ಸಾರಾಂಶ
ಕನ್ನಡ ಎಂದಾಕ್ಷಣ ಕನ್ನಡಿಗರಿಗೆ ಮೈಮನ ನವಿರೇಳುವುದು ಸಹಜ. ಆದರೆ ಉದ್ಯೋಗ, ವಿದ್ಯಾಭ್ಯಾಸ ಇನ್ನಿತರೆ ಕಾರಣಕ್ಕಾಗಿ ದೇಶ ಬಿಟ್ಟು ವಿದೇಶದಲ್ಲಿ ನೆಲೆಸಿದ ಕನ್ನಡಿಗರ ಕಥೆ ಏನು ಎನ್ನುವುದು ಸಹಜವಾಗಿ ಮೂಡುವ ಪ್ರಶ್ನೆ.
ಪ್ರಶಾಂತ್ ಕೆ.ಪಿ.
ಕನ್ನಡ ಎಂದಾಕ್ಷಣ ಕನ್ನಡಿಗರಿಗೆ ಮೈಮನ ನವಿರೇಳುವುದು ಸಹಜ. ಆದರೆ ಉದ್ಯೋಗ, ವಿದ್ಯಾಭ್ಯಾಸ ಇನ್ನಿತರೆ ಕಾರಣಕ್ಕಾಗಿ ದೇಶ ಬಿಟ್ಟು ವಿದೇಶದಲ್ಲಿ ನೆಲೆಸಿದ ಕನ್ನಡಿಗರ ಕಥೆ ಏನು ಎನ್ನುವುದು ಸಹಜವಾಗಿ ಮೂಡುವ ಪ್ರಶ್ನೆ. ಎಲ್ಲೇ ಇರು, ಹೇಗೇ ಇರು ಎಂದೆಂದಿಗೂ ನೀ ಕನ್ನಡಿಗನಾಗಿರು ಎನ್ನುವ ರಾಷ್ಟ್ರಕವಿ ಕುವೆಂಪು ಅವರ ಮಾತನ್ನು ಚಾಚು ತಪ್ಪದೆ ಪಾಲಿಸುವುದರಲ್ಲಿ ಅನಿವಾಸಿ ಕನ್ನಡಿಗರು ಎತ್ತಿದ ಕೈ. ಅವರು ಪ್ರಪಂಚದ ಯಾವುದೇ ಮೂಲೆಯಲ್ಲಿ ನೆಲೆಸಿದ್ದರೂ ಕನ್ನಡಕ್ಕಾಗಿ ಅವರ ಮನಗಳು ಮಿಡಿಯುತ್ತವೆ.
ತಾವು ಇದ್ದ ಸ್ಥಳದಲ್ಲೇ ಕನ್ನಡ ಸಂಘಗಳನ್ನು ಸ್ಥಾಪಿಸಿ ಆ ಮೂಲಕ ಎಲ್ಲ ಕನ್ನಡಿಗರೂ ಒಂದೆಡೆ ಸೇರಿಸಿ ನಾಡ ಹಬ್ಬಗಳು, ಧಾರ್ಮಿಕ ಹಬ್ಬ ಹರಿದಿನಗಳನ್ನು ಆಚರಿಸಿ ಕನ್ನಡದ ಕಂಪನ್ನು ಎಲ್ಲೆಡೆ ಬೀರುವಲ್ಲಿ ಅವರು ನಿರತರಾಗಿದ್ದಾರೆ. ತಮ್ಮ ಕಾರ್ಯಕ್ರಮಗಳಿಗೆ ಅಲ್ಲಿನ ಸ್ಥಳೀಯ ವಿದೇಶಿ ಗಣ್ಯರನ್ನು ಆಹ್ವಾನಿಸಿ ನಮ್ಮ ಪರಂಪರೆ, ಧಾರ್ಮಿಕ ಕಾರ್ಯಕ್ರಮಗಳ ಮಜಲುಗಳನ್ನು ಪರಿಚಯಿಸುತ್ತಿದ್ದಾರೆ. ಅಲ್ಲದೆ ತಮ್ಮ ಮಕ್ಕಳಿಗೂ ಕನ್ನಡದ ಅಕ್ಷರಾಭ್ಯಾಸ ಮಾಡಿಸುತ್ತಿದ್ದಾರೆ. ಈ ಮೂಲಕ ಕನ್ನಡತನವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಹೀಗೆ ಕನ್ನಡಕ್ಕಾಗಿ ದುಡಿಯುತ್ತಿರುವ ಒಂದಿಷ್ಟು ಅನಿವಾಸಿ ಕನ್ನಡ ಮನಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ.
ಗಣಪತಿ ಭಟ್, ಲಂಡನ್, ಇಂಗ್ಲೆಂಡ್: ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನವರು. ಎಂಜಿನಿಯರಿಂಗ್ ಪದವಿ ನಂತರ ಐಟಿ ವೃತ್ತಿ. ೧೮ ವರ್ಷಗಳಿಂದ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದಾರೆ. ಕನ್ನಡಿಗರು ಯುಕೆ ಸಂಸ್ಥೆಯ ನಿರ್ದೇಶಕರು, 2016ರಿಂದ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕನ್ನಡ ಕಲಿ, ಸಾಹಿತ್ಯ, ಕಲೆ, ಸಂಗೀತ, ರಂಗಭೂಮಿ ಮತ್ತು ಚಲನಚಿತ್ರಗಳ ಮೂಲಕ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ವಿದೇಶದಲ್ಲಿ ಪಸರಿಸುವ ನಿಟ್ಟಿನಲ್ಲಿ ಹಲವು ನವೀನ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದಾರೆ.
ರವಿ ಮಹದೇವ್, ಸೌದಿ ಅರೇಬಿಯಾ: ಮೂಲತಃ ಮೈಸೂರಿಗರು. ನೆಲೆ ಟ್ರಸ್ಟ್ ಅಧ್ಯಕ್ಷರು ಮತ್ತು ‘ಲೆಟ್ಸ್ ಸ್ಪೀಕ್ ಅಪ್’ ಅಭಿಯಾನದ ಸ್ಥಾಪಕರು. ನೆಲೆ ಟ್ರಸ್ಟ್ ಸಾಮಾಜಿಕ ಬದಲಾವಣೆಗಾಗಿ ಕೆಲಸ ಮಾಡುತ್ತಿದೆ. ಅವರು ಸಮಾಜ ಸಬಲೀಕರಣ, ಶಿಕ್ಷಣ, ಆರೋಗ್ಯ ಹಾಗೂ ಸಮುದಾಯ ಕಲ್ಯಾಣದ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದಾರೆ. ರವಿ ಮಹಾದೇವ ಅವರು ದೇಶದೊಳಗಿನ ಮತ್ತು ವಿದೇಶದಲ್ಲಿನ ಭಾರತೀಯರನ್ನು ಸಾಮಾಜಿಕ ಬದಲಾವಣೆಯ ದಿಕ್ಕಿನಲ್ಲಿ ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದಾರೆ.
ವೆಂಕಟ ರತ್ಯಯ್ಯ, ಸಿಂಗಾಪುರ: ಬಳ್ಳಾರಿ ಜಿಲ್ಲೆಯ ಹೊಸಪೇಟೆಯವರು. ತಾಂತ್ರಿಕ ಕ್ಷೇತ್ರದಲ್ಲಿನ ಕೆಲಸದ ನಂತರ ಸಿಂಗಪುರದಲ್ಲಿ ವಿದ್ಯಾಸಂಸ್ಥೆಯೊಂದರಲ್ಲಿ ಟೆಮಸೆಕ್ ಪಾಲಿಟೆಕ್ನಿಕ್‌ನಲ್ಲಿ ಸಂಶೋಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದ ಮೇಲೆ ಅಪಾರ ಅಭಿಮಾನ, ಕನ್ನಡ ಸಂಘ (ಸಿಂಗಪುರ)ದ ಕಾರ್ಯಕ್ರಮಗಳಲ್ಲಿ 1999ರಿಂದ ಸ್ವಯಂ -ಸೇವಕನಾಗಿ ಪಯಣ. 2021ರಿಂದ 2025 ರ ಅವಧಿಗೆ ಅಧ್ಯಕ್ಷರಾಗಿ ಸೇವೆ. ಕಾರ್ಯಕ್ರಮಗಳ ನಿರ್ವಹಣೆ, ನಿರೂಪಣೆ, ನಾಟಕಗಳಲ್ಲಿ ಅಭಿನಯಿಸಿದ್ದಾರೆ. 15 ವರ್ಷಗಳಿಂದ ಕನ್ನಡ ಕಲಿಯ ಭಾಗವಾಗಿ ನಿರಂತರ ಸೇವೆಸಲ್ಲಿಸುತ್ತಿದ್ದಾರೆ.
ಸುಶಾಂತ್ ಶಾಂತಾರಾಮ್, ಆಸ್ಟ್ರೇಲಿಯಾ: ಮೈಸೂರು ಮೂಲದ ಇವರು, ವೃತ್ತಿಯಿಂದ ಐಟಿ ಎಂಜಿನಿಯರ್, 2008ರಲ್ಲಿ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ‘ಪುರಂದರ ನಮನಾ’ ನಾಟಕ ನಿರ್ದೇಶಿಸಿ, ನಟಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಅದೇ ವರ್ಷ ತಂದೆಯ ಅಗಲಿಕೆಯಿಂದ ದುಃಖಿತನಾದ ಸುಶಾಂತ್, ತಂದೆಯ ಸ್ಮರಣಾರ್ಥ ಪರ್ತ್ ನಗರದಲ್ಲಿ ‘ಶಾಂತ ರಂಗ’ ರಂಗಸಂಸ್ಥೆ ಆರಂಭಿಸಿದರು. 2015ರಿಂದ ಕನ್ನಡ ಹಾಗೂ ಹಿಂದಿ ನಾಟಕಗಳನ್ನು ಯಶಸ್ವಿಯಾಗಿ ನಿರ್ದೇಶಿಸಿ, ನಟಿಸಿದ್ದಾರೆ.
ಡಾ। ಮೂಡಂಬೈಲ್ ರವಿ ಶೆಟ್ಟಿ, ದೋಹಾ: ಕತಾರ್‌ನಲ್ಲಿ ತಮ್ಮದೇ ಎಟಿಎಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾಗಿ ಎರಡೂವರೆ ದಶಕಗಳಿಂದ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಸಂಸ್ಥೆಯಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಅವಕಾಶ ಕಲ್ಪಿಸಿದ್ದಾರೆ. ಕತಾರಿನ ತುಳುಕೂಟ, ಬಂಟ್ಸ್ ಸಂಘ ಸೇರಿದಂತೆ ವಿವಿಧ ಸಂಘಗಳ ಮೂಲಕ ಸಕ್ರಿಯರಾಗಿದ್ದು, ಕಲಾವಿದರಿಗೆ, ಕರ್ನಾಟಕ ಸಾಂಸ್ಕೃತಿಕ ತಂಡಗಳಿಗೆ ಕನ್ನಡದ ಕಂಪನನ್ನು ಪಸರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ‘ಯಕ್ಷಗಾನ’, ‘ಕಬಡ್ಡಿ’ಯನ್ನು ಕತಾರ್‌ಗೆ ಪರಿಚಯಿಸಿದ ಪ್ರಥಮರು.
ಕಿರಣ್ ಉಪಾಧ್ಯಾಯ, ಬಹರೈನ್: ವೃತ್ತಿಯಲ್ಲಿ ಎಂಜಿನಿಯರ್. ಬಳಿಕ ಉದ್ಯಮಿ. ಬಹರೈನ್‌ನಲ್ಲಿ ಇದ್ದರೂ ಕನ್ನಡ ಸೇವೆಯಾಗಿಯೇ ಜೀವನ ಮುಡಿಪು. ಯಕ್ಷಗಾನವನ್ನು ವಿದೇಶಿ ನೆಲದಲ್ಲಿ ಪ್ರದರ್ಶನ ಏರ್ಪಡಿಸುವ ಮೂಲಕ ನಾಡ ಸಂಸ್ಕೃತಿ, ಪರಂಪರೆಯನ್ನು ವಿದೇಶದಲ್ಲಿಯೂ ಪ್ರಚುರಪಡಿಸುತ್ತಿದ್ದಾರೆ. ಬಹರೈನ್‌ನಲ್ಲಿ ಕನ್ನಡ ಭವನ ನಿರ್ಮಾಣ ಕಾರ್ಯದಲ್ಲಿ ಇವರ ಪಾತ್ರ ಪ್ರಮುಖವಾಗಿದೆ.
ಝಕಾರಿಯಾ, ಸೌದಿ ಅರೇಬಿಯಾ: ಮೂಲತಃ ಜೋಕಟ್ಟೆಯವರು. ಸೌದಿ ಅರೇಬಿಯಾ ಜುಬೈಲ್‌ನ ಅಲ್ ಮುಝೈನ್ ಕಂಪೆನಿ ಸಂಸ್ಥಾಪಕ ಹಾಗೂ ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು. ಶಿಕ್ಷಣ ಸಂಸ್ಥೆಗೂ ಕೈಯಾಡಿಸಿರುವ ಅವರು ಅಲ್ ಕೋಬರ್‌ನಲ್ಲಿ ಯೇನೆಪೋಯ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದ್ದು, ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಹೊಂದುವುದು ಮುಂದಿನ ಯೋಜನೆಯಾಗಿದೆ. ಸಹಸ್ರಾರು ಬಡ, ಅಶಕ್ತರ ಕಲ್ಯಾಣಕ್ಕಾಗಿಯೂ ದುಡಿಯುತ್ತಿದ್ದಾರೆ.
ನರೇಂದ್ರ ಶೆಟ್ಟಿ, ಸೌದಿ ಅರೇಬಿಯಾ: ಸೌದಿ ಅರೇಬಿಯಾದ ಅಂತಾರಾಷ್ಟ್ರೀಯ ಥ್ರೋಬಾಲ್ ಫೆಡರೇಷನ್‌ನ ಅಧ್ಯಕ್ಷರಾಗಿರುವ ನರೇಂದ್ರ ಶೆಟ್ಟಿ ಅವರದ್ದು ಹೇಳಿ ಮುಗಿಯದಷ್ಟು ಸಾಧನೆಗಳಿವೆ. ಕಾರಣಾಂತರಗಳಿಂದ ಮೃತಪಟ್ಟ ಕನ್ನಡಿಗರ ಮೃತದೇಹಗಳನ್ನು ಸ್ವದೇಶಕ್ಕೆ ಕಳುಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಿರಿಗನ್ನಡ ಮತ್ತು ಟೋಸ್ಟ್ ಮಾಸ್ಟರ್ ಆರಂಭಿಸಿದವರು ಇವರೇ. ಮಂಗಳೂರು ಅಸೋಸಿಯೇಶನ್ ಆಫ್ ಸೌದಿ ಅರೇಬಿಯಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಬಹುಮುಖ ಪ್ರತಿಭೆ.
ಅಮರನಾಥ ರೈ, ಬಹರೇನ್ ಕನ್ನಡ ಸಂಘ: ಬಹರೇನ್ ಕನ್ನಡಿಗರ ನಡುವೆ ಅಮರಣ್ಣ ಎಂದೇ ಜನಪ್ರಿಯರಾದ ಅಮರನಾಥ್ ರೈ ಅವರು 31 ವರ್ಷಗಳಿಂದ ಬಹರೇನ್ನಲ್ಲೇ ನೆಲೆಸಿದ್ದಾರೆ. ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಪ್ರತಿನಿಧಿಯಾಗಿ 1994ರಲ್ಲಿ ಬಹರೇನ್‌ಗೆ ತೆರಳಿದ ಅಮರನಾಥ್ ರೈ ಹಂತ ಹಂತವಾಗಿ ಬೆಳೆದು ಈಗ ಅಲ್ಲಿ ಉದ್ಯಮಿಯಾಗಿದ್ದಾರೆ. 2016ರಲ್ಲಿ ಬಹರೇನ್‌ನಲ್ಲಿ ಅರ್ಜುನ್ ದೀಪ್ ಕ್ಲೀನಿಂಗ್ ಆ್ಯಂಡ್ ಮೇಟೆಂನೆನ್ಸ್ ಕಂಪನಿ ಸ್ಥಾಪಿಸಿ ಯಶಸ್ವಿಯಾಗಿದ್ದಾರೆ. ಕನ್ನಡಿಗರ ನಡುವೆ ಮಾತ್ರವಲ್ಲದೇ ಬಹರೇನ್‌ನಲ್ಲಿ ಭಾರತೀಯರೆಲ್ಲರ ಆಪತ್ಭಾಂಧವ ಎನಿಸಿಕೊಂಡಿದ್ದಾರೆ.
ನಿಲೇಶ್ ಎಚ್.ಪಿ, ದುಬೈ:
ದುಬೈನಲ್ಲಿ ಹಣಕಾಸು ನಿರ್ವಹಣೆ ಕುರಿತು ನಾಲ್ಕು ಕಂಪನಿ ಕಟ್ಟಿ ಮುನ್ನಡೆಸುತ್ತಿರುವ ನೀಲೇಶ್ ಎಚ್.ಪಿ ಮೂಲತಃ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಹನುಮಂತಯ್ಯನಪಾಳ್ಯದವರು. ಬೆಂಗಳೂರಲ್ಲಿ ಈವೆಂಟ್ ಮ್ಯಾನೇಜ್ಮೆಂಟ್, ಮಾರ್ಕೆಟಿಂಗ್ ರಿಸರ್ಚ್ ಮತ್ತು ರಿಯಲ್ ಎಸ್ಟೇಟ್ ಕಂಪನಿಗಳನ್ನು ಮುನ್ನಡೆಸಿದವರು. ಕಳೆದ ಮೂರು ವರ್ಷಗಳಿಂದ ದುಬೈನಲ್ಲಿ ಪರ್ವ ಗ್ರೂಪ್ಸ್ ಅಡಿ ನಾಲ್ಕು ಕಂಪನಿಗಳನ್ನು ಕಟ್ಟಿ ಮುನ್ನಡೆಸುತ್ತಿದ್ದಾರೆ. ಸದ್ಯದಲ್ಲೇ ಯೂರೋಪ್ ರಾಷ್ಟ್ರಗಳಲ್ಲಿ ಶಾಖೆ ತೆರೆಯುವ ಸಿದ್ಧತೆಯಲ್ಲಿದ್ದಾರೆ.
ಶಶಿಧರ್ ನಾಗರಾಜಪ್ಪ, ದುಬೈ: ಕಳೆದ 24 ವರ್ಷಗಳಿಂದ ದುಬೈನಲ್ಲೇ ನೆಲೆಸಿರುವ ಶಶಿಧರ್ ನಾಗರಾಜಪ್ಪ ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದುಬೈ ಕರ್ನಾಟಕ ಸಂಘದ ಅಧ್ಯಕ್ಷರೂ ಆಗಿರುವ ಶಶಿಧರ್, ಕಳೆದ 11 ವರ್ಷಗಳಿಂದ ದುಬೈನಲ್ಲಿ ಕನ್ನಡ ಶಾಲೆ ನಡೆಸುತ್ತಿದ್ದಾರೆ. ಶಶಿಧರ್ ಮೂಲತಃ ಚಿತ್ರದುರ್ಗ ಜಿಲ್ಲೆಯ ಭರಮಸಾಗರದವರು. ದುಬೈನಲ್ಲಿದ್ದರೂ ಹುಟ್ಟೂರಿನ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಾರೆ. ಕನ್ನಡಿಗರಿಗೆ ದುಬೈನಲ್ಲಿ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ದುಬೈ ಕರ್ನಾಟಕ ಸಂಘದ ಮೂಲಕ ಕಾಯಕ ಭವನ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ.
ಪ್ರವೀಣಶೆಟ್ಟಿ, ಯುಎಇ: ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ ಮೂಲಕ ಯುಎಇನಲ್ಲಿ ಉದ್ಯಮ ಸಾಮ್ರಾಜ್ಯವನ್ನು ಸ್ಥಾಪಿಸಿರುವ ಪ್ರವೀಣ್ ಶೆಟ್ಟಿ, ಅಲ್ಲಿ ಕನ್ನಡ ಶಾಲೆಗಳ ಪೋಷಕ. ರಾಜ್ಯೋತ್ಸವ, ನಾಡ ಹಬ್ಬ, ಧಾರ್ಮಿಕ ಕಾರ್ಯಕ್ರಮಗಳಿಗೆ ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಹೋಟೆಲ್ ಮೂಲಕ ಹಲವರಿಗೆ ಉದ್ಯೋಗ ನೀಡಿದ್ದಾರೆ.
ಮಹೇಶ್‌ಗೌಡ, (ದೋಹಾ) ಕತಾರ್: ಹೊಸಕೋಟೆ ಮೂಲದ ಇವರು, ದೋಹಾದಲ್ಲಿ ಉದ್ಯಮಿ ಆಗಿದ್ದಾರೆ. ಕನ್ನಡ ಚಟುವಟಿಕೆಗಳಲ್ಲಿ ಸಕ್ರಿಯ ಪಾಲುದಾರ. ತಮ್ಮ ಉದ್ಯಮದ ಮೂಲಕ ಹಲವರಿಗೆ ನೌಕರಿ ನೀಡಿದ್ದಾರೆ. ಕರ್ನಾಟಕ ಸಂಘ ಕತಾರ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 2022-23ನೇ ಸಾಲಿನಲ್ಲಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಸಂಘದ ಮಾರ್ಗದರ್ಶಿ ಮಂಡಳಿಯ ಚೇರ್ಮನ್ ಆಗಿ ಕನ್ನಡಕ್ಕಾಗಿ ದುಡಿಯುತ್ತಿದ್ದಾರೆ.
ಪ್ರದೀಪ್ ಕುಮಾರ್ ಮುತ್ತಯ್ಯ ಶೆಟ್ಟಿ, ಬಹರೈನ್
ಗಲ್ಫ್ ವಿವಿ ಮತ್ತು ಅಲ್‌ಹೆಕ್ ಶಿಕ್ಷಣ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದಲ್ಲಿ 20 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಸಂಘ ಕತಾರ್‌ನಲ್ಲಿ 7 ವರ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೀರ್ತಿ. ಕನ್ನಡ ಸಂಘ ನಿರ್ಮಾಣಕ್ಕೆ ಇವರ ಪಾತ್ರ ಪ್ರಮುಖವಾಗಿದೆ. ಬಹರೈನ್‌ನಲ್ಲಿ ಪ್ರಥಮ ಅಂತಾರಾಷ್ಟ್ರೀಯ ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದಾರೆ. ಕೋವಿಡ್ ಸಮಯದಲ್ಲಿ ಸಾವಿರಾರು ಜನರಿಗೆ ಆಹಾರ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ
;Resize=(690,390))
)
)
;Resize=(128,128))
;Resize=(128,128))
;Resize=(128,128))