ಜಾಗತಿಕ ತಂತ್ರಜ್ಞಾನ ಸಂಸ್ಥೆ ಸರ್ವಿಸ್‌ನೌ ‘ಎಂಟರ್‌ಪ್ರೈಸ್ ಎಐ ಮೆಚ್ಯೂರಿಟಿ ಇಂಡೆಕ್ಸ್ 2026’ ಸಮೀಕ್ಷಾ ವರದಿ ಬಿಡುಗಡೆ ಮಾಡಿದ್ದು, ಈ ಕುರಿತ ವಿವರ ಇಲ್ಲಿದೆ.
ಕನ್ನಡಪ್ರಭ ವಾರ್ತೆ
ದೇಶದ ಕಾರ್ಪೊರೇಟ್ ವಲಯದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೇಲಿನ ಹೂಡಿಕೆ ವಾರ್ಷಿಕ ಶೇಕಡ 119 ರಷ್ಟು ಭಾರೀ ಏರಿಕೆ ದಾಖಲಿಸಿದೆ. ಜಾಗತಿಕ ಸರಾಸರಿ ಬೆಳವಣಿಗೆಯಾದ ಶೇಕಡ 110 ಕ್ಕಿಂತಲೂ ಭಾರತದಲ್ಲಿ ಹೂಡಿಕೆಯ ವೇಗ ಮುಂಚೂಣಿಯಲ್ಲಿದೆ. ಆದರೆ, ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಹಣ ವಿನಿಯೋಗವಾಗುತ್ತಿದ್ದರೂ, ಅದನ್ನು ನಿಯಂತ್ರಿಸುವ, ಪರೀಕ್ಷಿಸುವ ಹಾಗೂ ಮೇಲ್ವಿಚಾರಣೆ ನಡೆಸುವ ಸೂಕ್ತ ಆಡಳಿತಾತ್ಮಕ ಚೌಕಟ್ಟನ್ನು ದೇಶದ ಕೇವಲ ಶೇಕಡ 22 ರಷ್ಟು ಉದ್ಯಮಗಳು ಮಾತ್ರ ಹೊಂದಿವೆ.ಜಾಗತಿಕ ತಂತ್ರಜ್ಞಾನ ಸಂಸ್ಥೆ ಸರ್ವಿಸ್‌ನೌ ಬಿಡುಗಡೆ ಮಾಡಿರುವ ‘ಎಂಟರ್‌ಪ್ರೈಸ್ ಎಐ ಮೆಚ್ಯೂರಿಟಿ ಇಂಡೆಕ್ಸ್ 2026’ ಸಮೀಕ್ಷಾ ವರದಿಯಲ್ಲಿ ಈ ಅಂತರ ಬಯಲಾಗಿದೆ. ಸದ್ಯ ಭಾರತೀಯ ಕಂಪನಿಗಳ ಸರಾಸರಿ ಐಟಿ ಬಜೆಟ್‌ನಲ್ಲಿ ಎಐ ಪಾಲು ಶೇಕಡ 16.6 ರಷ್ಟಿದ್ದು, 2027ರ ವೇಳೆಗೆ ಇದು ಶೇಕಡ 21.3 ಕ್ಕೆ ಏರಿಕೆಯಾಗಲಿದೆ. ಭಾರತವು ಅತ್ಯುತ್ತಮ ಡಿಜಿಟಲ್ ಮೂಲಸೌಕರ್ಯ ಮತ್ತು ಎಂಜಿನಿಯರಿಂಗ್ ಪ್ರತಿಭೆಗಳನ್ನು ಹೊಂದಿದ್ದು, ಜಾಗತಿಕ ಮಟ್ಟದಲ್ಲೇ ಅತ್ಯಂತ ವೇಗವಾಗಿ ಎಐ ಅಳವಡಿಸಿಕೊಳ್ಳುತ್ತಿರುವ ದೇಶಗಳಲ್ಲಿ ಒಂದಾಗಿದೆ.
ಆದಾಗ್ಯೂ, ದೇಶದ ಶೇಕಡ 54 ರಷ್ಟು ಸಂಸ್ಥೆಗಳು ಎಐ ಏಜೆಂಟ್‌ಗಳನ್ನು ನಿಯೋಜಿಸುತ್ತಿವೆಯಾದರೂ, ಕೇವಲ ಶೇಕಡ 11 ರಷ್ಟು ಕಂಪನಿಗಳು ಮಾತ್ರ ಪೂರ್ಣ ಪ್ರಮಾಣದ ಸ್ವಾಯತ್ತ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯವನ್ನು ನೀಡಿವೆ. ಉದ್ಯಮ ನಾಯಕರಲ್ಲಿ ಪಾರದರ್ಶಕತೆಯ ಕೊರತೆ, ತಪ್ಪು ಮಾಹಿತಿ ಹರಡುವ ಭೀತಿ, ಸಂಕೀರ್ಣ ನಿಯಂತ್ರಣಗಳು ಮತ್ತು ಡೇಟಾ ಭದ್ರತೆಯ ಬಗೆಗಿನ ಆತಂಕಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಅಲ್ಲದೆ, ಕೇವಲ ಶೇಕಡ 18 ರಷ್ಟು ಸಂಸ್ಥೆಗಳು ಮಾತ್ರ ಹಳೆಯ ಪ್ರತ್ಯೇಕ ವ್ಯವಸ್ಥೆಗಳನ್ನು ಬದಿಗೊತ್ತಿ ಸಮಗ್ರ ಏಕೀಕೃತ ವೇದಿಕೆಯನ್ನು ಅಳವಡಿಸಿಕೊಂಡಿವೆ.ಏಷ್ಯಾ-ಪೆಸಿಫಿಕ್ ವಲಯದ ಮುಂಚೂಣಿ ರಾಷ್ಟ್ರಗಳು ಎಐ ಆಡಳಿತ ಸೂಚ್ಯಂಕದಲ್ಲಿ 78 ಅಂಕಗಳನ್ನು ಗಳಿಸಿದ್ದರೆ, ಭಾರತವು 55 ಅಂಕಗಳನ್ನು ಪಡೆದು ಬರೋಬ್ಬರಿ 23 ಅಂಕಗಳಷ್ಟು ಹಿನ್ನಡೆಯಲ್ಲಿದೆ. ಬಲಿಷ್ಠ ಆಡಳಿತ ಮತ್ತು ದೃಢ ವ್ಯವಸ್ಥೆಯನ್ನು ರೂಪಿಸಿಕೊಂಡಿರುವ ಎಪಿಎಸಿ ಸಂಸ್ಥೆಗಳು ಎಐ ಹೂಡಿಕೆಯ ಮೇಲೆ ಶೇಕಡ 149 ರಷ್ಟು ಆದಾಯ ಗಳಿಸುತ್ತಿದ್ದು, ಉತ್ಪಾದಕತೆಯಲ್ಲಿ ಆರು ಪಟ್ಟು ಮುನ್ನಡೆ ಸಾಧಿಸಿವೆ.
ಈ ಕುರಿತು ಸರ್ವಿಸ್‌ನೌ ಇಂಡಿಯಾ ಮತ್ತು ಸಾರ್ಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಗ್ರೂಪ್ ಉಪಾಧ್ಯಕ್ಷ ಕುಲ್ಮೀತ್ ಬಾವಾ ಅವರು , ‘ಕೆಲವೇ ಕೆಲವು ಮಾರುಕಟ್ಟೆಗಳು ಮಾತ್ರ ಊಹಿಸಬಹುದಾದ ಪ್ರಮಾಣದಲ್ಲಿ ಭಾರತವು ಎಐ ತಂತ್ರಜ್ಞಾನಕ್ಕೆ ಬದ್ಧತೆಯನ್ನು ತೋರಬಲ್ಲದು ಎಂಬುದನ್ನು ಸಾಬೀತುಪಡಿಸಿದೆ. ಮುಂದಿನ ಹಂತವು, ಭಾರತೀಯ ಉದ್ಯಮಗಳು ಆ ಮಹತ್ವಾಕಾಂಕ್ಷೆಯನ್ನು ಆಡಳಿತ, ಪರಸ್ಪರ ಸಂಪರ್ಕ ಹೊಂದಿದ ಡೇಟಾ ಮತ್ತು ಎಐಗೆ ಹೆಚ್ಚು ನಿರ್ಣಾಯಕ ಕೆಲಸಗಳನ್ನು ವಹಿಸಲು ಅನುವು ಮಾಡಿಕೊಡುವ ಕಾರ್ಯಪ್ರವಾಹಗಳೊಂದಿಗೆ ಹೇಗೆ ಸಂಯೋಜಿಸುತ್ತವೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಈ ಅಡಿಪಾಯಗಳನ್ನು ಮೊದಲು ನಿರ್ಮಿಸುವ ಸಂಸ್ಥೆಗಳು, ಭಾರತಕ್ಕಾಗಿ ಎಐ ಮೌಲ್ಯದ ಮುಂದಿನ ಹಂತವನ್ನು ಮುಕ್ತಗೊಳಿಸಲಿವೆ’ ಎಂದು ತಿಳಿಸಿದ್ದಾರೆ.ಸಂಶೋಧನೆ ಕುರಿತ ತಮ್ಮ ಅಭಿಪ್ರಾಯವನ್ನು ತಿಳಿಸಿದ ಡೆಲಾಯ್ಟ್ ಇಂಡಿಯಾದ ಪಾಲುದಾರ ಹಾಗೂ ಮುಖ್ಯ ಕಾರ್ಯತಂತ್ರ ಮತ್ತು ನಾವೀನ್ಯತಾ ಅಧಿಕಾರಿ ಅಶ್ವಿನ್ ವೆಲ್ಲೋಡಿ ಅವರು , ‘ಭಾರತದಲ್ಲಿ ಎಐ ಪ್ರಬುದ್ಧತೆಯು ಒಂದು ಹೊಸ ಹಂತವನ್ನು ಪ್ರವೇಶಿಸುತ್ತಿದೆ. ಸಂಸ್ಥೆಗಳು ತಮ್ಮ ಉದ್ದಿಮೆಯಾದ್ಯಂತ ಎಐ ಅಳವಡಿಕೆ ಹೆಚ್ಚಿಸುತ್ತಿದ್ದಂತೆ, ಇದರ ಅವಕಾಶಗಳು ವೈಯಕ್ತಿಕ ಬಳಕೆಯನ್ನು ಮೀರಿ ಕಾರ್ಯಪ್ರವಾಹಗಳು, ನಿರ್ಧಾರ ಕೈಗೊಳ್ಳುವಿಕೆ ಮತ್ತು ಕಾರ್ಯಾಚರಣಾ ಮಾದರಿಗಳನ್ನು ಮರುರೂಪಿಸುವತ್ತ ಸಾಗುತ್ತಿವೆ. ಅದಕ್ಕೆ ಎಐ ವ್ಯವಸ್ಥೆಯನ್ನು ಸುಲಭವಾಗಿ ವಿಸ್ತರಿಸಲು ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ಅಗತ್ಯವಿರುವ ಮೂಲ ಬುನಾದಿಗಳಿಗೂ ಸಮಾನ ಆದ್ಯತೆ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ’ ಎಂದು ಹೇಳಿದರು.