ಸಾರಾಂಶ
ಎಲ್ಲಿಂದಲೋ ಬೀಳುತ್ತಿದ್ದೇನೆ, ಎಲ್ಲಿಂದ ಎಂಬುದು ತಿಳಿಯುತ್ತಿಲ್ಲ. ಸುತ್ತಲೂ ಕತ್ತಲೆ. ತಣ್ಣಗಿನ ವಾತಾವರಣ. ಅಷ್ಟರಲ್ಲಿ ಸಂಪೂರ್ಣ ಕೆಳಗೆ ಬಿದ್ದಾಗಿತ್ತು, ಮೆತ್ತನೆಯ ಹಾಸಿಗೆ ಮೇಲೆ; ಸದ್ಯ ಬದುಕಿದೆ... ಎರಡೂ ಕಣ್ಣಿನ ದೃಷ್ಟಿ ಕಳೆದುಕೊಂಡ ನಂತರ : ಕತ್ತಲ ಹಗಲುಗಳು
ಎಲ್ಲಿಂದಲೋ ಬೀಳುತ್ತಿದ್ದೇನೆ, ಎಲ್ಲಿಂದ ಎಂಬುದು ತಿಳಿಯುತ್ತಿಲ್ಲ. ಸುತ್ತಲೂ ಕತ್ತಲೆ. ತಣ್ಣಗಿನ ವಾತಾವರಣ. ಅಷ್ಟರಲ್ಲಿ ಸಂಪೂರ್ಣ ಕೆಳಗೆ ಬಿದ್ದಾಗಿತ್ತು, ಮೆತ್ತನೆಯ ಹಾಸಿಗೆ ಮೇಲೆ; ಸದ್ಯ ಬದುಕಿದೆ... ಯಾರೋ ನಡೆದು ಬರುತ್ತಿರುವ ಹೆಜ್ಜೆ ಸಪ್ಪಳ. ಬಂದವರು ಮೆಲುದನಿಯಲ್ಲಿ “ನೀನು ರಿಕವರಿ ವಾರ್ಡಿನಲ್ಲಿದ್ದೀಯ” ಎಂದರು. “ಇವತ್ತು ಯಾವ ವಾರ?” ಎಂದೆ. “ಗುರುವಾರ”. “ಟೈಮೆಷ್ಟು?”. “ಏಳೂವರೆ”. “ಬೆಳಿಗ್ಗೆನೊ? ರಾತ್ರಿನೊ?”. “ರಾತ್ರಿ”. ಅಂದರೆ ಎರಡೂವರೆ ದಿನಗಳ ನಂತರ ನನಗೆ ಎಚ್ಚರವಾಗಿತ್ತು!
ಎರಡೂ ಕಣ್ಣಿನ ದೃಷ್ಟಿ ಕಳೆದುಕೊಂಡ ಮೂರು ದಿನಗಳ ನಂತರ ಅಂದರೆ ಮಂಗಳವಾರ ಬೆಳಿಗ್ಗೆ ಹತ್ತರ ಸರಿಸುಮಾರಿಗೆ ಅರಿವಳಿಕೆ ತಜ್ಞ ಡಾ. ಶಿವಕುಮಾರ್ ಅವರು ಮಾತನಾಡಿಸುತ್ತಲೇ ನನ್ನ ಎಡಗೈಗೆ ಸೂಜಿ ಚುಚ್ಚಿದ್ದಷ್ಟೇ ನೆನಪು! ಈಗ ಮೆಲ್ಲನೇ ನನ್ನ ದೈಹಿಕ ಸ್ಥಿತಿಯ ಅರಿವಾಗತೊಡಗಿತ್ತು. ಎಡಗಿವಿ ಮೇಲೆ ತಲೆಯ ಒಳಗಿನಿಂದ ಪ್ಲಾಸ್ಟಿಕ್ ಪೈಪು, ಬಲಗೈಗೆ ಡ್ರಿಪ್ಪು, ಮೂತ್ರಕ್ಕೊಂದು ಪ್ಲಾಸ್ಟಿಕ್ ಚೀಲ.
ನನ್ನ ಬ್ರೈನ್ ಟ್ಯೂಮರ್ ಶಸ್ತ್ರಚಿಕಿತ್ಸೆ ಮಾಡಿದವರು ಡಾ. ಚಂದ್ರಮೌಳಿ ಎನ್ನುವ ನ್ಯೂರೋಸರ್ಜನ್. ಆಪರೇಷನ್ ಥಿಯೇಟರ್ ಪ್ರವೇಶಿಸುವ ಮುನ್ನ ಪೂರ್ವ ಪರೀಕ್ಷೆಗಳೆಲ್ಲಾ ಮುಗಿದಿದ್ದವು. ಬಿಳಿ ಉಡುಪು, ಬೋಳಿಸಿದ ತಲೆ ಮತ್ತು ಕೃತಕ ಮೂತ್ರವಿಸರ್ಜನೆ ವ್ಯವಸ್ಥೆಯ ಜೊತೆಗೆ ಇಪ್ಪತ್ನಾಕು ತಾಸುಗಳ ಉಪವಾಸ ಮಾಡಿ ಸಿದ್ಧನಾಗಿದ್ದೆ. ಅಪ್ಪ-ಅಮ್ಮ ಇರಲಿಲ್ಲ. ವಾರ್ಡ್‌ನಲ್ಲಿದ್ದ ನರ್ಸನ್ನು ಕೇಳಿದಾಗ “ಬೆಳಿಗ್ಗೆ ಬರುತ್ತಾರೆ” ಎಂದಿದ್ದರು. ಮತ್ತೆ ನಿದ್ದೆ ಆವರಿಸಿತು.
ಒಂದೆರಡು ದಿನಗಳ ನಂತರ ಜನರಲ್ ವಾರ್ಡಿಗೆ ಶಿಫ್ಟ್ ಮಾಡಿದರು. ಅದುವರೆಗೆ ಅಪ್ಪ ಮತ್ತು ಅಮ್ಮನಿಗೆ ನನ್ನ ದರ್ಶನ ಆಗುತ್ತಿದ್ದುದು ಗಾಜಿನ ಗೋಡೆಯ ಆಚೆಯಿಂದ ಮಾತ್ರವೇ. ಕೆಲವೇ ತಿಂಗಳುಗಳ ಹಿಂದೆ ಎಲ್ಲರಂತಿದ್ದ ಎದೆ ಎತ್ತರಕ್ಕೆ ಬೆಳೆದಿದ್ದ ಮಗ ಎರಡೂ ಕಣ್ಣು ಕಳೆದುಕೊಂಡು, ಮುಂದಿನ ಪರಿಣಾಮ ಗೊತ್ತಿಲ್ಲದ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಎರಡು ದಿನ ಕಳೆದರೂ ಪ್ರಜ್ಞಾಶೂನ್ಯನಾಗಿ ಡ್ರಿಪ್ಪು, ಬ್ಯಾಂಡೇಜುಗಳ ಸಹಿತ ಹಾಸಿಗೆಯಲ್ಲಿ ಮಲಗಿರುವುದನ್ನು ನೋಡುವಾಗ ಹೆತ್ತವರು ಅನುಭವಿಸಬಹುದಾದ ಸಂಕಟವನ್ನು ಹೇಳಲು ಯಾವ ಪದಗಳಿವೆಯೋ ನನಗೆ ಗೊತ್ತಿಲ್ಲ. ಜನರಲ್ ವಾರ್ಡಿನಲ್ಲಿ ಆರೇಳು ದಿನಗಳು ಕಳೆದವು. ಡಿಸ್ಚಾರ್ಜ್ ಆಗುವ ಹಿಂದಿನ ದಿನ ನರ್ಸ್ ಒಬ್ಬರು ನನ್ನ ಈ ಕಿವಿಯಿಂದ ಆ ಕಿವಿಯವರೆಗೆ ಹೇರ್ ಬ್ಯಾಂಡಿನಂತೆ ಹಾಕಿದ್ದ ಹೊಲಿಗೆಗಳನ್ನು ಬಿಚ್ಚಿದರು. ಮಲಗಲು ಹೇಳಿದ್ದರೂ ಹಠ ಹಿಡಿದು ಕುಳಿತೇ ಅದನ್ನು ಸಹಿಸಿಕೊಂಡಿದ್ದೆ. ಎಣಿಸಲು ಕೇಳಿದ ನನಗೆ ಅವರು “ನಾನು ದಾರ ಕತ್ತರಿಸಿದಂತೆ ನೀನೇ ಎಣಿಸಿಕೊ” ಎಂದಿದ್ದರು. ಕೊನೆಗೊಮ್ಮೆ ಕತ್ತರಿಯ ಟಕ್-ಟಕ್ ಸದ್ದು ನಿಂತಿತು. ಒಟ್ಟು 52!
ಡಿಸೆಂಬರ್ 18ಕ್ಕೆ ನಮ್ಮ ಪಯಣ ಮತ್ತೆ ಊರಿನತ್ತ ಸಾಗಿತ್ತು
ಡಿಸೆಂಬರ್ 18ಕ್ಕೆ ನಮ್ಮ ಪಯಣ ಮತ್ತೆ ಊರಿನತ್ತ ಸಾಗಿತ್ತು. ನಾನು ಈಗ ಅಪ್ಪನ ಕೈಯ ಮಾರ್ಗದರ್ಶನದಂತೆ ನಡೆಯುತ್ತಿದ್ದೆ. ನಡು ನಡುವೆ ಶುಶ್ರೂಷೆಗೆಂದು ಎರಡು ಮೂರು ಸಲ ಬೆಂಗಳೂರಿಗೆ ಹೋಗಬೇಕಾಯಿತು. ನಿಮ್ಹಾನ್ಸ್ ವೈದ್ಯರು ಈಗ ನನ್ನ ಮುಂದಿನ ತಪಾಸಣೆಯ ಜವಾಬ್ದಾರಿಯನ್ನು ಮಲ್ಯ ಆಸ್ಪತ್ರೆಯ ವೈದ್ಯರಾದ ಶ್ರೀಕಂಠರವರಿಗೆ ವರ್ಗಾಯಿಸಿದ್ದರು. ಆ ಆಸ್ಪತ್ರೆಯ ದುಬಾರಿ ವೆಚ್ಚವನ್ನು ನಮ್ಮಿಂದ ಭರಿಸಲು ಕಷ್ಟವಾಗಬಹುದೇನೋ ಎಂಬ ಶಂಕೆಯಿಂದ ಅವರು ಜಯನಗರದಲ್ಲಿನ ತಮ್ಮದೇ ಸ್ವಂತ ಕ್ಲಿನಿಕ್ಕಿಗೆ ಬರಲು ತಿಳಿಸಿದರು. ಕೆಲ ಪರೀಕ್ಷೆಗಳು ಮತ್ತು ಒಂದಷ್ಟು ಚಿಕಿತ್ಸೆಯ ನಂತರ ಅಂತಿಮವಾಗಿ ಡಾಕ್ಟರು ನನ್ನ ಮುಂದೆಯೇ ಅಪ್ಪನಿಗೆ ಹೇಳಿದ ಮಾತುಗಳು ಇಂದಿಗೂ ಕಿವಿಯಲ್ಲಿ ಉಳಿದಿವೆ: “ನಾವು ಮಾಡುವುದನ್ನೆಲ್ಲಾ ಮಾಡಿ ಆಗಿದೆ. ನಿಮ್ಮ ಮಗನಿಗೆ ದೃಷ್ಟಿ ಬರುವುದು ಇನ್ನು ದೇವರ ಇಚ್ಛೆ.”
“ಬೇರೆ ಏನೂ ಮಾಡೋಕಾಗಲ್ವಾ ಸರ್?”
ಅಪ್ಪ ಕ್ಷೀಣ ಧ್ವನಿಯಲ್ಲಿ ಕೇಳಿದ್ದರು.
“ದೇವರು ದೊಡ್ಡವನು, ನಿಮ್ಮ ಮಗನ ಜೀವ ಉಳಿದಿದೆ. ಇನ್ನು ಅವನ ಜೀವನಕ್ಕೆ ಏನು ಬೇಕೋ ಅದನ್ನು ಮಾಡ್ರಿ” ಎಂದು ಡಾಕ್ಟರು ಕೈಚೆಲ್ಲಿದ ಮೇಲೆ ನನ್ನ ಚಿಕಿತ್ಸೆಗೆ ಪೂರ್ಣವಿರಾಮ ಇಡಲಾಯಿತು. ಅಪ್ಪನ ಒತ್ತಾಯಕ್ಕೆ ಕೆಲ ದಿನಗಳು ಊರದೇವಿಯ ಗರ್ಭಗುಡಿಯನ್ನು ಸುತ್ತು ಹಾಕಿದ್ದಾಯಿತು. ಪವಾಡಗಳಲ್ಲಿ ನಂಬಿಕೆಯಿಲ್ಲದ ನಾನು, ದೇವರು-ದಿಂಡಿರುಗಳಿಗೆ ಹರಕೆ-ಮುಡಿಪು ಸಲ್ಲಿಸುವುದನ್ನು ಮನೆಯವರಿಗೇ ಬಿಟ್ಟಿದ್ದೆ. ಈ ನಡುವೆ ಅಜ್ಜಿಯ ದಯದಿಂದ ನನ್ನ ಕೈಗೊಂದು ಪುಟ್ಟ ರೇಡಿಯೋ ಬಂದಿತ್ತು. ಬಹಳ ಬೇಗನೆ ಅದು ನನ್ನ ಸಂಗಾತಿಯಾಯಿತು-ಕತ್ತಲ ಹಗಲುಗಳನ್ನು ಕಳೆಯಲು.
ದಾವಣಗೆರೆಯಲ್ಲಿ ನನ್ನ ಕಣ್ಣಿನ ಸಮಸ್ಯೆಯ ತಪಾಸಣೆ ನಡೆಸಿದ ವೈದ್ಯರಲ್ಲಿ ಯಾರೊಬ್ಬರೂ ಮುಂದೆ ನನಗುಂಟಾಗಬಹುದಾದ ದೃಷ್ಟಿನಷ್ಟದ ವಿಚಾರವನ್ನು ಹೇಳಲೇ ಇಲ್ಲ. ಡಾ. ಕೃಷ್ಣಮೂರ್ತಿಯವರು ಮಾತ್ರ ಸಿ ಟಿ ಸ್ಕ್ಯಾನ್ ವರದಿ ನೋಡಿದ ನಂತರ ನನ್ನನ್ನು ಪ್ರತ್ಯೇಕವಾಗಿ ಎಕ್ಸ್ ರೇ ಕೋಣೆಗೆ ಕರೆದೊಯ್ದು ಎದೆಭಾಗದ ತಪಾಸಣೆ ನಡೆಸಲು ಹೇಳಿದ್ದರು. ಅದು ಮುಗಿಯುವಷ್ಟರಲ್ಲಿ ರಾತ್ರಿ ಎಂಟು ದಾಟಿತ್ತು. ಅಷ್ಟು ತಡವಾಗಿದ್ದರೂ ಅಂದು ನನ್ನ ಜೊತೆಗೆ ಬಂದಿದ್ದ ವಾಗೀಶ ಮತ್ತು ಗುರು ಇಬ್ಬರೂ ನನ್ನನ್ನು ನರರೋಗ ಶಸ್ತ್ರಚಿಕಿತ್ಸಕರಾದ ಡಾ. ಶಿವಾನಂದ ಅವರ ಮನೆಗೇ ಕರೆದೊಯ್ದಿದ್ದರು. ಬಹುಶಃ ಕೃಷ್ಣಮೂರ್ತಿಯವರು ನನ್ನನ್ನು ಎಕ್ಸ್ ರೇ ರೂಮಿಗೆ ಕಳಿಸಿ ಅವರಿಬ್ಬರಿಗೆ ಸಮಸ್ಯೆಯ ಗಂಭೀರತೆಯನ್ನು ವಿವರಿಸಿರಬೇಕು. ಅದಕ್ಕಾಗಿಯೇ ಅವರು ರಾತ್ರೋರಾತ್ರಿ ನನ್ನನ್ನು ಶಿವಾನಂದರ ಮನೆಗೆ ಕರೆದೊಯ್ದಿರಬೇಕು. ವೈದ್ಯರು ಅಥವಾ ಗೆಳೆಯರಲ್ಲಿ ಯಾರಾದರೊಬ್ಬರು ಆ ದೃಷ್ಟಿನಷ್ಟದ ವಿಷಯವನ್ನು ನನಗೆ ತಿಳಿಸಿದ್ದಿದ್ದರೆ ಏನಾದರೂ ಬದಲಾಗುತ್ತಿತ್ತಾ? ಗೊತ್ತಿಲ್ಲ.
;Resize=(690,390))
)
)
;Resize=(128,128))
;Resize=(128,128))
;Resize=(128,128))