ಸಾರಾಂಶ
ನೇತ್ರದಾನ ಸಾಧಾರಣ ಕಣ್ಣಿನ ದೃಷ್ಟಿ ಇಲ್ಲದವರಿಗೆ, ಬೆಳಕು ನೋಡದ ಅಂಧರಿಗೆ ದೃಷ್ಟಿ ನೀಡುವ ಕೆಲಸವಾಗಿದೆ. ನಿಮ್ಮ ನೇತ್ರಗಳು ಸದಾ ಜೀವಂತವಾಗಿರಬೇಕಾದರೆ ನೇತ್ರದಾನ ಮಾಡಿ, ಅಂಧರ ಬಾಳಿಗೆ ಬೆಳಕಾಗಿ.
ಕೊಪ್ಪಳ:
ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮ ಆ. 25ರಿಂದ ಆರಂಭವಾಗಿದ್ದು ಸೆ. 8ರ ವರೆಗೆ ನಡೆಯಲಿದೆ ಎಂದು ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ. ಪ್ರಕಾಶ ಹೆಚ್. ಹೇಳಿದರು.ನಗರದ ಗವಿಸಿದ್ದೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನೇತ್ರದಾನ ಸಾಧಾರಣ ಕಣ್ಣಿನ ದೃಷ್ಟಿ ಇಲ್ಲದವರಿಗೆ, ಬೆಳಕು ನೋಡದ ಅಂಧರಿಗೆ ದೃಷ್ಟಿ ನೀಡುವ ಕೆಲಸವಾಗಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ನಿಮ್ಮ ನೇತ್ರಗಳು ಸದಾ ಜೀವಂತವಾಗಿರಬೇಕಾದರೆ ನೇತ್ರದಾನ ಮಾಡಿ, ಅಂಧರ ಬಾಳಿಗೆ ಬೆಳಕಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ತಾಲೂಕು ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ ಮಾತನಾಡಿ, ಮೆದುಳು ನಿಷ್ಕ್ರಿಯಗೊಂಡ ಒಬ್ಬ ಮನುಷ್ಯನ ಅಂಗಾಂಗಗಳು 8 ಜನರ ಜೀವನಕ್ಕೆ ಬೆಳಕಾಗುತ್ತವೆ. ಪ್ರತಿ ವರ್ಷ ರಾಜ್ಯದಲ್ಲಿ ಸರಾಸರಿ 5,600, ದೇಶದಲ್ಲಿ 1.25 ಲಕ್ಷ ಜನರು ನೇತ್ರದಾನಿಗಳಾಗಿ ಕಾಯುತ್ತಿದ್ದಾರೆ. ಯಾವುದೇ ವಯಸ್ಸು, ಲಿಂಗ, ಧರ್ಮ ಅಥವಾ ರಕ್ತದ ಗುಂಪಿನ ಭೇದವಿಲ್ಲದೆ ಕಣ್ಣು ದಾನ ಮಾಡಬಹುದು ಎಂದು ಹೇಳಿದರು.
ಪ್ರಾಂಶುಪಾಲ ಡಾ. ಮಹಾಂತೇಶ ಸಾಲಿಮಠ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ, ವೈದ್ಯಾಧಿಕಾರಿ ಡಾ. ಮಹೇಶ ಉಮಚಗಿ, ಸಹಾಯಕ ಪ್ರಾಧ್ಯಾಪಕರಾದ ಡಾ. ಶಶಿಕಲಾ, ಡಾ. ಅನಿತಾ, ಡಾ. ಗುರುರಾಜ, ಡಾ. ಪ್ರೀತಿ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.