ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಲಿಮಿಟೆಡ್‌ಗೆ ಐಪಿಓ ತೆರೆಯಲು ಸೆಬಿ ಅನುಮತಿ :ವಿನೂತನ ಬೆಳವಣಿಗೆ

KannadaprabhaNewsNetwork |  
Published : Mar 20, 2025, 01:20 AM ISTUpdated : Mar 20, 2025, 05:11 AM IST
ಎಲ್‌ಜಿ | Kannada Prabha

ಸಾರಾಂಶ

ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಲಿಮಿಟೆಡ್ ಕಂಪನಿಯು ಇದೀಗ ತನ್ನ ಐಪಿಓಗಾಗಿ ಸೆಬಿಯಿಂದ ಅನುಮತಿ ಪಡೆದುಕೊಂಡಿರುವ ವಿನೂತನ ಬೆಳವಣಿಗೆ ನಡೆದಿದೆ.

ಬೆಂಗಳೂರು :  ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಕ್‌ನ ಅಂಗಸಂಸ್ಥೆಯಾಗಿರುವ ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಲಿಮಿಟೆಡ್ ಕಂಪನಿಯು ಭಾರತದಲ್ಲಿ ಗೃಹೋಪಯೋಗಿ ಉಪಕರಣಗಳು ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್ (ಮೊಬೈಲ್ ಫೋನ್‌ಗಳನ್ನು ಹೊರತುಪಡಿಸಿ) ವಿಭಾಗದಲ್ಲಿ ಜನಪ್ರಿಯತೆ ಗಳಿಸಿದೆ. ಇದೀಗ ಈ ಕಂಪನಿಯು ತನ್ನ ಐಪಿಓ ಮೂಲಕ ಹಣ ಸಂಗ್ರಹಿಸಲು ಭಾರತದ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿಯಿಂದ ಅನುಮತಿ ಪಡೆದುಕೊಂಡಿದೆ.

ಕಂಪನಿಯು 2024ರ ಡಿಸೆಂಬರ್ 6ರಂದು ಸೆಬಿಗೆ ಐಪಿಓ ದಾಖಲೆಗಳನ್ನು ಸಲ್ಲಿಸಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.ಈ ಐಪಿಓದಲ್ಲಿ ಪ್ರತಿ ಷೇರಿನ ಮುಖಬೆಲೆ 10 ರೂಪಾಯಿಗಳಾಗಿದ್ದು, ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಕ್‌ನಿಂದ ಒಟ್ಟು 10.18 ಕೋಟಿ ಷೇರುಗಳನ್ನು ಮಾರಾಟಕ್ಕೆ ಒದಗಿಸಲಾಗುತ್ತಿದೆ.

ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ 1997ರಲ್ಲಿ ಸ್ಥಾಪನೆಯಾಗಿದ್ದು, ಭಾರತದ ಗೃಹೋಪಯೋಗಿ ಉಪಕರಣಗಳು ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ 13 ವರ್ಷಗಳಿಂದ (2011-2023) ಆಫ್‌ ಲೈನ್ ಮಾರುಕಟ್ಟೆಯಲ್ಲಿ ಮೌಲ್ಯದ ಆಧಾರದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ರೆಡ್‌ಸೀರ್ ವರದಿ ತಿಳಿಸಿದೆ.

2024ರ ಆರ್ಥಿಕ ವರ್ಷದಲ್ಲಿ ಕಂಪನಿಯ ಆದಾಯ 21,352 ಕೋಟಿ ರೂಪಾಯಿಗಳಾಗಿದ್ದು, 2023ರಲ್ಲಿ 19,868.24 ಕೋಟಿ ರೂಪಾಯಿ ಆದಾಯ ಗಳಿಸಿತ್ತು. ಈ ಮೂಲಕ ಕಂಪನಿಯು ಬಹಳಷ್ಟು ಅಭಿವೃದ್ಧಿ ಸಾಧಿಸುತ್ತಿದೆ.

ಕಂಪನಿಯು ವಾಶಿಂಗ್ ಮೆಷಿನ್‌ಗಳು, ರೆಫ್ರಿಜರೇಟರ್‌ಗಳು, ಟಿವಿಗಳು, ಇನ್ವರ್ಟರ್ ಏರ್ ಕಂಡೀಷನರ್‌ಗಳು ಮತ್ತು ಮೈಕ್ರೊವೇವ್‌ ವಿಭಾಗದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಜೂನ್ 30, 2024ರಲ್ಲಿ ಕೊನೆಗೊಂಡ ಆರು ತಿಂಗಳಲ್ಲಿ, ಆಫ್‌ಲೈನ್ ಮಾರುಕಟ್ಟೆಯಲ್ಲಿ ಈ ಉತ್ಪನ್ನಗಳು ದೊಡ್ಡ ಪಾಲನ್ನು ಹೊಂದಿವೆ.

ವಿಶ್ವದಲ್ಲಿ, 2023ರಲ್ಲಿ ಆದಾಯದ ಆಧಾರದಲ್ಲಿ ಎಲ್‌ಜಿ ಎಲೆಕ್ಟ್ರಾನಿಕ್ಸ್ ಏಕೈಕ ಬ್ರ್ಯಾಂಡ್ ಗೃಹೋಪಯೋಗಿ ಉಪಕರಣಗಳ ಕಂಪನಿಯಾಗಿ ಮೊದಲ ಸ್ಥಾನದಲ್ಲಿದೆ ಎಂದು ರೆಡ್‌ಸೀರ್ ವರದಿ ಹೇಳಿದೆ.

ಭಾರತದಲ್ಲಿ 27 ವರ್ಷಗಳ ಅನುಭವ ಹೊಂದಿರುವ ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ, ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಂಡು ಅವರ ಬೇಡಿಕೆಗಳನ್ನು ಪೂರೈಸುತ್ತಿದೆ. ಇದು 36,401 ಗ್ರಾಹಕ ಸಂಪರ್ಕ ಕೇಂದ್ರಗಳ ಮೂಲಕ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅತೀ ದೊಡ್ಡ ವಿತರಣಾ ಜಾಲವನ್ನು ಹೊಂದಿದೆ.

PREV

Recommended Stories

ಜಾಲತಾಣ ದುರ್ಬಳಕೆ ಮಾಡಿದ್ರೆ ಕ್ರಮ - ಸುಳ್ಳು ಸುದ್ದಿ ಹರಡುವ ಯೂಟ್ಯೂಬರ್ಸ್‌ ಮೇಲೂ ಕೇಸ್‌ : ಸಲೀಂ
ಬೆಂಗಳೂರು ಬೀದಿನಾಯಿಗಳಿಗೆ ಈಗ ಪೊಲೀಸ್‌ ಶ್ವಾನಗಳ ರೀತಿ ಟ್ರೈನಿಂಗ್ ಭಾಗ್ಯ !