ಕನ್ನಡಪ್ರಭ ವಾರ್ತೆ ಮೈಸೂರು
ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕವಿತೆಗಳನ್ನು ಅವಲೋಕಿಸಿ, ಅವುಗಳ ಮಹತ್ವವನ್ನು ತಿಳಿಸುವ, ಅವುಗಳ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಎಂ. ಮಹೇಶ್ ಮಾಡಿದ್ದಾರೆ. ಮೂಡ್ನಾಕೂಡು ಅವರು ಈವರೆಗೆ ವಿಷಯ ವೈವಿಧ್ಯತೆಯಿಂದ ಕೂಡಿದ ಒಂಭತ್ತು ಕವಿತಾ ಸಂಕಲನಗಳನ್ನು ಪ್ರಕಟಿಸಿದ್ದರೂ ಅವುಗಳ ಆಶಯ ಸಮಾನತೆಯ ಸಮಾಜದ ಕನಸು. ಅಲ್ಲಮ, ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್ ಚಿಂತನೆ. ಅಸ್ಪೃಶ್ಯತೆ, ಜೀತ, ಬಡತನ, ಹಸಿವು, ಶೋಷಣೆ ಸೇರಿದಂತೆ ಬಹುತೇಕ ದಲಿತ ವರ್ಗ, ಶ್ರಮಿಕ ಜನಾಂಗದ ನೋವು- ನಲಿವು, ಹಳ್ಳಿಗಳು, ಪ್ರಕೃತಿ ಚಿತ್ರಣ ಅನಾವರಣವಾಗಿದೆ.
‘ಅಭಿವ್ಯಕ್ತಿಗೆ ಕವಿತೆಗಿಂತ ಶಕ್ತಿಯುತ ಮಾಧ್ಯಮ ಮತ್ತೊಂದಿಲ್ಲ’ ಎಂದು ಪ್ರತಿಪಾದಿಸುವ ಮೂಡ್ನಾಕೂಡು ಚಿನ್ನಸ್ವಾಮಿ ಅವರನ್ನು ಓರ್ವ ಕವಿಯಾಗಿ ಈ ಕೃತಿಯಲ್ಲಿ ಅತ್ಯಂತ ಸಮರ್ಥವಾಗಿ ಪರಿಚಯಿಸುವ ಕೆಲಸವನ್ನು ಎಂ. ಮಹೇಶ್ ಮಾಡಿದ್ದಾರೆ.ಮೂಡ್ನಾಕೂಡು ಚಿನ್ನಸ್ವಾಮಿ ಅವರ ಬಾಲ್ಯ, ಶಿಕ್ಷಣ, ಸಾಹಿತ್ಯ ಕೃಷಿ, ಗೌರಪ- ಪುರಸ್ಕಾರಗಳು, ಅಂತಾರಾಷ್ಟ್ರೀಯ ಮನ್ನಣೆ, ಶೈಕ್ಷಣಿಕ ಪಠ್ಯವಿಷಯ, ಸಂಘ, ಸಂಸ್ಥೆಗಳೊಂದಿಗೆ ಒಡನಾಟ, ನಾಟಕ ರಚನೆ, ನಿರ್ದೇಶನ ಮತ್ತು ನಟನೆ, ಪ್ರಶಸ್ತಿಗಳು ಮೊದಲ ಭಾಗದಲ್ಲಿವೆ. ಎರಡನೇ ಭಾಗದಲ್ಲಿ ಕೊಂಡಿಗಳು ಮತ್ತು ಮುಳ್ಳುಬೇಲಿಗಳು, ಗೋಧೂಳಿ, ನಾನೊಂದು ಮರವಾಗಿದ್ದರೆ, ಚಪ್ಪಲಿ ಮತ್ತು ನಾನು, ಕನಕಾಂಬರಿ, ಬುದ್ಧ ಬೆಳದಿಂಗಳು, ಮಳೆಮಿಂದನೆಲ, ಕೊರೊನಾ ಕವಿತೆಗಳು, ಆ ಮಹಾ ಮುಗುಳುನಗೆ- ಕವನ ಸಂಕಲನಗಳ ಸ್ಥೂಲನೋಟವಿದೆ.
ಈ ಕೃತಿಯನ್ನು ಅಚಲ ಪ್ರಕಾಶನ ಪ್ರಕಟಿಸಿದ್ದು, ನಗರದ ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ.ಬಿ. ಪ್ರಭುಸ್ವಾಮಿ ಕಟ್ನವಾಡಿ ಮುನ್ನುಡಿ, ಅದೇ ವಿಭಾಗದ ಮುಖ್ಯಸ್ಥ ಡಾ.ಬಿ.ಎಸ್. ಸುದೀಪ್ ಬೆನ್ನುಡಿ ಬರೆದಿದ್ದಾರೆ. ಆಸಕ್ತರು ಡಾ.ಎಂ. ಮಹೇಶ, ಮೊ. 99025 85336 ಸಂಪರ್ಕಿಸಬಹುದು.