ವರದಿಗಾರರ ಡೈರಿ ವಿಚಾರ ಸಂಕಿರಣದಲ್ಲಿ ಸಾಹಿತಿಯ ‘ಕನ್ನಡ ಭಾಷಣ’ ತಂದ ಅವಾಂತರ । ಬಸ್‌ನಲ್ಲಿ ನಿದ್ದೆ ಹೋದ ಪತ್ನಿ । ಪತಿ ನಾಪತ್ತೆ ಪ್ರಕರಣ
ವರದಿಗಾರರ ಡೈರಿ ವಿಚಾರ ಸಂಕಿರಣದಲ್ಲಿ ಸಾಹಿತಿಯ ‘ಕನ್ನಡ ಭಾಷಣ’ ತಂದ ಅವಾಂತರ । ಬಸ್‌ನಲ್ಲಿ ನಿದ್ದೆ ಹೋದ ಪತ್ನಿ । ಪತಿ ನಾಪತ್ತೆ ಪ್ರಕರಣ
ಭಾಷಾಂತರ ವಿಚಾರ ಭಾಷಣವೂ ಭಾಷಾಂತರ!
ಕನ್ನಡದ ವಿಮರ್ಶಕರೊಬ್ಬರು ನಮ್ಮ ಸಾಹಿತ್ಯದ ಭಾಷಾಂತರ ಇತಿಹಾಸದ ಬಗ್ಗೆ ಎಳೆಎಳೆಯಾಗಿ ಭಾಷಣ ಮಾಡಿದರು. ಎರಡು ಸಾವಿರ ವರ್ಷಗಳ ಹಿಂದಿನ ಭಾಷಾಂತರದ ಇತಿಹಾಸ ಹೇಳಿದರು. ಆದರೆ, ಆ ವಿಮರ್ಶಕರು ಭಾಷಣ ಮಾಡಿದ್ದು ಮಾತ್ರ ಕನ್ನಡದಲ್ಲಿ. ಬಂದ ಅತಿಥಿಗಳು ಕನ್ನಡದಲ್ಲಿ ಭಾಷಣ ಮಾಡುತ್ತಿದ್ದರೆ, ನೆರೆದಿದ್ದ ವಿದ್ಯಾರ್ಥಿಗಳಿಗೆ ಅದು ಅರ್ಥವಾಗದೆ ಮುಖಮುಖ ನೋಡಿಕೊಳ್ಳುತ್ತಿದ್ದರು. ಕೆಲ ವಿದ್ಯಾರ್ಥಿಗಳು ನಿದ್ದೆಯನ್ನೂ ಮಾಡಿದರು ಬಿಡಿ. ---
ಅದೊಂದು ವಿದ್ಯಾರ್ಥಿಗಳಿಗೆ ಸಾಹಿತ್ಯ ಹಾಗೂ ಭಾಷಾಂತರ ಕುರಿತು ತಿಳಿವಳಿಕೆ ನೀಡುವ ಕಾರ್ಯಕ್ರಮ, ವಿಚಿತ್ರವೆಂದರೆ ಕನ್ನಡ ವಿಮರ್ಶಕರೊಬ್ಬರು ಕನ್ನಡದಲ್ಲಿ ಮಾಡಿದ ಭಾಷಣವನ್ನು ಇಂಗ್ಲಿಷ್ ಭಾಷೆಯಲ್ಲಿ ತರ್ಜುಮೆ ಮಾಡುವ ಸ್ಥಿತಿ ಬಂದಿದ್ದು ಮಾತ್ರ ನಿಜ. ಈಗಿನ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಆಂಗ್ಲಮಯವಾಗಿದ್ದು, ಪ್ರಾದೇಶಿಕ ಭಾಷೆಗಳೇ ಮಕ್ಕಳಿಗೆ ತಿಳಿಯದಂತಾಗಿದೆ. ಹೀಗಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಭಾಷಾ ವಿಷಯಗಳ ಕುರಿತು ಮಹತ್ವವವನ್ನೇ ಕೊಡುತ್ತಿಲ್ಲ. ಈ ವಿಚಾರದಿಂದ ಹೊರಬರಲು ಹಾಗೂ ವಿದ್ಯಾರ್ಥಿಗಳಿಗೆ ಸಾಹಿತ್ಯ ಮತ್ತು ಭಾಷಾಂತರ ವಿಚಾರ ಕುರಿತು ತಿಳಿವಳಿಕೆ ನೀಡಲು ಶಿಕ್ಷಣ ಸಂಸ್ಥೆಯೊಂದು ಕಾರ್ಯಕ್ರಮವೊಂದನ್ನು ಏರ್ಪಡಿಸಿತ್ತು.
ಆದರೆ, ಕಾರ್ಯಕ್ರಮದಲ್ಲಿದ್ದ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಬಗ್ಗೆ ಜ್ಞಾನವಿಲ್ಲದ ಕಾರಣ ಭಾಷಾಂತರ ವಿಷಯವಾಗಿದ್ದ ಕಾರ್ಯಕ್ರಮವನ್ನೇ ಶಿಕ್ಷಕರು ಭಾಷಾಂತರ ಮಾಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಆಗಿದ್ದಿಷ್ಟು, ನಗರದ ಆಂಗ್ಲ ಮಾಧ್ಯಮದ ಕಾಲೇಜೊಂದು ಸಾಹಿತ್ಯ ಅಕಾಡೆಮಿ ಜತೆಗೂಡಿ ಭಾಷೆ, ಸ್ಥಳ ಮತ್ತು ಗುರುತು ವಿಷಯದ ಕುರಿತ ಸಂವಾದ ಕಾರ್ಯಕ್ರಮ ಏರ್ಪಡಿಸಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕನ್ನಡದ ವಿಮರ್ಶಕರೊಬ್ಬರು ನಮ್ಮ ಸಾಹಿತ್ಯದ ಭಾಷಾಂತರ ಇತಿಹಾಸದ ಬಗ್ಗೆ ಎಳೆಎಳೆಯಾಗಿ ಭಾಷಣ ಮಾಡಿದರು. ಎರಡು ಸಾವಿರ ವರ್ಷಗಳ ಹಿಂದಿನ ಭಾಷಾಂತರದ ಇತಿಹಾಸ ಹೇಳಿದರು. ಆದರೆ, ಆ ವಿಮರ್ಶಕರು ಭಾಷಣ ಮಾಡಿದ್ದು ಮಾತ್ರ ಕನ್ನಡದಲ್ಲಿ. ಬಂದ ಅತಿಥಿಗಳು ಕನ್ನಡದಲ್ಲಿ ಭಾಷಣ ಮಾಡುತ್ತಿದ್ದರೆ, ನೆರೆದಿದ್ದ ವಿದ್ಯಾರ್ಥಿಗಳಿಗೆ ಅದು ಅರ್ಥವಾಗದೆ ಮುಖಮುಖ ನೋಡಿಕೊಳ್ಳುತ್ತಿದ್ದರು. ಕೆಲ ವಿದ್ಯಾರ್ಥಿಗಳು ನಿದ್ದೆಯನ್ನೂ ಮಾಡಿದರು ಬಿಡಿ.
ವಿದ್ಯಾರ್ಥಿಗಳ ಈ ಪರಿಸ್ಥಿತಿ ಅರಿತ ಶಿಕ್ಷಕರು ಕೊನೆಗೆ ವೇದಿಕೆಯ ಹಿಂಭಾಗದಲ್ಲಿ ಅಳವಡಿಸಿದ್ದ ಎಲ್‌ಇಡಿಯಲ್ಲಿ ಅತಿಥಿಗಳ ಭಾಷಣವನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಪ್ರಸಾರ ಮಾಡಲು ಶುರು ಮಾಡಿದರು. ಆದರೆ, ಅತಿಥಿಗಳ ಭಾಷಣದ ವೇಗಕ್ಕೆ ಶಿಕ್ಷಕರ ತರ್ಜುಮೆಯ ವೇಗ ತಾಳೆಯಾಗುತ್ತಿರಲಿಲ್ಲ. ಹೀಗಾಗಿ, ವಿದ್ಯಾರ್ಥಿಗಳಿಗೆ ಆ ಭಾಷಾಂತರವೂ ಅರ್ಥವಾಗದಂತಾಗಿತ್ತು. ಒಟ್ಟಾರೆ ಭಾಷಾಂತರ ವಿಚಾರದ ಕಾರ್ಯಕ್ರಮವನ್ನೇ ತರ್ಜುಮೆ ಮಾಡಬೇಕಾದ ಪರಿಸ್ಥಿತಿ ಎದುರಾಗಿತ್ತು. ===
ಅಯ್ಯೊ... ನನ್ ಗಂಡ ಇಲ್ಲ, ಗಂಡ ಇಲ್ಲ...! ನಿದ್ದೆ ಮಂಪರಿನಲ್ಲಿದ್ದ ಮಹಿಳೆಯೊಬ್ಬಳು ಇದ್ದಕ್ಕಿದ್ದಂತೆ ‘ನನ್ನ ಗಂಡ ಇಲ್ಲ. ಗಂಡ ಇಲ್ಲ’ ಎಂದು ಕೂಗಾಡಿದ್ದಕ್ಕೆ ಬಸ್‌ನಲ್ಲಿದ್ದ ಗಾಬರಿಯೋ ಗಾಬರಿ... ಮೂತ್ರ ವಿಸರ್ಜನೆಗೆಂದು ತೆರಳಿದ್ದ ಮಹಿಳೆಯ ಪತಿ ವಾಪಸ್ ಬಸ್ ಹತ್ತದೆ ಎಂಟ್ಹತ್ತು ಕಿಲೋಮೀಟರ್ ಬಂದಾಗಲೇ ಹೆಂಡತಿಗೆ ಗಂಡ ಪಕ್ಕದಲ್ಲೇ ಕಾಣದೇ ಇದ್ದಾಗ ಕೂಗಾಟ ಶುರು ಮಾಡಿ ರಂಪ ರಾಮಾಯಣ ಮಾಡಿದ ಪ್ರಸಂಗವಿದು.
ಇತ್ತೀಚೆಗೆ ಬೆಂಗಳೂರಿನಿಂದ ಶಿವಮೊಗ್ಗದತ್ತ ಹೊರಟ್ಟಿದ್ದ ಬಸ್ ಗುಬ್ಬಿ ಸಮೀಪದ ಡಾಬಾದಲ್ಲಿ ಟೀ ಬ್ರೇಕ್‌ಗೆಂದು ನಿಂತಿತ್ತು. ನಿದ್ದೆ ಮಂಪರಿನಲ್ಲೇ ಪ್ರಯಾಣಿಕರಲ್ಲಿ ಕೆಲವರು ಕಾಫಿ, ಟೀ ಕುಡಿಯಲೆಂದು ಇಳಿದಿದ್ದರು. ಇನ್ನು ಕೆಲವರು ಮೂತ್ರ ವಿಸರ್ಜನೆಗೆ ತೆರಳಿದ್ದರು. ಹದಿನೈದು ನಿಮಿಷದ ನಂತರ ಬಸ್ ಚಾಲಕ ಬಂದು ಹಾರ್ನ್ ಹಾಕುತ್ತಿದ್ದಂತೆ ಒಬ್ಬೊಬ್ಬರಾಗಿ ಎಲ್ಲರೂ ಬಸ್ ಏರಿದರು. ನಿರ್ವಾಹಕ ಸೀಟಿ ಹೊಡೆಯುತ್ತಲೇ ಬಸ್ ಅರಸೀಕೆರೆ ಕಡೆಗೆ ಹೊರಟಿತು. ಡಾಭಾ ಬಿಟ್ಟು ಹತ್ತು ಕಿ.ಮೀ ದೂರ ಬಂದಾಗಿತ್ತು. ಅಷ್ಟರಲ್ಲಿ ಮಹಿಳೆಯೊಬ್ಬಳು, ‘ಅಯ್ಯೋ... ನನ್ನ ಗಂಡ ಇಲ್ಲ, ಗಂಡ ಇಲ್ಲ...’ ಅಂದು ಕಿರುಚಿಕೊಳ್ಳಲು ಶುರುಮಾಡಿದಳು. ಏನಾಯ್ತು ಎಂದು ಇಡೀ ಬಸ್ ಜನ ಗಾಬರಿಗೊಂಡರೇ, ಬಸ್ ಚಾಲಕ ತಟ್ಟನೆ ರಸ್ತೆ ಬದಿಗೆ ಬಸ್ ತೆಗೆದುಕೊಂಡು ಹೋಗಿ ನಿಲ್ಲಿಸಿ ಏನೋ ಆಗೋಯ್ತು ಎಂಬ ಭೀತಿಗೊಳಗಾಗಿದ್ದ.
ದಡಬಡನೇ ದೌಡಾಯಿಸಿದ ಕಂಡಕ್ಟರ್, ಬಂದು ‘ಏನಾಯ್ತು’ ಎಂದು ವಿಚಾರಿಸಿದಾಗಲೇ ಗೊತ್ತಾಗಿದ್ದು, ಆ ಹೆಂಗಸಿನ ಗಂಡ, ಮೂತ್ರ ವಿಸರ್ಜಿಸಲು ಇಳಿದವನು ವಾಪಸ್ ಬಸ್ ಹತ್ತಿಯೇ ಇಲ್ಲ ಎನ್ನುವುದು. ಇದರಿಂದ ಸಿಟ್ಟು ನೆತ್ತಿಗೇರಿದವನಂತೆ ಬೈಯ್ಯಲು ಶುರು ಮಾಡಿದ ಕಂಡಕ್ಟರ್ ‘ನಿನ್ನ ಗಂಡ ನಿನ್ನ ಪಕ್ಕನೇ ತಾನೇ ಮಲಗಿದ್ದು, ಇಷ್ಟೊತ್ತು ಏನ್ ಮಾಡ್ತಿದ್ದೆ’ ಎಂದು ಕೆಂಡ ಕಾರಿದರೆ, ಮಹಿಳೆ ಗಾಬರಿಯಿಂದ ಅಳ ತೊಡಗಿದ್ದಳು. ಆಕೆಯಿಂದ ಪೋನ್ ನಂಬರ್ ಪಡೆದು, ಗಂಡನಿಗೆ ಕರೆ ಮಾಡಿ ಮತ್ತೊಂದು ಬಸ್‌ನಲ್ಲಿ ಹತ್ತಿಕೊಂಡು ಬರುವಂತೆ ಸೂಚಿಸಿದ ಕಂಡಕ್ಟರ್, ಆತನಿಗಾಗಿ ಸುಮಾರು ಮುಕ್ಕಾಲು ಗಂಟೆ ರಸ್ತೆ ಬದಿಯಲ್ಲೇ ಕಾದು ಬಸ್ ನಿಲ್ಲಿಸಿದ.
ಮುಕ್ಕಾಲು ಗಂಟೆ ನಂತರ ಮತ್ತೊಂದು ಬಸ್‌ನಲ್ಲಿ ಬಂದು ಇಳಿದ ಗಂಡನನ್ನು ಕಂಡು ಪತ್ನಿ ನಿಟ್ಟುಸಿರು ಬಿಟ್ಟರೆ, ಉಳಿದವರು, ತಡವಾಗಿದ್ದಕ್ಕೆ ಸಿಡುಕುತ್ತಲೇ ತಮ್ಮ ಸೀಟುಗಳತ್ತ ನಡೆದರು. ಬಸ್ ಚಾಲಕ, ‘ಪುಣ್ಯಾತ್ಮ ನಿಂದೊಂದು ಫೋಟೋ ಕೊಡಪ್ಪ, ಬಸ್ ಮುಂದೆ ನೇತು ಹಾಕಿಕೊಳ್ಳುತ್ತೇನೆ’ ಎಂದಾಗ ನಿರ್ವಾಹಕ ನಗುತ್ತಾ ರೈಟ್ ರೈಟ್ ಎಂದ. -ಗಿರೀಶ್ ಗರಗ -ಸಂಪತ್ ತರೀಕೆರೆ