ಮೇಘಾಲಯದ ಹ್ಯಾಲಿ ವಾರ್‌ ಎಂಬ ಹೆಸರು ಕೇಳಿರಬಹುದು. ಮರದ ಜೀವಂತ ಬೇರುಗಳನ್ನು ಬಳಸಿ 70 ಅಡಿ ಉದ್ದದ ಸೇತುವೆ ನಿರ್ಮಿಸಿದ ಈ ಅಸಾಮಾನ್ಯ ರೈತರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ. ಹೀಗೆ ಜೀವಂತ ಬೇರುಗಳನ್ನೇ ಸೇತುವೆಯಾಗಿಸುವ ಒಂದೂರಿನ ಪರಂಪರೆ ಮತ್ತು ಅದರ ಹಿಂದಿನ ಶ್ರಮಜೀವಿಗಳ ಬಗ್ಗೆ ಈ ಬರಹ.

-ವಿಜಯ್ ಮಲಗಿಹಾಳ

ಇಲ್ಲಿ ಸೇತುವೆಗಳೂ ಉಸಿರಾಡುತ್ತವೆ ಎಂದು ಹೇಳಿದರೆ ತಮಾಷೆ ಎನಿಸಬಹುದು. ಆದರೆ, ಇದು ಸತ್ಯ. ಅವುಗಳಿಗೆ ಜೀವವಿದೆ.

ಭಾರತದ ಈಶಾನ್ಯ ಭಾಗದಲ್ಲಿರುವ ಮೇಘಾಲಯ ಹೆಸರೇ ಸೂಚಿಸುವಂತೆ ಅತಿ ಹೆಚ್ಚು ಮಳೆಯಾಗುವ ರಾಜ್ಯ. ಜತೆಗೆ ಗುಡ್ಡಗಾಡು ಪ್ರದೇಶ. ಹಸಿರು ಕಾಡು ಮತ್ತು ವಿಶಿಷ್ಟ ಜೀವವೈವಿಧ್ಯಕ್ಕೆ ಹೆಸರುವಾಸಿ. ಈ ನೈಸರ್ಗಿಕ ವೈಭವದ ಮಧ್ಯೆ ಜಗತ್ತನ್ನೇ ಅಚ್ಚರಿಗೊಳಿಸುವ ಒಂದು ಅಪರೂಪದ ಪರಂಪರೆ ಇದೆ. ಅದುವೇ ಜೀವಂತ ಬೇರುಗಳ ಸೇತುವೆ (Living Roots Bridge).

ಇವು ಕಾಂಕ್ರೀಟ್, ಕಬ್ಬಿಣ ಅಥವಾ ಒಣಗಿದ ಮರದ ದಿಮ್ಮಿಗಳಿಂದ ನಿರ್ಮಿತವಾದದ್ದಲ್ಲ; ಬದಲಾಗಿ ಬೆಳೆದು ನಿಂತ ಮರಗಳ ಜೀವಂತ ಬೇರುಗಳನ್ನು ವರ್ಷಾನುಗಟ್ಟಲೇ ಜೋಪಾನವಾಗಿ ಬೆಳೆಸಿ, ಬಾಗಿಸಿ ಜನರು ಒಂದೆಡೆಯಿಂದ ಮತ್ತೊಂದೆಡೆ ಸಂಚರಿಸಲು ಅನುಕೂಲವಾಗುವಂತೆ ನಿರ್ಮಿಸಿದ ಸೇತುವೆಗಳು.

ಒಬ್ಬ ತಾಯಿ ತನ್ನ ಮಗಳ ತಲೆಗೂದಲನ್ನು ಬಾಚಿ ಜಡೆ ಹಾಕುವುದೇ ಕಷ್ಟ ಎಂದು ಭಾವಿಸುವಂಥ ಸನ್ನಿವೇಶ ಇರುವಾಗ ದೂರದ ಮೇಘಾಲಯದಲ್ಲಿನ ಬುಡಕಟ್ಟು ಜನಾಂಗದ ಜನರು ವರ್ಷಗಟ್ಟಲೇ ಮರದ ಜೀವಂತ ಬೇರುಗಳನ್ನು ಜಡೆಯಂತೆ ಹೆಣೆದು ಹತ್ತಾರು ಜನರು ಏಕಕಾಲದಲ್ಲಿ ನಿರ್ಭೀತಿಯಿಂದ ಓಡಾಡುವಂಥ ಗಟ್ಟಿಮುಟ್ಟಾದ ಸೇತುವೆಯನ್ನಾಗಿ ಪರಿವರ್ತಿಸುವುದು ಸೋಜಿಗವೇ ಸರಿ.

ಮಳೆಗಾಲ ಹೆಚ್ಚಾಗಿದ್ದರಿಂದ ವರ್ಷದ ಹಲವು ತಿಂಗಳುಗಳ ಕಾಲ ಎಗ್ಗಿಲ್ಲದೆ ಹಳ್ಳ ಕೊಳ್ಳಗಳಲ್ಲಿ ನೀರು ಹರಿಯುವುದು ಸಾಮಾನ್ಯ. ಇದರಿಂದಾಗಿ ಹಲವೆಡೆ ಅಕ್ಕಪಕ್ಕದ ಗ್ರಾಮಗಳ ನಡುವೆ ಸಂಪರ್ಕವೇ ಕಡಿದು ಹೋಗುತ್ತದೆ. ಇತ್ತೀಚೆಗೆ ಅಲ್ಲಲ್ಲಿ ಪುಟ್ಟ ಸೇತುವೆಗಳು ನಿರ್ಮಾಣಗೊಳ್ಳುತ್ತಿವೆ. ದಶಕಗಳಿಂದಲೂ ಅಲ್ಲಿನ ಜನರು ಸರ್ಕಾರ ಸೇತುವೆಗಳನ್ನು ನಿರ್ಮಿಸಲಿ ಎಂದು ಕಾಯುತ್ತಾ ಕೂರದೆ ಪರಂಪರಾಗತವಾಗಿ ಬಂದ ಜೀವಂತ ಬೇರುಗಳನ್ನು ಹೆಣೆಯುವ ಮೂಲಕ ಸೇತುವೆಗಳನ್ನು ನಿರ್ಮಿಸಿಕೊಂಡು ಬಂದಿದ್ದಾರೆ. ಜೈವಿಕ ಎಂಜಿನಿಯರಿಂಗ್‌ಗೆ ಅತ್ಯುತ್ತಮ ಉದಾಹರಣೆಗಳಾದ ಈ ಜೀವಂತ ಬೇರುಗಳ ಸೇತುವೆಗಳನ್ನು ಮೇಘಾಲಯದಲ್ಲಿ ಈಗಲೂ ಜನರು ಬಳಸುತ್ತಿರುವುದನ್ನು ಕಾಣಬಹುದು.

ಈ ಜೀವಂತ ಬೇರುಗಳ ಸೇತುವೆಗಳು ಕೇವಲ ಸಂಚಾರದ ಸಾಧನವಷ್ಟೇ ಅಲ್ಲ; ಅವು ಸ್ಥಳೀಯ ಜನರ ಸಂಸ್ಕೃತಿ, ಸಹಕಾರ ಮತ್ತು ಪ್ರಕೃತಿಯ ಮೇಲಿನ ಗೌರವದ ಪ್ರತೀಕ. ಒಂದು ಸೇತುವೆ ಪೂರ್ಣವಾಗಿ ರೂಪುಗೊಳ್ಳಲು ತಲೆಮಾರಿನ ಶ್ರಮ ಬೇಕಾಗುತ್ತದೆ. ಹೀಗಾಗಿ ಇದು ಸಮುದಾಯದ ಒಗ್ಗಟ್ಟು ಮತ್ತು ದೀರ್ಘಕಾಲದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಬೆಳೆಯುತ್ತಾ ಸಾಗುವ ಸೇತುವೆ ಎಂಬ ಕಲ್ಪನೆಯೇ ಮಾನವನ ಸೃಜನಶೀಲತೆಗೆ ಮತ್ತು ಪ್ರಕೃತಿಯ ಶಕ್ತಿಗೆ ಜೀವಂತ ಸಾಕ್ಷಿ ಎನ್ನಬಹುದಾಗಿದೆ.

ಮೇಘಾಲಯದಲ್ಲಿ ಮೂರು ಪ್ರಮುಖ ಬುಡಕಟ್ಟು ಜನಾಂಗಗಳಿವೆ. ಅವುಗಳು ಖಾಸಿ, ಗಾರೋ ಮತ್ತು ಜೈಂತಿಯಾ. ಈ ಸಮುದಾಯಗಳು ವಾಸಿಸುವ ಬೆಟ್ಟಗಳನ್ನು ಆ ಹೆಸರಿನಿಂದಲೇ ಗುರುತಿಸಲ್ಪಡುತ್ತಾರೆ. ಈ ಪೈಕಿ ಖಾಸಿ ಮತ್ತು ಜೈಂತಿಯಾ ಸಮುದಾಯಗಳು ವಾಸಿಸುವ ಬೆಟ್ಟ, ಕಾಡುಗಳಲ್ಲಿ ಈ ಜೀವಂತ ಬೇರುಗಳ ಸೇತುವೆಗಳ ನಿರ್ಮಾಣವನ್ನು ಅಲ್ಲಿನ ಜನರು ಶತಮಾನಗಳಿಂದಲೂ ಪ್ರೀತಿಯಿಂದ ಮುಂದುವರೆಸಿಕೊಂಡು ಬಂದಿದ್ದಾರೆ.

ಇದಕ್ಕಾಗಿ ಹಳ್ಳ ಕೊಳ್ಳಗಳ ಅಕ್ಕಪಕ್ಕ ರಬ್ಬರ್ ಮರಗಳನ್ನು (Ficus elastica) ಬೆಳೆಸುತ್ತಾರೆ. ಸ್ಥಳೀಯ ಭಾಷೆಯಲ್ಲಿ ಇವನ್ನು ‘ಜಿಂಗ್‌ಕಿಯೆಂಗ್ ಜ್ರಿ’ ಎಂದು ಕರೆಯುತ್ತಾರೆ. ಹೆಚ್ಚೂ ಕಡಮೆ ನಮ್ಮಲ್ಲಿನ ಆಲದ ಮರಗಳಂತೆ ಬೇರು ಅಥವಾ ಬಿಳಲುಗಳನ್ನು ಹೊಂದಿರುವ ರಬ್ಬರ್‌ ಮರಗಳ ಬೇರುಗಳು ಸುಮಾರು 15ರಿಂದ 30 ವರ್ಷಗಳಲ್ಲಿ ಪರಸ್ಪರ ಜಾಲವಾಗಿ ಬೆಳೆಯುತ್ತವೆ. ಈ ಬಿಳಲುಗಳು ಚಿಕ್ಕದಿದ್ದಾಗಲೇ ಸೇತುವೆಯಾಗುವಂತೆ ಹೆಣೆದುಕೊಂಡು ಹೋಗಲಾಗುತ್ತದೆ. ಅಂದರೆ, ಆ ಬೇರುಗಳು ಸಾಗಬೇಕಾದ ಹಾದಿಯನ್ನು ನಿಗದಿಪಡಿಸಲಾಗುತ್ತದೆ. ಆ ಬೇರುಗಳು ದಪ್ಪವಾಗುತ್ತಾ ಹೋದಂತೆ ಸೇತುವೆಯ ಬಲವೂ ಹೆಚ್ಚುತ್ತಾ ಹೋಗುತ್ತದೆ. ಆ ಬೇರುಗಳು ಗಟ್ಟಿಯಾಗುವವರೆಗೆ ಕೆಲವರ್ಷಗಳ ಕಾಲ ಸೇತುವೆಯ ಮೇಲೆ ನಡೆದಾಡುವುದಕ್ಕೆ ನಿರ್ಬಂಧ ವಿಧಿಸಲಾಗಿರುತ್ತದೆ. ಗಟ್ಟಿಯಾದದ್ದು ಖಾತ್ರಿಯಾದ ಬಳಿಕ ಓಡಾಡುವುದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಈ ಸೇತುವೆಗಳು ಪೂರ್ಣವಾಗಿ ಪರಿಸರ ಸ್ನೇಹಿ. ಇದಕ್ಕಾಗಿ ಮರಗಳನ್ನು ಕತ್ತರಿಸುವ ಅಗತ್ಯವಿಲ್ಲ. ಪ್ರಕೃತಿಯೊಂದಿಗೆ ಹೊಂದಾಣಿಕೆಯಲ್ಲೇ ಬೆಳೆದು ಜನರಿಗೆ ಅನುಕೂಲ ಮಾಡಿಕೊಡುತ್ತವೆ. ಜತೆಗೆ ಇವು ದೀರ್ಘಾಯುಷ್ಯ ಹೊಂದಿವೆ. ಕೆಲವು ಜೀವಂತ ಬೇರುಗಳ ಸೇತುವೆಗಳು 300ರಿಂದ 500 ವರ್ಷಗಳಿಗೂ ಹೆಚ್ಚು ಕಾಲ ಬಳಕೆಯಲ್ಲಿರುವೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಮರಗಳಿಗೆ ವಯಸ್ಸಾದಂತೆ ಬೇರುಗಳು ಇನ್ನಷ್ಟು ಬಲವಾಗಿ ಸೇತುವೆಗಳು ಹೆಚ್ಚು ತೂಕ ಹೊರಲು ಸಮರ್ಥವಾಗುತ್ತವೆ. ಹೆಚ್ಚು ಜನರು ಏಕಕಾಲದಲ್ಲಿ ಸಂಚರಿಸಿದರೂ ಸೇತುವೆ ಅಲುಗಾಡುವುದಿಲ್ಲ. ಅಷ್ಟರಮಟ್ಟಿಗೆ ಗಟ್ಟಿಯಾಗಿರುತ್ತವೆ.

ಇದೀಗ ಈ ಜೀವಂತ ಬೇರುಗಳ ಸೇತುವೆಯನ್ನು ವಿಶ್ವ ಪಾರಂಪರಿಕ ತಾಣ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವಂತೆ ಯುನೆಸ್ಕೋಗೆ ಇತ್ತೀಚೆಗಷ್ಟೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರ ಈ ಪ್ರಸ್ತಾವನೆಗೆ ಒಪ್ಪಿಗೆ ಲಭಿಸುವ ನಿರೀಕ್ಷೆಯೂ ಇದೆ.

ಆಧುನಿಕ ಜಗತ್ತು ಕಾಂಕ್ರೀಟ್ ಮತ್ತು ಉಕ್ಕಿನ ಮೇಲೆ ನಂಬಿಕೆ ಇಟ್ಟಿರುವ ಈ ಕಾಲಘಟ್ಟದಲ್ಲಿ ಮೇಘಾಲಯದ ಸಣ್ಣ ಗ್ರಾಮದ ಮಣ್ಣಿನಲ್ಲಿ ಬೆಳೆದ ಒಬ್ಬ ವ್ಯಕ್ತಿ, ಬೇರುಗಳ ಮೇಲೆ ನಿಂತ ಭವಿಷ್ಯವನ್ನು ತೋರಿಸಿದ್ದಾನೆ.

ಇಷ್ಟೆಲ್ಲ ಹೇಳುವುದಕ್ಕೆ ಕಾರಣ 2026ರ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ಮೇಘಾಲಯದ ಹ್ಯಾಲಿ ವಾರ್‌. ಇಂಥದ್ದೇ ಮರದ ಜೀವಂತ ಬೇರುಗಳನ್ನು ಬಳಸಿಕೊಂಡು ಸುಮಾರು 70 ಅಡಿ ಉದ್ದದ ಸೇತುವೆ ನಿರ್ಮಿಸಿದ ಖ್ಯಾತಿ ಹೊಂದಿದ ಸಾಮಾನ್ಯ ರೈತ.

ಭಾರತದ ಅತಿಹೆಚ್ಚು ಮಳೆಯಾಗುವ ದಾಖಲೆ ಹೊಂದಿದ್ದ ವಿಶ್ವವಿಖ್ಯಾತ ಚಿರಾಪುಂಜಿಯ (ಈಗ ಮೌಸಿನ್ರಾಮ್ ಗ್ರಾಮ ಆ ಖ್ಯಾತಿ ಗಳಿಸಿದೆ) ಬೆಟ್ಟದ ತಪ್ಪಲಿನಲ್ಲಿದೆ ಪುಟ್ಟ ಗ್ರಾಮ ಸೀಜ್. ಅಲ್ಲಿ ತಮ್ಮ ಚಿಕ್ಕದಾದ ತೋಟದಲ್ಲಿ ಅಡಿಕೆ, ವೀಳ್ಯದೆಲೆ, ಕಾಳುಮೆಣಸು ಮತ್ತು ಹಣ್ಣುಗಳನ್ನು ಬೆಳೆಯುವ ಸ್ವಾಭಿಮಾನಿ ರೈತ ಈ ಹ್ಯಾಲಿ ವಾರ್‌. ಸುಮಾರು 40 ವರ್ಷಗಳ ಕಾಲ ಈ ಗ್ರಾಮದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಜೀವಂತ ಬೇರುಗಳ ಸೇತುವೆ ನಿರ್ಮಿಸಿ ಮುಂದಿನ ಪೀಳಿಗೆಯನ್ನು ಪ್ರಭಾವಿಸಿರುವ ಹ್ಯಾಲಿ ವಾರ್‌ ಅವರು ಕೇಂದ್ರ ಸರ್ಕಾರ ಕೊಡಮಾಡುವ ಪ್ರಸಕ್ತ 2026ನೇ ಸಾಲಿನ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದುವರೆಗೆ ಎಲೆಮರೆಕಾಯಿಯಂತೆ ಜೀವಿಸುತ್ತಿದ್ದ ಹ್ಯಾಲಿ ವಾರ್ ಏಕಾಏಕಿ ದೇಶದ ಗಮನ ಸೆಳೆದಿದ್ದಾರೆ. ದಶಕಗಳ ಕಾಲದ ಅವರ ನಿಸ್ವಾರ್ಥ ಕೆಲಸವನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಲಾಗಿದೆ. ಆದರೆ, ಆ ವ್ಯಕ್ತಿ ಮಾತ್ರ ತಮಗೆ ರಾಷ್ಟ್ರ ಪ್ರಶಸ್ತಿ ಘೋಷಣೆಯಾಗಿದೆ ಎಂಬ ಹಮ್ಮು ಬಿಮ್ಮು ತೋರದೆ ಜೀವಂತ ಬೇರುಗಳ ಸೇತುವೆ ಬಲಪಡಿಸಲು ತಮ್ಮ ಸಮಯ, ಶ್ರಮವನ್ನು ಪ್ರೀತಿಯಿಂದ ಧಾರೆ ಎರೆಯುತ್ತಿದ್ದಾರೆ.

ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಬೆಂಗಳೂರಿನ ಪತ್ರಿಕಾ ಮಾಹಿತಿ ಕಾರ್ಯಾಲಯ (ಪಿಐಬಿ) ಇತ್ತೀಚೆಗೆ ಪತ್ರಕರ್ತರ ನಿಯೋಗವೊಂದನ್ನು ಮೇಘಾಲಯ ಪ್ರವಾಸಕ್ಕೆ ಕರೆದೊಯ್ದಿತ್ತು. ಈ ವೇಳೆ ಸೀಜ್ ಗ್ರಾಮಕ್ಕೂ ಭೇಟಿ ನೀಡಿ ಜೀವಂತ ಬೇರುಗಳ ಉಮ್ಕರ್‌ ಸೇತುವೆ ವೀಕ್ಷಿಸಿ, ಅದರ ರೂವಾರಿ 69 ವರ್ಷದ ಹ್ಯಾಲಿ ವಾರ್‌ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಲಾಯಿತು.

ಅವರೇ ಹೇಳುವಂತೆ ತಮ್ಮ 10ನೇ ವಯಸ್ಸಿನಿಂದಲೇ ಅಜ್ಜನ ಮಾರ್ಗದರ್ಶನದಲ್ಲಿ ಮರದ ಬೇರುಗಳನ್ನು ಹೆಣೆದು ಸೇತುವೆಗಳನ್ನು ನಿರ್ಮಿಸುವ ಕಲೆಯನ್ನು ಕಲಿತರು. ಅದು ಆಟವಲ್ಲ, ಪಾಠವಲ್ಲ. ಬದುಕಿನ ಭಾಗವಾಗಿತ್ತು. ಮಳೆಗಾಲದಲ್ಲಿ ತಮ್ಮ ಗ್ರಾಮದಿಂದ ಪಕ್ಕದ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಉಮ್ಕರ್ ಎಂಬ ಪುಟ್ಟ ನದಿ ಅಥವಾ ಹಳ್ಳ ರಭಸದಿಂದ ಹರಿಯುತ್ತಿದ್ದರಿಂದ ಅದನ್ನು ದಾಟಿಕೊಂಡು ಹೋಗುವುದು ಕಷ್ಟ ಸಾಧ್ಯವಾಗಿತ್ತು. ಇದನ್ನು ಗಮನಿಸಿ ಜೀವಂತ ಬೇರುಗಳ ಸೇತುವೆ ನಿರ್ಮಿಸುವ ನಿರ್ಧಾರಕ್ಕೆ ಬಂದರು.

ಈಗ ಈ ಸೇತುವೆ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸತೊಡಗಿದೆ. ಇದು ಡಬಲ್ ಡೆಕ್ಕರ್ (ಎರಡು ಹಂತದ) ಸೇತುವೆ. ಅಂದರೆ, ನೀರಿನ ರಭಸ ಹೆಚ್ಚಾದಾಗ ಮೇಲಿನಿಂದಲೂ ದಾಟಿ ಆ ಬದಿ ತಲುಪಬಹುದು.

ನಾಲ್ಕು ವರ್ಷಗಳ ಹಿಂದೆ ಇದೇ ಜಾಗದಲ್ಲಿ ಸರ್ಕಾರ ಮನರೇಗಾ ಯೋಜನೆ ಅಡಿಯಲ್ಲಿ ಸಣ್ಣ ಸೇತುವೆ ನಿರ್ಮಿಸಿದೆ. ಆದರೆ, ಮಳೆ ಇದ್ದಾಗ ಸರ್ಕಾರದ ಸೇತುವೆ ಪ್ರಯೋಜನಕ್ಕೆ ಬರುವುದಿಲ್ಲ. ಆಗ ಅಲ್ಲಿನ ಜನರು ಮತ್ತೊಂದು ಗ್ರಾಮಕ್ಕೆ ತೆರಳಲು ಈ ಜೀವಂತ ಬೇರುಗಳ ಸೇತುವೆಯನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ.

ಮಳೆಗಾಲದಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿದರೆ ಈ ಜೀವಂತ ಬೇರುಗಳ ಸೇತುವೆಯ ಮಹತ್ವ ಮತ್ತು ಅನಿವಾರ್ಯತೆ ಅರಿವಾದೀತು. ನಾವು ಭೇಟಿ ನೀಡಿದ್ದ ಸಮಯ ಮಳೆಗಾಲ ಅಲ್ಲದೇ ಇದ್ದುದರಿಂದ ಸೇತುವೆಯ ಪ್ರಾಮುಖ್ಯತೆ ಅಷ್ಟಾಗಿ ಅನುಭವಕ್ಕೆ ಬರಲಿಲ್ಲ.

‘ಚಿಕ್ಕವಯಸ್ಸಿನಲ್ಲೇ ನಾನು ತಂದೆ ಮತ್ತು ತಾತನೊಂದಿಗೆ ಮರದ ಬೇರುಗಳನ್ನು ಸೇತುವೆಯನ್ನಾಗಿ ಪರಿವರ್ತಿಸಲು ತೆರಳುತ್ತಿದ್ದೆ. ಕಾಲಾಂತರದಲ್ಲಿ ಈ ವಿಶಿಷ್ಟ ಕಲೆಯನ್ನು ಕರಗತ ಮಾಡಿಕೊಂಡೆ. ಇದುವರೆಗೂ ಮೂರು ನೈಸರ್ಗಿಕವಾಗಿ ಜೀವ ಹೊಂದಿರುವ ಬೇರುಗಳ ಸೇತುವೆ ನಿರ್ಮಿಸಿದೆ’ ಎಂದು ಹ್ಯಾಲಿ ವಾರ್‌ ತಿಳಿಸುತ್ತಾರೆ.

ತಮಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾನು ಅಡಕೆ, ಎಲೆ, ಕಾಳುಮೆಣಸು ಬೆಳೆಯುವ ಒಬ್ಬ ಕೃಷಿಕ. ಈ ಗೌರವ ದೊರಕಲು ಅವಕಾಶ ನೀಡಿದ ದೇವರಿಗೆ ಮೊದಲಿಗೆ ಧನ್ಯವಾದಗಳು. ಈ ಪ್ರಶಸ್ತಿಗೆ ನನ್ನ ಹೆಸರನ್ನು ಆಯ್ಕೆ ಮಾಡಿದ ಎಲ್ಲರಿಗೂ ನಾನು ಸಂತೋಷ ಹಾಗೂ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ಇದು ನನ್ನ ಸಮುದಾಯಕ್ಕೆ, ನನ್ನ ಪೂರ್ವಜರಿಗೆ ಮತ್ತು ಪ್ರಕೃತಿಗೆ ಸಿಕ್ಕ ಗೌರವ,’ ಎಂದು ವಿನಮ್ರರಾಗಿ ಹೇಳುತ್ತಾರೆ.

ಜೀವಂತ ಬೇರು ಸೇತುವೆ ನಿರ್ಮಾಣವೆಂದರೆ ಅದು ದಿನಗಳು ಅಥವಾ ವರ್ಷಗಳ ಕೆಲಸವಲ್ಲ. ಅದು ದಶಕಗಳ ತಪಸ್ಸು. ಮರದ ಬೇರುಗಳು ಹೊರಬಂದಾಗ ಅವುಗಳಿಗೆ ದಾರಿ ತೋರಿಸಲಾಗುತ್ತದೆ. ಬೇರುಗಳು ಬೆಳೆದು ಒಂದಕ್ಕೊಂದು ಬೆಸೆದುಕೊಳ್ಳುತ್ತವೆ. ಕೊನೆಗೆ, ಮನುಷ್ಯನ ಸಹನಶೀಲತೆಗೆ ಪ್ರಕೃತಿ ಕೊಡುವ ಪ್ರತಿಫಲವಾಗಿ ಸೇತುವೆ ರೂಪುಗೊಳ್ಳುತ್ತದೆ.

ಈ ಕೆಲಸದಲ್ಲಿ ಆತುರಕ್ಕೆ ಜಾಗವಿಲ್ಲ. ನಾವು ಬೇರುಗಳನ್ನು ಬೆಳೆಸುವುದಿಲ್ಲ; ಅವು ಬೆಳೆಯುವುದಕ್ಕೆ ಅವಕಾಶ ಮಾಡಿಕೊಡುತ್ತೇವೆ ಎನ್ನುವ ಹ್ಯಾಲಿ ವಾರ್‌ ಮಾತು ಅವರ ಜೀವನ ತತ್ತ್ವವನ್ನೇ ಹೇಳುತ್ತದೆ.

ಇಂದಿನ ರೂಪದ ಸೇತುವೆ ನಿರ್ಮಾಣಕ್ಕೆ ಸುಮಾರು ಐವತ್ತು ವರ್ಷಗಳು ಬೇಕಾಯಿತು. ಆದರೆ ಅವರ ಶ್ರಮ ಅಲ್ಲಿಗೆ ಮುಗಿಯಲಿಲ್ಲ. ಈಗಲೂ ಸಹ ಅವರು ಪ್ರತಿದಿನ ಸೇತುವೆಯನ್ನು ನೋಡಿಕೊಳ್ಳುತ್ತಾರೆ. ಬಲಪಡಿಸುತ್ತಾರೆ. ಮುಂದಿನ ತಲೆಮಾರಿಗೆ ಅದನ್ನು ಸುರಕ್ಷಿತವಾಗಿ ಒಪ್ಪಿಸಲು ಶ್ರಮಿಸುತ್ತಾರೆ. ಇಳಿ ವಯಸ್ಸಿನಲ್ಲಿಯೂ ಅವರ ಕಣ್ಣುಗಳಲ್ಲಿ ಕಾಣುವ ಹೊಳಪು, ಕೈಗಳಲ್ಲಿ ಇರುವ ಚೈತನ್ಯ, ಈ ಕೆಲಸ ಅವರ ಆತ್ಮದ ಭಾಗವಾಗಿರುವುದನ್ನು ಹೇಳುತ್ತದೆ.

ಈ ವೇಳೆ ಮಾತನಾಡಿದ ಹ್ಯಾಲಿ ವಾರ್‌ ಪುತ್ರ ವಿಲ್ಲಿಂಗ್ಸನ್, ತಂದೆಯ ಕೆಲಸ ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸಿದೆ. ನಾನು ಕೂಡ ಈ ಪರಂಪರೆಯನ್ನು ಮುಂದುವರಿಸುತ್ತಿದ್ದೇನೆ. ಇದು ನಮ್ಮ ಕುಟುಂಬದ ಕೆಲಸವಲ್ಲ; ನಮ್ಮ ಸಂಸ್ಕೃತಿಯ ಹೊಣೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಸೀಜ್ ಗ್ರಾಮದ ಮೌನದಲ್ಲಿ ನಿಂತು, ಜೀವಂತ ಬೇರುಗಳ ಸೇತುವೆಯನ್ನು ನೋಡಿದಾಗ ಒಂದು ಸತ್ಯ ಅರಿವಾಗುತ್ತದೆ. ಪ್ರಕೃತಿಯನ್ನು ಗೆಲ್ಲಬೇಕಾಗಿಲ್ಲ; ಅದನ್ನು ಅರ್ಥಮಾಡಿಕೊಂಡರೆ ಸಾಕು. ಹ್ಯಾಲಿ ವಾರ್‌ ಬದುಕು ಅದೇ ಪಾಠ ಕಲಿಸುತ್ತದೆ.

ಹ್ಯಾಲಿ ವಾರ್ ಈಗ ಇಳಿ ವಯಸ್ಸಿನಲ್ಲಿ ಪ್ರಕೃತಿ ಪ್ರೀತಿಯನ್ನು, ತಾವು ಕಲಿತ ಈ ಜೀವಂತ ಬೇರುಗಳ ಸೇತುವೆ ನಿರ್ಮಾಣದ ವಿದ್ಯೆಯನ್ನು ಸ್ಥಳೀಯ ಯುವಕರಿಗೂ ಕಲಿಸುತ್ತಿದ್ದಾರೆ. ಇಂಥ‍ವರ ಸಂಖ್ಯೆ ಹೆಚ್ಚಬೇಕಿದೆ.