ಅಷ್ಟರಲ್ಲೇ ಅಲ್ಲಿಗೆ ಬಂದ ಯುವಕನೊಬ್ಬ, ‘ನಂದೂ ಸ್ವಲ್ಪ ನೋಡಿ ಸಾರ್’ ಎನ್ನುತ್ತಿದ್ದಂತೆ, ಆಗಲೇ ಸಿಟ್ಟಾಗಿದ್ದ ಸಂಚಾರ ಪೊಲೀಸರು, ‘ಬರೀ ನೋಡೋದ್ ಗೀಡೋದ್ ಏನೂ ಇಲ್ಲ. ಕಟ್ತೀಯಾ ಅಂದ್ರೆ ಮಾತ್ರ ನೋಡ್ತೀವಿ’ ಎನ್ನುತ್ತಿದ್ದಂತೆ ದುಡ್ಡಿಲ್ಲ ಎಂದು ಹೇಳಿ ಆತ ನಾಪತ್ತೆಯಾದ.
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ಶೇ.50ರಷ್ಟು ರಿಯಾಯ್ತಿ ಘೋಷಣೆ ಬಳಿಕ ಬಹಳಷ್ಟು ಸವಾರರು ಸಿಕ್ಕಾಪಟ್ಟೆ ‘ಆ್ಯಕ್ಟಿವ್’ಆಗಿ ಹಳೆಯ ‘ಸಿಲ್ಕು’ಗಳನ್ನೆಲ್ಲ ಪಾವತಿಸಿದ್ದಾರೆ. ಇದಕ್ಕೂ ಮೊದಲು ಈ ಹಿಂದೆ ಹೀಗೆ ‘ಚೀಪ್ ರೇಟ್-ಹಾಫ್ ರೇಟ್’ ಬಂದಿದ್ದಾಗಲೂ ಕೋಟ್ಯಂತರ ರು. ಬಾಕಿ ದಂಡ ಭರ್ತಿಯಾಗಿತ್ತು. ಆಗಾಗ್ಗೆ ಈ ರಿಬೇಟ್ ಸ್ಕೀಂ ಬಂದೇ ಬರುತ್ತದೆ ಎಂದು ಕೆಲವರಂತು ದಂಡ ಬಾಕಿ ಇಳಿಸಿಕೊಂಡಿದ್ದೂ ಉಂಟು. ಆ.21 ರಿಂದ ಸೆ.12 ರವರೆಗೂ ಈ ಫಿಫ್ಟಿ-ಫಿಫ್ಟಿ ಜಾರಿಯಾದ ಬಳಿಕವಂತು ಸಂಚಾರ ಪೊಲೀಸರು ಫುಲ್ ಆ್ಯಕ್ಟಿವ್ ಆಗಿಬಿಟ್ಟಿದ್ದರು. ಸ್ಥಳದಲ್ಲೇ ದಂಡ ಕಟ್ಟಿಸಿಕೊಳ್ಳುವ ಪಿಡಿಎ(ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್)ಮಷಿನ್ ಹಿಡಿದುಕೊಂಡು ಸಣ್ಣ ಪುಟ್ಟ ಸರ್ಕಲ್‌ಗಳಲ್ಲೂ ನಿಂತುಕೊಂಡು ‘ಸಿಗ್ನಲ್’ ಗ್ಯಾಪ್‌ನಲ್ಲೇ ವಾಹನಗಳ ದಂಡ ಬಾಕಿ ಚೆಕ್ ಮಾಡಿ ಕಟ್ಟಿಸಿಕೊಳ್ಳುವ ಕೆಲಸವನ್ನೂ ಶರವೇಗದಲ್ಲಿ ಮಾಡುತ್ತಿದ್ದರು.
ಪರಿಸ್ಥಿತಿ ಹೀಗಿದ್ದಾಗ ನಗರದ ಸರ್ಕಲ್‌ವೊಂದರಲ್ಲಿ ಸಂಚಾರ ಪೊಲೀಸರಿಬ್ಬರು ಪಿಡಿಎ ಹಿಡಿದುಕೊಂಡು ಸಿಗ್ನಲ್‌ನಲ್ಲಿ ನಿಂತಿದ್ದ ವಾಹನಗಳ ದಂಡ ಬಾಕಿಯನ್ನು ಚೆಕ್ ಮಾಡಿ ಹಣ ಕಟ್ಟಿಸಿಕೊಂಡು ಕಳಹಿಸುತ್ತಿದ್ದರು. ಆಗ ಸಂಚಾರ ಪೊಲೀಸರ ಬಳಿ ಬಂದ ಯುವಕನೊಬ್ಬ ‘ಎಷ್ಟು ದಂಡ ಇದೆ ನೋಡಿ ಸಾರ್...’ ಎಂದ. ಅವರು ಪರಿಶೀಲನೆ ನಡೆಸಿ ‘ಎರಡು ಸಾವಿರ ಬಾಕಿ ಇದೆ’ ಎನ್ನುತ್ತಿದ್ದಂತೆ ‘ಕಾಸು ಇಲ್ಲ ಸಾರ್’ ಎಂದು ಬಂದಷ್ಟೇ ಶರವೇಗದಲ್ಲಿ ಹೊರಟುಬಿಟ್ಟ. ಈ ರೀತಿ ಬರೀ ಪರಿಶೀಲಿಸಿಕೊಳ್ಳುವುದು, ನಾಳೆ ಕಟ್ಟುತ್ತೇನೆ ಎಂದು ಹೇಳಿ ‘ಓಡುವವರ’ ಸಂಖ್ಯೆ ಬಹಳಷ್ಟಾಯಿತು. ಇದರಿಂದ ಹುಷಾರಾದ ಸಂಚಾರ ಪೊಲೀಸರು ಬಳಿಕ, ‘ದಂಡ ಬಾಕಿ ಕಟ್ಟುವುದಾದರೆ ಮಾತ್ರ ಪರಿಶೀಲಿಸುತ್ತೇವೆ’ ಎಂದು ವಾಹನ ಸವಾರರಿಗೆ ಹೇಳಲು ಶುರು ಮಾಡಿದರು. ಅಷ್ಟರಲ್ಲೇ ಅಲ್ಲಿಗೆ ಬಂದ ಯುವಕನೊಬ್ಬ, ‘ನಂದೂ ಸ್ವಲ್ಪ ನೋಡಿ ಸಾ’ ಎನ್ನುತ್ತಿದ್ದಂತೆ, ಆಗಲೇ ಸಿಟ್ಟಾಗಿದ್ದ ಸಂಚಾರ ಪೊಲೀಸರು, ‘ಬರೀ ನೋಡೋದ್ ಗೀಡೋದ್ ಏನೂ ಇಲ್ಲ. ಕಟ್ತೀಯಾ ಅಂದ್ರೆ ಮಾತ್ರ ನೋಡ್ತೀವಿ’ ಎನ್ನುತ್ತಿದ್ದಂತೆ ದುಡ್ಡಿಲ್ಲ ಎಂದು ಹೇಳಿ ಆತ ನಾಪತ್ತೆಯಾದ.
ಬಂದರೋ ಬಂದರೋ ಸಾಹೇಬ್ರು ಬಂದರು...
ಬಂದ್ರು ಬಂದ್ರು ಸಾಹೇಬ್ರು ಬಂದ್ರು. ಬೇಗ ಬೇಗ... ಕಚೇರಿಗೆ ಬಂದ್ರಂತೆ, ಇನ್ನೇನು ಇಲ್ಲಿಗೆ ಬರ್ತಾರೆ, ಹಾಕಿ ಬೇಗ... ಅಬ್ಬಾ! ಕೊನೆಗೂ ಸಾಹೇಬ್ರ ಪೋಟೋ ಇದ್ದ ಫ್ಲೆಕ್ಸ್ ಎದ್ದು ನಿಂತಿತು! ಅಷ್ಟರಲ್ಲಿ ಸಾಹೇಬ್ರು ಬಂದೇ ಬಿಟ್ಟರು. ಅಧಿಕಾರಿಗಳು ನಿಟ್ಟುಸಿರು ಬಿಟ್ಟರು.
ಇದು ಸೆ.12ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಂಡು ಬಂದ ದೃಶ್ಯ. ವಿಷಯ ಏನಪ್ಪಾ ಅಂದ್ರೆ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಸೆ.15ರಂದು ಸರ್ಕಾರದಿಂದ ಆಯೋಜಿಸಿರುವ ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ಸಮಾರಂಭ ಕುರಿತು ಮಾಹಿತಿ ನೀಡಲು ಸೆ.12ರಂದು ಸಂಜೆ 5 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಕರೆದಿದ್ದರು.
ಸಚಿವರ ಸುದ್ದಿಗೋಷ್ಠಿ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು ಬ್ಯಾಕ್ ಡ್ರಾಪ್‌ಗೆ ಫ್ಲೆಕ್ಸ್ ಅಳವಡಿಸಿದ್ದರು. ಆ ಫ್ಲೆಕ್ಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಫೋಟೋ ಅಚ್ಚು ಹಾಕಿಸಿದ್ದರು. ಆದರೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಫೋಟೋ ಇಲ್ಲದಿರುವುದು ಕೊನೆ ಕ್ಷಣದಲ್ಲಿ ಅಧಿಕಾರಿಗಳ ಗಮನಕ್ಕೆ ಬಂತು. ಆಗ ಪೀಕಲಾಟಕ್ಕೆ ಸಿಲುಕಿದ ಅಧಿಕಾರಿಗಳು, ತಕ್ಷಣ ಎಚ್ಚೆತ್ತುಕೊಂಡು ಸಚಿವರ ಫೋಟೋ ಅಚ್ಚು ಹಾಕಿದ ಮತ್ತೊಂದು ಫ್ಲೆಕ್ಸ್ ತರಿಸಿಕೊಂಡರು. ಇನ್ನೇನು ಸಚಿವರು ಸುದ್ದಿಗೋಷ್ಠಿಗೆ ಬಂದೇ ಬಿಟ್ಟರು ಎನ್ನುವಾಗ ಉಸಿರು ಬಿಗಿ ಹಿಡಿದು ಬ್ಯಾಕ್ ಡ್ರಾಪ್ ಕೆಳಗೆ ಇಳಿಸಿ ಹಳೆಯ ಫ್ಲೆಕ್ಸ್ ಮೇಲೆ ಹೊಸ ಫ್ಲೆಕ್ಸ್ ಅಳವಡಿಸಿ ಮೇಲಕ್ಕೆತ್ತಿ ನಿಲ್ಲಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳ ಮುಖದಲ್ಲಿ ದೊಡ್ಡ ಗಂಡಾಂತರದಿಂದ ಪಾರಾದ ಭಾವ. ಮಹತ್ತರ ಕಾರ್ಯ ಸಾಧಿಸಿದ ಖುಷಿ. ಅರ್ಧತಾಸು ವಿಳಂಬವಾಗಿ ಸುದ್ದಿಗೋಷ್ಠಿಗೆ ಆಗಮಿಸಿದ ಸಚಿವರು, ಇಪ್ಪತ್ತೇ ನಿಮಿಷದಲ್ಲಿ ಸುದ್ದಿಗೋಷ್ಠಿ ಮುಗಿಸಿ ಹೊರ ನಡೆದರು.
ಸಚಿವರ ಬೆಂಬಲಿಸಿದ್ದಕ್ಕೆ ಗಂಡನಿಗೆ ಹೊಡೆದ ಪತ್ನಿ!
ಬೆಳಗಾವಿ ಜಿಲ್ಲೆಯಲ್ಲಿ ಬಿಡಿಸಿಸಿ ಬ್ಯಾಂಕ್ ಚುನಾವಣೆ ಕಾವು ಹೆಚ್ಚಾಗಿದೆ. ಅಭ್ಯರ್ಥಿಗಳನ್ನು ಹೈಜಾಕ್ ಮಾಡುವ ಮಟ್ಟಿಗೆ ಏರಿದೆ. ಇಷ್ಟೇ ಅಲ್ಲ, ಒಂದೇ ಕುಟುಂಬದಲ್ಲಿ ಗಂಡ ಮತ್ತು ಹೆಂಡ್ತಿ ನಡುವೆ ಜಗಳವನ್ನೂ ತಂದಿಟ್ಟಿದೆ. ಇಂತಹ ಘಟನೆ ಆಗಿದ್ದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ. ಬಿಡಿಸಿಸಿ ಬ್ಯಾಂಕ್ ಚುನಾವಣೆ ನಡೆಯಲಿರುವುದರಿಂದ ಅದರ ಪ್ರಚಾರಾರ್ಥವಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಮದಿಹಳ್ಳಿಗೆ ಹೋಗಿದ್ದರು.
ಈ ವೇಳೆ ಸಚಿವ ಸತೀಶ ಜಾರಕಿಹೊಳಿ ಬಣ ಬೆಂಬಲಕ್ಕೆ ಪ್ರಾಥಮಿಕ ಕೃಷಿ ಪತ್ತಿನ ಸಂಘದ ನಿರ್ದೇಶಕನ ಮಾರುತಿ ಸನದಿ ಬೆಂಬಲ ವ್ಯಕ್ತಪಡಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಆತನ ಪತ್ನಿ ಸಚಿವ ಸತೀಶ ಜಾರಕಿಹೊಳಿ ಅವರು ಬಂದಾಗಲೇ, ಅವರೆದುರಲ್ಲೇ ಪತಿಯನ್ನು ಎಳೆದಾಡಿ, ಕಪಾಳಕ್ಕೆ ಹೊಡೆದು, ಸಚಿವರಿಗೆ ಬೆಂಬಲ ಕೊಡಬೇಡ ಎಂದು ರೇಗಾಡಿದ್ದಾಳೆ. ಮಾತ್ರವಲ್ಲ, ಮಾಜಿ ಸಂಸದ ರಮೇಶ ಕತ್ತಿ ಬಣವನ್ನು ಬೆಂಬಲಿಸಬೇಕು ಎಂದು ಗಂಡನಿಗೆ ತಾಕೀತನ್ನೂ ಮಾಡಿದ್ದಾಳೆ. ಇದರಿಂದ ವಿಚಲಿತರಾದ ಸಚಿವ ಸತೀಶ್ ಜಾರಕಿಹೊಳಿ ಅವರು ಕೂಡ ಗಂಡ ಹೆಂಡ್ತಿ ಜಗಳ ಬಿಡಿಸುವುದರಲ್ಲಿ ಸುಸ್ತು ಹೊಡೆದರು.
ಬ್ರೂಕ್... ಬ್ರೂಕ್ ಅವಾರ್ಡ್!!!
ನಾಡದೇವಿ ದಸರಾ ಉತ್ಸವಕ್ಕೆ ಚಾಲನೆ ಕೊಡುವವರು ಸಾಧಾರಣ ವ್ಯಕ್ತಿಯಲ್ಲ, ಅವರು ಬರೆದ ಪುಸ್ತಕಕ್ಕೆ ಬ್ರೂಕರ್ ಅವಾರ್ಡ್ ಬಂದಿದೆ ಕಣಯ್ಯ.
ಆಲಮಟ್ಟಿ ಡ್ಯಾಂ ಸೈಟ್ ಮೇಲೆ ಕೃಷ್ಣೆಗೆ ಬಾಗಿನ ಅರ್ಪಿಸಲು ವಿಜಯಪುರಕ್ಕೆ ಬಂದಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಬಾನು ಮುಷ್ತಾಕ್‌ಗೆ ಏಕೆ ದಸರಾ ಉದ್ಘಾಟನೆಗೆ ಆಹ್ವಾನಿಸಲಾಗಿದೆ ಎಂಬುದನ್ನು ಸುದ್ದಿಗಾರರಿಗೆ ವಿವರಿಸುತ್ತಿದ್ದರು.
ಈ ವೇಳೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ ಪರಿ ಹೀಗಿತ್ತು. ಅವರು ಕನ್ನಡಾ ರೈಟರ್ರು, ಕನ್ನಡದಲ್ಲಿ ಪುಸ್ತಕ ಬರೆದಿದ್ದಾರೆ. ಬಾನು ಮುಷ್ತಾಕ್‌ರ ಪುಸ್ತಕಕ್ಕೆ.... ಎಂದು ಪ್ರಶಸ್ತಿ ಹೆಸರು ನೆನಪಿಗೆ ಬಾರದೆ ಗೊಂದಲಕ್ಕೀಡಾದರು. ಆಗ ಪಕ್ಕದಲ್ಲೇ ಕುಳಿತಿದ್ದ ಸಚಿವ ಶಿವಾನಂದ ಪಾಟೀಲರು ಬೂಕರ್ ಅವಾರ್ಡ್ ಎಂದು ನೆನಪಿಸಿಕೊಟ್ಟರು. ಆದರೆ ಅದು ಸರಿಯಾಗಿ ಕೇಳಿಸದೆ ಸಿಎಂ ಅವರು ಬೂಕರ್ ಅವಾರ್ಡ್ ಎನ್ನುವ ಬದಲಾಗಿ ಬ್ರೂಕರ್ ಅವಾರ್ಡ್ ಬಂದಿದೆ ಗೊತ್ತಾಯ್ತಾ ಎಂದುಬಿಟ್ಟರು. ಮತ್ತೆ ಮಾತು ಮುಂದುವರೆಸಿದ ಸಿಎಂ ಅವರು ಬಾನು ಮುಷ್ತಾಕ್‌ರ ಎದೆಯ ಹಣತೆ ಪುಸ್ತಕಕ್ಕೆ ಬ್ರೂಕ್... ಬ್ರೂಕ್... ಬ್ರೂಕರ್ ಅವಾರ್ಡ್ ಬಂದಿದೆ ಎಂದು ಎರಡೆರಡು ಬಾರಿ ಹೇಳಿದಾಗ ಸುತ್ತಲೂ ಇದ್ದವರೆಲ್ಲರೂ ಮತ್ತಷ್ಟು ಗಲಿಬಿಲಿಗೊಂಡರು. ಅಷ್ಟಕ್ಕೇ ನಿಲ್ಲದ ಅವರ ಮಾತು ಬಾನು ಮುಷ್ತಾಕ್ ಬರೆದ ಎದೆಯ ಹಣತೆ ಪುಸ್ತಕಕ್ಕೆ ಪ್ರಶಸ್ತಿ ಬಂದಿದೆ ಎಂದರು.
ಮೊದಲೇ ಗೊಂದಲದಲ್ಲಿದ್ದ ಸಿಎಂ ಅವರಿಗೆ ಗುಂಪಿನಲ್ಲಿದ್ದವರೊಬ್ಬರು ಸರ್ ಅದು ಎದೆಯ ಹಣತೆ ಅಲ್ಲ ಹೃದಯ ಹಣತೆ ಎಂದು ಕನ್ಫ್ಯೂಸ್ ಮಾಡಿಬಿಟ್ಟರು. ಆಗ ಸಿದ್ದರಾಮಯ್ಯನವರು ಏ.... ಸುಮ್ನಿರಯ್ಯಾ ಎದೆಯ ಹಣತೆ ಹಾಗೂ ಹೃದಯ ಹಣತೆ ಎರಡೂ ಒಂದೇನಯ್ಯಾ ಎಂದಾಗ ಎಲ್ಲರೂ ನಗೆಗಡಲಲ್ಲಿ ತೇಲಿದರು.
-ಸಿದ್ದು ಚಿಕ್ಕಬಳ್ಳೇಕೆರೆ
-ಮೋಹನ ಹಂಡ್ರಂಗಿ
-ಬ್ರಹ್ಮಾನಂದ ಹಡಗಲಿ
-ಶಶಿಕಾಂತ ಮೆಂಡೆಗಾರ.