ಭಾರತ ಗಣತಂತ್ರಕ್ಕೆ 76ರ ಸಂಭ್ರಮ - ದೆಹಲಿಯ ಕರ್ತವ್ಯ ಪಥದಲ್ಲಿ ದೇಶದ ಶ್ರೀಮಂತ ಸಂಸ್ಕೃತಿ, ಮಿಲಿಟರಿ ಶೌರ್ಯ ಅನಾವರಣ

ಸಾರಾಂಶ

ಭಾರತ ಗಣತಂತ್ರಕ್ಕೆ 76ರ ಸಂಭ್ರಮ

- ದೆಹಲಿಯ ಕರ್ತವ್ಯ ಪಥದಲ್ಲಿ ದೇಶದ ಶ್ರೀಮಂತ ಸಂಸ್ಕೃತಿ, ಮಿಲಿಟರಿ ಶೌರ್ಯ ಅನಾವರಣ

 ಭಾರತ ಗಣತಂತ್ರಕ್ಕೆ 76ರ ಸಂಭ್ರಮ

- ದೆಹಲಿಯ ಕರ್ತವ್ಯ ಪಥದಲ್ಲಿ ದೇಶದ ಶ್ರೀಮಂತ ಸಂಸ್ಕೃತಿ, ಮಿಲಿಟರಿ ಶೌರ್ಯ ಅನಾವರಣ 

 ನವ್ಯಶ್ರೀ ಶೆಟ್ಟಿ, ಮೈತ್ರಿ ಎಸ್‌. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತಕ್ಕೆ ಇಂದು 76ನೇ ಗಣರಾಜ್ಯೋತ್ಸವದ ಸಂಭ್ರಮ. ಇದರ ಹಿಂದೆ ದೊಡ್ಡ ಇತಿಹಾಸವಿದೆ. ಬ್ರಿಟಿಷರ ವಸಾಹತು ಆಗಿದ್ದ ಭಾರತಕ್ಕೆ 1947ರ ಆ.15ರಂದು ಸ್ವಾತಂತ್ರ್ಯ ಲಭಿಸಿತಾದರೂ ಸಾರ್ವಭೌಮ, ಪ್ರಜಾಸತ್ತಾತ್ಮಕ ಹಾಗೂ ಗಣತಂತ್ರವಾಗಿ ಘೋಷಣೆಯಾಗಿದ್ದು, 1950ರ ಜ.26ರಂದು ಸಂವಿಧಾನವನ್ನು ಅಂಗೀಕರಿಸುವ ಮೂಲಕ. ಹೀಗಾಗಿ ಆ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಅಂದು ರಾಜಮಾರ್ಗ, ಇಂದು ಕರ್ತವ್ಯಪಥ

ಗಣರಾಜ್ಯೋತ್ಸವದ ಪ್ರಯುಕ್ತ ದೇಶದ ಮುಖ್ಯ ಕಾರ್ಯಕ್ರಮ ರಾಜಧಾನಿ ನವದೆಹಲಿಯಲ್ಲಿ ನಡೆಯುತ್ತದೆ. ರಾಷ್ಟ್ರಪತಿ ಭವನ ಹಾಗೂ ಇಂಡಿಯಾ ಗೇಟ್‌ ನಡುವೆ ಇರುವ 3 ಕಿ.ಮೀ. ಉದ್ದದ ನೇರ ರಸ್ತೆಯಲ್ಲಿ ಗಣರಾಜ್ಯೋತ್ಸವದ ಪಥ ಸಂಚಲನ ಸಾಗುತ್ತದೆ. ಬ್ರಿಟಿಷರ ಕಾಲದಲ್ಲಿ ‘ಕಿಂಗ್ಸ್‌ ವೇ’ ಎನ್ನಲಾಗುತ್ತಿದ್ದ ಈ ಮಾರ್ಗಕ್ಕೆ ಸ್ವಾತಂತ್ರ್ಯಾ ನಂತರ ರಾಜಪಥ ಎಂದು ಮರುನಾಮಕರಣ ಮಾಡಲಾಯಿತು. ಭಾರತದಿಂದ ವಸಾಹತುಶಾಹಿ ಗುರುತು ತೊಡೆದುಹಾಕುವ ಭಾಗವಾಗಿ 2022ರ ಸೆಪ್ಟೆಂಬರ್‌ನಲ್ಲಿ ರಾಜಪಥಕ್ಕೆ ‘ಕರ್ತವ್ಯ ಪಥ’ ಎಂಬ ಹೊಸ ಹೆಸರಿಡಲಾಯಿತು. ಕರ್ತವ್ಯ ಪಥದಲ್ಲಿ ಭಾರತದ ಸೇನಾಶಕ್ತಿ ಮತ್ತು ಸಾಂಸ್ಕೃತಿಕ ವೈಭವವು ಗಣರಾಜ್ಯೋತ್ಸವದಂದು ಪ್ರತಿ ವರ್ಷ ಅನಾವರಣಗೊಳ್ಳುತ್ತದೆ. --

ದೇಶದ ಸೇನಾ ಶಕ್ತಿ ಅನಾವರಣ

ಭಾರತ ಶಾಂತಿಪ್ರಿಯ ದೇಶವಾದರೂ ನೆರೆಹೊರೆ ದೃಷ್ಟಿಯಿಂದ ಅತ್ಯಾಧುನಿಕ ಹಾಗೂ ಬಲಿಷ್ಠ ಶಸ್ತ್ರಾಸ್ತ್ರಗಳನ್ನು ಹೊಂದುವುದು ಅತ್ಯಗತ್ಯ. ದೇಶದ ಸೇನಾ ಸಾಮರ್ಥ್ಯ ಮತ್ತು ತಾಂತ್ರಿಕ ಪ್ರಗತಿ ಪ್ರದರ್ಶಿಸುವ ಪಥಸಂಚಲನವು ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆ. ಇದು ಸೇನಾ ಸಾಮರ್ಥ್ಯವನ್ನು ಅನಾವರಣಗೊಳಿಸುವುದರ ಜೊತೆಗೆ ರಾಷ್ಟ್ರಭಕ್ತಿ ಹಾಗೂ ದೇಶ ಪ್ರೇಮವನ್ನೂ ಬಡಿದೆಬ್ಬಿಸುತ್ತದೆ. ಪಥಸಂಚಲನದ ತಯಾರಿ, ಹಿಂದಿನ ವರ್ಷದ ಜುಲೈನಿಂದಲೇ ಆರಂಭವಾಗುತ್ತದೆ. ಇದರಲ್ಲಿ ಹೆಜ್ಜೆ ಹಾಕುವವರಿಗೆ ಮುಂಚಿತವಾಗಿಯೇ ಅವರ ಭಾಗವಹಿಸುವಿಕೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಹೀಗಾಗಿ, ಅವರೆಲ್ಲ ಕಡಿಮೆಯೆಂದರೂ 600 ಗಂಟೆಗಳ ಕಾಲ ಅಭ್ಯಾಸ ನಡೆಸಿರುತ್ತಾರೆ. ಈ ಬಾರಿ ಭಾರತೀಯ ಸೇನಾ ತುಕಡಿಗಳೊಂದಿಗೆ ಇಂಡೋನೇಷ್ಯಾದ 160 ಸದಸ್ಯರ ಪಥಸಂಚಲನ ತಂಡ ಹಾಗೂ 190 ಸದಸ್ಯರ ಬ್ಯಾಂಡ್‌ ತಂಡ ಇರಲಿವೆ. --

ಭಾರತದ ಸಂಸ್ಕೃತಿಯ ದರ್ಶನ

ಈ ಬಾರಿಯ ಗಣರಾಜ್ಯೋತ್ಸವವನ್ನು ‘ಸ್ವರ್ಣಿಮ ಭಾರತ: ಪರಂಪರೆ ಮತ್ತು ವಿಕಾಸ’ ಎಂಬ ಥೀಮ್‌ನ ಅಡಿಯಲ್ಲಿ ಆಚರಿಸಲಾಗುತ್ತಿದೆ. ಇದರ ಪ್ರಯುಕ್ತ ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಉದ್ದೇಶದಿಂದ ಪಥ ಸಂಚಲನದಲ್ಲಿ ದೇಶದ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಾಂಪ್ರದಾಯಿಕ ಉಡುಗೆ ತೊಟ್ಟ ಜೋಡಿಗಳು ಮಿಂಚಲಿವೆ. ಅಂತೆಯೇ, ‘ಜಯತಿ ಜಯ ಮಮಹ್‌ ಭಾರತಂ’ ಹೆಸರಿನಡಿ 5 ಸಾವಿರ ಕಲಾವಿದರಿಂದ 45 ವಿಧದ ನೃತ್ಯ ಪ್ರದರ್ಶನವೂ ಇರಲಿದೆ. --

ಈ ಬಾರಿಯ ಪ್ರಧಾನ

ಆಕರ್ಷಣೆ ‘ಪ್ರಳಯ್‌’ - ಶತ್ರು ಸ್ಥಳಕ್ಕೆ ನಿಖರವಾಗಿ ನುಗ್ಗುವ ಕ್ಷಿಪಣಿ

- ಜಗತ್ತಿನ ಮುಂದೆ ಮೊದಲ ಬಾರಿ ಅನಾವರಣ ಸೇನಾ ಸಾಮರ್ಥ್ಯದ ಪ್ರದರ್ಶನದ ಭಾಗವಾಗಿ ಈ ವರ್ಷದ ಪಥಸಂಚಲನದ ವೇಳೆ ಮೊದಲಿಗೆ ಲೇಸರ್‌ ಆಧರಿತ ಯುದ್ಧಭೂಮಿ ಕಣ್ಗಾವಲು ವ್ಯವಸ್ಥೆಗಳನ್ನು ಪ್ರದರ್ಶಿಸಲಾಗುತ್ತದೆ. ಬಳಿಕ, ಡಿಆರ್‌ಡಿಒ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕಡಿಮೆ ವ್ಯಾಪ್ತಿಯನ್ನು ಕ್ರಮಿಸಬಲ್ಲ ‘ಪ್ರಳಯ್‌’ ಬ್ಯಾಲಿಸ್ಟಿಕ್‌ ಕ್ಷಿಪಣಿಯನ್ನು ಪ್ರಪ್ರಥಮ ಬಾರಿಗೆ ಜಗತ್ತಿನ ಮುಂದೆ ಅನಾವರಣಗೊಳಿಸಲಾಗುತ್ತದೆ.

ಕಮಾಂಡ್‌ ನೀಡಿದ 60 ಸೆಕೆಂಡುಗಳ (1 ನಿಮಿಷ) ಒಳಗಾಗಿ ಒಂದರ ಹಿಂದೆ ಒಂದರಂತೆ 2 ಕ್ಷಿಪಣಿ ಉಡಾವಣೆ ಮಾಡಿ, 150 ರಿಂದ 500 ಕಿ.ಮೀ. ಅಂತರದಲ್ಲಿರುವ ಗುರಿಗಳನ್ನು ನಿಖರವಾಗಿ ನಾಶ ಮಾಡುವುದು ಪ್ರಳಯ್‌ನ ವಿಶೇಷತೆ. ಇದರಿಂದ ಉಡಾವಣೆಯಾಗುವ ಕ್ಷಿಪಣಿಗಳು ಗಂಟೆಗೆ 1,960 ಕಿ.ಮೀ. ವೇಗದಲ್ಲಿ ಚಲಿಸುತ್ತವೆ. ಇದರ ನಿಯೋಜನೆಯಿಂದ ಹಿಡಿದು ಉಡಾವಣೆ ಮಾಡಲು ತಗುಲುವುದು ಕೇವಲ 10 ನಿಮಿಷ. ಪ್ರಳಯ್‌ನ ನಿರ್ಮಾಣ ಕಾರ್ಯವನ್ನು 332.88 ಕೋಟಿ ರು. ವೆಚ್ಚದಲ್ಲಿ 2015ರ ಮಾರ್ಚ್‌ನಲ್ಲೇ ಆರಂಭಿಸಲಾಗಿತ್ತು. ಇದನ್ನು ಮುಖ್ಯವಾಗಿ ರಡಾರ್‌ಗಳು, ಸಂವಹನ ಸ್ಥಾಪನೆಗಳು, ಕಮಾಂಡ್‌ ಮತ್ತು ನಿಯಂತ್ರಣ ಕೇಂದ್ರಗಳು, ಆಧುನಿಕ ವಾಯುನೆಲೆಗಳನ್ನು ಧ್ವಂಸಗೊಳಿಸಲು ಅಭಿವೃದ್ಧಿಪಡಿಸಲಾಗಿದ್ದು, 2021ರ ಡಿ.22 ಹಾಗೂ ಡಿ.23, 2023ರ ನ.7ರಂದು ಭುವನೇಶ್ವರ ಸಮೀಪದ ಅಬ್ದುಲ್‌ ಕಲಾಂ ದ್ವೀಪದಿಂದ ಉಡಾವಣೆ ಮಾಡಿ ಪರೀಕ್ಷಿಸಲಾಗಿತ್ತು. ಗಣರಾಜ್ಯೋತ್ಸವದ ಪಥಸಂಚಲನಕ್ಕೆ 12 ಚಕ್ರಗಳುಳ್ಳ ಅಶೋಕ್‌ ಲೇಲ್ಯಾಂಡ್‌ನ 12x12 ವಾಹನದ ಮೇಲೆ ಪ್ರಳಯ್‌ ಕ್ಷಿಪಣಿಯನ್ನು ತರಲಾಗುವುದು.

ಬೈಕರ್‌ನಲ್ಲಿ ಎತ್ತರದ ಪಿರಮಿಡ್‌

ರಚಿಸಿ ವಿಶ್ವ ದಾಖಲೆ ಸೃಷ್ಟಿ ಯತ್ನ - 7 ಬೈಕ್‌ನಲ್ಲಿ 40 ಮಂದಿಯಿಂದ ಸಾಹಸ ಪ್ರದರ್ಶನ

ಸೇನೆಯ ಮೋಟರ್‌ಸೈಕಲ್ ಸವಾರರ ತಂಡ ‘ಡೇರ್‌ಡೆವಿಲ್ಸ್’ ಮೋಟಾರ್‌ ಸೈಕಲ್‌ಗಳಲ್ಲಿ ಅತಿ ಎತ್ತರದ ಮಾನವ ಪಿರಮಿಡ್‌ ರಚಿಸಿ ಈ ಬಾರಿ ವಿಶ್ವದಾಖಲೆ ನಿರ್ಮಿಸಲಿದೆ. 7 ಬೈಕ್‌ಗಳಲ್ಲಿ 40 ಪುರುಷರು 20.4 ಅಡಿ ಎತ್ತರದ ಪಿರಮಿಡ್‌ ನಿರ್ಮಿಸಿ ವಿಜಯ್‌ ಚೌಕ್‌ನಿಂದ ಇಂಡಿಯಾ ಗೇಟ್‌ರವರೆಗೆ ಕರ್ತವ್ಯದಲ್ಲಿ ಪಥದಲ್ಲಿ 2 ಕಿ.ಮೀ ದೂರ ಕ್ರಮಿಸಿ ದಾಖಲೆ ನಿರ್ಮಿಸಲಿದ್ದಾರೆ. ಇಲ್ಲಿಯವರೆಗೆ ಡೇರ್‌ ಡೆವಿಲ್ಸ್‌ 33 ವಿಶ್ವದಾಖಲೆ ಬರೆದಿದೆ. ಇದುವರೆಗೆ 1600 ಮೋಟಾರ್‌ ಸೈಕಲ್ ಪ್ರದರ್ಶನಗಳು ನಡೆದಿವೆ.

-- ವಂದೇ ಭಾರತ್‌ನ ಮೊದಲ ಮಹಿಳಾ ಪೈಲಟ್‌ಗೆ ಗೌರವ

ಈ ಸಲದ ಗಣರಾಜ್ಯೋತ್ಸವದ ಭೋಜನ ಕೂಟಕ್ಕೆ ಹಿರಿಯ ಲೋಕೋ ಪೈಲಟ್‌ ರಿತಿಕಾ ತಿರ್ಕಿ ಅವರನ್ನು ರಾಷ್ಟ್ರಪತಿ ಭವನ ಆಹ್ವಾನಿಸಿದೆ. ಜಾರ್ಖಂಡ್‌ನ ಬುಡಕಟ್ಟು ಜನಾಂಗಕ್ಕೆ ಸೇರಿದ 27 ವರ್ಷದ ರಿತಿಕಾ, ಟಾಟಾ ನಗರ ಮತ್ತು ಪಟನಾ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸಹಾಯಕ ಲೋಕೋ ಪೈಲಟ್‌ ಆಗಿದ್ದಾರೆ. ಈಕೆ ವಂದೇ ಭಾರತ್‌ ರೈಲಿನ ಮೊದಲ ಮಹಿಳಾ ಲೋಕೋ ಪೈಲಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. --

ಧ್ವಜಾರೋಹಣ ಅಲ್ಲ, ಧ್ವಜ ಅನಾವರಣ ಜ.26ರಂದು ಕೆಂಪುಕೋಟೆಯಲ್ಲಿ ನಡೆಯುವುದು ಧ್ವಜಾರೋಹಣ ಅಲ್ಲ. ಗಣತಂತ್ರ ದಿನದಂದು ಧ್ವಜ ಹಾರಿಸಲಾಗುತ್ತದೆ ಅಥವಾ ಅನಾವರಣಗೊಳಿಸಲಾಗುತ್ತದೆ. ಧ್ವಜದ ಆರೋಹಣಕ್ಕೂ ಮತ್ತು ಅನಾವರಣಕ್ಕೂ ವ್ಯತ್ಯಾಸವಿದೆ. ಅ.15ರಂದು ಧ್ವಜವನ್ನು ಕೆಳಗಿನಿಂದ ಮೇಲಕ್ಕೆ ಏರಿಸಲಾಗುತ್ತದೆ. ಇದು ದೇಶವು ದಾಸ್ಯದಿಂದ ಮುಕ್ತಿ ಹೊಂದಿದೆ ಎನ್ನುವುದರ ಸಂಕೇತ. ಅದೇ ರೀತಿ ಜ.26ರಂದು ಧ್ವಜವನ್ನು ಅರಳಿಸಲಾಗುತ್ತದೆ. ಅದು ದೇಶದಲ್ಲಿ ಪ್ರಜಾಪ್ರಭುತ್ವ ಇರುವುದರ ದ್ಯೋತಕ. ಇದಕ್ಕಾಗಿ ತ್ರಿವರ್ಣ ಧ್ವಜವನ್ನು ಮಡಚಿ ಕಂಬದ ಮೇಲ್ಭಾಗದಲ್ಲಿ ಜೋಡಿಸಲಾಗುತ್ತದೆ. ರಾಷ್ಟ್ರಪತಿಗಳು ಕಂಬಕ್ಕೆ ಕಟ್ಟಿದ ದಾರವನ್ನು ಎಳೆದು ರಾಷ್ಟ್ರಧ್ವಜವನ್ನು ಅನಾವರಣಗೊಳಿಸುತ್ತಾರೆ. ಹೀಗಾಗಿ ಧ್ವಜ ಅನಾವರಣ ಎಂಬುದು ಸರಿಯಾದ ಪದ.

ಪ್ರಧಾನಿ ಭಾಷಣ ಇರೋಲ್ಲ

ಸ್ವಾತಂತ್ಯ ದಿನದಂದು ಕೆಂಪು ಕೋಟೆಯಲ್ಲಿ ಧ್ವಜ ಅನಾವರಣಗೊಳಿಸಿ ದೇಶವನ್ನುದ್ದೇಶಿಸಿ ಪ್ರಧಾನಿ ಮಾತನಾಡುತ್ತಾರೆ. ಆದರೆ ಗಣರಾಜ್ಯೋತ್ಸವ ದಿನದಂದು ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಗಳು ಭಾಷಣ ಮಾಡುತ್ತಾರೆ. ಅದು ಕೂಡ ಗಣರಾಜ್ಯೋತ್ಸವದ ಮುನ್ನಾ ದಿನ, ಅಂದರೆ ಜ.25ರಂದು (ನಿನ್ನೆ ರಾತ್ರಿ ದ್ರೌಪದಿ ಮುರ್ಮು ಭಾಷಣ ಮಾಡಿದರು). ======= ಕರ್ತವ್ಯಪಥದಲ್ಲಿಲಕ್ಕುಂಡಿ ವೈಭವ - ಕರ್ನಾಟಕದ ಸ್ತಬ್ಧಚಿತ್ರದ ಮೆರವಣಿಗೆ

ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಕರ್ನಾಟಕದ ಲಕ್ಕುಂಡಿ ದೇಗುಲ ಆಯ್ಕೆಯಾಗಿದೆ. ಜೈನ ಮಂದಿರಗಳಲ್ಲಿ ಕರ್ನಾಟಕದ ಗದಗ ಜಿಲ್ಲೆಯಲ್ಲಿರುವ ಲಕ್ಕುಂಡಿಯ ಬ್ರಹ್ಮ ಜಿನಾಲಯದ ಸ್ತಬ್ಧಚಿತ್ರ ಗಮನಸೆಳೆಯಲಿದೆ. ಈ ದೇಗುಲವನ್ನು 11ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರ ಅವಧಿಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದ ಶೈಲಿಯು ಕುಕನೂರಿನ ಶಿವ ದೇಗುಲವನ್ನು ಹೋಲುತ್ತಿದ್ದು, ಚಾಲುಕ್ಯರ ಅವಧಿಯ ಆರಂಭ ಹಾಗೂ ಅಂತ್ಯದ ಶೈಲಿಗಳ ನಡುವಿನ ಪರಿವರ್ತನೆಯ ಹಂತವನ್ನು ಪ್ರತಿನಿಧಿಸುತ್ತದೆ. --

ಹುತಾತ್ಮ ಯೋಧರಿಗೆ ಪ್ರಧಾನಿ ನಮನ

ಗಣರಾಜ್ಯೋತ್ಸವದ ಮುಂಜಾನೆ ಪ್ರಧಾನ ಮಂತ್ರಿಗಳು ವಾಡಿಕೆಯಂತೆ ಇಂಡಿಯಾ ಗೇಟ್‌ ವೃತ್ತದ ಬಳಿ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ.

ವಾಯುಪಡೆಯ‘ಫ್ಲೈಪಾಸ್ಟ್‌’ ಪ್ರದರ್ಶನ

ಗಣರಾಜ್ಯೋತ್ಸವದಲ್ಲಿ ಭಾರತೀಯ ವಾಯುಪಡೆಯೂ ತನ್ನ ಶಕ್ತಿ ಪ್ರದರ್ಶಿಸಲಿದ್ದು, ಇದರ ಭಾಗವಾಗಿ ವಿವಿಧ ವಿಮಾನಗಳಿಂದ ‘ಫ್ಲೈಪಾಸ್ಟ್‌’ ವೈಮಾನಿಕ ಪ್ರದರ್ಶನ ನಡೆಯಲಿದೆ. ಇದರಲ್ಲಿ ರಫೆಲ್, ಸುಖೋಯ್‌-30, ಎಂಕೆಐ, ಸಿ-130ಜೆ ಹರ್ಕ್ಯುಲಸ್‌ ಸೇರಿ 47 ಯುದ್ಧ ವಿಮಾನಗಳು ಭಾಗವಹಿಸಲಿವೆ. ಈ ಲೋಹದ ಹಕ್ಕಿಗಳು ವಿವಿಧ ವಿನ್ಯಾಸಗಳಲ್ಲಿ ಬಾನೆತ್ತರದಲ್ಲಿ ಹಾರಾಡುವುದ ಜತೆಗೆ ಸೇನಾ ಶಕ್ತಿ ಹಾಗೂ ತಾಂತ್ರಿಕ ಅಭಿವೃದ್ಧಿಗೆ ಕನ್ನಡಿ ಹಿಡಿಯುತ್ತವೆ. --

ಸಾಹಸಿ ಯೋಧರಿಗೆ ಶೌರ್ಯಪ್ರಶಸ್ತಿ ತಮ್ಮ ಶೌರ್ಯ ಸಾಹಸಗಳಿಗೇ ಹೆಸರಾಗಿರುವವರು ಭಾರತೀಯ ಯೋಧರು. ಇಂತಹ ಸೈನಿಕರಿಗೆ ಗಣರಾಜ್ಯೋತ್ಸವದಂದು ಶೌರ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಈ ಬಾರಿ 11 ಮರಣೋತ್ತರ ಸೆರಿದಂತೆ ಸಶಸ್ತ್ರ ಪಡೆಯ 93 ಸಿಬ್ಬಂದಿಗಳಿಗೆ ಪ್ರಶಸ್ತಿ ಘೋಷಣೆಯಾಗಿದೆ. ಇವರ ಹೆಸರುಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಘೋಷಿಸಿದ್ದಾರೆ.

ಜ.29ರ ವರೆಗೆ ಗಣರಾಜ್ಯದ ಸಂಭ್ರಮ

ಗಣರಾಜ್ಯೋತ್ಸವವನ್ನು ಜ.26ರಂದು ಆಚರಿಸಲಾಗುತ್ತದೆಯಾದರೂ ಅದರ ಕಾರ್ಯಕ್ರಮಗಳು ಜ.23ರಂದೇ ಮೊದಲ್ಗೊಂಡು ಜ.29ರಂದು ಸಂಪನ್ನಗೊಳ್ಳುತ್ತವೆ. ಈ ಸಂಭ್ರಮದ ಕೊನೆಯ ಘಟ್ಟವೇ ಬೀಟಿಂಗ್ ರೀಟ್ರೀಟ್‌ ಕಾರ್ಯಕ್ರಮ. ಜ.29ರ ಸಂಜೆ ರಾಷ್ಟ್ರಪತಿಯವರ ಅಧ್ಯಕ್ಷತೆಯಲ್ಲಿ ದೆಹಲಿಯ ವಿಜಯ್ ಚೌಕ್‌ನಲ್ಲಿ ಇದು ಜರುಗಲಿದೆ. ಸೈನ್ಯದ ಸಂಗೀತ ವಾದನದೊಂದಿಗೆ ಭಾರತೀಯ ಸೈನಿಕರು ಪಥಸಂಚಲನ ನಡೆಸಲಿದ್ದು, ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್‌ ಕೂಡ ಆಗಿರುವ ರಾಷ್ಟ್ರಪತಿಗಳು ಸಲ್ಯೂಟ್‌ ಸ್ವೀಕರಿಸುತ್ತಾರೆ. ಇದರೊಂದಿಗೆ ಗಣರಾಜ್ಯೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಅಂತ್ಯವಾಗುತ್ತದೆ.

Share this article