ಹಗರಿಬೊಮ್ಮನಹಳ್ಳಿ: ಫಾಸ್ಟ್‌ಫುಡ್ ಸಂಸ್ಕೃತಿಯನ್ನು ವೈಭವೀಕರಿಸುತ್ತಿರುವ ಪರಿಣಾಮವಾಗಿ ಯುವ ಜನಾಂಗವು ಭಾರತದ ಆಹಾರ ಪದ್ಧತಿಯಿಂದ ವಿಮುಖರಾಗುತ್ತಿದ್ದಾರೆ. ರೋಗಮುಕ್ತ ಸಮಾಜ ಕಲ್ಪನೆಯಲ್ಲಿಯೇ ಉಳಿಯಲಿದೆ ಎಂದು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ಸೋಮನಗೌಡ ವಿಷಾದಿಸಿದರು.
ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿದ್ಯಾರಣ್ಯ ಸಭಾಮಂಟಪದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಹಾಗೂ ಪತಂಜಲಿ ಯೋಗ ಸಮಿತಿ ಹಗರಿಬೊಮ್ಮನಹಳ್ಳಿ ಸಹಯೋಗದಲ್ಲಿ ಹರಪನಹಳ್ಳಿಯ ಜನನಿ ಯೋಗ ಹಾಗೂ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಭಾನುವಾರ ಆಯೋಜಿಸಿದ್ದ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪರಿಪೂರ್ಣ ಯೋಗ ಸಾಧನೆ ಮತ್ತು ಸಂತುಲಿತ ಆಹಾರ ಪದ್ಧತಿಯನ್ನೇ ಔಷಧಿಯನ್ನಾಗಿ ರೂಪಿಸಿಕೊಂಡು ಆರೋಗ್ಯಪೂರ್ಣ ಜೀವನದ ಸಮಾಜ ನಿರ್ಮಾಣದತ್ತ ನಾವೆಲ್ಲರೂ ಗಂಭೀರವಾಗಿ ಚಿಂತಿಸಬೇಕು. ಯೋಗ ಭಾರತದ ಕೊಡುಗೆಯಾಗಿದ್ದರೂ ಪಾಶ್ಚಾತ್ಯರು ಯೋಗದ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಯೋಗ ಸಾಧನೆಯ ಜೊತೆಗೆ ಯೋಗದಿಂದ ರೋಗಮುಕ್ತ ಸಮಾಜ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಆಸ್ಪತ್ರೆಯ ನಿರ್ದೇಶಕ ಡಾ.ರಾಜೇಶ್ ಪಾದೇಕಲ್ ಮಾತನಾಡಿ, ಪೋಷಕರು ಬಾಲ್ಯದಲ್ಲಿಯೇ ಭಾರತೀಯ ಆಹಾರ ಪದ್ಧತಿಯ ಅಗತ್ಯ ಕುರಿತು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ದೇಹವನ್ನು ಸದೃಢವಾಗಿಸುವ ಚಿಕಿತ್ಸಾ ಸೌಲಭ್ಯಗಳು ಪ್ರಕೃತಿ ಚಿಕಿತ್ಸಾ ಪದ್ಧತಿಯಲ್ಲಿ ಹೇರಳವಾಗಿ ಸಿಗುತ್ತವೆ. ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ರಾಜ್ಯದ ಎಲ್ಲೆಡೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.ಭಾರತೀಯ ಆಹಾರ ಪದ್ಧತಿ ಮನೋದೈಹಿಕ ಆರೋಗ್ಯಕ್ಕೆ ಪೂರಕವಾಗುದೆ. ಮನಸ್ಸು ಮತ್ತು ದೇಹದ ಸಮತೋಲನ ಕಾಪಾಡಿಕೊಳ್ಳುವುದೇ ಉತ್ತಮ ಆರೋಗ್ಯದ ಗುಟ್ಟಾಗಿದೆ. ಪಾಶ್ಚಾತ್ತರ ಅಂಧಾನುಕರಣೆ ತೊರೆದು ನಮ್ಮತನವನ್ನು ರೂಢಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಆಸ್ಪತ್ರೆಯ ಮಾಧ್ಯಮ ಮುಖ್ಯಸ್ಥ ಉದಯಶಂಕರ್ ಭಟ್, ಪತ್ರಕರ್ತ ಪಂಚಾಕ್ಷರಿ, ಪತಂಜಲಿ ಚಿಕಿತ್ಸಾ ವಿಭಾಗದ ಮುಖ್ಯಸ್ಥೇ ಡಾ.ಪೂರ್ಣಿಮಾ ಮಾತನಾಡಿದರು. ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶ್ರೀಮತಿ ವೇದಾವತಿ ಉಪ್ಪಿನ್, ಪುರಸಭಾ ಸದಸ್ಯರಾದ ಕಮಲಮ್ಮ ಶಿವಮೊಗ್ಗ, ರಾಜೇಶ್ ಬ್ಯಾಡಗಿ, ಉದ್ಯಮಿ ಶಂಭುಲಿಂಗ ಮತ್ತು ವ್ಯವಸ್ಥಾಪಕ ಅನೀಶ್ ಉಪಸ್ಥಿತರಿದ್ದರು. ೨೦೦ಕ್ಕೂ ಹೆಚ್ಚು ಸಾರ್ವಜನಿಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಹಗರಿಬೊಮ್ಮನಹಳ್ಳಿಯಲ್ಲಿ ಭಾನುವಾರ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ಸೋಮನಗೌಡ ಉದ್ಘಾಟಿಸಿದರು.