ಕಾರವಾರ : ಐಎನ್‌ಎಸ್ ಕದಂಬ ನೌಕಾನೆಲೆಯಲ್ಲಿ ಬುಧವಾರ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಐಎನ್‌ಎಸ್‌ವಿ ಕೌಂಡಿನ್ಯ ಹಡಗನ್ನು ಲೋಕಾರ್ಪಣೆ ಮಾಡಿದರು.
5ನೇ ಶತಮಾನದಲ್ಲಿ ನಿರ್ಮಿಸಿದ್ದ ನೇಯ್ಗೆ ಮಾಡಿದ ಮಾದರಿಯ ಈ ಹಡಗನ್ನು ಭಾರತೀಯ ನೌಕಾಪಡೆ ಪುನರ್ ನಿರ್ಮಾಣ ಮಾಡಿದ್ದು, ಐಎನ್‌ಎಸ್‌ವಿ ಕೌಂಡಿನ್ಯ ಎಂದು ಈ ಹಡಗಿಗೆ ಹೆಸರಿಡಲಾಗಿದೆ.
ಭಾರತೀಯ ನೌಕಾಪಡೆ ಮತ್ತು ಮೆಸ್ಸೆಸ್ ಹೋಡಿ ಇನ್ನೋವೇಷನ್ಸ್, ಸಂಸ್ಕೃತಿ ಸಚಿವಾಲಯದ ನಡುವೆ ಜುಲೈ 2023ರಲ್ಲಿ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಹಡಗು ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಗೋವಾದ ಶಿಪ್‌ಯಾರ್ಡಿನಲ್ಲಿ ಈ ಹಡಗು ನಿರ್ಮಿಸಲಾಯಿತು. ಅಜಂತಾ ಗುಹೆಗಳಲ್ಲಿನ ಚಿತ್ರದಿಂದ ಪ್ರೇರಿತವಾಗಿ ಸಂಪೂರ್ಣವಾಗಿ ಸಾಂಪ್ರದಾಯಿಕ ವಿಧಾನದಿಂದ ಕಚ್ಚಾವಸ್ತುಗಳನ್ನು ಬಳಸಿ, ಕೇರಳದ ಕುಶಲಕರ್ಮಿಗಳು ಈ ಹಡಗು ನಿರ್ಮಿಸಿದ್ದಾರೆ. ಕುಶಲಕರ್ಮಿ ಬಾಬು ಶಂಕರನ್ ನೇತೃತ್ವದಲ್ಲಿ ಹಡಗಿನ ನಿರ್ಮಾಣಕಾರ್ಯ ನಡೆದಿದೆ.ಈ ಹಡಗಿನಲ್ಲಿ ಮರದ ಹಲಗೆ, ದಿಮ್ಮಿಗಳನ್ನು ಬಳಸಿ ನೇಯ್ಗೆ ಮಾಡಲಾಗಿದೆ. ತಳಕ್ಕೆ ಹಲಸಿನ ಮರ, ತೆಂಗಿನ ನಾರನ್ನು ಬಳಸಲಾಗಿದ್ದು, ಮೀನಿನ ಎಣ್ಣೆ, ಬೇವಿನ ಎಣ್ಣೆ, ಗೋವುಗಳ ತುಪ್ಪ ಬಳಸಲಾಗಿದೆ. ಹಾಯಿಗಳು ಹಾಗೂ ಸಾಂಪ್ರದಾಯಿಕ ಸ್ಟೇರಿಂಗ್ ರೂಪಿಸಲಾಗಿದ್ದು, ಗಂಡಭೇರುಂಡ ಮತ್ತು ಸಿಂಹ ಮುಖದ ವಿಶಿಷ್ಟ ಲಕ್ಷಣಗಳಿಂದ ಅಲಂಕರಿಸಲ್ಪಟ್ಟಿವೆ. ಹರಪ್ಪಾ ಶೈಲಿಯ ಲಂಗರು ಹೊಂದಿದ್ದು, ಭಾರತದ ಕಡಲ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.
ಪರಿಕಲ್ಪನೆ, ಅಭಿವೃದ್ಧಿ, ವಿನ್ಯಾಸ, ತಾಂತ್ರಿಕ ಮೌಲ್ಯೀಕರಣ ಮತ್ತು ನಿರ್ಮಾಣ ಸೇರಿದಂತೆ ಈ ಯೋಜನೆಯ ಅನುಷ್ಠಾನದ ಸಂಪೂರ್ಣ ಮೇಲ್ವಿಚಾರಣೆ ನೌಕಾಪಡೆಯದಾಗಿದೆ. ಸಂಸ್ಕೃತಿ ಇಲಾಖೆ ಹಣಕಾಸು ನೆರವು ನೀಡಿದೆ. ಹಡಗಿನ ಲೋಕಾರ್ಪಣೆಯ ತರುವಾಯ ಸಾಂಪ್ರದಾಯಿಕ ಸಮುದ್ರ ವ್ಯಾಪಾರ ಮಾರ್ಗಗಳಲ್ಲಿ, ಗುಜರಾತಿನಿಂದ ಓಮನ್ ತನಕದ ಮೊದಲ ಸಾಗರೋತ್ತರ ಪ್ರಯಾಣಕ್ಕೆ ಸಿದ್ಧತೆ ನಡೆಸಲಾಗಿದೆ.
ಹಡಗು ನಿರ್ಮಾಣದಲ್ಲಿ ಬಳಸುವ ಯಾವುದೇ ವಸ್ತು, ಉಪಕರಣಗಳನ್ನು ಬಳಸದೆ, ಸಾಂಪ್ರದಾಯಿಕವಾಗಿ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಪುರಾತತ್ವ ಶಾಸ್ತ್ರ, ನೌಕಾ ವಾಸ್ತುಶಿಲ್ಪ, ಹೈಡ್ರೋಡೈನಾಮಿಕ್ ಪರೀಕ್ಷೆಯ ಅಧ್ಯಯನ ನಡೆಸಲಾಗಿದೆ. ಐಐಟಿ ಮದ್ರಾಸ್‌ನ ಸಾಗರ ಎಂಜಿನಿಯರಿಂಗ್ ಇಲಾಖೆ ಹಡಗಿನ ಪರೀಕ್ಷೆ ನಡೆಸಿದೆ. ಇದು ಪ್ರಸ್ತುತ ವಿಶ್ವದಲ್ಲಿರುವ ಇತರ ಯಾವುದೇ ಹಡಗುಗಳಿಗಿಂತ ಭಿನ್ನವಾಗಿದೆ.
ಕಾಂಗ್ರೆಸ್ ಹೇಳಿಕೆಗಳು ದೌರ್ಭಾಗ್ಯಪೂರ್ಣ: ಬಳಿಕ, ಸುದ್ದಿಗಾರರ ಜೊತೆ ಮಾತನಾಡಿದ ಶೇಖಾವತ್, ಪಹಲ್ಗಾಂ ಘಟನೆ ನಂತರ ಕಾಂಗ್ರೆಸ್ ಪಕ್ಷದ ಹೇಳಿಕೆಗಳು ದೌರ್ಭಾಗ್ಯಪೂರ್ಣವಾಗಿದೆ. ಉರಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿದಾಗ ಅದರ ದಾಖಲೆಯನ್ನು ಕಾಂಗ್ರೆಸ್ ಕೇಳಿತ್ತು. ಪುಲ್ವಾಮ ಘಟನೆ ನಂತರ ಏರ್ ಸ್ಟ್ರೈಕ್ ದಾಳಿ ಮಾಡಿದಾಗಲೂ ದಾಖಲೆ ಕೇಳಿತ್ತು. ಕೋವಿಡ್ ಲಸಿಕೆ ಕಂಡು ಹಿಡಿದಾಗಲೂ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿತ್ತು. ಇದು ಕಾಂಗ್ರೆಸ್‌ನ ಸಹಜ ಸ್ವಭಾವ. ಇದು ದೇಶದ ಜನರಿಗೆ ಗೊತ್ತಿದೆ. ಚುನಾವಣೆ ಬಂದಾಗ ಜನ ಇದರ ಲೆಕ್ಕಾ ಚುಕ್ತಾ ಮಾಡುತ್ತಾರೆ. ಭಾರತ-ಪಾಕ್ ನಡುವಿನ ಯುದ್ಧ ಕುರಿತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯೂ ಸರಿಯಲ್ಲ ಎಂದು ಸಚಿವ ಶೇಖಾವತ್ ಹೇಳಿದರು.
ಕಾಶಿ, ಉಜ್ಜಯನಿಯಂತೆ ಗೋಕರ್ಣ ಅಭಿವೃದ್ಧಿಗೆ ಕಾರಿಡಾರ್ ನಿರ್ಮಿಸಲು ಸಿದ್ಧ : ಬಳಿಕ, ಅವರು ಗೋಕರ್ಣದ ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರಕ್ಕೆ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿ, ಕಾಶಿ ವಿಶ್ವನಾಥ ದೇವಾಲಯ, ಉಜ್ಜಯನಿಯ ಮಹಾಕಾಲ ದೇಗುಲದಂತೆ ಗೋಕರ್ಣದ ಮಹಾಬಲೇಶ್ವರ ದೇಗುಲದ ಸಮಗ್ರ ಅಭಿವೃದ್ಧಿಗೆ ಕಾರಿಡಾರ್ ನಿರ್ಮಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಈ ಬಗ್ಗೆ ರಾಜ್ಯ ಸರ್ಕಾರ ಸಮಗ್ರ ಪ್ರಸ್ತಾವನೆ ಸಲ್ಲಿಸಬೇಕು ಎಂದರು.
ಆತ್ಮಲಿಂಗಕ್ಕೆ ಪೂಜೆ : ಗೋಕರ್ಣಕ್ಕೆ ಆಗಮಿಸಿದ ಶೇಖಾವತ್, ಮೊದಲು ಮಹಾಗಣಪತಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ, ಮಹಾಬಲೇಶ್ವರ ಮಂದಿರಕ್ಕೆ ತೆರಳಿ, ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು. ಮಂದಿರದ ಅರ್ಚಕ ಅಮೃತೇಶ್ ಹಿರೇ ಪೂಜಾ ಕೈಂಕರ್ಯ ನೆರವೇರಿಸಿದರು. ಬಳಿಕ ಮಂದಿರದಿಂದ ಪ್ರಸಾದ ನೀಡಿ ಗೌರವಿಸಲಾಯಿತು. ಬಳಿಕ, ತಾಮ್ರಗೌರಿ ಮಂದಿರಕ್ಕೆ ತೆರಳಿ ದೇವಿಯ ದರ್ಶನ ಪಡೆದರು.ಈಚೆಗೆ ಪಹಲ್ಗಾಂನಲ್ಲಿ ನಡೆದ ಉಗ್ರರ ದಾಳಿ ನಂತರ ಭಾರತೀಯ ಸೇನೆ ತನ್ನ ಶಕ್ತಿ, ಭದ್ರತೆ ಮತ್ತು ಕೌಶಲ್ಯಪೂರ್ಣ ಸಂಯೋಜನೆಯನ್ನು ಪ್ರದರ್ಶಿಸಿದೆ. ಭಾರತ ಯಾವುದೇ ರೀತಿಯ ಭಯೋತ್ಪಾದನೆಯನ್ನು ಎದುರಿಸುವ ಶಕ್ತಿ ಪಡೆದುಕೊಂಡಿದೆ. ಪ್ರಪಂಚದ ಯಾವುದೇ ದೇಶದಲ್ಲಿ ಭಾರತದ ನೆಲದ ವಿರುದ್ಧ ಯಾವುದೇ ಪಿತೂರಿ ನಡೆಯುತ್ತಿದ್ದರೆ, ಆ ಪಿತೂರಿಯನ್ನು ಕೊನೆಗೊಳಿಸುವ ಮತ್ತು ಅದನ್ನು ತಡೆಯುವ ಶಕ್ತಿಯನ್ನು ಹೊಂದಿದೆ ಎಂದರು.
ಭಾರತದಲ್ಲಿ 5ನೇ ಶತಮಾನದಲ್ಲಿ ಇದ್ದಂತಹ ಹಡಗನ್ನು ನಮ್ಮ ಭಾರತದ ಇತಿಹಾಸದ ಸಾಧನೆಯ ಪ್ರತೀಕವಾಗಿ ಸ್ಥಳೀಯವಾಗಿ ದೊರೆಯುವ ಅಗತ್ಯ ಪರಿಕರಗಳನ್ನು ಬಳಸಿಕೊಂಡು ಶತಮಾನಗಳ ಹಿಂದೆ ನಮ್ಮ ಪೂರ್ವಜರು ತಯಾರಿಸಿದ್ದ ಹಡಗನ್ನು ಮರು ನಿರ್ಮಾಣ ಮಾಡಿ, ಕಾರವಾರದ ನೌಕಾನೆಲೆಯಲ್ಲಿ ಅದರ ಸಂಚಾರಕ್ಕೆ ಚಾಲನೆ ನೀಡಿರುವುದು ಐತಿಹಾಸಿಕ ಕ್ಷಣವಾಗಿದೆ ಎಂದರು.