ಹಲಸು, ಬಾಳೆ ಹಣ್ಣಿನಿಂದ ಕೇಕ್‌ ತಯಾರಿ: ಹೆಬ್ಬಾಳದ ಜಿಕೆವಿಕೆಯಿಂದ ಹೊಸ ಆವಿಷ್ಕಾರ

KannadaprabhaNewsNetwork |  
Published : Sep 23, 2025, 02:08 AM ISTUpdated : Sep 23, 2025, 06:19 AM IST
cake

ಸಾರಾಂಶ

ಹಲಸು, ಬಾಳೆ ಹಣ್ಣುಗಳು ಪಕ್ವವಾಗಿದ್ದು ಬೇಗ ವಿಲೇವಾರಿ ಮಾಡದಿದ್ದರೆ ಬೆಳೆಗಾರರಿಗೆ ನಷ್ಟ ಕಟ್ಟಿಟ್ಟ ಬುತ್ತಿಯಾಗಿದೆ. ಆದರೆ, ಈ ಸಮಸ್ಯೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಪರಿಹಾರವೊಂದನ್ನು ಕಂಡುಹಿಡಿದಿದೆ.

ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು : ಹಲಸು, ಬಾಳೆ ಹಣ್ಣುಗಳು ಪಕ್ವವಾಗಿದ್ದು ಬೇಗ ವಿಲೇವಾರಿ ಮಾಡದಿದ್ದರೆ ಬೆಳೆಗಾರರಿಗೆ ನಷ್ಟ ಕಟ್ಟಿಟ್ಟ ಬುತ್ತಿಯಾಗಿದೆ. ಆದರೆ, ಈ ಸಮಸ್ಯೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಪರಿಹಾರವೊಂದನ್ನು ಕಂಡುಹಿಡಿದಿದೆ.

ವಿವಿಯ ಬೇಕಿಂಗ್‌ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆಯಲ್ಲಿ ಹಣ್ಣುಗಳ ಹಿಟ್ಟಿನಿಂದ ಕೇಕ್‌ ತಯಾರಿಸುವ ನೂತನ ಆವಿಷ್ಕಾರ ಮಾಡಲಾಗಿದ್ದು, ಬಳಸಲು ಸುಲಭವಾದ ಸಿದ್ಧ ಮಿಶ್ರಣಗಳನ್ನು ಸಂಶೋಧಿಸಲಾಗಿದೆ. ಪಾರಂಪರಿಕ ಕೇಕ್‌ ಮಿಶ್ರಣಗಳಿಗಿಂತ ರುಚಿಕರ ಹಾಗೂ ಪೌಷ್ಟಿಕವಾಗಿರುವ ಈ ಸಿದ್ಧ ಮಿಶ್ರಣಗಳು, ಬೆಳೆಗಾರರ ಆರ್ಥಿಕ ಪರಿಸ್ಥಿತಿ ಸುಧಾರಣೆಗೂ ಸಹಕಾರಿಯಾಗಿವೆ.

ಹಲಸು ಹಾಗೂ ಬಾಳೆ ಹಣ್ಣಿನ ಹಿಟ್ಟು ಆಧಾರಿತ ಕೇಕ್‌ ಮಿಶ್ರಣಗಳನ್ನು ವಿವಿ ಅಭಿವೃದ್ಧಿಪಡಿಸಿದ್ದು ವಾಣಿಜ್ಯ ಬಳಕೆಗೆ ಸಿದ್ಧವಾಗಿವೆ. ಕ್ಯಾಬಿನೆಟ್‌ ಡ್ರೈಯಿಂಗ್‌ ತಂತ್ರಜ್ಞಾನ ಬಳಸಿ ಮೊದಲಿಗೆ ಮಾಗಿದ ಹಣ್ಣುಗಳನ್ನು ಹಿಟ್ಟಾಗಿ ಪರಿವರ್ತಿಸಲಾಗುವುದು. ಇದರಿಂದಾಗಿ ಹಣ್ಣಿನ ಪೌಷ್ಟಿಕಾಂಶ ಕಾಪಾಡಿಕೊಳ್ಳಬಹುದು, ನೈಸರ್ಗಿಕ ಸುವಾಸನೆಯನ್ನೂ ಉಳಿಸಿಕೊಳ್ಳಬಹುದಾಗಿದೆ.

ಮೂರು ತಿಂಗಳು ಬಾಳಿಕೆ

ಈ ಬಗ್ಗೆ ಮಾಹಿತಿ ನೀಡಿದ ವಿವಿಯ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಪ್ರಾಧ್ಯಾಪಕಿ ಡಾ.ಸವಿತಾ, ‘ತಂತ್ರಜ್ಞಾನವನ್ನು ಬಳಸಿಕೊಂಡು ಮಾಗಿದ ಹಣ್ಣುಗಳನ್ನು ಒಣಗಿಸಿ ಬಳಿಕ ಹಿಟ್ಟು ಮಾಡಿಕೊಳ್ಳಲಾಗುವುದು. ಮೂರು ತಿಂಗಳ ಕಾಲ ಹಿಟ್ಟನ್ನು ಹಾಗೆಯೇ ಇಟ್ಟುಕೊಳ್ಳಬಹುದು. ಹಿಟ್ಟಿಗೆ ಸ್ವಲ್ಪ ನೀರು ಮತ್ತು ಅಡುಗೆ ಎಣ್ಣೆ ಮಿಶ್ರಣ ಮಾಡಿ ಕೇಕ್‌ ತಯಾರಿಸಬಹುದು. ಐದು ದಿನವಾದರೂ ಕೇಕ್‌ ಹಾಳಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕೇಕ್‌ ತಯಾರಿಸಲು ಯಾವುದೇ ಬಣ್ಣ, ರಾಸಾಯನಿಕ ಬಳಕೆಯಾಗುವುದಿಲ್ಲ. ಮೈದಾ ಹಿಟ್ಟಿನ ಅವಶ್ಯಕತೆಯೂ ಇಲ್ಲ. ಮೃದು, ರುಚಿಕರ, ಹಣ್ಣಿನ ನೈಸರ್ಗಿಕ ಪರಿಮಳದಿಂದ ಕೂಡಿದ ಕೇಕ್‌ ಸಿದ್ಧವಾಗಲಿದೆ. ಆರೋಗ್ಯದ ದೃಷ್ಟಿಯಿಂದಲೂ ಇದು ಉತ್ತಮವಾಗಿದೆ. ಪ್ರಾಯೋಗಿಕವಾಗಿ ಇದನ್ನು ಹಲವೆಡೆ ಮಾರಾಟ ಮಾಡಿದ್ದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾಣಿಜ್ಯೀಕರಣ ಮಾಡಲು ವಿವಿಯು ಪಾಲುದಾರರನ್ನು ಎದುರು ನೋಡುತ್ತಿದೆ ಎಂದು ವಿವರಿಸಿದರು.ಕೊಯ್ಲಿನ ನಂತರ ಬೆಳೆಗಾರರಿಗೆ ನಷ್ಟ ಉಂಟಾಗುವುದನ್ನು ತಪ್ಪಿಸಲು ಹಲಸು ಮತ್ತು ಬಾಳೆ ಹಣ್ಣಿನ ಕೇಕ್‌ಗಳು ಸಹಕಾರಿಯಾಗಿವೆ. ಇದು ರೈತರು ಮತ್ತು ಕೃಷಿ ಉದ್ಯಮಿಗಳಿಗೆ ಹೊಸ ಮೌಲ್ಯವರ್ಧನೆಯ ಅವಕಾಶಗಳನ್ನು ಒದಗಿಸುತ್ತದೆ.

-ಡಾ.ಎಸ್‌.ವಿ.ಸುರೇಶ, ಕೃಷಿ ವಿವಿ ಕುಲಪತಿ

PREV
Read more Articles on

Recommended Stories

ವಿಶೇಷ ಸೌಲಭ್ಯಗಳುಳ್ಳ ಐಷಾರಾಮಿ ಮನೆಗಳಿಗೆ ಬೇಡಿಕೆ ಹೆಚ್ಚಳ: ವಿಶೇಷ ಲೇಖನ
ಮಧುಮೇಹ ಎಂದರೆ ಏನು? ಯಾರಿಗೆ ಬರಬಹುದು ? ಲಕ್ಷಣ ಹಾಗೂ ಚಿಕಿತ್ಸೆ ಹೇಗೆ ?