- ₹38.50 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸಂಪರ್ಕ ಸೇತುವೆ ವೀಕ್ಷಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಭದ್ರಾ ನದಿಯಲ್ಲಿ ನಿರ್ಮಿಸಿರುವ ₹38.50 ಕೋಟಿ ವೆಚ್ಚದ ಹೊನ್ನೇಕೊಡಿಗೆ- ನರಸಿಂಹರಾಜಪುರ ಸಂಪರ್ಕ ಸೇತುವೆ ಕಾಮಗಾರಿ ಸಂಪೂರ್ಣ ಮುಕ್ತಾಯವಾಗಿದ್ದು ಲೋಕಾರ್ಪಣೆಗೆ ಸಿದ್ಧವಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಸಂತಸ ವ್ಯಕ್ತಪಡಿಸಿದರು.

ಶುಕ್ರವಾರ ಪಟ್ಟಣದಿಂದ ಪ್ರವಾಸಿ ಮಂದಿರದಿಂದ 3 ಕಿ.ಮೀ. ದೂರದ ಭದ್ರಾ ನದಿಯಲ್ಲಿ ನೂತನವಾಗಿ ನಿರ್ಮಿಸಿರುವ ₹38 ಕೋಟಿ ವೆಚ್ಚದ ಹೊನ್ನೇಕೊಡಿಗೆ- ನರಸಿಂಹರಾಜಪುರ ಸಂಪರ್ಕ ಸೇತುವೆ ಲೋಕಾರ್ಪಣೆಗೆ ಸಿದ್ಧವಾಗಿದೆ. ಎಡೇಹಳ್ಳಿಗೆ ನರಸಿಂಹರಾಜಪುರ ಎಂಬ ಹೆಸರು ನಾಮಕರಣವಾಗಿ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಮಾಡಿಸಿಕೊಡಲು ಮನವಿ ಮಾಡಿದ್ದೆ. ಸಿಎಂ ₹20 ಕೋಟಿ ಮಂಜೂರು ಮಾಡಿ 2017 ರಲ್ಲಿ ಸೇತುವೆಗೆ ಶಂಕುಸ್ಥಾಪನೆ ಮಾಡಿದ್ದರು. ಆದರೆ, ಕೋವಿಡ್ ವ್ಯಾಪಿಸಿದ್ದರಿಂದ ಕಾಮಗಾರಿ ವಿಳಂಬವಾಗಿತ್ತು. ಶೀರ್ಘ ಈ ಸೇತುವೆ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಿದ್ದಾರೆ ಎಂದರು.

ನರಸಿಂಹರಾಜಪುರ ಪಟ್ಟಣದ ಪ್ರವಾಸಿ ಮಂದಿರದಿಂದ ಈ ಸೇತುವೆಗೆ ಬರಲು ₹6 ಕೋಟಿ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ರಸ್ತೆ ಆಗಿದೆ. ಸೇತುವೆ ಹಾಗೂ ರಸ್ತೆ ಕಾಮಗಾರಿಗೆ ಸಿದ್ದರಾಮಯ್ಯ ₹44.50 ಕೋಟಿಯಷ್ಟು ದೊಡ್ಡ ಮೊತ್ತದ ಹಣ ನೀಡಿದ್ದಾರೆ. ಅವರಿಗೆ ಕೃತಜ್ಞತೆ ಹೇಳುತ್ತೇನೆ. ಈ ಹಿಂದೆ ಹೊನ್ನೇಕೊಡಿಗೆ ಗ್ರಾಪಂನ ಸಾವಿರಾರು ಜನರು ನರಸಿಂಹ ರಾಜಪುರಕ್ಕೆ ಬರಲು 19 ಕಿ.ಮೀ.ಸುತ್ತಿಕೊಂಡು ಬರಬೇಕಿತ್ತು. ಈಗ ಹೊನ್ನೇಕೊಡಿಗೆ ಸಂಪರ್ಕ ಸೇತುವೆಯಿಂದ ಕೇವಲ 3 ಕಿ.ಮೀ.ಗೆ ಪಟ್ಟಣಕ್ಕೆ ಬರಬಹುದು.16 ಕಿ.ಮೀ.ಉಳಿತಾಯವಾಗಲಿದೆ ಎಂದರು.


ಈ ಸಂದರ್ಭದಲ್ಲಿ ಪಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ, ಮಾಜಿ ಸದಸ್ಯ ಸುನೀಲ್ ಕುಮಾರ್,ಕಾಫಿ ಬೆಳೆಗಾರ ನಾರಾಯಣ ಮೂರ್ತಿ ಇದ್ದರು.