ಸಾರಾಂಶ
ಪುತ್ತೂರು: ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜ್, ಗ್ಲೋಬಲ್ ಡಿಗ್ರೀಸ್ ಮಣಿಪಾಲ್, ಇನ್ಸಿಟ್ಯೂಷನ್ಸ್ ಇನ್ನೋವೇಶನ್ ಸೆಲ್ ಮತ್ತು ಕೆನರಾ ಬ್ಯಾಂಕ್ ಆಶ್ರಯದಲ್ಲಿ ‘ನಿರ್ವಹಣೆ ಮತ್ತು ತಂತ್ರಜ್ಞಾನದಲ್ಲಿ ಹೊಸಯುಗ’ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ೩ ನೇ ಅಂತಾರಾಷ್ಟ್ರೀಯ ಸಮ್ಮೇಳನ ‘ದೃಷ್ಟಿ-೨೦೨೫’ ಕಾರ್ಯಕ್ರಮ ಎಂಜಿನಿಯರಿಂಗ್ ಕಾಲೇಜಿನ ಶ್ರೀರಾಮ ಸಭಾ ಭವನದಲ್ಲಿ ನಡೆಯಿತು. ಸಮ್ಮೇಳನದಲ್ಲಿ ಒಟ್ಟು ೨೬೭ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೆನರಾ ಬ್ಯಾಂಕಿನ ಪುತ್ತೂರು ಪ್ರಾದೇಶಿಕ ಕಚೇರಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರಂಜನ್ ಕುಮಾರ್, ತಂತ್ರಜ್ಞಾನ ಮತ್ತು ನಿರ್ವಹಣೆ ಜಗತ್ತಿನ ಆರ್ಥಿಕತೆಯ ಆಧಾರ ಸ್ತಂಭಗಳಾಗಿವೆ. ಇದರ ಹೊಸತನದ ಕಲಿಕೆ ಮತ್ತು ಬಳಕೆಗೆ ಅಗತ್ಯವಾದ ತಿಳುವಳಿಕೆಯನ್ನು ನೀಡಲು ಇಂತಹ ಸಮ್ಮೇಳನಗಳು ಸಹಕಾರಿ ಎಂದರು.ಆನ್‌ಲೈನ್ ಮೂಲಕ ಜೊತೆಯಾದ ದಿ ಮೆನೇಜ್ಮೆಂಟ್ ಯುನಿವರ್ಸಿಟಿ ಆಫ್ ಆಫ್ರಿಕಾ, ಕೆನ್ಯಾ ಇದರ ಪ್ರಾಂಶುಪಾಲ ಡಾ.ನ್ಯಾಗಾ ಜಸ್ಟರ್ ಅವರು ಆರ್ಥಿಕ ಅಭಿವೃದ್ಧಿ ಹೆಚ್ಚಿಸಲು ನಿರ್ವಹಣೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳ ಆವಶ್ಯಕತೆ ಇದೆ. ಈ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಗಮನ ಹರಿಸಬೇಕು ಎಂದರು. ಐಐಐಟಿ ಧಾರವಾಡ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಡೀನ್ ಡಾ.ರಾಜೇಂದ್ರ ಹೆಗಡಿ ಮಾತನಾಡಿ, ವಿದ್ಯಾರ್ಥಿಗಳು ಕಲಿತು ಹೊರಬಂದಾಗ ಆ ತಂತ್ರಜ್ಞಾನಗಳು ಬದಲಾಗಿರುತ್ತವೆ. ಇದಕ್ಕಾಗಿ ಪೂರಕ ವಿಷಯಗಳ ಕಲಿಕೆ ಅಗತ್ಯ. ಇಂತಹ ಸಮ್ಮೇಳನಗಳು ಜ್ಞಾನ ಹಂಚಿಕೆಗೆ ಅವಕಾಶವನ್ನು ನೀಡುತ್ತವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜ್‌ನ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವಾಸ್ ಶೆಣೈ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಜತೆ ಅವರನ್ನು ಸಮಾಜದ ಜವಾಬ್ದಾರಿಯುತ ನಾಗರಿಕನ್ನಾಗಿಸುವಲ್ಲಿ ಕಾಲೇಜು ಮುಂಚೂಣಿಯಲ್ಲಿದೆ. ವಿದ್ಯಾರ್ಥಿಗಳ ಹಿತಕ್ಕಾಗಿ ಇಂತಹ ಸಮ್ಮೇಳನಗಳು ನಿರಂತರವಾಗಿ ನಡೆಯುತ್ತಿವೆ ಎಂದು ಹೇಳಿದರು. ದ ಗ್ಲೋಬಲ್ ಡಿಗ್ರೀಸ್ ಮಣಿಪಾಲ್ ಇದರ ಶಾಖಾ ನಿರ್ದೇಶಕ ಶಿಜೋ ಮೋನ್ ಯೇಸುದಾಸ್ ಆನ್‌ಲೈನ್ ಮೂಲಕ ಶುಭ ಹಾರೈಸಿದರು. ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ ಕೆ, ಕೆನರಾ ಬ್ಯಾಂಕ್ ನೆಹರೂ ನಗರ ಶಾಖೆಯ ವ್ಯವಸ್ಥಾಪಕ ತೇಜ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಹಾಗೂ ಎಂಬಿಎ ವಿಭಾಗದ ನಿರ್ದೇಶಕ ಡಾ.ರಾಬಿನ್ ಮನೋಹರ್ ಶಿಂಧೆ ಪ್ರಸ್ತಾವಿಕ ಮಾತುಗಳನ್ನಾಡಿದರು. ಸಹ-ಸಂಯೋಜಕಿ ಹಾಗೂ ಎಂಸಿಎ ವಿಭಾಗದ ನಿರ್ದೇಶಕಿ ಡಾ.ಜ್ಯೋತಿ ಮಣಿ ಕೆ. ಸ್ವಾಗತಿಸಿದರು. ಪ್ರೊ.ರೇಶ್ಮಾ ಪೈ ವಂದಿಸಿದರು. ಪ್ರೊ.ನೀಮಾ ನಿರೂಪಿಸಿದರು.