ವಿಶ್ವದ ನಾಲ್ಕನೇ ಅತಿ ದೊಡ್ಡ ರೈಲ್ವೆ ಜಾಲವಾಗಿರುವ ಭಾರತೀಯ ರೈಲ್ವೆಯು ಐತಿಹಾಸಿಕ ದಾಪುಗಾಟ್ಟಿದೆ. ನಿತ್ಯ ಸುಮಾರು ಎರಡೂವರೆ ಕೋಟಿ ಜನರನ್ನು ಸಾಗಿಸುವ ಈ ಸಾರಿಗೆಗೆ ಹೊಸ ಎಂಜಿನ್ ಸೇರ್ಪಡೆಗೊಂಡಿದೆ.
ವಿಶ್ವದ ನಾಲ್ಕನೇ ಅತಿ ದೊಡ್ಡ ರೈಲ್ವೆ ಜಾಲವಾಗಿರುವ ಭಾರತೀಯ ರೈಲ್ವೆಯು ಐತಿಹಾಸಿಕ ದಾಪುಗಾಟ್ಟಿದೆ. ನಿತ್ಯ ಸುಮಾರು ಎರಡೂವರೆ ಕೋಟಿ ಜನರನ್ನು ಸಾಗಿಸುವ ಈ ಸಾರಿಗೆಗೆ ಹೊಸ ಎಂಜಿನ್ ಸೇರ್ಪಡೆಗೊಂಡಿದೆ. ಪರಿಸರ ಸಂರಕ್ಷಣೆ, ಆತ್ಮನಿರ್ಭರತೆ, ಸ್ವದೇಶಿ ತಂತ್ರಜ್ಞಾನವನ್ನು ಹೊತ್ತ ದೇಶದ ಮೊದಲ ಹೈಡ್ರೋಜನ್ ರೈಲು ಜು.17ರಂದು ಹರ್ಯಾಣದ ಜಿಂದ್‌ನಿಂದ ಸೋನಿಪತ್‌ವರೆಗೆ ಸಂಚರಿಸಿದೆ. ಈ ಮೂಲಕ ಹೈಡ್ರೋಜನ್ ರೈಲು ಸಂಚಾರ ಆರಂಭಿಸಿದ ವಿಶ್ವದ 4ನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಈ ಹೈಡ್ರೋಜನ್ ರೈಲು ಹೇಗಿದೆ? ಹೇಗೆ ಕಾರ್ಯನಿರ್ವಹಿಸುತ್ತದೆ? ಇದು ಪರಿಸರ ಸ್ನೇಹಿ ಎನಿಸಿಕೊಂಡಿರುವುದೇಕೆ? ಹೈಡ್ರೋಜನ್ ರೈಲಿಗೆ ತಗುಲುವ ವೆಚ್ಚ ಮತ್ತಿತರ ಮಾಹಿತಿ ಇಲ್ಲಿದೆ.
ಗಂಟೆಗೆ 75 ಕಿ.ಮೀ. ವೇಗ
ಹೈಡ್ರೋಜನ್‌ನಿಂದ ಓಡುವ ‘ನಮೋ ಗ್ರೀನ್ ರೈಲ್’ ಪರೀಕ್ಷಾರ್ಥ ಸಂಚಾರದ ವೇಳೆ 120 ಕಿ.ಮೀ. ಗರಿಷ್ಠ ವೇಗವನ್ನು ತಲುಪಿದೆ. ಆದರೆ ಸುರಕ್ಷತಾ ದೃಷ್ಟಿಕೋನದಿಂದಾಗಿ ವಾಣಿಜ್ಯ ಸಂಚಾರದ ವೇಗಮಿತಿಯನ್ನು 75 ಕಿ.ಮೀಗೆ ನಿರ್ಬಂಧಿಸಲಾಗಿದೆ.
10 ಬೋಗಿ, 683 ಆಸನ 2300 ಜನರ ಸಂಚಾರ
ಈ ರೈಲಿನಲ್ಲಿ ಎಂಜಿನ್ ಸೇರಿ 10 ಬೋಗಿಗಳಿವೆ. ಅದರಲ್ಲಿ 1200 ಕಿ.ವ್ಯಾಟ್ ಸಾಮರ್ಥ್ಯದ 2 ಎಂಜಿನ್‌ಗಳನ್ನು ಹೊರತುಪಡಿಸಿದರೆ, 8 ಬೋಗಿಗಳಲ್ಲಿ 683 ಆಸನಗಳಿದ್ದು, 2300 ಜನರು ಸಂಚರಿಸಬಹುದಾಗಿದೆ.
1 ರೈಲಿಗೆ ₹80 ಕೋಟಿ
ಒಂದು ಹೈಡ್ರೋಜನ್ ರೈಲು ಉತ್ಪಾದಿಸಲು 80 ಕೋಟಿ ರು. ಖರ್ಚಾಗಲಿದೆ. ಸಾಮಾನ್ಯ ಎಲ್‌ಎಚ್‌ಬಿ ಕೋಚ್‌ನ (ಕೆಂಪು ಬಣ್ಣದ) 16 ಬೋಗಿಗಳ ರೈಲಿಗೆ ಸರಿಸುಮಾರು 30-40 ಕೋಟಿ ರು. ವೆಚ್ಚವಾಗುತ್ತದೆ. ಹೈಡ್ರೋಜನ್ ರೈಲು ಅವುಗಳಿಗಿಂತ ಅರ್ಧದಷ್ಟು ತುಟ್ಟಿ.
ರೈಲುಗಳು ಹೇಗೆ ಓಡುತ್ತವೆ?
1. ಕಲ್ಲಿದ್ದಲು ರೈಲು: ಕಲ್ಲಿದ್ದಲನ್ನು ಉರಿಸಿ ನೀರು ಕಾಯಿಸಿ, ಅದರಿಂದ ಬರುವ ಹಬೆಯಿಂದ ರೈಲನ್ನು ಓಡಿಸಲಾಗುತ್ತಿತ್ತು
2. ಡೀಸೆಲ್ ರೈಲು: ಡೀಸೆಲ್ ಅನ್ನು ಇಂಧನವಾಗಿ ಬಳಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಅದನ್ನು ರೈಲಿನ ಚಲನೆಗೆ ಬಳಸಲಾಗುತ್ತದೆ
3. ಎಲೆಕ್ಟ್ರಿಕ್ ರೈಲು: ಹಳಿಗಳ ಮೇಲೆ ಅಳವಡಿಸಲಾಗಿರುವ ವಿದ್ಯುತ್ ತಂತಿಯನ್ನು ಎಂಜಿನ್‌ನಲ್ಲಿನ ಪ್ಯಾಂಟೋಗ್ರಾಫ್ (ಆ್ಯಂಟಿನಾ ಆಕಾರದ ಕೊಂಡಿ) ಸ್ಪರ್ಶಿಸುತ್ತದೆ. ಆ ವಿದ್ಯುತ್ ರೈಲಿನಲ್ಲಿರುವ ಟ್ರಾನ್ಸ್‌ಫಾರ್ಮರ್‌ಗೆ ಸರಬರಾಜಾಗುತ್ತದೆ. ಬಳಿಕ ಚಕ್ರಗಳು ತಿರುಗಲಾರಂಭಿಸುತ್ತವೆ.
ಹೈಡ್ರೋಜನ್ ರೈಲಲ್ಲಿ ವಿಶೇಷ ಏನು?
ಇವುಗಳ ಪ್ರಮುಖ ಇಂಧನ ಹೈಡ್ರೋಜನ್ (ಜಲಜನಕ-ಎಚ್2). ಇದನ್ನು ತುಂಬಿಸಲು ಎಂಜಿನ್‌ನಲ್ಲಿ ಭಾರ ಒತ್ತಡವಿರುವ ಟ್ಯಾಂಕ್ ಅಳವಡಿಸಲಾಗಿರುತ್ತದೆ. ಈ ಟ್ಯಾಂಕ್‌ನಿಂದ ಬರುವ ಹೈಡ್ರೋಜನ್, ಇಂಧನ ಕೋಶ (ಫ್ಯುಯಲ್ ಸೆಲ್) ಒಳಗೆ ಹೋಗುತ್ತದೆ. ಅಲ್ಲಿ ಹೈಡ್ರೋಜನ್ ಮತ್ತು ಆಮ್ಲಜನಕ (ಒ2) ಬೆರೆತಾಗ ಪ್ರೋಟಾನ್ ಮತ್ತು ಎಲೆಕ್ಟ್ರಾನ್ ಎಂಬ 2 ಅಂಶಗಳು ಉತ್ಪತ್ತಿಯಾಗುತ್ತವೆ. ಇದರಲ್ಲಿ ಎಲೆಕ್ಟ್ರಾನ್ ಎಂಬುದು ವಿದ್ಯುತ್ ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ. ಈ ವಿದ್ಯುತ್ ಶಕ್ತಿಯು ನೇರವಾಗಿ ಗಾಲಿಗಳೊಂದಿಗೆ ಸಂಪರ್ಕ ಹೊಂದಿರುತ್ತದೆ. ಇದು ರೈಲಿನ ಚಲನೆಗೆ ಕಾರಣವಾಗುತ್ತದೆ. ಇದರ ಜೊತೆಗೇ ಹೆಚ್ಚುವರಿಯಾಗಿ ವಿದ್ಯುತ್ ಲೀಥಿಯಂ ಬ್ಯಾಟರಿಯಲ್ಲಿ ಸಂಗ್ರಹವಾಗುತ್ತದೆ. ಹೀಗೆ ಸಂಗ್ರಹವಾಗುವ ವಿದ್ಯುತ್ ಶಕ್ತಿಯು ರೈಲು ನಿಲ್ದಾಣದಿಂದ ಹೊರಡುವ ವೇಳೆ, ಭಾರ ಜಾಸ್ತಿಯಿರುವ ಸಮಯದಲ್ಲಿ ಹೆಚ್ಚುವರಿ ಶಕ್ತಿಯನ್ನು ಪೂರೈಸುತ್ತದೆ. ಇಂಧನ ಕೋಶದಲ್ಲಿ ಹೈಡ್ರೋಜನ್ ಮತ್ತು ಆಮ್ಲಜನಕ ಬೆರೆತಾಗ ಉತ್ಪತ್ತಿಯಾಗುವುದು ನೀರು (ಎಚ್2ಒ) ಮಾತ್ರ. ಹೀಗಾಗಿ ಈ ರೈಲುಗಳು ಹೊಗೆ ಬದಲಿಗೆ ನೀರಿನ ಆವಿಯನ್ನು ಹೊರಸೂಸುತ್ತವೆ. ಆದ್ದರಿಂದಲೇ ಇದನ್ನು ಪರಿಸರ ಸ್ನೇಹಿ ಎನ್ನಲಾಗುತ್ತದೆ.
ಭಾರತೀಯ ರೈಲ್ವೆಯ 4ನೇ ಮಾದರಿ ಎಂಜಿನ್
ಮೊದಲು ಸ್ಟೀಂ ಎಂಜಿನ್ (ಉಗಿಬಂಡಿ), ಅದರ ನಂತರ ಡೀಸೆಲ್ ಎಂಜಿನ್, ಬಳಿಕ ವಿದ್ಯುತ್ ಎಂಜಿನ್‌ಗಳನ್ನು ರೈಲ್ವೆ ಬಳಸಲಾರಂಭಿಸಿತು. ಈಗ ಈ ಸಾಲಿಗೆ ನಾಲ್ಕನೇ ಇಂಧನ ಮಾದರಿಯಾದ ಹೈಡ್ರೋಜನ್ ರೈಲು ಸೇರಿಕೊಳ್ಳುತ್ತಿದೆ
ಭಾರತದ್ದು ವಿಶ್ವದ ಬಲಿಷ್ಠ ಹೈಡ್ರೋಜನ್ ರೈಲು
ಜಗತ್ತಿನಲ್ಲಿ ಹೈಡ್ರೋಜನ್ ರೈಲು ಮೊದಲು ಆರಂಭವಾಗಿದ್ದು ಜರ್ಮನಿಯಲ್ಲಿ. ಆದರೆ ಅಲ್ಲಿನ ರೈಲಿಗೆ ಕೇವಲ 2-4 ಬೋಗಿಗಳಿದ್ದು, 300 ಜನರನ್ನಷ್ಟೇ ಹೊತ್ತೊಯ್ಯಬಲ್ಲದು. ಮಿಕ್ಕಂತೆ ಜಪಾನ್‌ನಲ್ಲಿ ಜನಸಂಚಾರಕ್ಕೆ ಈ ರೈಲು ಇನ್ನೂ ಮುಕ್ತವಾಗಿಲ್ಲ. ದಕ್ಷಿಣ ಕೊರಿಯಾ, ಅಮೆರಿಕದಲ್ಲಿ ಕೇವಲ 120-150 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯದ ರೈಲುಗಳಿವೆ. ಭಾರತದ ‘ನಮೋ ಗ್ರೀನ್ ರೈಲ್’ 10 ಬೋಗಿಗಳನ್ನು ಒಳಗೊಂಡಿದ್ದು, 2600 ಜನರನ್ನು ಹೊತ್ತೊಯ್ಯಬಲ್ಲದ್ದಾಗಿದೆ. ಇದು ವಿಶ್ವದ ಅತಿ ಉದ್ದದ ಮತ್ತು ಶಕ್ತಿಶಾಲಿ ಹೈಡ್ರೋ ರೈಲು ಎಂಬ ಕೀರ್ತಿಗೆ ಪಾತ್ರವಾಗಲಿದೆ.
ಹಳೆ ರೈಲು ಹೊಸ ಹುರುಪು:
ಭಾರತವು ಹಾಲಿ ಸೇವೆಯಲ್ಲಿರುವ ಡಿಇಎಂಯು (ಡೆಮು) ರೈಲುಗಳನ್ನು ಹೈಡ್ರೋಜನ್ ರೈಲುಗಳಾಗಿ ಪರಿವರ್ತಿಸುತ್ತಿದೆ. ಡೆಮು ಎಂಜಿನ್‌ನಲ್ಲಿನ ಡೀಸೆಲ್ ಯಂತ್ರಗಳನ್ನು ಸಂಪೂರ್ಣವಾಗಿ ತೆಗೆದು ಹೈಡ್ರೋಜನ್ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ಇದರಿಂದಾಗಿ ಹೊಸದಾಗಿ ರೈಲು ತಯಾರಿಸುವ ಕೆಲಸ ತಪ್ಪುತ್ತಿದೆ.
3000 ಕೇಜಿ ಹೈಡ್ರೋಜನ್ ಸಂಗ್ರಹ ಕೇಂದ್ರ ಸ್ಥಾಪನೆ
ಹೈಡ್ರೋ ರೈಲಿಗಾಗಿ ಹರ್ಯಾಣದ ಜಿಂದ್‌ನಲ್ಲಿ 3000 ಕೇಜಿ ಸಾಮರ್ಥ್ಯದ ಹೈಡ್ರೋಜನ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಪೆಟ್ರೋಲಿಯಂ ಮತ್ತು ಸ್ಫೋಟಕಾ ಸುರಕ್ಷತಾ ಸಂಸ್ಥೆ (ಪಿಇಎಸ್‌ಓ) ಸುರಕ್ಷತಾ ಪರವಾನಗಿಯನ್ನು ವಿತರಿಸಿದೆ.
880 ಕೇಜಿ ಜಲಜನಕ ಸಾಮರ್ಥ್ಯ
ರೈಲಿನಲ್ಲಿ ಎರಡೂ ಬದಿ ಎಂಜಿನ್ ಇದ್ದು, ಪ್ರತಿ ಎಂಜಿನ್‌ನಲ್ಲಿ 440 ಕೇಜಿ ಸಾಂದ್ರೀಕೃತ ಜಲಜನಕ (ಕಂಪ್ರೆಸ್ಡ್ ಹೈಡ್ರೋಜನ್) ಸಂಗ್ರಹಿಸುವ ಟ್ಯಾಂಕ್‌ಗಳಿವೆ. ರೈಲು ಪ್ರತಿ ಕಿ.ಮೀ. ಸಂಚಾರಕ್ಕೆ 1.18 ಕೇಜಿ ಹೈಡ್ರೋಜನ್ ಬಳಸಲಿದೆ. ಹೀಗಾಗಿ ಜಿಂದ್ ಮತ್ತು ಸೋನಿಪತ್ ಮಾರ್ಗದಲ್ಲಿ ದಿನಕ್ಕೆ 2 ಟ್ರಿಪ್‌ಗಳನ್ನು ಪೂರೈಸುವ ರೈಲು 300 ಕೇಜಿ ಜಲಜನಕ ಬಳಸಲಿದೆ ಎಂದು ಅಂದಾಜಿಸಲಾಗಿದೆ.
ಶೂನ್ಯ ಹೊರಸೂಸುವಿಕೆ ಗುರಿ ಸಾಕಾರಕ್ಕೆ ಪೂರಕ:
ಭಾರತವು 2070ರ ವೇಳೆಗೆ ಶೂನ್ಯ ಕಾರ್ಬನ್ ಹೊರಸೂಸುವಿಕೆಯ ಗುರಿ ಹೊಂದಿದ್ದು, ಹೈಡ್ರೋಜನ್ ರೈಲುಗಳು ಯಾವುದೇ ರೀತಿಯ ಕಾರ್ಬನ್ ಹೊರಚೆಲ್ಲದ ಕಾರಣ, ಗುರಿ ಸಾಧನೆಗೆ ಇದು ಅತ್ಯಂತ ದೊಡ್ಡ ಮೈಲುಗಲ್ಲಾಗಲಿದೆ.
ಎಲ್ಲಿ ಉಪಯೋಗ:
ಈ ರೈಲುಗಳು ಇನ್ನೂ ವಿದ್ಯುದ್ದೀಕರಣಗೊಳ್ಳದ ಮಾರ್ಗದಲ್ಲಿ ಡೀಸೆಲ್ ರೈಲುಗಳಿಗೆ ಪರ್ಯಾಯವಾಗಿ ಬಳಸಲು ಬಹಳ ಉಪಯುಕ್ತವಾಗಿವೆ. ಭಾರತೀಯ ರೈಲ್ವೆಯು ಈಗಾಗಲೇ 10 ರೈಲುಗಳ ಉತ್ಪಾದನೆಯ ಗುರಿ ಹೊಂದಿದೆ.
ಫಾಸಿಲ್ ಇಂಧನದ ಮೇಲಿನ ಹೊರೆ ಇಳಿಕೆ
ಭಾರತೀಯ ರೈಲ್ವೆಯು 2024-25ರ ಆರ್ಥಿಕ ವರ್ಷದಲ್ಲಿ ಸರಿಸುಮಾರು 108 ಕೋಟಿ ಲೀ. ಡೀಸೆಲ್ ಬಳಸಿದೆ. ಭಾರತವು ಕಚ್ಚಾ ತೈಲವನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತಿರುವ ಕಾರಣ ಹೈಡ್ರೋ ರೈಲಿನ ಅಭಿವೃದ್ಧಿಯು ಗಣನೀಯವಾಗಿ ಕಚ್ಚಾ ತೈಲದ ಅವಲಂಬನೆ ಇಳಿಸಲಿದೆ.
