ಯೋಗವು ಕೇವಲ ಆಸನ ಅಥವಾ ದೇಹದ ಭಂಗಿಗಳಲ್ಲ. ವ್ಯಾಯಾಮ ಮತ್ತು ಆಸನಗಳು ಯೋಗದ ಒಂದು ಭಾಗವಾಗಿರುವುದು ನಿಜ. ಆದರೆ ಯೋಗವನ್ನು ಕೇವಲ ವ್ಯಾಯಾಮ ಎಂದು ಸೀಮಿತಗೊಳಿಸಬಾರದು ಅಥವಾ ತಪ್ಪಾಗಿ ಅರ್ಥೈಸಿಕೊಳ್ಳಬಾರದು.
-ಗುರುದೇವ ಶ್ರೀ ಶ್ರೀ ರವಿ ಶಂಕರ್, ಆರ್ಟ್ ಆಫ್ ಲಿವಿಂಗ್.
ಯೋಗದ ರಹಸ್ಯ
ನಮ್ಮ ದಿನನಿತ್ಯದ ಜೀವನದಲ್ಲಿ ಎದುರಾಗುವ ಒತ್ತಡ, ಆತಂಕ ಮತ್ತು ವಿವಿಧ ಸನ್ನಿವೇಶಗಳ ನಡುವೆಯೂ ನಮ್ಮ ಮುಖದಲ್ಲಿ ನಗುವನ್ನು ಮೂಡಿಸುವುದೇ ಯೋಗದ ಉದ್ದೇಶ. ಅತೃಪ್ತಿ ಮತ್ತು ದುಃಖದ ಮೂಲವನ್ನು ಅರಿತಾಗ ಮಾತ್ರ ನಿಜವಾದ ಸಂತೋಷವನ್ನು ನಾವು ಕಂಡುಕೊಳ್ಳಬಹುದು. ಒತ್ತಡ, ಆತಂಕ ಮತ್ತು ವಿಶಾಲ ದೃಷ್ಟಿಕೋನದ ಅಭಾವವೇ ದುಃಖಕ್ಕೆ ಕಾರಣವಾಗಿದೆ.
ಯೋಗಾಭ್ಯಾಸವು ನಮ್ಮಲ್ಲಿನ ಒತ್ತಡ, ದೈಹಿಕ ಆಯಾಸ ಮತ್ತು ಮಾನಸಿಕ ತಲ್ಲಣಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.
ಸ್ವಸ್ಥ ಜೀವನಕ್ಕಾಗಿ ಇಂದು ಯೋಗವು ಬಹುತೇಕ ಅನಿವಾರ್ಯವಾಗಿದೆ. ಇದು ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಅನಾವರಣಗೊಳಿಸಲು ಸಹಾಯ ಮಾಡುತ್ತದೆ.
ಹಾಗಾದರೆ ಯೋಗ ಎಂದರೇನು? ಯೋಗವು ಕೇವಲ ಆಸನ ಅಥವಾ ದೇಹದ ಭಂಗಿಗಳಲ್ಲ. ವ್ಯಾಯಾಮ ಮತ್ತು ಆಸನಗಳು ಯೋಗದ ಒಂದು ಭಾಗವಾಗಿರುವುದು ನಿಜ. ಆದರೆ ಯೋಗವನ್ನು ಕೇವಲ ವ್ಯಾಯಾಮ ಎಂದು ಸೀಮಿತಗೊಳಿಸಬಾರದು ಅಥವಾ ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಇದು ಮಾನವ ಜೀವನದ ಸಮಗ್ರ ಬೆಳವಣಿಗೆ, ಅಭಿವ್ಯಕ್ತಿ ಮತ್ತು ಸಂಪರ್ಕವಾಗಿದೆ. ಯೋಗವು ಒಂದು ಸಂಪೂರ್ಣ ವಿಜ್ಞಾನ.
ಯೋಗ ಎಂದರೆ ಕೌಶಲ್ಯ:ಜೀವನವನ್ನು ನಡೆಸುವ ಕೌಶಲ್ಯ, ಮನಸ್ಸನ್ನು ನಿಭಾಯಿಸುವ ಕೌಶಲ್ಯ, ಜನರೊಂದಿಗೆ ಹೊಂದಿಕೊಳ್ಳುವ ಕೌಶಲ್ಯ, ಪ್ರೀತಿಯಿಂದಿರುವ ಕೌಶಲ್ಯ.ಯೋಗದಲ್ಲಿ ಮೊದಲ ಹೆಜ್ಜೆಯೇ ‘ಯಮ’; ಅಂದರೆ ನಿಯಮಗಳು ಅಥವಾ ಸಾಮಾಜಿಕ ನೈತಿಕತೆ. ಅದರಲ್ಲಿ ಮೊದಲನೆಯದು ಅಹಿಂಸೆ. ಒಬ್ಬ ವ್ಯಕ್ತಿಯು ತನ್ನ ಚಿಂತನೆ, ಮಾತು ಮತ್ತು ಕೃತಿಗಳಲ್ಲಿ ಹಿಂಸೆಯನ್ನು ತ್ಯಜಿಸಬೇಕು. ಹಿಂಸೆಯು ಮತ್ತಷ್ಟು ಹಿಂಸೆಯನ್ನು ಹುಟ್ಟುಹಾಕುತ್ತದೆ, ಅಲ್ಲವೇ? ಅದು ಒಂದು ಸರಪಳಿ ಪ್ರತಿಕ್ರಿಯೆಯನ್ನು ಸೃಷ್ಟಿಸುತ್ತದೆ.
ಈಗ ಯಾರಾದರೂ ನಮಗೆ ನೋವುಂಟುಮಾಡುವ ಮಾತುಗಳನ್ನು ಆಡಿದರೆ, ನಾವು ಪ್ರತಿಯಾಗಿ ಅವರಿಗೆ ನೋವುಂಟು ಮಾಡುವಂತಹ ಮಾತುಗಳನ್ನು ಆಡುತ್ತೇವೆ. ಇದು ಒಂದು ನಿರಂತರ ಪ್ರಕ್ರಿಯೆಯಾಗಿ ಮುಂದುವರಿಯುತ್ತದೆ. ಇದನ್ನು ಎಲ್ಲೋ ಒಂದು ಕಡೆ ನಿಲ್ಲಿಸಲೇಬೇಕಾಗುತ್ತದೆ. ಇಲ್ಲದಿದ್ದರೆ ಯೋಗದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಅಹಿಂಸೆಯು ಜೀವನದ ಮೂಲ ಆಧಾರವಾಗಿರಬೇಕು.
ಅಹಿಂಸೆಯ ಪ್ರಯೋಜನವೇನು?:
‘ಅಹಿಂಸಾಪ್ರತಿಷ್ಠಾಯಾಂ ತತ್ಸನ್ನಿಧೌ ವೈರತ್ಯಾಗಃ’
ಅಂದರೆ, ಅಹಿಂಸೆಯು ನಿಮ್ಮೊಳಗೆ ದೃಢವಾಗಿ ನೆಲೆಗೊಂಡಾಗ, ನಿಮ್ಮ ಉಪಸ್ಥಿತಿಯಲ್ಲಿ ಇತರರು ತಮ್ಮ ಹಿಂಸಾತ್ಮಕ ಪ್ರವೃತ್ತಿಗಳನ್ನು ಕಳೆದುಕೊಳ್ಳುತ್ತಾರೆ. ಇದು ಹಲವು ಬಾರಿ ಸಂಭವಿಸುವುದನ್ನು ನಾವು ನೋಡಿದ್ದೇವೆ.
ನಮ್ಮ ಜೀವನದಲ್ಲಿ ಎಷ್ಟರ ಮಟ್ಟಿಗೆ ಅಹಿಂಸೆ ನೆಲೆಗೊಂಡಿದೆಯೋ, ಅಷ್ಟೇ ಮಟ್ಟಿಗೆ ಇತರರಲ್ಲಿರುವ ಆಕ್ರಮಣಶೀಲತೆ ಮತ್ತು ದ್ವೇಷ ಕಡಿಮೆಯಾಗುತ್ತದೆ. ನಿಮ್ಮ ಮಾತುಗಳಿಗಿಂತ, ನಿಮ್ಮ ಸ್ಪಂದನೆಗಳು (ವೈಬ್ರೇಷನ್‌ಗಳು) ಹೆಚ್ಚು ಪ್ರಭಾವ ಬೀರುತ್ತವೆ. ಆದ್ದರಿಂದಲೇ ನಮ್ಮ ಸ್ಪಂದನೆಗಳನ್ನು ಉನ್ನತ ಮಟ್ಟಕ್ಕೆ ನಾವು ಏರಿಸಿಕೊಳ್ಳಬೇಕಾಗುತ್ತದೆ. ಯೋಗವು ಅದನ್ನು ಸಾಧಿಸುವ ಮಾರ್ಗವಾಗಿದ್ದರೆ, ಧ್ಯಾನವು ಅದರ ಕೇಂದ್ರವಾಗಿದೆ.
ಯೋಗಾಸನಗಳನ್ನು ಉಸಿರಾಟದೊಂದಿಗೆ ಸಮನ್ವಯಗೊಳಿಸಿ, ಪೂರ್ಣ ಅರಿವಿನೊಂದಿಗೆ ಮಾಡಬೇಕಾಗಿದೆ. ನೀವು ತೋಳನ್ನು ಮೇಲಕ್ಕೆ ಎತ್ತಿದರೆ, ನೀವು ನಿಮ್ಮ ತೋಳನ್ನು ಮೇಲಕ್ಕೆತ್ತುತ್ತಿದ್ದೀರಿ ಎಂಬ ಸಂಪೂರ್ಣ ಅರಿವು ನಿಮ್ಮಲ್ಲಿರಬೇಕು. ಅದು ಒಂದು ಭಂಗಿಯಿಂದ ಇನ್ನೊಂದಕ್ಕೆ ಸಾಗುವ ನೃತ್ಯದಂತೆ. ಪ್ರತಿಯೊಂದು ಆಸನವನ್ನು ಸ್ಥಿರತೆಯಿಂದ ಮತ್ತು ಆರಾಮವಾಗಿ ಮಾಡಬೇಕು. ಆದ್ದರಿಂದ, ಆರಂಭದಲ್ಲಿ ನಿಮ್ಮ ಸಾಮರ್ಥ್ಯಕ್ಕಿಂತ ಸ್ವಲ್ಪ ಹೆಚ್ಚು ಚಾಚಿ, ನಂತರ ವಿಶ್ರಮಿಸಿ, ಪ್ರಯತ್ನವನ್ನು ಬಿಟ್ಟುಬಿಡಿ.
ಈ ರೀತಿಯಾಗಿ ಅಭ್ಯಾಸ ಮಾಡಿದಾಗ, ಯೋಗವು ವ್ಯಕ್ತಿಯ ನಡವಳಿಕೆಯ ಶೈಲಿ, ಆಲೋಚನಾ ಶೈಲಿ ಮತ್ತು ಮನೋಭಾವದ ಮೇಲೆ ಪರಿಣಾಮ ಬೀರುತ್ತದೆ; ನಿಮ್ಮ ಪ್ರಜ್ಞೆಯಲ್ಲಿ ಅನಂತತೆಯು ಉದಯಿಸುತ್ತದೆ.
ನಮ್ಮಲ್ಲಿ ಉಂಟಾಗುವ ನಕಾರಾತ್ಮಕ ಭಾವನೆಗಳು ನಮ್ಮನ್ನು ಆಗಾಗ ಅಸಹಾಯಕರನ್ನಾಗಿಸುತ್ತದೆ. ಅವುಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ನಮಗೆ ಶಾಲೆಯಲ್ಲಿಯಾಗಲಿ ಅಥವಾ ಮನೆಯಲ್ಲಿಯಾಗಲಿ ಕಲಿಸಿಕೊಟ್ಟಿಲ್ಲ. ನಿಮಗೆ ಬೇಸರವಾದರೆ, ನೀವು ಆ ಬೇಸರದಲ್ಲೇ ಇರುತ್ತೀರಿ. ಇಲ್ಲವೇ, ಸಮಯವೇ ನಿಮ್ಮನ್ನು ಗುಣಪಡಿಸಲಿ ಎಂದು ಕಾಯುತ್ತೀರಿ. ಯೋಗದಲ್ಲಿ ನಿಮ್ಮ ಮನಸ್ಥಿತಿಯನ್ನು ಬದಲಾಯಿಸುವ ರಹಸ್ಯ ಅಡಗಿದೆ. ಯಾವುದೇ ಸಮಯದಲ್ಲಿ ನಿಮಗೆ ಬೇಕಾದ ರೀತಿಯಲ್ಲಿ ನಿಮ್ಮ ಮನಸ್ಸಿನ ಭಾವನೆಗಳನ್ನು ಬದಲಾಯಿಸಿಕೊಳ್ಳುವ ಶಕ್ತಿಯನ್ನು ಅದು ನಿಮಗೆ ನೀಡುತ್ತದೆ ಮತ್ತು ತನ್ಮೂಲಕ ನಿಮ್ಮನ್ನು ಸ್ವತಂತ್ರರನ್ನಾಗಿಸುತ್ತದೆ.
ನಿಮ್ಮೊಂದಿಗೆ ನಿಮ್ಮ ಸಂಪರ್ಕ:
ಯೋಗವೆಂದರೆ ನಿಮ್ಮೊಂದಿಗೆ ನೀವು ಸಂಪರ್ಕವನ್ನು ಸಾಧಿಸಿಕೊಳ್ಳುವುದು. ನಿಮ್ಮ ಮೂಲದೊಂದಿಗೆ ಸಂಪರ್ಕ ಸಾಧಿಸುವುದು. ದೇಹ, ಮನಸ್ಸು ಮತ್ತು ಆತ್ಮವನ್ನು ಒಂದಾಗಿಸುವುದು ಮತ್ತು ಅದನ್ನು ಬ್ರಹ್ಮಾಂಡದೊಂದಿಗೆ ಒಂದುಗೂಡಿಸುವುದು. ಒತ್ತಡ ಕರಗಿ ಹೋದಾಗ, ದೃಷ್ಟಿ ಸ್ಪಷ್ಟವಾಗುತ್ತದೆ. ಮನಸ್ಸು ಶಾಂತವಾದಾಗ, ಹಿಂಸೆಯ ಸ್ಥಾನವನ್ನು ಕರುಣೆ ಆವರಿಸುತ್ತದೆ. ಅರಿವು ಆಳವಾದಾಗ, ಜೀವನವು ತನ್ನ ಸಂಪೂರ್ಣ ಸಾಮರ್ಥ್ಯದೊಂದಿಗೆ ಅರಳುತ್ತದೆ.
