ಕುಂದಾನಗರಿಯಲ್ಲಿ ಕನ್ನಡ ಕಲರವಕ್ಕೆ ಸಜ್ಜು

| Published : Nov 01 2025, 03:15 AM IST

ಕುಂದಾನಗರಿಯಲ್ಲಿ ಕನ್ನಡ ಕಲರವಕ್ಕೆ ಸಜ್ಜು
Share this Article
  • FB
  • TW
  • Linkdin
  • Email

ಸಾರಾಂಶ

ಗಡಿನಾಡು ಬೆಳಗಾವಿ ನಗರವು ಕರ್ನಾಟಕ ರಾಜ್ಯೋತ್ಸವಕ್ಕೆ ಮದುವಣಗಿತ್ತಿಯಂತೆ ಸಜ್ಜುಗೊಂಡಿದೆ. ಇಡೀ ನಗರವೇ ಕನ್ನಡಮಯವಾಗಿದೆ. ಎಲ್ಲೆಲ್ಲೂ ಕೆಂಪು ಹಳದಿ ಬಣ್ಣದ ಕನ್ನಡಬಾವುಟ ರಾರಾಜಿಸುತ್ತಿವೆ. ರಾಜ್ಯೋತ್ಸವದ ಸಂಭ್ರಮಕ್ಕೆ ಕನ್ನಡಿಗರು, ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದೆ ವೇಳೆ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ನಾಯಕರಿಗೆ ಜಿಲ್ಲಾಡಳಿತ ಬೆಳಗಾವಿ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗಡಿನಾಡು ಬೆಳಗಾವಿ ನಗರವು ಕರ್ನಾಟಕ ರಾಜ್ಯೋತ್ಸವಕ್ಕೆ ಮದುವಣಗಿತ್ತಿಯಂತೆ ಸಜ್ಜುಗೊಂಡಿದೆ. ಇಡೀ ನಗರವೇ ಕನ್ನಡಮಯವಾಗಿದೆ. ಎಲ್ಲೆಲ್ಲೂ ಕೆಂಪು ಹಳದಿ ಬಣ್ಣದ ಕನ್ನಡಬಾವುಟ ರಾರಾಜಿಸುತ್ತಿವೆ. ರಾಜ್ಯೋತ್ಸವದ ಸಂಭ್ರಮಕ್ಕೆ ಕನ್ನಡಿಗರು, ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದೆ ವೇಳೆ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ನಾಯಕರಿಗೆ ಜಿಲ್ಲಾಡಳಿತ ಬೆಳಗಾವಿ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದೆ.

ನಗರದ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ವೃತ್ತ ರಾಜ್ಯೋತ್ಸವ ಮೆರವಣಿಗೆ ವಿಶೇಷ ಆಕರ್ಷಣೆಯಾಗಿದೆ. ಚನ್ನಮ್ಮನ ಆಶ್ವಾರೂಢ ಪ್ರತಿಮೆಯನ್ನು ಝಗಮಗಿಸುವ ವಿದ್ಯುತ್‌ ದೀಪಾಲಂಕಾರಗಳಿಂದ ಶೃಂಗರಿಸಲಾಗಿದೆ. ಈ ವೃತ್ತದಲ್ಲಿ ಮೆರವಣಿಗೆ ವೀಕ್ಷಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಜನರಿಗೆ ಅನುಕೂಲವಾಗುವಂತೆ ಆಸನಗಳ ವ್ಯವಸ್ಥೆಯನ್ನು ಮಾಡಿದೆ. ನಗರದ ಪ್ರಮುಖ ಮಾರ್ಗಗಳಲ್ಲಿ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಬಳಿಕ ಬೃಹತ್‌ ಸ್ವಾಗತ ಕಮಾನು ಕೂಡ ನಿರ್ಮಿಸಲಾಗಿದೆ. ನಗರದಲ್ಲಿ ಎಲ್ಲಿ ನೋಡಿದ್ದಲ್ಲಿ ಹಳದಿ ಮತ್ತು ಕೆಂಪು ಬಣ್ಣ ಹೊಂದಿರುವ ನಾಡಧ್ವಜಗಳು ರಾರಾಜಿಸುತ್ತಿವೆ. ಬೆಳಗ್ಗೆ 9.30ಕ್ಕೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಧ್ವಜಾರೋಹಣ ನೆರವೇರಿಸುವರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ. ಸಂಗೊಳ್ಳಿ ರಾಯಣ್ಣ ರಸ್ತೆ, ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಶೋಕ ವೃತ್ತ, ಬೋಗಾರವೇಸ್‌ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಕನ್ನಡಪರ ಸಂಘಟನೆಗಳು ರಾಜ್ಯೋತ್ಸವ ಶುಭಾಶಯ ಕೋರಿರುವ ಬ್ಯಾನರ್‌, ಕಟೌಟ್‌ಗಳನ್ನು ಹಾಕಲಾಗಿದೆ. ಹೀಗೆ ಇಡೀ ನಗರವೇ ಕನ್ನಡದ ಹಬ್ಬಕ್ಕೆ ಸಜ್ಜುಗೊಂಡಿದೆ.ವಿವಿಧ ಕನ್ನಡಪರ ಸಂಘಟನೆಗಳು ಚನ್ನಮ್ಮವೃತ್ತದ ಬಳಿಯ ಕಾಕತಿವೇಸ್‌ ರಸ್ತೆ ಮಾರ್ಗದಲ್ಲಿ ವೇದಿಕೆಗಳನ್ನು ನಿರ್ಮಿಸಿಕೊಂಡಿವೆ. ರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ಕನ್ನಡಿಗರ ಮೇಲೆ ಪುಷ್ಪವೃಷ್ಟಿ ಸುರಿಸಿ, ಸ್ವಾಗತಿಸಲು ಕನ್ನಡ ಸಂಘಟನೆಗಳು ಸಿದ್ಧಗೊಂಡಿವೆ. ಬೆಳಗಾವಿಯಲ್ಲಿ ರಾಜ್ಯದಲ್ಲೇ ಅದ್ಧೂರಿಯಿಂದ ರಾಜ್ಯೋತ್ಸವ ಆಚರಿಸುತ್ತ ಬರಲಾಗುತ್ತಿದೆ. ರಾಜ್ಯೋತ್ಸವದ ರೂಪಕ ವಾಹನಗಳ ಅದ್ಧೂರಿ ಮೆರವಣಿಗೆ ವೀಕ್ಷಿಸಲು ಎರಡು ಕಣ್ಣು ಸಾಲದು. ಜಿಲ್ಲೆಯ ಮೂಲೆ ಮೂಲೆಗಳಿಂದ ಲಕ್ಷಾಂತರ ಕನ್ನಡಿಗರು ಸೇರಿ ಆಚರಿಸುವ ರಾಜ್ಯೋತ್ಸವದ ಸಂಭ್ರಮಕ್ಕೆ ಪಾರವೇ ಇರದು. ಚಿಕ್ಕಮಕ್ಕಳಿಂದ ಆದಿಯಾಗಿ ಎಲ್ಲರೂ ಕುಣಿದು ಕುಪ್ಪಳಿಸಿ, ಸಂಭ್ರಮಿಸುತ್ತಾರೆ. ಕನ್ನಡ ಸಾಹಿತ್ಯ ಭವನದ ಬಳಿ ಕನ್ನಡ ಬಾವುಟ, ಶಲ್ಯ, ಟಿ ಶರ್ಟ್‌ ಮಾರಾಟ ಭರ್ಜರಿಯಾಗಿ ನಡೆದಿದೆ.ನಗರದ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಿಂದ ಭುವನೇಶ್ವರಿ ದೇವಿ ಅದ್ಧೂರಿ ಮೆರವಣಿಗೆ ಹೊರಡಲಿದ್ದು, ಕಾಕತಿವೇಸ್‌, ಶನಿವಾರಕೂಟ, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಕಿರ್ಲೋಸ್ಕರ್‌ ರಸ್ತೆ ಮಾರ್ಗವಾಗಿ ಬೋಗಾರವೇಸ ವೃತ್ತದ ಮೂಲಕ ಹಾಯ್ದು ಕಾಲೇಜು ರಸ್ತೆಯ ಲಿಂಗರಾಜ ಕಾಲೇಜು ಮೈದಾನಕ್ಕೆ ಆಗಮಿಸಿ, ಮೆರವಣಿಗೆ ವಿಸರ್ಜನೆಯಾಗಲಿದೆ.ಬಿಗಿ ಪೊಲೀಸ್‌ ಬಂದೋಬಸ್ತ್‌:

ರಾಜ್ಯೋತ್ಸವ ಮೆರವಣಿಗೆ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ಅಲ್ಲದೇ, ನಗರದ ಸಂಚಾರ ಮಾರ್ಗದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಸಮಾಜ ಘಾತುಕ ಶಕ್ತಿಗಳ ಮೇಲೆ ಹದ್ದಿನ ಕಣ್ಣಿಡಲು ಡ್ರೋಣ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಶಾಂತಿಯುತವಾಗಿ ರಾಜ್ಯೋತ್ಸವ ಮೆರವಣಿಗೆ ನಡೆಯಲು ಪೊಲೀಸ್‌ ಇಲಾಖೆಯೊಂದಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ನಗರ ಪೊಲೀಸ್‌ ಆಯುಕ್ತ ಭೂಷಣ ಬೋರಸೆ ಮನವಿ ಮಾಡಿದ್ದಾರೆ.ರಾಜ್ಯೋತ್ಸವಕ್ಕೆ ₹ 50 ಲಕ್ಷ ಬಿಡುಗಡೆ:

ರಾಜ್ಯದಲ್ಲೇ ಬೆಳಗಾವಿಯಲ್ಲಿ ರಾಜ್ಯೋತ್ಸವವನ್ನು ಅತೀ ಅದ್ಧೂರಿಯಿಂದ ಆಚರಿಸಲಾಗುತ್ತದೆ. ರಾಜ್ಯೋತ್ಸವಕ್ಕೆ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ₹50 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಈ ಮೂಲಕ ಕನ್ನಡಪರ ಸಂಘಟನೆಗಳ ಬಹುದಿನದ ಬೇಡಿಕೆ ಈಡೇರಿದಂತಾಗಿದೆ. ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರ ನೇತೃತ್ವದ ಕನ್ನಡಿಗರ ನಿಯೋಗವೊಂದು ಕಾನೂನು, ಪ್ರವಾಸೋದ್ಯಮ ಹಾಗೂ ಗಡಿ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ, ಬೆಳಗಾವಿ ರಾಜ್ಯೋತ್ಸವಕ್ಕೆ ₹ 2 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿತ್ತು. ಇದಕ್ಕೆ ಸ್ಪಂದಿಸಿದ ಸಚಿವ ಎಚ್‌.ಕೆ.ಪಾಟೀಲ ಅವರು ತಮ್ಮ ಪ್ರವಾಸೋದ್ಯಮ ಇಲಾಖೆಯಿಂದ ₹ 50 ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ.ಕರ್ನಾಟಕ ರಚನೆಯಾಗಿ 70 ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರ ರಾಜ್ಯೋತ್ಸವಕ್ಕೆ ಅನುದಾನ ನೀಡಿರಲಿಲ್ಲ. ಕನ್ನಡ ಸಂಘಟನೆಗಳ ಬೇಡಿಕೆಗೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇವಲ ₹ 1 ಲಕ್ಷ ಅನುದಾನ ಮಂಜೂರು ಮಾಡಿತ್ತು. ಇಡೀ ಕರ್ನಾಟಕದಲ್ಲೇ ಅದ್ಧೂರಿ, ವೈಭವದ ರಾಜ್ಯೋತ್ಸವ ಮೆರವಣಿಗೆ ಬೆಳಗಾವಿಯಲ್ಲಿ ನಡೆಯುತ್ತದೆ. ಸುಮಾರು 6 ಲಕ್ಷ ಜನರು ಕನ್ನಡಿಗರು ಪಾಲ್ಗೊಂಡು ಸಂಭ್ರಮಿಸುತ್ತಾರೆ. ಹಾಗಾಗಿ, ₹ 2 ಕೋಟಿ ಅನುದಾನ ನೀಡುವಂತೆ ಕನ್ನಡಪರ ಸಂಘಟನೆಗಳು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದವು. ಕೊನೆಗೂ ಸರ್ಕಾರ ₹ 50 ಲಕ್ಷ ಅನುದಾನ ಬಿಡುಗಡೆ ಮಾಡಿದೆ.ಮಹಾ ನಾಯಕರಿಗೆ ಪ್ರವೇಶ ನಿರ್ಬಂಧ:

ನ.1ರ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಜಿಲ್ಲಾಡಳಿತವು ಮಹಾರಾಷ್ಟ್ರದ ಸಂಸದ ಧೈರ್ಯಶೀಲ್ ಮಾನೆ ಸೇರಿದಂತೆ ಹಲವರಿಗೆ ಜಿಲ್ಲಾ ಪ್ರವೇಶ ನಿರ್ಬಂಧವನ್ನು ವಿಧಿಸಿದೆ. ಎಂಇಎಸ್‌ ಕರಾಳ ದಿನಾಚರಣೆಗೆ ಮಹಾರಾಷ್ಟ್ರ ನಾಯಕರಿಗೆ ಆಹ್ವಾನ ನೀಡಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಸಂಸದ ಧೈರ್ಯಶೀಲ ಮಾನೆ, ಕೊಲ್ಲಾಪುರ ಶಿವಸೇನೆ ಉದ್ಧವ್ ಬಾಳಾಸಾಹೇಬ್ ಠಾಕ್ರೆ. ಘಟಕದ ಜಿಲ್ಲಾಧ್ಯಕ್ಷ ವಿಜಯ ದೇವಣೆ, ಕೊಲ್ಲಾಪುರ ಶಿವಸೇನೆಯ ಉಪಾಧ್ಯಕ್ಷ ಸಂಜಯ್‌ ಪೋವಾ‌, ಶಿವಸೇನಾ, ಕೊಲ್ಲಾಪೂರ ಗ್ರಾಮೀಣ ಪ್ರಮುಖರಾದ ಸುನೀಲ ಶಿಂತ್ರೆ, ಜಿಲ್ಲಾಪೂರ ನಗರ ಪ್ರಮುಖರಾದ ಸುನೀಲ್ ಮೋದಿ ಸೇರಿದಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆಯ ಬೆಂಬಲಿಗರು ಬೆಳಗಾವಿ ನಗರವನ್ನು ಪ್ರವೇಶಿಸದಂತೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ ಆದೇಶ ಹೊರಡಿಸಿದ್ದಾರೆ.ಬೆಳಗಾವಿ ಕನ್ನಡ ಸಂಘಟನೆಗಳ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ ರಾಜ್ಯೋತ್ಸವಕ್ಕೆ ₹ 50 ಲಕ್ಷ ಅನುದಾನ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಗಡಿ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಅವರ ಕ್ರಮ ಅಭಿನಂದನಾರ್ಹ.

ಅಶೋಕ ಚಂದರಗಿ,

ಕನ್ನಡ ಹೋರಾಟಗಾರ.