್ ಎನ್ನುತ್ತಾರೆ ಎಂದು ವಿವರಿಸಿದ್ದು. ಆದರೆ ಆ ಸ್ಥಳ ಈಗ ಮಹಾಶ್ಮಶಾನವಾಗಿದೆ. ಕ್ಷಣಕಾಲವೂ ಬಿಡುವಿಲ್ಲದೆ ಹೆಣಗಳನ್ನು ಸುಡುತ್ತಲೇ ಇರುತ್ತಾರೆ.

 

ಹೀಗೆ ಕಾಶಿಯ ಮಹಿಮಾ ಆಖ್ಯಾಯಿಕೆಗಳನ್ನು ಕೇಳುತ್ತಾ ಗಂಗೆಯಲ್ಲಿ ಮೇಲೆ ತೇಲುತ್ತಿರುವ ವೇಳೆಗೆ ಆಕಾಶದಲ್ಲಿ ಚಂದ್ರ ದರ್ಶನವಾಯ್ತು. ಅಂದು ರಾಧಾಷ್ಟಮಿ. ಚಂದ್ರನನ್ನು ಕಣ್ಮನಗಳಲ್ಲಿ ತುಂಬಿಕೊಂಡು ಸಾಗುತ್ತಿದ್ದರೆ ಇದೇ ನಿಜವಾದ ಜೀವನ್ಮುಕ್ತತೆಯೇನೋ ಎಂದು ಭಾಸವಾಗುತ್ತಿತ್ತು. ಅದೆಷ್ಟು ಪಾಪಗಳನ್ನು ತೊಳೆದರೂ ಸುಸ್ತಾಗದ, ಮುಕ್ಕಾಗದ ಗಂಗೆ, ಪಾಪದ ಲವಲೇಶವೂ ಸೋಂಕದ ಪವಿತ್ರ ನದಿ. ಗಂಗೆಯನ್ನು ಶುದ್ಧಗೊಳಿಸಿ ಆ ಪಾವಿತ್ರ್ಯತೆಯನ್ನು ಮನಸ್ಸಿಗೆ ಬರುವಂತೆ ಮಾಡಿದ್ದು ಮೋದಿಯವರ ನಮಾಮಿ ಗಂಗೆ ಯೋಜನೆ. ಒಂದು ಕ್ಷಣ ಎಷ್ಟು ಸಾಹಸ ಮಾಡಿ ಅಚ್ಚುಕಟ್ಟು ಮಾಡಿಸಿದ್ದಾರೆ ಎಂದುಕೊಳ್ಳುವ ವೇಳೆಗೆ ಗಂಗಾರತಿ ಸಮಯ ಬಂದೇಬಿಟ್ಟಿತು. ಭೂಮ್ಯಾಕಾಶಗಳನ್ನು ಒಂದು ಮಾಡುವಂತೆ ಮಂಗಳಘೋಷಗಳು ಮೊಳಗಿದವು. ಅರ್ಚಕರು ಆರತಿ ಬೆಳಗುತ್ತಿದ್ದರೆ ಪರಂಜ್ಯೋತಿಗೆ ಪುಟ್ಟ ಜ್ಯೋತಿಯ ಸಮರ್ಪಣೆಯೇನೋ, ಭಾರತವೇ ಕೈ ಮುಗಿದು ಪರಶಿವನ ಪ್ರಾರ್ಥನೆ ಮಾಡುತ್ತಿದೆಯೇನೋ ಎಂಬ ಭಾವ ತುಂಬಿತ್ತು. ಅದಾದ ಮೇಲೆ ಕಾಲಭೈರವನ ದರ್ಶನ ಮಾಡಿ ತಡ ರಾತ್ರಿ ಎಲ್ಲ ಹಿರಿಯರನ್ನು ಒಂದು ಕಡೆ ಬಿಡಾರದಲ್ಲಿ ಬಿಟ್ಟು, ನಾವು ನಾಲ್ಕೈದು ಜನ ಮತ್ತೆ ಗಂಗಾ ತಟಕ್ಕೆ ಬಂದು ಆ ಗಂಗಾ ನದಿಯಲ್ಲಿ ಮಿಂದು ಧನ್ಯರಾದೆವು. ಭಗೀರಥ ತಪಸ್ಸಿನ ಫಲವಾಗಿ ಬಂದವಳು ಎಷ್ಟು ಜನರ ಪಾಪ ನೀಗುತ್ತಿದ್ದಾಳೋ ನಮ್ಮ ಪಾಪಗಳನ್ನೂ ಪರಿಹರಿಸಲಿ ಎಂದುಕೊಂಡು ಪದೇ ಪದೆ ಮುಳುಗಿದೆವು. ಕತ್ತಲ ರೂಪದಲ್ಲಿ ಪಾಪಗಳೆಲ್ಲಾ ಹರಿದುಹೋಗಿದ್ದು ಅವಳಿಗಷ್ಟೇ ಗೊತ್ತಾಯಿತೇನೋ..!

ಮರುದಿನ ಸೂರ್ಯೋದಯಕ್ಕೆ ಮುನ್ನವೇ ವಿಶ್ವನಾಥನ ಸನ್ನಿಧಾನ ಸೇರಿದೆವು. ರುದ್ರಾಭಿಷೇಕ ಮಾಡಿಸಿ ವಿಶ್ವನಾಥನ-ವಿಶಾಲಾಕ್ಷಿಯರ ದರ್ಶನವಾಗುತ್ತಿದ್ದಂತೆಯೇ ಬದುಕೇ ಮಂಗಳವಾಯಿತು.

ಇದರ ಹೊರತಾಗಿ ಕಾಶಿಗೆ ವಾರಾಣಸಿ ಅಂತ ಯಾಕೆ ಕರೀತಾರೆ, ಅಲ್ಲಿನ ಜನಸಾಮಾನ್ಯರಪಾಲಿಗೆ ಕಾಶಿ ಏನು..? ಅಲ್ಲಿನ ಘಾಟ್ ಗಳಲ್ಲಿ ಅಹರ್ನಿಶಿ ನಡೆಯುವ ಅನೇಕ ಚಟುವಟಿಕೆಗಳು, ಬಂದ ಯಾತ್ರಿಕರ ಅನುಭವ, ಬೀದಿ ಅಂಗಡಿಗಳ ಸಂಭ್ರಮ, ಲಸ್ಸಿ-ಪಾನ್ ಸ್ಟಾಲ್ ಗಳ ಸೆಳೆತ, ಬನಾರಸ್ ಸೀರೆಗಳ ಆಕರ್ಷಣೆ, ಅಲ್ಲಿನ ಪರೋಠಾ ಊಟದ ವಿಶೇಷತೆ, ಇದೆಲ್ಲವನ್ನೂ ಹಂಚಿಕೊಳ್ಳಬೇಕು ನಿಮ್ಮಬಳಿ ಆದರೆ ಸದ್ಯಕ್ಕೆ ಕಾಲವಿಲ್ಲ. ಮತ್ತೊಮ್ಮೆ ಇದರ ಕುರಿತಾಗಿ ಬರೆಯುತ್ತೇನೆ. ನಮ್ಮ ಟಿವಿ ಭಾಷೆಯಲ್ಲಿ ಹೇಳುವುದಾದರೆ ಈಗ ಒಂದು ಸಣ್ಣ ಬ್ರೇಕ್​.


ಕಾಶಿ ಉಳಿಸುವವರು ಯಾರು?
ನಮ್ಮ ಕಾಶಿ ಪ್ರವಾಸದ ವೇಳೆ ಗಮನ ಸೆಳೆದಿದ್ದು ದಕ್ಷಿಣ ಭಾರತೀಯರ ಸ್ವಚ್ಚತೆಯ ಗುಣ. ದಕ್ಷಿಣ ಭಾರತೀಯರಿಗೆ ಹೋಲಿಸಿದ್ರೆ ಸ್ವಚ್ಚತೆ ವಿಷಯದಲ್ಲಿ ಉತ್ತರ ಭಾರತೀಯರು ಹೆಚ್ಚು ಗಮನ ನೀಡಲ್ಲ. ಇದಕ್ಕೆ ಸಾಕ್ಷಿಯಾಗಿದ್ದು ಗಂಗಾನದಿಯ ತಟ. ನಾವು ಭೇಟಿ ನೀಡಿದ್ದ ವೇಳೆ ಗಂಗಾತಟದಲ್ಲಿ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರಿದ್ದರು. ಅದರಲ್ಲೂ ಕರ್ನಾಟಕ, ಆಂಧ್ರ, ತಮಿಳುನಾಡಿನ ಪ್ರವಾಸಿಗರೇ ಹೆಚ್ಚಿದ್ರು. ಗಂಗಾತಟದಲ್ಲಿ ಪುಟ್ಟ ಪುಟ್ಟ ದೀಪ, ಹೂವುಗಳನ್ನು ಮಾರುವವರ ದಂಡೇ ಇತ್ತು. ದೀಪ ಹಚ್ಚಿ, ಗಂಗಾನದಿಯಲ್ಲಿ ತೇಲಿಬಿಡಿ ಎಂದು ಪ್ರವಾಸಿಗರ ಮನ ಒಲಿಸುತ್ತಿದ್ರು. ಆದ್ರೆ, ನಾನು ಕಂಡಂತೆ, ನಮ್ಮ ದಕ್ಷಿಣ ಭಾರತೀಯರು ಯಾರೂ ದೀಪ ಖರೀದಿಸಲಿಲ್ಲ. ಗಂಗಾನದಿಯೊಳಗೆ ಹೂವೂ ಹಾಕಲಿಲ್ಲ. ಕೆಲ ಮಹಿಳೆಯರು, ಗಂಗೆಗೆ ನಮಿಸಲು ಅರಿಶಿನ- ಕುಂಕುಮ ತಂದಿದ್ದು, ನೀರಿಗೆ ಅರಿಶಿನ- ಕುಂಕುಮ ಹಾಕಿ ನಮಸ್ಕರಿಸುತ್ತಿದ್ದ ದೃಶ್ಯ ಮನಸೆಳೆಯಿತು.

 

 

Share this article