ಬೆಂಗಳೂರು : ರಾಜ್ಯಮಟ್ಟದ 76ನೇ ಗಣರಾಜ್ಯೋತ್ಸವಕ್ಕೆ ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, 8 ಸಾವಿರ ಮಂದಿ ಆಸನ ವ್ಯವಸ್ಥೆ ಮಾಡಲಾಗಿದೆ.
ಶುಕ್ರವಾರ ಗಣರಾಜ್ಯೋತ್ಸವದ ಅಂತಿಮ ಹಂತದ ತಾಲೀಮು ಪರಿಶೀಲಿಸಿ ನಗರದ ಪೊಲೀಸ್ ಆಯುಕ್ತ ಬಿ.ದಯಾನಂದ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಜ.26ರಂದು ಬೆಳಗ್ಗೆ 9 ಗಂಟೆಗೆ ರಾಜ್ಯಪಾಲರು ಧ್ವಜಾರೋಹಣ ನೆರವೇರಿಸಿದ ಬಳಿಕ 38 ತುಕಡಿಗಳಿಂದ ಕವಾಯತು ನಡೆಯಲಿದ್ದು, ಕವಾಯತಿನಲ್ಲಿ ಪೊಲೀಸ್ ತಂಡ, ಕೆಎಸ್‌ಆರ್‌ಪಿ, ಕೇರಳ ಪೊಲೀಸ್ ತಂಡ, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಸೇವಾದಳ ಸೇರಿದಂತೆ 38 ತುಕಡಿಗಳು ಪಾಲ್ಗೊಳ್ಳಲಿವೆ. ನಂತರ ಶಾಲಾ ಮಕ್ಕಳಿಂದ ಹಾಗೂ ಪೊಲೀಸ್ ಇಲಾಖೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು.
8 ಸಾವಿರ ಆಸನಗಳ ವ್ಯವಸ್ಥೆ:
ಗಣ್ಯರಿಗೆ ಸೇರಿ ಸಾರ್ವಜನಿಕರಿಗೆ ಒಟ್ಟು 6,500 ಪಾಸ್ ವಿತರಣೆ ಮಾಡಲಾಗಿದ್ದು, 8 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಜಿ-2 ಪ್ರವೇಶ ದ್ವಾರದಲ್ಲಿ ಗಣ್ಯ ವ್ಯಕ್ತಿಗಳಿಗೆ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳಿಗಾಗಿ 1500 ಆಸನ ಕಲ್ಪಿಸಲಾಗಿದ್ದು, ಜಿ-4 ದ್ವಾರದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳಿಗೆ 2000 ಆಸನ ಮೀಸಲಿಡಲಾಗಿದೆ. ಜಿ-5 ದ್ವಾರದಲ್ಲಿ ಸಾರ್ವಜನಿಕರಿಗಾಗಿ 3000 ಆಸನಗಳನ್ನು ಕಲ್ಪಿಸಲಾಗಿದೆ. ಕಾರ್ಯಕ್ರಮಕ್ಕೆ ಬರುವವರು ಪ್ರವೇಶ ದ್ವಾರದಲ್ಲಿ ಆಹ್ವಾನ ಪತ್ರಿಕೆಯೊಂದಿಗೆ ಕಡ್ಡಾಯವಾಗಿ ಅರ್ಹ ಗುರುತಿನ ಚೀಟಿ ತರಬೇಕು.
ಭದ್ರತೆಗೆ 1050 ಮಂದಿ ನಿಯೋಜನೆ:
ಬೆಂಗಳೂರು ನಗರದ ಪೊಲೀಸ್ ಆಯುಕ್ತ ಬಿ.ದಯಾನಂದ ಮಾತನಾಡಿ, ಗಣರಾಜೋತ್ಸವದ ಹಿನ್ನೆಲೆಯಲ್ಲಿ ನಗರದ ಮಾಣಿಕ್ ಶಾ ಪರೇಡ್ ಮೈದಾನಕ್ಕೆ ಸರ್ಪಗಾಲು ಹಾಕಲಾಗಿದ್ದು, ಅಧಿಕಾರಿ, ಸಿಬ್ಬಂದಿ ಸೇರಿ ಒಟ್ಟು 1,050 ಮಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ನಗರದ ಎಲ್ಲ ವಿಭಾಗಗಳಿಂದ 8 ಡಿಸಿಪಿ, 17 ಎಸಿಪಿ ಸೇರಿ ವಿವಿಧ ಸಿಬ್ಬಂದಿ ನಿಯೋಜಿಸಲಾಗುವುದು. ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರು ಪಾಸು ಮತ್ತು ಗುರುತಿನ ಚೀಟಿಯನ್ನು ಹೊಂದಿರಬೇಕು. ಪರ್ಸ್ ಹೊರತುಪಡಿಸಿ ಬೇರೆ ಯಾವುದೇ ವಸ್ತುಗಳನ್ನು ಕಾರ್ಯಕ್ರಮಕ್ಕೆ ತರದಂತೆ ನಿಷೇಧಿಸಲಾಗಿದೆ. ಮೈದಾನದ ಸುತ್ತಮುತ್ತ 100 ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಕಾರಿ ಜಿ. ಜಗದೀಶ್, ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಹಾಗೂ ಇತರೆ ಅಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಬರುವವರ ಗಮನಕ್ಕೆ:
ಮಣಿಪಾಲ್ ಸೆಂಟರ್ ಕಡೆಯಿಂದ ಕಬ್ಬನ್ ರಸ್ತೆಯಲ್ಲಿ ಆಗಮಿಸಿ ಗೇಟ್ 5ರ ಮೂಲಕ ಪ್ರವೇಶಿಸಿ ಜ.26ರ ಬೆಳಗ್ಗೆ 8.30ರ ಒಳಗಾಗಿ ಆಸೀನರಾಗಬೇಕು. ಮೊಬೈಲ್ ಬಳಕೆ ಮಾಡಬಾರದು, ಸೆಲ್ಫಿ ತೆಗೆಯಬಾರದು. ಸಹಾಯಕ್ಕೆ112ಗೆ ಕರೆ ಮಾಡಿ ಅಥವಾ ಸ್ಥಳದಲ್ಲಿನ ಪೊಲೀಸರನ್ನು ಸಂಪರ್ಕಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಇರಲಿದೆ. ತ್ರಿವರ್ಣ ಧ್ವಜ ಹೊರತು ಪಡಿಸಿ ಇತರೆ ಬಾವುಟ, ತಿಂಡಿ, ತಿನಿಸು, ಮಾದಕ ವಸ್ತು, ಶಸ್ತ್ರಾಸ್ತ್ರಗಳು, ಸ್ಫೋಟಕ ವಸ್ತುಗಳು, ನೀರಿನ ಬಾಟಲಿಗಳನ್ನು ಮೈದಾನಕ್ಕೆ ತರುವಂತಿಲ್ಲ.
ಇಲ್ಲಿ ವಾಹನ ನಿಲುಗಡೆ, ಸಂಚಾರ ನಾಳೆ ನಿಷೇಧ:
ಸೆಂಟ್ರಲ್ ಸ್ಟ್ರೀಟ್- ಅನಿಲ್‌ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣವರೆಗೆ. ಕಬ್ಬನ್ ರಸ್ತೆ-ಸಿಟಿಓ ವೃತ್ತದಿಂದ ಕೆಆರ್‌ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್‌ವರೆಗೆ. ಎಂಜಿ ರಸ್ತೆ- ಅನಿಲ್‌ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದ್ದು, ಕಬ್ಬನ್ ರಸ್ತೆ-ಬಿಆರ್‌ವಿ ಜಂಕ್ಷನ್ - ಕಾಮರಾಜ ರಸ್ತೆ ಜಂಕ್ಷನ್ ಎರಡೂ ಬದಿ ಹಾಗೂ ಮಣಿಪಾಲ್ ಸೆಂಟರ್ ಜಂಕ್ಷನ್‌ನಿಂದ ಬಿಆರ್‌ವಿ ಜಂಕ್ಷನ್ ಕಡೆ ವಾಹನಗಳ ಸಂಚಾರ ನಿರ್ಬಂಧ ವಿಧಿಸಲಾಗಿದೆ.
ಪರ್ಯಾಯ ಸಂಚಾರ ವ್ಯವಸ್ಥೆ:
ಇನ್ ಫೆಂಟ್ರಿ ರಸ್ತೆಯಿಂದ ಮಣಿಪಾಲ್ ಸೆಂಟರ್ ಕಡೆ ಸಂಚರಿಸುವ ವಾಹನಗಳು ನೇರವಾಗಿ ಇನ್‌ಫೆಂಟ್ರಿ ರಸ್ತೆ-ಸಫೀನಾ ಪ್ಲಾಜಾ ಬಳಿ ಎಡ ತಿರುವು ಪಡೆದು ಮೈನ್ ಗಾರ್ಡ್ ರಸ್ತೆ ಮೂಲಕ ಡಿಕನ್ಸನ್ ರಸ್ತೆ ಜಂಕ್ಷನ್ ಮೂಲಕ ಕಾಮರಾಜ ರಸ್ತೆ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆ ಮಣಿಪಾಲ್ ಸೆಂಟರ್ ಕಡೆಗೆ ಸಾಗುವುದು. ಹಾಗೂ ಮಣಿಪಾಲ್ ಸೆಂಟರ್ ಜಂಕ್ಷನ್‌ನಿಂದ ಬಿಆರ್‌ವಿ ಜಂಕ್ಷನ್ ಕಡೆ ವಾಹನಗಳು, ವೆಬ್ಸ್ ಜಂಕ್ಷನ್ ಬಳಿ ಬಲ ತಿರುವು ಪಡೆದು ಎಂಜಿ ರಸ್ತೆ ಮೂಲಕ ಮೆಯೋಹಾಲ್, ಕಾವೇರಿ ಎಂಪೋರಿಯಂ, ಅನಿಲ್‌ಕುಂಬ್ಳೆ ವೃತ್ತದಲ್ಲಿ ಬಲ ತಿರುವು ಪಡೆದು ಸಾಗುವುದು.
1,500 ಮಕ್ಕಳು ಭಾಗಿ:
ಹೇರೋಹಳ್ಳಿಯ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ 650 ವಿದ್ಯಾರ್ಥಿಗಳು ‘ಅರಿವೆ ಅಂಬೇಡ್ಕರ್ ಗೀತೆಗೆ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯ ಅಗರದ ಕರ್ನಾಟಕ ಪಬ್ಲಿಕ್ ಶಾಲೆಯ ಒಟ್ಟು 800 ವಿದ್ಯಾರ್ಥಿಗಳು ‘ನಾವೆಲ್ಲರೂ ಒಂದೇ ನಾವು ಭಾರತೀಯರು’’ ಹಾಡಿಗೆ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಗೂರ್ಖಾ ರೈಫಲ್ಸ್ ತಂಡದಿಂದ ಖುಕ್ರಿ ನೃತ್ಯ ಹಾಗೂ ಪಂಜಾಬ್‌ನ ಸೈನಿಕರಿಂದ ಭಾಂಗ್ರಾ ಪಂಜಾಬಿ ಜಾನಪದ ನೃತ್ಯ ಮತ್ತು ಗ್ಯಾಟ್ಕಾ ಟೀಮ್ ಪ್ರದರ್ಶನವಿರಲಿದೆ. ಮೈಸೂರಿನ ಕೆಎಸ್ಆರ್‌ಪಿ ಮೌಂಟೆಡ್ ಪೊಲೀಸ್ ತಂಡ ಟೆಂಟ್ ಪೆಗ್ಗಿಂಗ್ ಪ್ರದರ್ಶಿಸಲಿದೆ.