ವಿಶ್ವಾದ್ಯಂತ ಭಾರತೀಯರಿಗೆ ಲಭಿಸುವ ಗೌರವವು, ಭಾರತದ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ದೇಶದ ಸ್ಥಿತಿ ಉತ್ತಮವಾಗಿದ್ದರೆ ಮಾತ್ರ ಅದರ ಪ್ರಜೆಗಳಿಗೆ ವಿದೇಶಗಳಲ್ಲಿ ಗೌರವ. ಇಲ್ಲದಿದ್ದರೆ ಇಲ್ಲ. ಭಾರತವು ಬಡ ರಾಷ್ಟ್ರವಾಗಿ ಉಳಿದರೆ, ಎಡಪಂಥೀಯರು ಹಾಗೂ ಬಲಪಂಥೀಯರು ನಮಗೆ ಉಪನ್ಯಾಸ ನೀಡಲು ಬರುತ್ತಾರೆ.

 ಶ್ರೀಧರ್‌ ವೆಂಬು

ಝೋಹೋ ಸಂಸ್ಥಾಪಕ, ಸಿಇಒ

ವಿಶ್ವಾದ್ಯಂತ ಭಾರತೀಯರಿಗೆ ಲಭಿಸುವ ಗೌರವವು, ಭಾರತದ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ದೇಶದ ಸ್ಥಿತಿ ಉತ್ತಮವಾಗಿದ್ದರೆ ಮಾತ್ರ ಅದರ ಪ್ರಜೆಗಳಿಗೆ ವಿದೇಶಗಳಲ್ಲಿ ಗೌರವ. ಇಲ್ಲದಿದ್ದರೆ ಇಲ್ಲ. ಭಾರತವು ಬಡ ರಾಷ್ಟ್ರವಾಗಿ ಉಳಿದರೆ, ಎಡಪಂಥೀಯರು ಹಾಗೂ ಬಲಪಂಥೀಯರು ನಮಗೆ ಉಪನ್ಯಾಸ ನೀಡಲು ಬರುತ್ತಾರೆ. ಅದನ್ನು ನಾವು ಗೌರವ ಎಂದು ಭಾವಿಸುವ ತಪ್ಪು ಮಾಡಬಾರದು.

37 ವರ್ಷಗಳ ಹಿಂದೆ ನಾನು ಮಾಡಿದಂತೆ, ನೀವು ಕೂಡ ಅಮೆರಿಕಕ್ಕೆ ಬಂದಿರಿ. ಆಗ ನಿಮ್ಮ ಬಳಿ ಹಣ ಇರಲಿಲ್ಲ. ಬದಲಿಗೆ ಇದ್ದುದು ಭಾರತದಲ್ಲಿ ಪಡೆದ ಉತ್ತಮ ಶಿಕ್ಷಣ ಮತ್ತು ಸಾಂಸ್ಕೃತಿಕ ಪರಂಪರೆ. ಬಳಿಕ ಅಮೆರಿಕದಲ್ಲಿ ನೆಲೆಸಿ ನೀವೆಲ್ಲಾ ಅತ್ಯುತ್ತಮ ಸಾಧನೆ ಮಾಡಿ, ಯಶಸ್ಸನ್ನು ಗಳಿಸಿದಿರಿ. ಅಮೆರಿಕ ನಮಗೆ ಇದಕ್ಕೆಲ್ಲಾ ಅನುಕೂಲ ಮಾಡಿಕೊಟ್ಟಿತು. ಈ ಉಪಕಾರಕ್ಕಾಗಿ ನಾವು ಆ ದೇಶಕ್ಕೆ ಕೃತಜ್ಞರಾಗಿರಬೇಕು. ಕಾರಣ, ಕೃತಜ್ಞತೆ ನಮ್ಮ ಭಾರತೀಯ ತತ್ವ.

ಬದಲಾದ ಸ್ಥಿತಿ:

ಆದರೆ ಇಂದು ಈ ಪರಿಸ್ಥಿತಿ ಅಲ್ಲಿಲ್ಲ. ಎಲ್ಲಾ ಅಮೆರಿಕನ್ನರು ಅಲ್ಲದಿದ್ದರೂ ಒಂದಿಷ್ಟು ಮಂದಿ, ‘ಭಾರತೀಯರು ಬಂದು ಅಮೆರಿಕನ್ನರ ಉದ್ಯೋಗಗಳನ್ನು ಕಿತ್ತುಕೊಳ್ಳುತ್ತಾರೆ’ ಎಂದು ಭಾವಿಸುತ್ತಿದ್ದಾರೆ. ಜತೆಗೆ, ಅಮೆರಿಕದಲ್ಲಿ ನಮಗೆ ಸಿಕ್ಕಿದ ಯಶಸ್ಸನ್ನು ಅನ್ಯಾಯವಾಗಿ ಗಳಿಸಲಾಗಿದ್ದು ಎಂಬುದು ಅವರ ವಾದವಾಗಿದೆ.

ಮುಂದಿನ ಚುನಾವಣೆಯವರೆಗೆ ಇದನ್ನು ತಡೆದುಕೊಂಡಿದ್ದರೆ, ಬಳಿಕ ಇಂತಹ ಮನಃಸ್ಥಿತಿ ಬದಲಾಗಬಹುದು ಎಂದು ನೀವು ಭಾವಿಸಬಹುದು. ಆದರೆ ಆಗ ನೀವು, ಭಾರತೀಯ ನಾಗರಿಕತೆಯನ್ನು ದ್ವೇಷಿಸುವ ಜನರು ಮತ್ತು ನಾಗರಿಕತೆಯ ಬಗ್ಗೆಯೇ ಹಗೆತನ ಹೊಂದಿರುವ ಜನರ ನಡುವೆ ಆಯ್ಕೆ ಮಾಡಬೇಕಾಗಿ ಬರುತ್ತದೆ. ಅದು ಕಠಿಣ ಬಲಪಂಥೀಯವಾದ ಮತ್ತು ಎಡಪಂಥೀಯವಾದದ ನಡುವಿನ ಯುದ್ಧವಾಗಿರುತ್ತದೆ. ಆ ಸಂಘರ್ಷಕ್ಕೆ ನೀವು ಕೇವಲ ಪ್ರೇಕ್ಷಕರಾಗಿ ಉಳಿಯುತ್ತೀರಿ.

ದೇಶದ ಸ್ಥಿತಿಯಿಂದ ಗೌರವ ನಿರ್ಧಾರ:

ಸಾರ್ವಕಾಲಿಕ ಸತ್ಯವೊಂದಿದೆ. ಅದೇನೆಂದರೆ, ವಿಶ್ವಾದ್ಯಂತ ಭಾರತೀಯರಿಗೆ ಲಭಿಸುವ ಗೌರವವು, ಭಾರತದ ಸ್ಥಿತಿಯನ್ನು ಅವಲಂಬಿಸಿರುತ್ತದೆ. ದೇಶದ ಸ್ಥಿತಿ ಉತ್ತಮವಾಗಿದ್ದರೆ ಮಾತ್ರ ಅದರ ಪ್ರಜೆಗಳಿಗೆ ವಿದೇಶಗಳಲ್ಲಿ ಗೌರವ. ಇಲ್ಲದಿದ್ದರೆ ಇಲ್ಲ. ಭಾರತವು ಬಡ ರಾಷ್ಟ್ರವಾಗಿ ಉಳಿದರೆ, ಎಡಪಂಥೀಯರು ನಮಗೆ ಉಪನ್ಯಾಸ ನೀಡಲು ಬರುತ್ತಾರೆ. ಅತ್ತ ಬಲಪಂಥೀಯರು ತಿರಸ್ಕಾರದಿಂದ ಕಾಣುತ್ತಾರೆ. ಈ ವಿಷಯ ಮಾತಾಡುವಾಗ, ಇತ್ತೀಚೆಗೆ ಭಾರತವನ್ನು ನರಕಕೂಪ ಎಂದು ಕರೆದದ್ದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಪಾದಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಜತೆಗೆ ಅವರು ಸಹ ತಮ್ಮದೇ ಆದ ಬುದ್ಧಿವಾದವನ್ನು ಹೇಳುತ್ತಾರೆ. ನಾವು ಇವೆರಡನ್ನೂ ಗೌರವ ಎಂದು ಭಾವಿಸುವ ತಪ್ಪು ಮಾಡಬಾರದು.

ತಂತ್ರಜ್ಞಾನದ ಶಕ್ತಿ:

ಇಂದಿನ ಜಗತ್ತಿನಲ್ಲಿ ನಮಗೆ ಗೌರವ ಸಿಗಲು ದೇಶವು ಸಮೃದ್ಧ ಹಾಗೂ ಭದ್ರವಾಗಿರುವ ಜೊತೆಗೆ ತಾಂತ್ರಿಕವಾಗಿಯೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾಗಿದೆ. ಆ ಪಾರಮ್ಯವನ್ನು ಸಾಧಿಸಲು ಬೇಕಾಗುವಷ್ಟು ಬುದ್ಧಿವಂತಿಕೆ ಭಾರತದಲ್ಲಿ ಸಾಕಷ್ಟಿದೆ. ಆದರೆ ದುರದೃಷ್ಟವಶಾತ್ ನಾವು ಆ ಪ್ರತಿಭೆಯ ಬಹುಭಾಗವನ್ನು ವಿದೇಶಗಳಿಗೆ ಧಾರೆ ಎರೆದು ಕೊಡುತ್ತಿದ್ದೇವೆ. ಅದರಲ್ಲೂ ವಿಶೇಷವಾಗಿ ಅಮೆರಿಕಕ್ಕೆ ಬಹುಪಾಲನ್ನು ರಫ್ತು ಮಾಡಿದ್ದೇವೆ. ಹೀಗೆ ಮಾಡುವ ಬದಲು, ಭಾರತದಲ್ಲೇ ತಾಂತ್ರಿಕ ಸಾಮರ್ಥ್ಯವನ್ನು ಬೆಳೆಸಿಕೊಂಡು ನಮ್ಮಲ್ಲೇ ಅದನ್ನು ಉಳಿಸಿಕೊಂಡರೆ, ಭಾರತದ ಆಳವಾದ, ಪ್ರಾಚೀನ, ಶಕ್ತಿಶಾಲಿ ಸಂಸ್ಕೃತಿ ಮತ್ತು ನಾಗರಿಕತೆಯು ಭವಿಷ್ಯದಲ್ಲಿ ಸ್ವಾಭಾವಿಕವಾಗಿಯೇ ಅಭಿವೃದ್ಧಿಯಾಗುತ್ತದೆ ಹಾಗೂ ತನ್ನ ಶಕ್ತಿಯನ್ನು ಮತ್ತೆ ಜಗತ್ತಿನೆದುರು ಅನಾವರಣ ಮಾಡುತ್ತದೆ

ತಾಯ್ನಾಡಿಗೆ ಬನ್ನಿ:

ಅಮೆರಿಕ ಸೇರಿದಂತೆ ವಿದೇಶಗಳ ಆರಾಮದಾಯಕ ಜೀವನಕ್ಕೆ ಒಗ್ಗಿಕೊಂಡಿರುವ ಬಹುತೇಕರಿಗೆ ನನ್ನ ಮನವಿಯ ಬಗ್ಗೆ ಯೋಚಿಸುವುದು ಕೂಡ ಕಷ್ಟಕರವಾಗಬಹುದು. ಆದರೂ ದಯವಿಟ್ಟು ತವರಿಗೆ ಹಿಂತಿರುಗಿ. ಭಾರತ ಮಾತೆಗೆ ನಿಮ್ಮ ಪ್ರತಿಭೆಯ ಅಗತ್ಯವಿದೆ. ನೀವು ಇಷ್ಟು ವರ್ಷ ಪರಕೀಯರ ನಾಡಿಗೆ ಹೋಗಿ ಸಂಪಾದಿಸಿರುವ ತಂತ್ರಜ್ಞಾನ ನಾಯಕತ್ವದ ಆವಶ್ಯಕತೆಯು ನಮ್ಮ ಯುವ ಜನತೆಗೆ ಇದೆ. ಅವರಿಗೆ ಸಮೃದ್ಧಿಯತ್ತ ಮಾರ್ಗದರ್ಶನ ನೀಡಲು ಇದು ಅತ್ಯಗತ್ಯ. ಈ ಕೆಲಸವನ್ನು ನಾವೆಲ್ಲಾ ಅತ್ಯುತ್ಸಾಹದಿಂದ ಮಾಡೋಣ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರೇ, ದಯವಿಟ್ಟು ಭಾರತಕ್ಕೆ ಬನ್ನಿ. ತಾಯ್ನಾಡನ್ನು ಕಟ್ಟುವ ಕೆಲಸ ನಿಮ್ಮ ಬರುವಿಕೆಯನ್ನು ಎದುರುನೋಡುತ್ತಿದೆ.