ಸಾರಾಂಶ
- ರಾಜ್ಯ ಸರ್ಕಾರ ವಜಾಕ್ಕಾಗಿ ರಾಜ್ಯಪಾಲರಿಗೆ ರೇಣುಕಾಚಾರ್ಯ ಒತ್ತಾಯ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ತಮ್ಮನ್ನು ತಾವು ಚಿತ್ತಾಪುರ ನಿಜಾಮ ಅಂದುಕೊಂಡಿದ್ದಾರೇನೋ ಗೊತ್ತಿಲ್ಲ. ರಾಜ್ಯದ ಚಿತ್ತಾಪುರ ಭಾರತದಲ್ಲಿದೆಯೋ ಅಥವಾ ಖರ್ಗೆ ಕುಟುಂಬದ ರಿಪಬ್ಲಿಕ್ ಆಗಿದೆಯೋ ಗೊತ್ತಾಗುತ್ತಿಲ್ಲ. 2028ಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಸೂರ್ಯ-ಚಂದ್ರರಿರುವಷ್ಟೇ ಸತ್ಯ. ಆಗ ಈ ಎಲ್ಲದಕ್ಕೂ ಸರಿಯಾದ ಉತ್ತರ ನೀಡುತ್ತೇವೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂತಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಅಲ್ಲಿನ ಪುರಸಭೆಯಿಂದ ಅನುಮತಿ ಪಡೆದು, ಬ್ಯಾನರ್, ಧ್ವಜ ಕಟ್ಟಲು ಜಾಹೀರಾತು ತೆರಿಗೆ ಕಟ್ಟಿ, ರಸೀದಿ ಪಡೆಯಲಾಗಿದೆ. ನಿಯಮಾನುಸಾರ ಅನುಮತಿ ಪಡೆದರೂ ರಾತ್ರೋರಾತ್ರಿ ಕೇಸರಿ ಬ್ಯಾನರ್, ಧ್ವಜಗಳನ್ನು ತೆರವುಗೊಳಿಸಲಾಗಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್‌ನಿಂದ ಕರ್ನಾಟಕ ದಿವಾಳಿ:ಭ್ರಷ್ಟಾಚಾರದಲ್ಲಿ ಮುಳುಗಿರುವ, ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ರಾಜ್ಯಪಾಲರು ಕರ್ನಾಟಕದ ಮುಂದಿನ ಭವಿಷ್ಯಕ್ಕಾಗಿ ತಕ್ಷಣ ವಜಾಗೊಳಿಸಬೇಕು. ಭ್ರಷ್ಟ ಮತ್ತು ಶೋಷಣೆಯ ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ಕರ್ನಾಟಕ ದಿವಾಳಿಯಾಗಿದೆ. ಗುತ್ತಿಗೆದಾರರಿಗೆ 8 ವಿವಿಧ ಇಲಾಖೆಗಳಿಂದ ಪಾವತಿಸಬೇಕಾದ ಹಣ ಹಣಕ್ಕೆ ₹33 ಸಾವಿರ ಕೋಟಿ ರು.ಗೆ ಬೇಡಿಕೆ ಇಟ್ಟಿರುವುದೇ ಭ್ರಷ್ಟಾಚಾರಕ್ಕೆ ಸಾಕ್ಷಿ ಎಂದರು.
ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ, ವಸತಿ ಇಲಾಖೆ, ಕಾರ್ಮಿಕ ಇಲಾಖೆಗೆ ಹೀಗೆ ಎಲ್ಲಾ ಇಲಾಖೆಗಳಲ್ಲೂ ಉಸಿರುಗಟ್ಟುವ ಪರಿಸ್ಥಿತಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕುರ್ಚಿಗಾಗಿ ಆಂತರಿಕ ಕಿತ್ತಾಟದಲ್ಲಿ ತೊಡಗಿದ್ದಾರೆ. ಸಿಎಂ-ಡಿಸಿಎಂ ಕುರ್ಚಿ ಗದ್ದಲದಲ್ಲಿ, ಇಂತಹವರ ರಾಜಕೀಯ ಜಂಜಾಟಕ್ಕೆ ಇಡೀ ರಾಜ್ಯದ ಬೊಕ್ಕಸವನ್ನೇ ಖಾಲಿ ಮಾಡಿದ್ದಾರೆ ಎಂದು ಆರೋಪಿಸಿದರು.ನಿರ್ಮಾಣ, ಅಭಿವೃದ್ಧಿ ಕಾರ್ಯ ಕೈಗೊಂಡ ಗುತ್ತಿಗೆದಾರರು ತಮ್ಮ ಹಣ ಪಾವತಿಸುವಂತೆ ಬೇಡಿಕೊಂಡರೆ ನ್ಯಾಯಾಲಯಕ್ಕೆ ಹೋಗುವಂತೆ ಕಾಂಗ್ರೆಸ್ ಸರ್ಕಾರ ಹೇಳುತ್ತಿದೆ. ಗುತ್ತಿಗೆದಾರರಿಗೆ ಕೊಡಬೇಕಾದ ಹಣವನ್ನೂ ಕೊಡಲಾಗದಷ್ಟು ಮಟ್ಟಿಗೆ ರಾಜ್ಯವನ್ನು ಪಾಪರ್ ಮಾಡಿದ್ದೀರಿ. ಅಪರೂಪಕ್ಕೆ ಕೊಡುವ ಬಿಲ್‌ಗೂ ಶೇ.80ರಷ್ಟು ಕಮಿಷನ್‌ಗೆ ಕಾಂಗ್ರೆಸ್ಸಿಗರು ಬೇಡಿಕೆ ಇಡುತ್ತಿದ್ದಾರೆ. ಇಂತಹವರಿಂದ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಪಕ್ಷದ ಮುಖಂಡರಾದ ರಾಜು ವೀರಣ್ಣ, ಪ್ರವೀಣ ರಾವ್ ಜಾಧವ್, ಪಂಜು ಪೈಲ್ವಾನ್, ಅಜಯ್, ಚೇತನ್, ಮಂಜುನಾಥ, ರವಿಗೌಡ, ರುದ್ರೇಶ ಇತರರು ಇದ್ದರು.- - -
-18ಕೆಡಿವಿಜಿ3.ಜೆಪಿಜಿ:ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.