ಗಡಿಯಾರದ ಮುಳ್ಳಿನಂತೆ ಸುಂದರ ಸುಳ್ಳಿನಂತೆ ಮಹಾನಗರ

Published : Jun 08, 2025, 11:44 AM IST
Bengaluru rain

ಸಾರಾಂಶ

ಬೆಂಗಳೂರಿಗೆ ಬಂದು ಭರ್ತಿ ಒಂದು ವರ್ಷವಾಗಿದೆ. ಊರು ಹಾಗೇ ಇದೆ. ಆದರೆ ಅದರ ಬಗೆಗಿನ ಧೋರಣೆ ಬದಲಾಗಿದೆ. ಕಾರಣ, ಅಪರೂಪದ ವಿಚಾರಗಳು, ವಸ್ತುಗಳು ಗಮನ ಸೆಳೆಯುತ್ತವೆ. ಆದರೆ ಅವು ದಿನಚರಿಯ ಭಾಗವೇ ಆದರೆ ಕ್ರಮೇಣ ನಗಣ್ಯವಾಗುತ್ತವೆ.

- ಮೈತ್ರಿ

ಬೆಂಗಳೂರಿಗೆ ಬಂದು ಭರ್ತಿ ಒಂದು ವರ್ಷವಾಗಿದೆ. ಊರು ಹಾಗೇ ಇದೆ. ಆದರೆ ಅದರ ಬಗೆಗಿನ ಧೋರಣೆ ಬದಲಾಗಿದೆ. ಕಾರಣ, ಅಪರೂಪದ ವಿಚಾರಗಳು, ವಸ್ತುಗಳು ಗಮನ ಸೆಳೆಯುತ್ತವೆ. ಆದರೆ ಅವು ದಿನಚರಿಯ ಭಾಗವೇ ಆದರೆ ಕ್ರಮೇಣ ನಗಣ್ಯವಾಗುತ್ತವೆ.

ಮೊದಮೊದಲು ಮೆಟ್ರೋ ಅಂದರೆ ಅದೇನೋ ಮೋಹ. ಕರೆಂಟ್‌ ಕುಡಿಯುತ್ತಾ, ಹೆಬ್ಬಾವಿನಂತೆ ಮಲಗಿರುವ ಪಟ್ಟಿಯ ಮೇಲೆ ಸದ್ದಿಲ್ಲದಂತೆ ಸರೀಸೃಪದಂತೆ ಸರಿದು ಹೋಗುವ ಅದನ್ನು ನೋಡುವುದೇ ಸಂಭ್ರಮ. ಬಾಗಿಲು ತಮ್ಮಷ್ಟಕ್ಕೇ ತೆರೆದು, ಮುಚ್ಚಿಕೊಳ್ಳುವುದು, ಎಲ್ಲಿದ್ದೇವೆ, ಎಲ್ಲಿಗೆ ಹೋಗುತ್ತಿದ್ದೇವೆ ಎಂಬ ದ್ವಿಭಾಷಾ ಘೋಷಣೆ. ಒಮ್ಮೆ ರಸ್ತೆಯ ಮೇಲಿಂದ ಹಾದು ಹೋದರೆ ಮತ್ತೊಮ್ಮೆ ಸುರಂಗದೊಳಗೆ ತೂರುವ ಪರಿ ಎಲ್ಲವೂ ಅಚ್ಚರಿ.

ಆದರೆ ಇದೆಲ್ಲಾ ಒಂದೆರಡು ತಿಂಗಳಿಗೆ ಸೀಮಿತ. ಆಮೇಲೆ ಮೆಟ್ರೋದಂತೆ ನಾವೂ ಯಾಂತ್ರಿಕವಾಗುತ್ತೇವೆ. ತನ್ನಷ್ಟಕ್ಕೇ ಸಾಗುವ ಮೆಟ್ಟಿಲಿನ ಮೇಲೆ ನಿಂತು, ಬ್ಯಾಗನ್ನು ಚಲಿಸುವ ಪಟ್ಟಿ ಮೇಲಿಟ್ಟು, ದೃಷ್ಟಿ ತೆಗೆಯುವಂತೆ ಅದ್ಯಾವುದೋ ಯಂತ್ರವನ್ನು ನೀವಾಳಿಸುವವರ ಮುಂದೆ ಕ್ಷಣಕಾಲ ತಡೆದು ಮತ್ತದೇ ಯಾಂತ್ರಿಕ ನಡಿಗೆ. ಮೆಟ್ರೋ ತಪ್ಪೀತೆಂದು ಧಾವಂತದಿಂದ ಯಾರೂ ಓಡಿ ಬರುವುದಿಲ್ಲ. ಕಾರಣ, ಒಂದು ಹೋದರೆ ಅದರ ಬೆನ್ನಿಗೆ ಇನ್ನೊಂದು ಬರುವುದು ಖಚಿತ. ಅದೂ ಎಷ್ಟು ಹೊತ್ತಿಗೆ ಬರುವುದೆಂದು ಎಂದು ನಿಖರವಾಗಿ ಹೇಳುವ ಗಡಿಯಾರವನ್ನೊಮ್ಮೆ ನೋಡಿ, ಕಿವಿಗೆ ಇಯರ್‌ಫೋನ್‌ ಸಿಕ್ಕಿಸಿಕೊಂಡು ತಲೆ ತಗ್ಗಿಸಿ ಮೊಬೈಲ್‌ ಸವರುತ್ತಾ ಕುಳಿತರೆ ಆ 5 ನಿಮಿಷಗಳನ್ನು ತಳ್ಳುವುದು ಕಷ್ಟವಲ್ಲ. ಒಂದು ಹಾಡು ಮುಗಿಯುವಷ್ಟರಲ್ಲಿ ಹಾಜರಾಗುವ ಇನ್ನೊಂದು ಮೆಟ್ರೋದೊಳಗೆ ಸೇರಿಕೊಂಡು ಸೀಟಿಗಂಟಿ ಕುಳಿತರೆ ಮುಗಿಯಿತು. ಎಲ್ಲೆಲ್ಲೂ ನಿಶಬ್ದ. ಮುಂದೆ ಕುಳಿತವರ ಮುಖ ನೋಡುವುದೊಂದೇ ಆಯ್ಕೆ. ಆದರೆ ಸಭ್ಯರು ಆ ಕೆಲಸ ಮಾಡರು.

ಆ ಸಮಯದಲ್ಲಿ ಕಣ್ಮುಚ್ಚಿ ಕುಳಿತರೆ ಊರಿನ ನೆನಪಾಗುತ್ತದೆ. ಬಸ್ಸಿಗಿಂತ ಮೊದಲು ನಿಲ್ದಾಣ ತಲುಪಿ ಕಾಯುತ್ತಾ ನಿಲ್ಲುವುದು, ಕೊಂಚ ತಡವಾದರೆ ಅದರ ಹಿಂದೆ ಓಡುವುದು, ಒಂದಡಿಯಿಡಲು ಜಾಗ ಸಿಕ್ಕರೂ ಸಾಕೆಂಬಂತೆ ತುಂಬಿದ ಗಾಡಿಯೊಳಗೆ ತೂರಿಕೊಳ್ಳುವುದು, ಅಪರಿಚಿತ ಊರಾದರೆ ಅವರಿವರ ಬಳಿ ದಾರಿ ಕೇಳುವುದು, ಹತ್ತಿರದ ಅಂಗಡಿಯವರ ಬಳಿ ಬಸ್ಸಿನ ವಿವರ ವಿಚಾರಿಸುವುದು, ನಾವಿಳಿಯುವ

ಸ್ಟಾಪ್‌ ಬಂದರೆ ತಿಳಿಸುವಂತೆ ಕಂಡಕ್ಟರ್‌ ಬಳಿ ಕೋರಿಕೆ, ಕಿಟಕಿಯಿಂದಿಣುಕಿ ಅಂಗಡಿಗಳ ಬೋರ್ಡಿನಲ್ಲಿರುವ ಊರಿನ ಹೆಸರು ಓದುವುದು ಇದ್ಯಾವುದೂ ಈಗಿಲ್ಲ.

ಅನುದಿನ ಕಚೇರಿಗೆ, ಮತ್ತೆ ಮನೆಗೆ. ಅಪರೂಪಕ್ಕೆ ಸಿಗುವ ರಜೆಯಲ್ಲೂ ಮೊಬೈಲ್‌ ದಾಸ್ಯ. ದಾರಿ ತಪ್ಪದಂತೆ ಕರೆದೊಯ್ಯಲು ಗೂಗಲ್‌ ಮ್ಯಾಪ್‌ ಇದೆ, ಕರೆದ ಕೂಡಲೇ ಮನೆ ಬಾಗಿಲಿಗೆ ಬಂದು ಕರೆದೊಯ್ಯುವ ಕ್ಯಾಬ್‌ನಿಂದ ನಡಿಗೆ ತಪ್ಪಿದೆ, ಆರ್ಡರ್‌ ಮಾಡಿದೊಡನೆ ಹಾಜರಾಗುವ ಊಟದ ವ್ಯವಸ್ಥೆಯಿಂದ ಅಡಿಗೆ ನಿಂತಿದೆ, ಏನೇ ಪ್ರಶ್ನೆಯಿದ್ದರೂ ಉತ್ತರಿಸಲು ಮೊಬೈಲ್‌ ಇರುವಾಗ ಅಕ್ಕಪಕ್ಕದವರ ಸಂಪರ್ಕದ ಅವಶ್ಯಕತೆಯಿಲ್ಲ, ಸ್ನೇಹಿತರು ಬೇಕಿದ್ದರೆ ಬೆರಳ ತುದಿಯಲ್ಲೇ ಲಭ್ಯ. ಒಟ್ಟಿನಲ್ಲಿ, ಗಡಿಯಾರದ ಮುಳ್ಳಿನಂತೆ ಸುತ್ತುವ ನೀರಸ ಜೀವನ.

ಒಂದು ದಿನ ಮೊಬೈಲ್‌ ನೆಟ್‌ ಆಫ್‌ ಮಾಡಿಕೊಂಡು ಎಲ್ಲಾದರೂ ಹೊರಡಿ. ಹತ್ತಿರದ ಬಸ್‌ ನಿಲ್ದಾಣದಲ್ಲಿ ನಿಂತು ಬಂದು ಹೋಗುವ ಬಸ್‌ಗಳ ಬೋರ್ಡ್‌ ನೋಡಿ. ಅವರಿವರಲ್ಲಿ ಕೇಳಿಕೊಂಡು, ಕಂಡಕ್ಟರ್‌ ಕೈಲಿ ಬೈಸಿಕೊಂಡು, ಆಟೋದವರ ಮನವೊಲಿಸಿ ಅಪರಿಚಿತ ಸ್ಥಳ ತಲುಪಿ. ಭಯವಾದರೆ ಪರಿಚಿತರಿಗೆ ಕರೆ ಮಾಡಿ, ಮಾತಾಡುತ್ತಾ ಅಲ್ಲಿಲ್ಲಿ ತಿರುಗಿ, ಕುತೂಹಲವೆನಿಸಿದ್ದನ್ನು ನಿಂತು ನೋಡಿ, ದಾರಿ ತಿಳಿಯದಾದಾಗ ಜನರ ಗುಂಪನ್ನು ಹಿಂಬಾಲಿಸಿ, ಅಪರಿಚಿತರೊಡನೆ ಮಾತಾಡಿ. ಕತ್ತಲು ಕವಿಯತೊಡಗಿದೊಡನೆ ಮನೆಯ ದಾರಿ ಹಿಡಿಯಿರಿ.

ಮತ್ತದೇ ಸರ್ಕಸ್‌ ಮಾಡಿಕೊಂಡು ಮನೆಯ ಬಾಗಿಲಿನ ಮುಂದೆ ನಿಂತಾಗ ಕಾಲು ಸೋತಿರುತ್ತದೆ. ಆದರೆ ಮನ ಅರಳಿರುತ್ತದೆ. ಅಪರಿಚಿತರ ನಡುವೆ ದಿಕ್ಕಿಲ್ಲದೆ ಅಲೆದ ಬಳಿಕ, ಮನೆಯೆಂಬ ನಾಲ್ಕು ಗೋಡೆಗಳ ಮಧ್ಯೆ ಸಿಗುವ ನೆಮ್ಮದಿ ಎಂಥದ್ದೆಂದು ತಿಳಿಯುತ್ತದೆ. ಒಂಟಿತನ ಹೇಳಹೆಸರಿಲ್ಲದಂತೆ ಮಾಯವಾಗುತ್ತದೆ. ಹೀಗೆ ಯಾಂತ್ರಿಕತೆಗೂ ವಾರಕ್ಕೊಮ್ಮೆ ರಜೆ ನೀಡಿ, ಸಾಮಾಜಿಕ ಜೀವಿಯಾಗಿ ನೋಡಿ.

PREV
Read more Articles on

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಹಳದಿ ಮಾರ್ಗ ಮೆಟ್ರೋಗೆ ಆ.10ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ