ಸಂವಿಧಾನದ ಕುತ್ತಿಗೆ ಹಿಸುಕಿದವರ ವಾರಸುದಾರರು ಇಂದು, ಅದೇ ಸಂವಿಧಾನವನ್ನು ರಕ್ಷಿಸಲು ಪ್ರಾಣ ಪಣಕ್ಕಿಟ್ಟ ಸಂಘಟನೆಗೆ ಸಂವಿಧಾನದ ಪಾಠ ಮಾಡಲು ಹೊರಟಿರುವುದು ಶತಮಾನದ ಬಹುದೊಡ್ಡ ವ್ಯಂಗ್ಯ!
-ಡಾ। ನಿರಂಜನ ಪೂಜಾರ, ಸಹಾಯಕ ಪ್ರಾಧ್ಯಾಪಕರು
ಕಲ್ಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯ.
ರಾಷ್ಟ್ರೀಯ ಸ್ವಯಂಸೇವಕ ಸಂಘ ಎಲ್ಲಿಯೂ ನೋಂದಣಿಯಾಗಿಲ್ಲ, ಹಾಗಾಗಿ ಅದೊಂದು ನಿಗೂಢ ಸಂಸ್ಥೆ ಎಂಬ ಸಚಿವ ಪ್ರಿಯಾಂಕ ಖರ್ಗೆ ಅವರ ಇತ್ತೀಚಿನ ಹೇಳಿಕೆಯು ಮತ್ತು ಅವರ ಪತ್ರ ಕೇವಲ ಒಂದು ರಾಜಕೀಯ ಪ್ರಲಾಪವಾಗಿ ಉಳಿದಿಲ್ಲ; ಬದಲಾಗಿ, ಅದು ಭಾರತೀಯ ಸಂವಿಧಾನದ ಮೂಲಭೂತ ಹಕ್ಕುಗಳ ವ್ಯಾಖ್ಯಾನ ಮತ್ತು ಭಾರತದ ಸಾಂಸ್ಕೃತಿಕ-ಸಾಂಸ್ಥಿಕ ಪರಂಪರೆಯ ಕುರಿತಾದ ಅವರ ಬೌದ್ಧಿಕತೆಯನ್ನು ಪ್ರಶ್ನಿಸಿದೆ. ನೂರು ವರ್ಷಗಳ ಇತಿಹಾಸವಿರುವ, ದೇಶದ ಪ್ರತಿ ಹಳ್ಳಿಯಲ್ಲೂ ಬೇರೂರಿರುವ ಒಂದು ರಾಷ್ಟ್ರೀಯ ಚಳವಳಿಯನ್ನು ಕೇವಲ ‘ನೋಂದಣಿ ಪ್ರಮಾಣಪತ್ರ’ದ ಕೊರತೆಯಿಂದ ಅಳೆಯಲು ಹೊರಟಿರುವುದು, ವಸಾಹತುಶಾಹಿ ಗುಲಾಮಿ ಮನಸ್ಥಿತಿಯ ಸ್ಪಷ್ಟ ಕುರುಹಾಗಿದೆ.
ಸಾಂವಿಧಾನಿಕ ಸಿಂಧುತ್ವ:
ಮೊದಲನೆಯದಾಗಿ, ಸಂವಿಧಾನದ ಪಾಠ ಮಾಡುವವರು ಸಂವಿಧಾನದ ವಿಧಿಗಳನ್ನು ಸರಿಯಾಗಿ ಓದಿಕೊಳ್ಳಬೇಕು. ಭಾರತೀಯ ಸಂವಿಧಾನದ ಅನುಚ್ಛೇದ ೧೯(೧)(ಸಿ) ಪ್ರತಿಯೊಬ್ಬ ನಾಗರಿಕನಿಗೂ ‘ಸಂಘ-ಸಂಸ್ಥೆಗಳನ್ನು ರಚಿಸಿಕೊಳ್ಳುವ ಸ್ವಾತಂತ್ರ್ಯ’ವನ್ನು (Right to form associations or unions) ಒಂದು ಪರಮೋಚ್ಚ ಮೂಲಭೂತ ಹಕ್ಕಾಗಿ ಖಾತರಿಪಡಿಸಿದೆ. ಕಾನೂನುಶಾಸ್ತ್ರದ ಪ್ರಕಾರ, ಯಾವುದೇ ಒಂದು ಸಂಘಟನೆ ಅಥವಾ ಸಮೂಹ ಅಸ್ತಿತ್ವಕ್ಕೆ ಬರಲು ಸರ್ಕಾರದ ಅಧಿಕೃತ ನೋಂದಣಿ ಕಡ್ಡಾಯವಲ್ಲ. ಸೊಸೈಟೀಸ್ ಕಾಯ್ದೆ ಅಥವಾ ಟ್ರಸ್ಟ್ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳುವುದು ಕೇವಲ ಬ್ಯಾಂಕ್ ಖಾತೆ ತೆರೆಯಲು, ಸರ್ಕಾರದ ಅನುದಾನ ಪಡೆಯಲು, ಆಸ್ತಿ ಖರೀದಿಸಲು ಅಥವಾ ತೆರಿಗೆ ವಿನಾಯಿತಿ ಪಡೆಯಲು ರೂಪಿಸಲಾದ ಆಡಳಿತಾತ್ಮಕ ವ್ಯವಸ್ಥೆಯೇ ಹೊರತು, ಸಂಘಟನೆಯ ಸಾಂವಿಧಾನಿಕ ಸಿಂಧುತ್ವವನ್ನು ನಿರ್ಧರಿಸುವ ಅಂತಿಮ ಮಾನದಂಡವಲ್ಲ. ಸಾರ್ವಜನಿಕ ಸುವ್ಯವಸ್ಥೆ ಮತ್ತು ರಾಷ್ಟ್ರದ ಸಾರ್ವಭೌಮತೆಗೆ ಧಕ್ಕೆ ತರದ ಯಾವುದೇ ಅನೋಂದಾಯಿತ ಸಮೂಹವು ಸಂಪೂರ್ಣವಾಗಿ ಸಂವಿಧಾನಬದ್ಧವಾಗಿಯೇ ಕಾರ್ಯಾಚರಿಸುತ್ತದೆ. ಈ ಕನಿಷ್ಠ ಜ್ಞಾನವಿಲ್ಲದೆ ಆರ್.ಎಸ್.ಎಸ್ ಅನ್ನು ‘ನಿಗೂಢ ಸಂಘಟನೆ’ ಎನ್ನುವುದು ಸಂವಿಧಾನದ ಆಶಯಕ್ಕೇ ಮಾಡುವ ಘೋರ ಅಪಚಾರ.
ತುರ್ತುಪರಿಸ್ಥಿತಿ:
ಇನ್ನು ಆರ್.ಎಸ್.ಎಸ್ ಅನ್ನು ಸಂವಿಧಾನ ವಿರೋಧಿ ಎಂದು ಬಿಂಬಿಸುವ ಮುನ್ನ ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ಹಾಕಬೇಕು. ೧೯೭೫ರಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿ, ಸಂವಿಧಾನವನ್ನು ಸಂಪೂರ್ಣವಾಗಿ ಅಮಾನತ್ತಿನಲ್ಲಿಟ್ಟು ದೇಶದ ಮೇಲೆ ‘ತುರ್ತು ಪರಿಸ್ಥಿತಿ’ ಹೇರಿದ್ದಾಗ, ಅದೇ ಸಂವಿಧಾನದ ರಕ್ಷಣೆಗಾಗಿ ಬೀದಿಗಿಳಿದು ಹೋರಾಡಿದ ಅತಿದೊಡ್ಡ ಶಕ್ತಿ ಸಂಘ. ಮೂಲಭೂತ ಹಕ್ಕುಗಳನ್ನೆಲ್ಲಾ ಕಸಿದುಕೊಂಡ ಆ ಕರಾಳ ದಿನಗಳಲ್ಲಿ, ಲಕ್ಷಾಂತರ ಸ್ವಯಂಸೇವಕರು ಜೈಲು ಸೇರಿದರು, ಭೂಗತ ಹೋರಾಟಗಳನ್ನು ಮಾಡಿದರು, ಸರ್ವಾಧಿಕಾರದ ವಿರುದ್ಧ ಜೀವದ ಹಂಗು ತೊರೆದು ಸತ್ಯಾಗ್ರಹ ನಡೆಸಿದರು. ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಿ, ಸಂವಿಧಾನವನ್ನು ಮರಳಿ ಜೀವಂತಗೊಳಿಸುವಲ್ಲಿ ಆರ್.ಎಸ್.ಎಸ್ ನೀಡಿದ ಬಲಿದಾನ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ. ಸಂವಿಧಾನದ ಕುತ್ತಿಗೆ ಹಿಸುಕಿದವರ ವಾರಸುದಾರರು ಇಂದು, ಅದೇ ಸಂವಿಧಾನವನ್ನು ರಕ್ಷಿಸಲು ಪ್ರಾಣ ಪಣಕ್ಕಿಟ್ಟ ಸಂಘಟನೆಗೆ ಸಂವಿಧಾನದ ಪಾಠ ಮಾಡಲು ಹೊರಟಿರುವುದು ಶತಮಾನದ ಬಹುದೊಡ್ಡ ವ್ಯಂಗ್ಯ!
ವಸಾಹತುಶಾಹಿ ಮಾನದಂಡ:
ಭಾರತೀಯ ಸಮಾಜಶಾಸ್ತ್ರದ ಹಿನ್ನೆಲೆಯಲ್ಲಿ ನೋಡಿದಾಗ, ಪ್ರತಿಯೊಂದು ಸಾಮಾಜಿಕ ಗುಂಪನ್ನೂ ‘ನೋಂದಣಿ’ಯೆಂಬ ಕಟ್ಟುಪಾಡಿಗೆ ಒಳಪಡಿಸುವ ಕಲ್ಪನೆಯೇ ಬ್ರಿಟಿಷ್ ಕಣ್ಗಾವಲು ವ್ಯವಸ್ಥೆಯ ಕೊಡುಗೆ. ಆದರೆ ಭಾರತೀಯ ನಾಗರಿಕತೆ ಅನಾದಿ ಕಾಲದಿಂದಲೂ ವಿಕೇಂದ್ರೀಕೃತ ಹಾಗೂ ಅನೌಪಚಾರಿಕ ಸಂಸ್ಥೆಗಳ ಮೂಲಕವೇ ಬೆಳೆದಿದೆ. ನಮ್ಮ ಸಾವಿರಾರು ಮಠ-ಮಾನ್ಯಗಳು, ಪ್ರಾಚೀನ ವೇದ ಪಾಠಶಾಲೆಗಳು, ಹಳ್ಳಿಗಳ ಭಜನಾ ಮಂಡಳಿಗಳು ಅಥವಾ ಕೋಟ್ಯಂತರ ರುಪಾಯಿಗಳ ವಹಿವಾಟು ನಡೆಯುವ ಊರ ಜಾತ್ರಾ ಸಮಿತಿಗಳು ಯಾವುದೇ ಬ್ರಿಟಿಷ್ ಕಾಯ್ದೆಯಡಿ ಹುಟ್ಟಿಕೊಂಡಿಲ್ಲ. ಇವು ಸಮಾಜದ ವಿಶ್ವಾಸ, ಧರ್ಮ ಮತ್ತು ಸಾಮೂಹಿಕ ಸಹಕಾರದ ಆಧಾರದ ಮೇಲೆ ಸ್ವಯಂ-ನಿಯಂತ್ರಿತವಾಗಿ ನಡೆಯುವ ಸಾವಯವ ವ್ಯವಸ್ಥೆಗಳು. ಆರ್.ಎಸ್.ಎಸ್ ಕೂಡ ಇದೇ ಮಣ್ಣಿನ ಗುಣವಿರುವ ಒಂದು ಬೃಹತ್ ಕೌಟುಂಬಿಕ ವ್ಯವಸ್ಥೆಯಾಗಿದ್ದು, ಅದನ್ನು ಕೇವಲ ಕಾಗದದ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಮೂಲಕ ಅಳೆಯುವುದು ಭಾರತೀಯ ಪರಂಪರೆಗೇ ಮಾಡುವ ಅವಮಾನ.
ಪಾರದರ್ಶಕತೆ ಮತ್ತು ಆರ್ಥಿಕ ಸ್ವಾಯತ್ತತೆ:
ಆರ್.ಎಸ್.ಎಸ್ ಕಾನೂನನ್ನು ಉಲ್ಲಂಘಿಸುತ್ತದೆ ಅಥವಾ ಗುಪ್ತವಾಗಿ ಕಾರ್ಯಾಚರಿಸುತ್ತದೆ ಎಂಬುದು ಮತ್ತೊಂದು ಬೌದ್ಧಿಕ ಸುಳ್ಳು. ಆರ್.ಎಸ್.ಎಸ್ ಎಂಬುದು ಒಂದು ಸೈದ್ಧಾಂತಿಕ ಪ್ರವಾಹ. ಆದರೆ, ಎಲ್ಲಿ ಭೌತಿಕ ಮತ್ತು ಆರ್ಥಿಕ ವ್ಯವಹಾರಗಳ ಪ್ರಶ್ನೆ ಬರುತ್ತದೆಯೋ ಅಲ್ಲಿ ಸಂಘವು ಕಟ್ಟುನಿಟ್ಟಾಗಿ ಕಾನೂನನ್ನು ಪಾಲಿಸುತ್ತದೆ. ದೇಶಾದ್ಯಂತ ಇರುವ ‘ಸಂಘ ಕಾರ್ಯಾಲಯ’ಗಳು ಮತ್ತು ಜಮೀನುಗಳು ಅಧಿಕೃತವಾಗಿ ನೋಂದಾಯಿತವಾದ ‘ಟ್ರಸ್ಟ್’ಗಳ ಸುಪರ್ದಿಯಲ್ಲಿವೆ ಮತ್ತು ಅವು ಪ್ರತಿವರ್ಷ ಲೆಕ್ಕಪರಿಶೋಧನಾ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸುತ್ತವೆ.
ಅಷ್ಟೇ ಅಲ್ಲದೆ, ಸಂಘದ ಪ್ರೇರಣೆಯಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಅಂಗಸಂಸ್ಥೆಗಳಾದ ಶಿಕ್ಷಣ ಕ್ಷೇತ್ರದ ‘ವಿದ್ಯಾ ಭಾರತಿ’, ಕಾರ್ಮಿಕ ವಲಯದ ‘ಭಾರತೀಯ ಮಜ್ದೂರ್ ಸಂಘ’ (BMS), ಸಮಾಜ ಸೇವೆಯ ‘ಸೇವಾ ಭಾರತಿ’, ಬುಡಕಟ್ಟು ಅಭಿವೃದ್ಧಿಯ ‘ವನವಾಸಿ ಕಲ್ಯಾಣ ಆಶ್ರಮ’ ಇವೆಲ್ಲವೂ ಮತ್ತು ಇನ್ನೂ ಅನೇಕ ಸೊಸೈಟೀಸ್ ಅಥವಾ ಟ್ರಸ್ಟ್ ಕಾಯ್ದೆಯಡಿ ವಿಧ್ಯುಕ್ತವಾಗಿ ನೋಂದಣಿಯಾದ ಕಾನೂನುಬದ್ಧ ಸಂಸ್ಥೆಗಳೇ ಆಗಿವೆ. ಇನ್ನು, ಸರ್ಕಾರಿ ಅನುದಾನವನ್ನು ಅಥವಾ ವಿದೇಶಿ ಫಂಡ್ (FCRA) ನಂಬಿರುವ ಎನ್.ಜಿ.ಓ.ಗಳಿಗೆ ನೋಂದಣಿ ಕಡ್ಡಾಯ. ಆದರೆ, ಯಾವುದೇ ಬಾಹ್ಯ ಆರ್ಥಿಕ ಸಹಾಯವಿಲ್ಲದೆ, ಕೇವಲ ತನ್ನ ಸ್ವಯಂಸೇವಕರು ಪ್ರತಿ ವರ್ಷ ಅತ್ಯಂತ ಪಾರದರ್ಶಕವಾಗಿ ನೀಡುವ ಗುರುದಕ್ಷಿಣೆ ಎಂಬ ವ್ಯವಸ್ಥೆಯಿಂದ ನಡೆಯುವ ಸಂಘಟನೆಗೆ, ಸರ್ಕಾರದ ಮಾನ್ಯತೆಗಾಗಿ ಹಂಬಲಿಸುವ ಅಗತ್ಯ ಇರುವುದಿಲ್ಲ.
ಪ್ರಬುದ್ಧ ರಾಜಕಾರಣದ ಅಗತ್ಯ:
ಸಂವಿಧಾನವನ್ನು ಕೇವಲ ಅಕ್ಷರಶಃ ಓದುವುದಕ್ಕಿಂತ, ಅದರ ತಾತ್ವಿಕ ಆಶಯವನ್ನು ಗ್ರಹಿಸುವುದೇ ಪ್ರಬುದ್ಧ ರಾಜಕಾರಣದ ಲಕ್ಷಣ. ಒಂದು ಸಂಘಟನೆಯ ಶ್ರೇಷ್ಠತೆಯು ರಿಜಿಸ್ಟ್ರಾರ್ ಕಚೇರಿಯ ಕಡತದಲ್ಲಿರುವ ಪ್ರಮಾಣಪತ್ರದಿಂದ ನಿರ್ಧಾರ ಆಗುವುದಿಲ್ಲ; ಬದಲಿಗೆ, ಸಮಾಜದ ಪ್ರಗತಿ, ವಿಪತ್ತಿನ ಕಾಲದ ನಿಸ್ವಾರ್ಥ ಸೇವೆ, ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಅದು ನೀಡುವ ಕೊಡುಗೆಯಿಂದ ನಿರ್ಧಾರವಾಗುತ್ತದೆ. ಕಾಗದದಲ್ಲಿ ರಿಜಿಸ್ಟರ್ ಆಗಿ, ವಿದೇಶಿ ಫಂಡ್ ತಂದು, ದೇಶವಿಭಜಕ ಕೃತ್ಯಗಳಲ್ಲಿ ತೊಡಗುವ ಎನ್.ಜಿ.ಓಗಳ ಬೆನ್ನಿಗೆ ನಿಲ್ಲುವವರಿಗೆ ಆರ್.ಎಸ್.ಎಸ್ ನಂತಹ ನೈಜ ಸಾಂವಿಧಾನಿಕ ಮತ್ತು ಸಾಮಾಜಿಕ ಶಕ್ತಿಯ ಮಹತ್ವ ಅರ್ಥವಾಗುವುದು ಕಷ್ಟ. ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ, ಸಂವಿಧಾನ ಮತ್ತು ಇತಿಹಾಸದ ಕುರಿತ ಚರ್ಚೆಗಳು ಬೌದ್ಧಿಕ ಎತ್ತರದಲ್ಲಿರಬೇಕೇ ಹೊರತು, ಆಧಾರರಹಿತ ಪ್ರಲಾಪಗಳಾಗಿರಬಾರದು.
