ಕನ್ನಡಪ್ರಭ ವಾರ್ತೆ
ಜಾಗತಿಕ ತಂತ್ರಜ್ಞಾನ ಸಂಸ್ಥೆ ಸರ್ವಿಸ್‌ನೌ ಬಿಡುಗಡೆ ಮಾಡಿರುವ ‘ಎಂಟರ್‌ಪ್ರೈಸ್ ಎಐ ಮೆಚ್ಯೂರಿಟಿ ಇಂಡೆಕ್ಸ್ 2026’ ಸಮೀಕ್ಷಾ ವರದಿಯಲ್ಲಿ ಈ ಅಂತರ ಬಯಲಾಗಿದೆ. ಸದ್ಯ ಭಾರತೀಯ ಕಂಪನಿಗಳ ಸರಾಸರಿ ಐಟಿ ಬಜೆಟ್‌ನಲ್ಲಿ ಎಐ ಪಾಲು ಶೇಕಡ 16.6 ರಷ್ಟಿದ್ದು, 2027ರ ವೇಳೆಗೆ ಇದು ಶೇಕಡ 21.3 ಕ್ಕೆ ಏರಿಕೆಯಾಗಲಿದೆ. ಭಾರತವು ಅತ್ಯುತ್ತಮ ಡಿಜಿಟಲ್ ಮೂಲಸೌಕರ್ಯ ಮತ್ತು ಎಂಜಿನಿಯರಿಂಗ್ ಪ್ರತಿಭೆಗಳನ್ನು ಹೊಂದಿದ್ದು, ಜಾಗತಿಕ ಮಟ್ಟದಲ್ಲೇ ಅತ್ಯಂತ ವೇಗವಾಗಿ ಎಐ ಅಳವಡಿಸಿಕೊಳ್ಳುತ್ತಿರುವ ದೇಶಗಳಲ್ಲಿ ಒಂದಾಗಿದೆ.
ಆದಾಗ್ಯೂ, ದೇಶದ ಶೇಕಡ 54 ರಷ್ಟು ಸಂಸ್ಥೆಗಳು ಎಐ ಏಜೆಂಟ್‌ಗಳನ್ನು ನಿಯೋಜಿಸುತ್ತಿವೆಯಾದರೂ, ಕೇವಲ ಶೇಕಡ 11 ರಷ್ಟು ಕಂಪನಿಗಳು ಮಾತ್ರ ಪೂರ್ಣ ಪ್ರಮಾಣದ ಸ್ವಾಯತ್ತ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯವನ್ನು ನೀಡಿವೆ. ಉದ್ಯಮ ನಾಯಕರಲ್ಲಿ ಪಾರದರ್ಶಕತೆಯ ಕೊರತೆ, ತಪ್ಪು ಮಾಹಿತಿ ಹರಡುವ ಭೀತಿ, ಸಂಕೀರ್ಣ ನಿಯಂತ್ರಣಗಳು ಮತ್ತು ಡೇಟಾ ಭದ್ರತೆಯ ಬಗೆಗಿನ ಆತಂಕಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಅಲ್ಲದೆ, ಕೇವಲ ಶೇಕಡ 18 ರಷ್ಟು ಸಂಸ್ಥೆಗಳು ಮಾತ್ರ ಹಳೆಯ ಪ್ರತ್ಯೇಕ ವ್ಯವಸ್ಥೆಗಳನ್ನು ಬದಿಗೊತ್ತಿ ಸಮಗ್ರ ಏಕೀಕೃತ ವೇದಿಕೆಯನ್ನು ಅಳವಡಿಸಿಕೊಂಡಿವೆ.ಏಷ್ಯಾ-ಪೆಸಿಫಿಕ್ ವಲಯದ ಮುಂಚೂಣಿ ರಾಷ್ಟ್ರಗಳು ಎಐ ಆಡಳಿತ ಸೂಚ್ಯಂಕದಲ್ಲಿ 78 ಅಂಕಗಳನ್ನು ಗಳಿಸಿದ್ದರೆ, ಭಾರತವು 55 ಅಂಕಗಳನ್ನು ಪಡೆದು ಬರೋಬ್ಬರಿ 23 ಅಂಕಗಳಷ್ಟು ಹಿನ್ನಡೆಯಲ್ಲಿದೆ. ಬಲಿಷ್ಠ ಆಡಳಿತ ಮತ್ತು ದೃಢ ವ್ಯವಸ್ಥೆಯನ್ನು ರೂಪಿಸಿಕೊಂಡಿರುವ ಎಪಿಎಸಿ ಸಂಸ್ಥೆಗಳು ಎಐ ಹೂಡಿಕೆಯ ಮೇಲೆ ಶೇಕಡ 149 ರಷ್ಟು ಆದಾಯ ಗಳಿಸುತ್ತಿದ್ದು, ಉತ್ಪಾದಕತೆಯಲ್ಲಿ ಆರು ಪಟ್ಟು ಮುನ್ನಡೆ ಸಾಧಿಸಿವೆ.
ಸಂಶೋಧನೆ ಕುರಿತ ತಮ್ಮ ಅಭಿಪ್ರಾಯವನ್ನು ತಿಳಿಸಿದ ಡೆಲಾಯ್ಟ್ ಇಂಡಿಯಾದ ಪಾಲುದಾರ ಹಾಗೂ ಮುಖ್ಯ ಕಾರ್ಯತಂತ್ರ ಮತ್ತು ನಾವೀನ್ಯತಾ ಅಧಿಕಾರಿ ಅಶ್ವಿನ್ ವೆಲ್ಲೋಡಿ ಅವರು , ‘ಭಾರತದಲ್ಲಿ ಎಐ ಪ್ರಬುದ್ಧತೆಯು ಒಂದು ಹೊಸ ಹಂತವನ್ನು ಪ್ರವೇಶಿಸುತ್ತಿದೆ. ಸಂಸ್ಥೆಗಳು ತಮ್ಮ ಉದ್ದಿಮೆಯಾದ್ಯಂತ ಎಐ ಅಳವಡಿಕೆ ಹೆಚ್ಚಿಸುತ್ತಿದ್ದಂತೆ, ಇದರ ಅವಕಾಶಗಳು ವೈಯಕ್ತಿಕ ಬಳಕೆಯನ್ನು ಮೀರಿ ಕಾರ್ಯಪ್ರವಾಹಗಳು, ನಿರ್ಧಾರ ಕೈಗೊಳ್ಳುವಿಕೆ ಮತ್ತು ಕಾರ್ಯಾಚರಣಾ ಮಾದರಿಗಳನ್ನು ಮರುರೂಪಿಸುವತ್ತ ಸಾಗುತ್ತಿವೆ. ಅದಕ್ಕೆ ಎಐ ವ್ಯವಸ್ಥೆಯನ್ನು ಸುಲಭವಾಗಿ ವಿಸ್ತರಿಸಲು ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ಅಗತ್ಯವಿರುವ ಮೂಲ ಬುನಾದಿಗಳಿಗೂ ಸಮಾನ ಆದ್ಯತೆ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ’ ಎಂದು ಹೇಳಿದರು.