ಇಂದು ದೇಶದ ಯುವಜನತೆಯಲ್ಲಿ ಜೀವನಶೈಲಿಯ ಕನಸುಗಳನ್ನು ನನಸಾಗಿಸಿಕೊಳ್ಳುವ ಪಕ್ಕಾ ಯೋಜಿತ ಆರ್ಥಿಕ ಅಸ್ತ್ರವಾಗಿ ಮಾರ್ಪಟ್ಟಿವೆ. ಮುಖ್ಯವಾಗಿ ನವ ಪೀಳಿಗೆಯ 'ಜೆನ್-ಜೀ' ಹಾಗೂ ಹೊಸದಾಗಿ ದುಡಿಯಲು ಆರಂಭಿಸಿರುವ ಉದ್ಯೋಗಿಗಳು ಪ್ರವಾಸ, ವಿವಾಹ ಸಂಭ್ರಮ ಹಾಗೂ ಜೀವನಶೈಲಿಯ ಅಗತ್ಯ ವಸ್ತುಗಳ ಖರೀದಿಯಂತಹ ಐಚ್ಛಿಕ ಅನುಭವಗಳಿಗಾಗಿ ಸಾಲ ಪಡೆಯಲು ಹೆಚ್ಚು ಮುಕ್ತ ಮನಸ್ಸು ಮಾಡುತ್ತಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

ಕನ್ನಡಪ್ರಭ ವಾರ್ತೆ

‘ದೇಶದ ವೈಯಕ್ತಿಕ ಸಾಲ ವಿತರಣಾ ಕ್ಷೇತ್ರದಲ್ಲಿ ಆಗುತ್ತಿರುವ ಅಭೂತಪೂರ್ವ ಪರಿವರ್ತನೆಗೆ ಸಾಲಗಾರರ ಆಲೋಚನಾ ವಿಧಾನದಲ್ಲಿನ ಬದಲಾವಣೆ ಹಾಗೂ ಎಐ ಆಧಾರಿತ ತ್ವರಿತ ಅಂಡರ್‌ರೈಟಿಂಗ್ ಪ್ರಕ್ರಿಯೆಯೇ ಪ್ರಮುಖ ಕಾರಣ. ಗ್ರಾಹಕರು ಸಾಲ ಯಾವುದೇ ಅಡೆತಡೆಗಳಿಲ್ಲದೆ ಕ್ಷಿಪ್ರವಾಗಿ ಸಿಗಬೇಕೆಂದು ಬಯಸುತ್ತಿದ್ದರೆ, ಇದಕ್ಕೆ ಪೂರಕವಾಗಿ ಬ್ಯಾಂಕುಗಳು ಅಪಾಯ ನಿರ್ಣಯ ಮತ್ತು ವಂಚನೆ ಪತ್ತೆಹಚ್ಚುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ನೆಚ್ಚಿಕೊಂಡಿವೆ’ ಎಂದು ಕೋಟಕ್ ಮಹೀಂದ್ರಾ ಬ್ಯಾಂಕ್‌ನ ವೈಯಕ್ತಿಕ ಸಾಲ ವಿಭಾಗದ ಮುಖ್ಯಸ್ಥ ಅಮಿತ್ ಪಾಠಕ್ ವಿಶ್ಲೇಷಿಸಿದ್ದಾರೆ.

ಈ ಹಿಂದೆ ಕೇವಲ ಅನಿವಾರ್ಯ ಪರಿಸ್ಥಿತಿ ಅಥವಾ ತುರ್ತು ಆರ್ಥಿಕ ಸಂಕಷ್ಟದ ಸಂದರ್ಭಗಳಲ್ಲಿ ಮಾತ್ರ ಪಡೆಯಲಾಗುತ್ತಿದ್ದ ವೈಯಕ್ತಿಕ ಸಾಲಗಳು (ಪರ್ಸನಲ್ ಲೋನ್), ಇಂದು ದೇಶದ ಯುವಜನತೆಯಲ್ಲಿ ಜೀವನಶೈಲಿಯ ಕನಸುಗಳನ್ನು ನನಸಾಗಿಸಿಕೊಳ್ಳುವ ಪಕ್ಕಾ ಯೋಜಿತ ಆರ್ಥಿಕ ಅಸ್ತ್ರವಾಗಿ ಮಾರ್ಪಟ್ಟಿವೆ. ಮುಖ್ಯವಾಗಿ ನವ ಪೀಳಿಗೆಯ ''ಜೆನ್-ಜೀ'' ಹಾಗೂ ಹೊಸದಾಗಿ ದುಡಿಯಲು ಆರಂಭಿಸಿರುವ ಉದ್ಯೋಗಿಗಳು ಪ್ರವಾಸ, ವಿವಾಹ ಸಂಭ್ರಮ ಹಾಗೂ ಜೀವನಶೈಲಿಯ ಅಗತ್ಯ ವಸ್ತುಗಳ ಖರೀದಿಯಂತಹ ಐಚ್ಛಿಕ ಅನುಭವಗಳಿಗಾಗಿ ಸಾಲ ಪಡೆಯಲು ಹೆಚ್ಚು ಮುಕ್ತ ಮನಸ್ಸು ಮಾಡುತ್ತಿದ್ದಾರೆ. ಹಳೆಯ ತಲೆಮಾರು ಸಾಲವನ್ನು ಆತಂಕ ಹಾಗೂ ಅಪಾಯಕಾರಿ ದೃಷ್ಟಿಯಿಂದಲೇ ನೋಡುತ್ತಿದ್ದರೆ, ಇಂದಿನ ಯುವ ಪೀಳಿಗೆ ತಮ್ಮ ಭವಿಷ್ಯದ ಗಳಿಕೆಯನ್ನು ಸರಿದೂಗಿಸಿ, ಸದ್ಯದ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಸಬಲೀಕರಣದ ಸಾಧನವಾಗಿ ಸಾಲವನ್ನು ಸ್ವೀಕರಿಸುತ್ತಿದ್ದಾರೆ.

ಸಾಲ ಪಡೆಯುವ ಒಲವು ಹೆಚ್ಚುತ್ತಿದ್ದರೂ, ಅದು ಮರುಪಾವತಿ ಶಿಸ್ತನ್ನು ಕಡೆಗಣಿಸಿಲ್ಲದಿರುವುದು ವಿಶೇಷ. ಯುವ ಸಾಲಗಾರರಲ್ಲಿ ಆರ್ಥಿಕ ಸಾಕ್ಷರತೆ ಹೆಚ್ಚಿದ್ದು, ಉತ್ತಮ ಕ್ರೆಡಿಟ್ ಸ್ಕೋರ್ (ಸಿಬಿಲ್) ಕಾಯ್ದುಕೊಳ್ಳುವ ಜಾಗೃತಿ ಹಾಗೂ ಸಮಯಕ್ಕೆ ಸರಿಯಾಗಿ ಕಂತು ಪಾವತಿಸುವ ಬದ್ಧತೆ ಹೆಚ್ಚಿದೆ. ತಮ್ಮ ಮಾಸಿಕ ಆದಾಯದ ಮಿತಿಯೊಳಗಷ್ಟೇ ಸಾಲ ಪಡೆದು, ಮಿತಿಮೀರಿದ ಸಾಲದ ಸುಳಿಗೆ ಸಿಲುಕದಂತೆ ಇಂದಿನ ಗ್ರಾಹಕರು ಎಚ್ಚರಿಕೆ ವಹಿಸುತ್ತಿದ್ದಾರೆ.

ಇನ್ನೊಂದೆಡೆ, ಆರ್ಥಿಕವಾಗಿ ಸದೃಢರಾಗಿರುವ ಶ್ರೀಮಂತ ವರ್ಗವು ನಗದು ನಿರ್ವಹಣೆಗೆ ಪರ್ಸನಲ್ ಕ್ರೆಡಿಟ್ ಲೈನ್‌ಗಳ ಮೊರೆ ಹೋಗುತ್ತಿದೆ. ತಕ್ಷಣದ ಹಣಕಾಸು ಅಗತ್ಯಗಳಿಗಾಗಿ ಷೇರು ಅಥವಾ ಮ್ಯೂಚುವಲ್ ಫಂಡ್‌ಗಳಂತಹ ದೀರ್ಘಾವಧಿಯ ಹೂಡಿಕೆಗಳನ್ನು ತರಾತುರಿಯಲ್ಲಿ ಮಾರಾಟ ಮಾಡಿ ನಷ್ಟ ಅನುಭವಿಸುವ ಬದಲು, ಇಂತಹ ಅಲ್ಪಾವಧಿ ಸಾಲ ಸೌಲಭ್ಯಗಳನ್ನು ಚಾಣಾಕ್ಷತನದಿಂದ ಬಳಸಿಕೊಳ್ಳುತ್ತಿದ್ದಾರೆ.

ಸಾಲಗಾರರ ನಿರೀಕ್ಷೆಗಳು ಬದಲಾಗುತ್ತಿರುವಂತೆಯೇ, ಬ್ಯಾಂಕುಗಳು ಸಹ ಎಐ ಮತ್ತು ಮೆಷಿನ್ ಲರ್ನಿಂಗ್ ತಂತ್ರಜ್ಞಾನಗಳ ಮೂಲಕ ಸಾಲದ ಅರ್ಹತೆಯನ್ನು ಸೆಕೆಂಡುಗಳಲ್ಲಿ ನಿರ್ಣಯಿಸುತ್ತಿವೆ. ಗ್ರಾಹಕರ ಆರ್ಥಿಕ ದತ್ತಾಂಶವನ್ನು ನಿಖರವಾಗಿ ವಿಶ್ಲೇಷಿಸುವ ಮೂಲಕ ಅಪಾಯದ ಮುನ್ಸೂಚನೆ, ವಂಚನೆ ತಡೆ ಹಾಗೂ ಸೂಕ್ತ ಬಡ್ಡಿದರ ನಿಗದಿ ಸುಲಭವಾಗಿದ್ದು, ಬ್ಯಾಂಕುಗಳ ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣ ನಿಯಂತ್ರಿಸಲು ನೆರವಾಗುತ್ತಿದೆ. ಸಾಲವನ್ನು ಕಷ್ಟಕಾಲದ ಅನಿವಾರ್ಯತೆ ಎಂದು ಭಾವಿಸದೆ, ಜಾಣ್ಮೆಯ ಆರ್ಥಿಕ ಯೋಜನೆಯನ್ನಾಗಿ ಪರಿವರ್ತಿಸಿಕೊಳ್ಳುತ್ತಿರುವ ಯುವಕರ ಈ ಧೋರಣೆ ಮಾರುಕಟ್ಟೆಗೆ ಹೊಸ ಆಯಾಮ ತಂದುಕೊಟ್ಟಿದೆ.