6 ವರ್ಷದಿಂದ ಡಾಂಬರ್‌ ಕಾಣದ ಮಾಳಗಾಳ ರಸ್ತೆ : ಅಕ್ರಮವಾಗಿ ಬಿಲ್‌ ಪಾವತಿ ಮಾಡಿಕೊಂಡ ವಾಸನೆ

KannadaprabhaNewsNetwork |  
Published : Feb 03, 2025, 01:16 AM ISTUpdated : Feb 03, 2025, 05:07 AM IST
ಮಾಳಗಳದ ಮುಖ್ಯ ರಸ್ತೆ  | Kannada Prabha

ಸಾರಾಂಶ

ಒಂದಲ್ಲಾ ಎರಡಲ್ಲಾ ಬರೋಬ್ಬರಿ 6 ವರ್ಷವಾಗಿದೆ ಈ ರಸ್ತೆ ಡಾಂಬರ್‌ ಕಂಡು. ಆಗಾಗ ಕಾಟಾಚಾರಕ್ಕೆ ಗುಂಡಿಗೆ ತೇಪೆ ಹಾಕಿದ್ದು, ಬಿಟ್ಟರೆ ರಸ್ತೆಯನ್ನು ಸರಿಪಡಿಸುವ ಕೆಲಸ ಮಾತ್ರವಾಗಿಲ್ಲ. ಈ ನಡುವೆ ಡಾಂಬರೀಕರಣ ಮಾಡದೇ ಅಕ್ರಮವಾಗಿ ಬಿಲ್‌ ಪಾವತಿ ಮಾಡಿಕೊಂಡ ವಾಸನೆ ಇದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು : ಒಂದಲ್ಲಾ ಎರಡಲ್ಲಾ ಬರೋಬ್ಬರಿ 6 ವರ್ಷವಾಗಿದೆ ಈ ರಸ್ತೆ ಡಾಂಬರ್‌ ಕಂಡು. ಆಗಾಗ ಕಾಟಾಚಾರಕ್ಕೆ ಗುಂಡಿಗೆ ತೇಪೆ ಹಾಕಿದ್ದು, ಬಿಟ್ಟರೆ ರಸ್ತೆಯನ್ನು ಸರಿಪಡಿಸುವ ಕೆಲಸ ಮಾತ್ರವಾಗಿಲ್ಲ. ಈ ನಡುವೆ ಡಾಂಬರೀಕರಣ ಮಾಡದೇ ಅಕ್ರಮವಾಗಿ ಬಿಲ್‌ ಪಾವತಿ ಮಾಡಿಕೊಂಡ ವಾಸನೆ ಇದೆ.

ಇಷ್ಟೆಲ್ಲಾ ಹೇಳುತ್ತಿರುವುದು ಯಾವುದೋ ಕುಗ್ರಾಮದ ರಸ್ತೆಯ ಸ್ಥಿತಿ ಇಲ್ಲ. ರಾಜಧಾನಿ ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಮಾಳಗಾಳ ಮುಖ್ಯ ರಸ್ತೆ ಕಥೆಯಾಗಿದೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಈ ರಸ್ತೆಗೆ ವಾಸ್ತವವಾಗಿ ಕಳೆದ 6 ವರ್ಷದಿಂದ ಬಿಬಿಎಂಪಿ ಡಾಂಬರೀಕರಣ ಮಾಡಿಲ್ಲ. ತೀರಾ ರಸ್ತೆಯಲ್ಲಿ ಗುಂಡಿ ಕಾಣಿಸಿಕೊಂಡ ವೇಳೆ ಮಾತ್ರ ಅಲ್ಲಲ್ಲಿ ತೇಪೆ ಹಾಕಿ ಸರಿ ಮಾಡುವ ಕೆಲಸ ಮಾಡಲಾಗುತ್ತದೆ. ಹಾಕಿದ ತೇಪೆಯೂ ಕೆಲವೇ ದಿನಗಳಲ್ಲಿ ಕಿತ್ತು ಹೋಗಿ ಮತ್ತೆ ಗುಂಡಿ ಸೃಷ್ಟಿಯಾಗುತ್ತಿವೆ. ಈ ಬಗ್ಗೆ ಗಮನ ನೀಡಬೇಕಾದ ಬಿಬಿಎಂಪಿ ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧ ಇಲ್ಲ ಎಂಬಂತೆ ನಡೆದು ಕೊಳುತ್ತಿದ್ದಾರೆ ಎಂದು ಸ್ಥಳೀಯರು ದೂರುಗಳ ಸುರಿಮಳೆಯನ್ನೇ ಸುರಿಸುತ್ತಾರೆ.

ಕಬ್ಬಿಣದ ಸರಳು ಮಧ್ಯೆ ವಾಹನ ಸಂಚಾರ:

ಮಾಳಗಾಳ ಮುಖ್ಯ ರಸ್ತೆಯಲ್ಲಿ ಹಾದು ಹೋದ ರಾಜಕಾಲುವೆಯ ಸೇತುವೆಗೆ ಹಾಕಲಾದ ಕಾಂಕ್ರಿಟ್‌ ಮೇಲ್ಪದರ ಕಿತ್ತು ಹೋಗಿದೆ. ಇದರಿಂದ ಕಾಂಕ್ರಿಟ್‌ ಒಳಗಿರುವ ಕಬ್ಬಿಣದ ಸರಳುಗಳು ಸಂಪೂರ್ಣವಾಗಿ ಹೊರ ಬಂದಿವೆ. ಈ ಸರಳುಗಳ ನಡುವೆಯೇ ವಾಹನಗಳು ಸಂಚಾರ ಮಾಡಬೇಕಾದ ಪರಿಸ್ಥಿತಿ ಇದೆ. ಸ್ವಲ್ಪ ಹೆಚ್ಚು ಕಡಿಮೆಯಾದರೆ ಅಪಘಾತ ಸಂಭವಿಸುವ ಸಾಧ್ಯತೆ ಇದ್ದರೂ ಪ್ರಾಣ ಭಯದಿಂದಲೇ ಓಡಾಡಬೇಕಾದ ಸ್ಥಳೀಯ ನಿವಾಸಿಗಳಿಗೆ ಇದೆ.

ಕಾಣುತ್ತಿದೆ ರಸ್ತೆಯ ಅಸ್ಥಿಪಂಜರ:

ಹಲವು ವರ್ಷದಿಂದ ರಸ್ತೆಗೆ ಮರು ಡಾಂಬರೀಕರಣ ಮಾಡದ ಹಿನ್ನೆಲೆಯಲ್ಲಿ ರಸ್ತೆಯುದ್ದಕ್ಕೂ ರಸ್ತೆಯ ಅಸ್ಥಿಪಂಜರ ಹೊರ ಬಂದಿದೆ. ಚಿತ್ರವಿಚಿತ್ರವಾಗಿ ರಸ್ತೆ ಕಿತ್ತು ಹೋಗಿರುವುದರಿಂದ ಬೈಕ್‌ ಸವಾರಿ ಸಾಹಸದ ಕೆಲಸವಾಗಿದೆ. ಪ್ರತಿನಿತ್ಯ ಓಡಾಡುವ ಮಹಿಳೆಯರು, ಹಿರಿಯರು ರೋಸಿ ಹೋಗಿದ್ದಾರೆ. ಯಾವಾಗ ಈ ರಸ್ತೆಗೆ ಡಾಂಬರೀಕರಣ ಆಗಬಹುದು ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಕಾಮಗಾರಿ ನಡೆಸದೇ ಬಿಬಿಎಂಪಿ ಹಣ ಬಿಡುಗಡೆ?:

ಕಳೆದ ಐದಾರು ವರ್ಷದಿಂದ ಮಾಳಗಾಳ ಮುಖ್ಯ ರಸ್ತೆಗೆ ವಾಸ್ತವಾಗಿ ಡಾಂಬರೀಕರಣ ಮಾಡಿಲ್ಲ. ಆದರೆ, ಡಾಂಬರೀಕರಣ ಮಾಡದೇ ಎರಡು ಬಾರಿ ಬಿಬಿಎಂಪಿಯಿಂದ ಹಣ ಬಿಡುಗಡೆ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳು ಮತ್ತು ಸ್ಥಳೀಯ ಜನ ಪ್ರತಿನಿಧಿಗಳು ಒಟ್ಟಾಗಿ ಸೇರಿ ಅಕ್ರಮ ನಡೆಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು. ಆಗ ಮಾತ್ರ ಸತ್ಯ ಹೊರ ಬರಲಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಶಾಸಕ-ಸರ್ಕಾರ ತಿಕ್ಕಾಟ ಜನರಿಗೆ ಪ್ರಾಣ ಸಂಕಷ್ಟ:

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಹಾಗೂ ರಾಜ್ಯ ಸರ್ಕಾರದ ನಡುವೆ ತಿಕ್ಕಾಟ ನಡೆಯುತ್ತಿದೆ. ಈ ಕಾರಣಕ್ಕೆ ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಬಿಜೆಪಿ ಶಾಸಕರ ಕಾಮಗಾರಿಗೆ ಆಡಳಿತ ಪಕ್ಷದವರು, ಆಡಳಿತ ಪಕ್ಷದ ಕಾಮಗಾರಿಗೆ ಬಿಜೆಪಿಯವರು ಅಡ್ಡಗಾಲು ಹಾಕುತ್ತಿದ್ದಾರೆ. ಇದರಿಂದ ಸ್ಥಳೀಯ ನಿವಾಸಿಗಳು ಸಮಸ್ಯೆ ಎದುರಿಸಬೇಕಾಗ ಸ್ಥಿತಿ ನಿರ್ಮಾಣವಾಗಿದೆ ಎಂಬ ಮಾತುಗಳು ಸ್ಥಳೀಯ ಮಟ್ಟದಲ್ಲಿ ಕೇಳಿ ಬರುತ್ತಿವೆ.

PREV

Recommended Stories

ರೋಬೋಟಿಕ್ ತಂತ್ರಜ್ಞಾನ ಬಳಸಿ ಯಶಸ್ವಿ ಡಬಲ್ ವಾಲ್ವ್ ಬದಲಿ ಶಸ್ತ್ರಚಿಕಿತ್ಸೆ ನಡೆಸಿದ ಅಪೋಲೋ
ಭಗವದ್ಗೀತೆ ಬೋಧನೆ ಪ್ರಸ್ತಾಪ ಹಿಂದೆ ಎಚ್ಜಿಕೆ ಅಜೆಂಡಾ : ಮಧು ಬಂಗಾರಪ್ಪ