ಪ್ರಿಯಾಂಕ ಖರ್ಗೆ ಮತ್ತೆ ಹುಟ್ಟಿದರೂ ಆರ್‌ಎಸ್‌ಎಸ್ ನಿಷೇಧ ಅಸಾಧ್ಯ: ಯಶ್ಪಾಲ್ ಸುವರ್ಣ

| Published : Oct 14 2025, 01:02 AM IST

ಪ್ರಿಯಾಂಕ ಖರ್ಗೆ ಮತ್ತೆ ಹುಟ್ಟಿದರೂ ಆರ್‌ಎಸ್‌ಎಸ್ ನಿಷೇಧ ಅಸಾಧ್ಯ: ಯಶ್ಪಾಲ್ ಸುವರ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಭಾನುವಾರ ಪ್ರಿಯಾಂಕ ಖರ್ಗೆ, ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದರ ಮತ್ತು ಡಿ.ಕೆ. ಶಿವಕುಮಾರ್ ಆರ್‌ಎಸ್ಎಸ್ ಬಗ್ಗೆ ಮಾಡಿರುವ ಟೀಕೆಗಳನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಖಂಡಿಸಿದ್ದಾರೆ.

ಉಡುಪಿ: ಕಾಂಗ್ರೆಸ್ ಸಚಿವ ಪ್ರಿಯಾಂಕ ಖರ್ಗೆ ಇನ್ನೊಂದು ಜನ್ಮ ಎತ್ತಿ ಬಂದರೂ ಆರ್‌ಎಸ್ಎಸ್ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ ಹೇಳಿದರು.ಭಾನುವಾರ ಪ್ರಿಯಾಂಕ ಖರ್ಗೆ, ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದರ ಮತ್ತು ಡಿ.ಕೆ. ಶಿವಕುಮಾರ್, ಆರ್‌ಎಸ್ಎಸ್ ಬಗ್ಗೆ ಮಾಡಿರುವ ಟೀಕೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.ಆರ್‌ಎಸ್ಎಸ್‌ನ್ನು ನಿಷೇಧಿಸುವ ತಾಕತ್ತು ಅವರಿಗಿಲ್ಲ. ಪ್ರಿಯಾಂಕ ಖರ್ಗೆಯವರೇ ಮೊದಲು ಕಲಬುರ್ಗಿಯ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿ ತೋರಿಸಿ, ನಿಮ್ಮ ಜಿಲ್ಲೆ ಎಸ್ಎಸ್ಎಲ್‌ಸಿ - ಪಿಯುಸಿಯಲ್ಲಿ ಪ್ರಥಮ 5 ಸ್ಥಾನ ಪಡೆಯುವಂತೆ ಮಾಡಿ. ಅನಂತರ ರಾಜ್ಯದ ಜನರಿಗೆ ಪಾಠ ಮಾಡಿ ಎಂದು ಸಲಹೆ ನೀಡಿದ್ದಾರೆ.ಕೇವಲ ಮುಸ್ಲಿಮರನ್ನು ಓಲೈಕೆ ಮಾಡುವ ಇಂತಹ ಹೇಳಿಕೆಯನ್ನು ಬಿಟ್ಟು ಕಲ್ಬುರ್ಗಿಯಲ್ಲಿ ಮಸೀದಿಯ ಆಜಾನ್‌ ನಿಷೇಧ ಮಾಡುವ ತಾಕತ್ತು ತೋರಿಸಿ. ನೀವು ಬರೆದ ಪತ್ರ ಪರಿಶೀಲಿಸುವ ಮೊದಲು ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳಲಿ. ಸಿಎಂ ಕೂಡ ಇವತ್ತಲ್ಲ ನಾಳೆ ಆರ್‌ಎಸ್ಎಸ್‌ನ್ನು ಒಪ್ಪುವ ಸ್ಥಿತಿ ಬರುತ್ತದೆ ಎಂದರು.

ಡಿಕೆಶಿಯವರೇ ಗಣವೇಷ ಧರಿಸುತ್ತಾರೆ!

ಡಿ.ಕೆ. ಶಿವಕುಮಾರ್ ಅವರಿಗೆ ಆರ್‌ಎಸ್ಎಸ್ ಬಗ್ಗೆ ಮಾತನಾಡುವ ನೈತಿಕತೆ ತಿಳಿವಳಿಕೆ ಇಲ್ಲ. ಅವರು ಸಿಎಂ ಆಗುವ ಚರ್ಚೆ ನಡೆಯುತ್ತಿದೆ. ಆದರೆ ಅವರನ್ನು ಸಿದ್ದರಾಮಯ್ಯ ಕಾಂಗ್ರೆಸ್‌ನಿಂದಲೇ ಹೊರಗೆ ಹಾಕುತ್ತಾರೆ. ಆಮೇಲೆ ಡಿ.ಕೆ. ಶಿವಕುಮಾರ್ ಕೂಡ ಆರ್‌ಎಸ್‌ಎಸ್‌ನ ಗಣವೇಶ ಧರಿಸಿ ಪಥಸಂಚಲನ ಮಾಡುವುದನ್ನು ನೋಡುವ ಭಾಗ್ಯ ಕರುನಾಡಿಗೆ ಸಿಗಬಹುದು. ಈ ಹಿಂದೆ ಟೀಕೆ ಮಾಡಿದವರೆಲ್ಲಾ ನಂತರ ಆರ್‌ಎಸ್ಎಸ್‌ನ್ನು ಒಪ್ಪಿಕೊಂಡಿದ್ದಾರೆ ಎಂದು ಯಶ್ಪಾಲ್‌ ಹೇಳಿದರು.