ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಬಕವಿಯಲ್ಲಿ ಡಾ.ರವಿ ಜಮಖಂಡಿ ನೇತೃತ್ವದಲ್ಲಿ ನಡೆದ ಪರಿಣಾಮಕಾರಿ ಸರದಿ ಸತ್ಯಾಗ್ರಹದ ಫಲವಾಗಿ ರಬಕವಿ-ಮಹಿಷವಾಡಗಿ ಸೇತುವೆ ಕಾರ್ಯಕ್ಕೆ ವೇಗ ಹೆಚ್ಚಿದೆ. ಇತ್ತೀಚೆಗೆ ಸಚಿವ ಸತೀಶ ಜಾರಕಿಹೊಳಿಯವರ ನೇತೃತ್ವದಲ್ಲಿ ಸರ್ಕಾರದಿಂದ ಹೆಚ್ಚುವರಿ ₹೧೦ ಕೋಟಿಗಳಷ್ಟು ಹಣ ಬಿಡುಗಡೆಗೊಂಡು ಸೇತುವೆ ಕಾಮಗಾರಿಗೆ ಒಟ್ಟು ₹55 ಕೋಟಿ ಗಳಷ್ಟು ಹಣ ಬಿಡುಗಡೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು.

ಸೇತುವೆ ಕಾಮಗಾರಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿದ ಅವರು, ಅರ್ಧದಷ್ಟು ನದಿಯೊಳಗಿನ ಪಿಲ್ಲರ್‌ಗಳ ಕಾರ್ಯ ಮುಕ್ತಾಯಗೊಂಡಿದ್ದು, ಇನ್ನರ್ಧ ಬೇಸಿಗೆ ಮುಕ್ತಾಯದೊಳಗೆ ಮಾಡುವಲ್ಲಿ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.ಕನಿನಿ ಹಾಗೂ ಲೋಕೋಪಯೋಗಿ ಅಧಿಕಾರಿಗಳ ತಂಡ ಆಗಮಿಸಿದ್ದು, ಪ್ರಸಕ್ತ ಹಾಗೂ ಹೆಚ್ಚುವರಿ ಅನುದಾನದೊಂದಿಗೆ ಮುಂದಿನ ಕಾರ್ಯಕ್ಕೆ ಪೂರ್ವ ತಯಾರಿಯಾಗುತ್ತಿದೆ. ಮುಂದಿನ ತಿಂಗಳಲ್ಲಿ ಹೆಚ್ಚುವರಿ ಅನುದಾನದ ಕಾಮಗಾರಿ ಶಂಕುಸ್ಥಾಪನೆಗೆ ಸಚಿವ ಸತೀಶ ಜಾರಕಿಹೊಳಿ ಹಾಗೂ ಜಿಲ್ಲಾ ಉಸ್ತುವಾರಿ ಆರ್.ಬಿ. ತಿಮ್ಮಾಪೂರ ಆಗಮಿಸಲಿದ್ದು, ಸೇತುವೆ ಕಾಮಗಾರಿ ಪ್ರಗತಿ ಕುರಿತು ನಿರಂತರ ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಈ ವೇಳೆ ಕನಿನಿಯ ಸಹಾಯಕ ಅಭಿಯಂತರ ಸಿ.ವಿ. ಹರ್ಲಾಪೂರ ಮಾತನಾಡಿ, ಅಥಣಿ ಭಾಗದಲ್ಲಿನ 29 ರೈತರ ಭೂಮಿ ಸ್ವಾಧೀನದ ಪರಿಹಾರದಲ್ಲಿ ೨೫ ರೈತರು ದಾಖಲಾತಿ ಸಲ್ಲಿಸಿದ್ದು, ಇದರಲ್ಲಿ ೧೯ ರೈತರಿಗೆ ಸರ್ಕಾರದಿಂದ ಹಣ ಸಂದಾಯವಾಗಿದೆ. ಇನ್ನುಳಿದ 6 ಜನ ರೈತರಿಗೂ ಇನ್ನೆರಡು ದಿನಗಳಲ್ಲಿ ಜಮೆಯಾಗಲಿದೆ. ಶೀಘ್ರವೇ ಇನ್ನುಳಿದ ನಾಲ್ವರು ರೈತರೂ ತಮ್ಮ ದಾಖಲಾತಿ ಒದಗಿಸಿದ್ದಲ್ಲಿ ಅವರಿಗೂ ಪರಿಹಾರ ದೊರಕಲಿದೆ ಎಂದರು.

ಅದರಂತೆ ರಬಕವಿ-ಬನಹಟ್ಟಿ ತಾಲೂಕಿನ 7 ರೈತರ ಪೈಕಿ ಐವರು ದಾಖಲೆಗಳನ್ನು ಒದಗಿಸಿದ್ದು, ಅವರಿಗೂ ಶೀಘ್ರವೇ ಪರಿಹಾರ ಸರ್ಕಾರ ಒದಗಿಸಲಿದೆ ಎಂದು ಹೇಳಿದರು.


ಈ ವೇಳೆ ಡಾ.ರವಿ ಜಮಖಂಡಿ, ರಾಮಣ್ಣ ಹುಲಕುಂದ, ಬಸವರಾಜ ತೆಗ್ಗಿ, ಪ್ರವೀಣ ಹಜಾರೆ, ಸಂಜಯ ತೇಲಿ, ಸಂಜೀವ ಜೋತಾವರ, ಸಂಗಮೇಶ ಮಡಿವಾಳ, ಬಸವರಾಜ ದಲಾಲ, ನೀಲಕಂಠ ಮುತ್ತೂರ, ಸದಾಶಿವ ಗೊಂದಕರ, ಬಾಲಚಂದ್ರ ಹೂಗಾರ, ಶೇಖರ ಹಕ್ಕಲದಡ್ಡಿ ಸೇರಿದಂತೆ ಅನೇಕರಿದ್ದರು.