ಇನ್ನಷ್ಟು ಕನ್ನಡ ಕೃತಿಗಳ ಅನುವಾದಕ್ಕೆ ‘ಬುಕರ್‌’ ಪ್ರೇರಣೆಯಾಗಲಿ : ರವಿ ಹೆಗಡೆ

KannadaprabhaNewsNetwork |  
Published : Sep 08, 2025, 02:03 AM IST
B P wadia 1 | Kannada Prabha

ಸಾರಾಂಶ

ಕನ್ನಡ ಸಾಹಿತ್ಯಕ್ಕೆ   ಪ್ರತಿಷ್ಠಿತ ಅಂತಾರಾಷ್ಟ್ರೀಯ ಬುಕರ್‌ ಪ್ರಶಸ್ತಿ ಹೆಚ್ಚು ಹೆಚ್ಚು ಕನ್ನಡದ ಪುಸ್ತಕಗಳ ಅನುವಾದಕ್ಕೆ ಪ್ರೇರಣೆಯಾಗಲಿ. ಈ ಮೂಲಕ ಕನ್ನಡ ಸಾಹಿತ್ಯ ದೊಡ್ಡಮಟ್ಟದಲ್ಲಿ ಅಂತಾರಾಷ್ಟ್ರೀಯ ಓದುಗರನ್ನು ತಲುಪುವಂತಾಗಬೇಕು ಎಂದು ‘ಕನ್ನಡಪ್ರಭ’ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದ್ದಾರೆ.

 ಬೆಂಗಳೂರು :  ಕನ್ನಡ ಸಾಹಿತ್ಯಕ್ಕೆ ಈ ಬಾರಿ ಬಂದಿರುವ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬುಕರ್‌ ಪ್ರಶಸ್ತಿ ಹೆಚ್ಚು ಹೆಚ್ಚು ಕನ್ನಡದ ಪುಸ್ತಕಗಳ ಅನುವಾದಕ್ಕೆ ಪ್ರೇರಣೆಯಾಗಲಿ. ಈ ಮೂಲಕ ಕನ್ನಡ ಸಾಹಿತ್ಯ ದೊಡ್ಡಮಟ್ಟದಲ್ಲಿ ಅಂತಾರಾಷ್ಟ್ರೀಯ ಓದುಗರನ್ನು ತಲುಪುವಂತಾಗಬೇಕು ಎಂದು ‘ಕನ್ನಡಪ್ರಭ’ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದ್ದಾರೆ.

ಭಾನುವಾರ ಬಸವನಗುಡಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಡ್‌ ಕಲ್ಚರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಕಿತ ಪುಸ್ತಕ ಪ್ರಕಾಶನ ಹೊರತಂದಿರುವ ‘ಕನ್ನಡಪ್ರಭ’ ಪುರವಣಿ ಪ್ರಧಾನ ಸಂಪಾದಕರೂ ಆಗಿರುವ ಲೇಖಕ ಜೋಗಿ ಅವರ ‘ನೀಲಿಹೂವು ಖಾಲಿ ಹೃದಯ’, ಪತ್ರಕರ್ತರಾದ ಹರೀಶ್‌ ಕೇರ ಅವರ ‘ನಿಲ್ಲು ನಿಲ್ಲೇ ಪತಂಗ’, ವಿಕಾಸ್‌ ನೇಗಿಲೋಣಿ ಅವರ ‘ರುಕುಮಣಿ ರುಕುಮಣಿ’ ಎಂಬ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತಂದುಕೊಡಬಲ್ಲ ಸಾಮರ್ಥ್ಯವಿರುವ ಅದ್ಭುತ ಸಾಹಿತ್ಯ ಕನ್ನಡದಲ್ಲಿ ಹಿಂದೆಯೇ ರಚನೆಯಾಗಿದ್ದರೂ ಪ್ರತಿಷ್ಠಿತ ಬುಕರ್‌ನಂತಹ ಒಂದು ಪ್ರಶಸ್ತಿ ಬರಲು ಇಷ್ಟು ವರ್ಷ ಬೇಕಾಯಿತು. ಇದಕ್ಕೆ ಕಾರಣ ಕನ್ನಡ ಸಾಹಿತ್ಯದ ಪುಸ್ತಕಗಳು ಹೆಚ್ಚು ಹೆಚ್ಚು ಅನುವಾದ ಆಗದಿರುವುದು. ಉದಾಹರಣೆಗೆ ಜೋಗಿ ಅವರು 100ಕ್ಕೂ ಹೆಚ್ಚು ಪುಸ್ತಕ ಬರೆದಿದ್ದಾರೆ. ಆದರೆ, ಒಂದೂ ಪುಸ್ತಕ ಅನುವಾದ ಆಗಿಲ್ಲ. ಅಲ್ಲದೆ, ಅಂತಹ ಪ್ರಶಸ್ತಿಗೆ ಸ್ಪರ್ಧಿಸುವ ಮಟ್ಟಕ್ಕೆ ಹೋಗಬೇಕಾದರೆ ಅಲ್ಲೊಂದು ಲಾಬಿ ಇದೆ. ಸಾಹಿತ್ಯಕ ಏಜೆಂಟ್‌ಗಳು, ಆಯ್ಕೆ ಸಮಿತಿಯನ್ನು ತಲುಪುವ ಪ್ರಯತ್ನ ಆಗಬೇಕು. ಅದು ಆಗದೆ ಹೋದರೆ ನಮ್ಮ ಸಾಹಿತ್ಯದಲ್ಲಿ ಎಷ್ಟೇ ಸತ್ವ ಇದ್ದರೂ ಪ್ರಶಸ್ತಿಗಳು ಬರುವುದಿಲ್ಲ ಎನ್ನುವುದು ವಾಸ್ತವ ಎಂದು ಹೇಳಿದರು.

ಈಗ ಕನ್ನಡ ಸಾಹಿತ್ಯ ಅಂತಹ ಪ್ರಯತ್ನಗಳೆಲ್ಲವನ್ನೂ ಯಶಸ್ವಿಯಾಗಿ ದಾಟಿ ಕನ್ನಡದ ಲೇಖಕಿ ಬಾನು ಮುಷ್ತಾಕ್‌ ಅವರ ‘ಹಾರ್ಟ್‌ ಲ್ಯಾಂಪ್‌’ ಕೃತಿಗೆ ಬುಕರ್‌ ಗೌರವ ದೊರಕಿದೆ. ಸಾಮಾನ್ಯವಾಗಿ ಒಂದೆರಡು ಬಾರಿ ಇಂತಹ ಮನ್ನಣೆ ಸಿಕ್ಕ ಬಳಿಕ ಆ ಭಾಷೆಗೆ ಅಂತರಾಷ್ಟ್ರೀಯ ಸಾಹಿತ್ಯದ ವೇದಿಕೆಯಲ್ಲಿ ಒತ್ತು ಸಿಗುತ್ತಾ ಹೋಗುತ್ತದೆ. ಅಂತಹ ಆರಂಭದ ಕಾಲ ಇದು ಎಂದುಕೊಳ್ಳೋಣ. ಈ ಪ್ರಶಸ್ತಿಯು ಹೆಚ್ಚು ಹೆಚ್ಚು ಕನ್ನಡದ ಸಾಹಿತ್ಯದ ಪುಸ್ತಕಗಳು ಅನ್ಯಭಾಷೆಗಳಿಗೆ ಅನುವಾದ ಆಗಲು ಪ್ರೇರಣೆ ಆಗಲಿ. ಕನ್ನಡ ಬರಹಗಾರರು ಹಾಗೂ ಇಂಗ್ಲಿಷಿನ ಅನುವಾದಕರು ಸೇರಿ ಇಂತಹದ್ದೊಂದು ಪ್ರಯತ್ನ ಆರಂಭಿಸಿದರೆ ಕನ್ನಡ ಸಾಹಿತ್ಯವು ಭಾಷಾ ಚೌಕಟ್ಟಿನಲ್ಲಿ ನಿಂತ ನೀರಾಗದೆ ವಿಶ್ವಮಟ್ಟದಲ್ಲಿ ಬೇರೆ ಬೇರೆ ಭಾಷೆಯ ಓದುಗರನ್ನು ತಲುಪಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾದಂಬರಿ ಪ್ರಕಾರದ ಸಾಹಿತ್ಯ ರಚನೆ ಇತ್ತೀಚೆಗೆ ಕಡಿಮೆ ಆಗುತ್ತಿದೆ. ಇಂತಹ ಸಮಯದಲ್ಲಿ ನಮ್ಮ ಮೂವರೂ ಲೇಖಕರು ಕಾದಂಬರಿ ಹೊರತಂದಿರುವುದು ಉತ್ತಮ ಕೆಲಸ. ಇವತ್ತು ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗುತ್ತಿದ್ದು, ಡಿಜಿಟಲ್‌ ಓದುಗರ ಸಂಖ್ಯೆ ಜಾಸ್ತಿಯಾಗಿದೆ. ಅದರಲ್ಲೂ ಬ್ರಾಡ್‌ಕಾಸ್ಟಿಂಗ್‌ ರೀತಿ ಕೇಳುಗರು ಹೆಚ್ಚುತ್ತಿದ್ದಾರೆ. ಇವತ್ತು ಬರವಣಿಗೆಯನ್ನು ಬ್ರಾಡ್‌ಕಾಸ್ಟಿಂಗ್‌ ಓದಿಗೆ ತರುವುದು ಕಷ್ಟವೇನಿಲ್ಲ. ಕೃತಕ ಬುದ್ಧಿಮತ್ತೆ ಯಾವುದೇ ಬರಹವನ್ನು ಬ್ರಾಡ್‌ಕಾಸ್ಟ್‌ ಮಾಡಿ ಓದುತ್ತದೆ. ಅಷ್ಟೇ ಅಲ್ಲ ಅರ್ಥಪೂರ್ಣವಾಗಿ, ಭಾವನೆಗಳನ್ನು ಜೋಡಿಸಿ ಓದುವ ಸಾಫ್ಟ್‌ವೇರ್‌ ತಂತ್ರಜ್ಞಾನಗಳು ಬಂದಿವೆ. ಹೆಚ್ಚು ಓದುಗರನ್ನು ತಲುಲು ಬರಹಗಾರರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಬಹುಭಾಷಾ ಹಾಸ್ಯಗಾರ್ತಿ ಶ್ರದ್ಧಾ ಜೈನ್‌ ಮಾತನಾಡಿ, ಕನ್ನಡ ಭಾಷೆ ನಾನು ಬಯಸದೆಯೇ, ಅರ್ಹತೆಯನ್ನು ಪರಿಶೀಲಿಸದೆ ನನಗೆ ಸಾಕಷ್ಟು ಮಹತ್ವದ ಅವಕಾಶಗಳನ್ನು ನೀಡಿದೆ. ಅದರ ದೊಡ್ಡ ಸಾಲದ ಹೊರೆ ನನ್ನ ಮೇಲಿದೆ. ಇದನ್ನು ತೀರಿಸಲು ಮುಂದೊಂದು ದಿನ ಕನ್ನಡದಲ್ಲಿ ಏನೋ ಒಂದು ಸಾಧನೆ ಮಾಡುತ್ತೇನೆ ಎನ್ನುವ ದೃಢವಾದ ಆತ್ಮವಿಶ್ವಾಸ ನನ್ನಲ್ಲಿದೆ ಎಂದು ಹೇಳಿದರು.

ಬಿಡುಗಡೆಗೊಂಡ ಪುಸ್ತಕಗಳ ಲೇಖಕರಾದ ಜೋಗಿ, ಹರೀಶ್‌ ಕೇರ, ವಿಕಾಸ್‌ ನೇಗಿಲೋಣಿ ಉಪಸ್ಥಿತರಿದ್ದರು.

PREV
Read more Articles on

Recommended Stories

ಈಡಿಗ ಸಮುದಾಯಕ್ಕೆ ಮೆಡಿಕಲ್‌, ಎಂಜಿನಿಯರಿಂಗ್‌ ಕಾಲೇಜು : ಸಿಎಂ ಭರವಸೆ
ದೇಶ ಕಂಡ ಅಸಾಧಾರಣ ಧ್ವನಿ ಡಾ| ಹಜಾರಿಕಾ