ಮೈಸೂರು : ಡಿ.ಆರ್.ಮಾಂಕೇಕರ್ ಅವರು ಇಂಗ್ಲಿಷ್ನಲ್ಲಿ ರಚಿಸಿರುವ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಮಗ್ರಜೀವನ ವಿವರಗಳನ್ನೊಳಗೊಂಡ ಕೃತಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿವೃತ್ತ ನಿರ್ದೇಶಕ ಎಂ.ಕೆ.ಕೆಂಪೇಗೌಡ ಅವರು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಈ ಕೃತಿಯನ್ನು ಮೈಸೂರಿನ ವಿಸ್ಮಯ ಬುಕ್ಹೌಸ್ ಪ್ರಕಟಿಸಿದೆ.
ಡಿ.ಆರ್.ಮಾಂಕೇಕರ್ ಅವರು ಪ್ರಸಿದ್ಧ ಪತ್ರಕರ್ತರಾಗಿದ್ದರು.60 ರ ದಶಕದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರನ್ನು ತುಂಬಾ ಹತ್ತಿರದಿಂದ ಬಲ್ಲವರಾಗಿದ್ದರು. ಹಾಗಾಗಿ ಮಾಂಕೇಕರ್ ಅವರ ಕೃತಿಯಲ್ಲಿನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ ವೃತ್ತಾಂತಕ್ಕೆ ವಿಶೇಷ ಮಾನ್ಯತೆಇದೆ.
ಎಂ.ಕೆ. ಕೆಂಪೇಗೌಡ ಅವರು ಮೂಲತಃ ಕನ್ನಡ ಸಾಹಿತ್ಯದ ವಿದ್ಯಾರ್ಥಿ.ಕನ್ನಡ ಉಪನ್ಯಾಸಕರಾಗಿ ಕೆಲಸಮಾಡಿದವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಅನುಭವದ ಹಿನ್ನಲೆಯಲ್ಲಿ ಕರ್ನಾಟಕ ಪಂಚಾಯತ್ರಾಜ್ ಬಗ್ಗೆ ಗ್ರಾಮ ಸುರಾಜ್ಯ ಎಂಬ ಕೃತಿ ರಚಿಸಿದ್ದು ಈಗಾಗಲೆ ಜನಪ್ರಿಯವಾಗಿದೆ.
ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಭಾರತದ ಚರಿತ್ರೆಯಲ್ಲಿ ವಿಶೇಷವಾದ ಸ್ಥಾನವಿದೆ.ಅತ್ಯಂತ ಸರಳ, ಪ್ರಾಮಾಣಿಕ ಹಾಗೂ ಜನಪರ ಆಡಳಿತಗಾರರಾಗಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ವಿಶೇಷವಾಗಿ ಗುರುತಿಸಲ್ಪಟ್ಟಿದ್ದಾರೆ.ಅವರ ಬದುಕು ಪ್ರಸಕ್ತ ಕಾಲಘಟ್ಟದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ.
ಲಾಲ್ ಬಹದ್ದೂರ್ ಶಾಸ್ತ್ರಿ ಕೃತಿಯನ್ನು ಆ. 1 ರಂದು ಸಂಜೆ 4ಕ್ಕೆ ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಗಾಂಧಿಭವನದಲ್ಲಿ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ ಲೋಕಾರ್ಪಣೆ ಮಾಡುವರು. 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ. ಸಿ. ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸುವರು.
ಹೆಸರಾಂತ ವಾಗ್ಮಿ ಪ್ರೊ. ಎಂ.ಕೃಷ್ಣೇಗೌಡ ಕೃತಿ ಕುರಿತು ಮಾತನಾಡುವರು. ಹಿರಿಯಗಾಂಧಿ ವಿಚಾರಧಾರೆ ಪ್ರತಿಪಾದಕರಾದ ಡಿ.ಆರ್. ಪಾಟೀಲ್, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಹಾಗೂ ರಾಜ್ಯ ಪಂಚಾಯತ್ ಪರಿಷತ್ತಿನ ಕಾರ್ಯಾಧ್ಯಕ್ಷ ವಿ.ವೈ.ಘೋರ್ಪಡೆ ಮುಖ್ಯ ಅತಿಥಿಗಳಾಗಿರುವರು.
ಲಾಲ್ ಬಹದ್ದೂರ್ ಶಾಸ್ತ್ರಿ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಸಜ್ಜನ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮೈಸೂರಿನ ವಿಸ್ಮಯ ಬುಕ್ಹೌಸ್ನ ಮುಖ್ಯಸ್ಥರು ಹಾಗೂ ಖ್ಯಾತ ಚಿತ್ರಕಲಾವಿದ ಪ್ರಕಾಶ್ ಚಿಕ್ಕಪಾಳ್ಯ ಮನವಿ ಮಾಡಿದ್ದಾರೆ.