ನಿವೃತ್ತಿ ಎಂದಕೂಡಲೇ ನೆನಪಾಗುವುದು ಮುಸ್ಸಂಜೆಯ ನೆಮ್ಮದಿಯ ಬದುಕು ಮತ್ತು ಯಾವುದೇ ಆಫೀಸ್ ಕಿರಿಕಿರಿಯಿಲ್ಲದ ವಿಶ್ರಾಂತ ಜೀವನ. ಆದರೆ, ಈ ನಿರಾಳ ಬದುಕಿಗೆ ಅಡ್ಡಿಯಾಗುವ ವಿಲನ್ ಯಾರೆಂದು ಗೊತ್ತೇ? ಖರ್ಚುಗಳು ನಿಲ್ಲುವುದಿಲ್ಲ, ಆದರೆ ಬರುವ ಸಂಬಳ ನಿಂತುಹೋಗುತ್ತದೆ ಎನ್ನುವ ಸತ್ಯ.
ನಿವೃತ್ತಿ ಎಂದಕೂಡಲೇ ನೆನಪಾಗುವುದು ಮುಸ್ಸಂಜೆಯ ನೆಮ್ಮದಿಯ ಬದುಕು ಮತ್ತು ಯಾವುದೇ ಆಫೀಸ್ ಕಿರಿಕಿರಿಯಿಲ್ಲದ ವಿಶ್ರಾಂತ ಜೀವನ. ಆದರೆ, ಈ ನಿರಾಳ ಬದುಕಿಗೆ ಅಡ್ಡಿಯಾಗುವ ವಿಲನ್ ಯಾರೆಂದು ಗೊತ್ತೇ? ಖರ್ಚುಗಳು ನಿಲ್ಲುವುದಿಲ್ಲ, ಆದರೆ ಬರುವ ಸಂಬಳ ನಿಂತುಹೋಗುತ್ತದೆ ಎನ್ನುವ ಸತ್ಯ.
ನಾವೆಲ್ಲರೂ ದುಡಿಯುವ ಕಾಲದಲ್ಲೇ ಪಿಪಿಎಫ್, ಫಿಕ್ಸ್‌ಡ್ ಡೆಪಾಸಿಟ್, ಪೋಸ್ಟ್ ಆಫೀಸ್ ಅಥವಾ ಎನ್‌ಪಿಎಸ್ ಎಂದು ಹಣ ಕೂಡಿಡಲು ಶುರುಮಾಡುತ್ತೇವೆ. ಇಲ್ಲಿ ನಾವು ಮಾಡುವ ಸಾಮಾನ್ಯ ತಪ್ಪು, ‘ಎಲ್ಲಿ ಜಾಸ್ತಿ ಬಡ್ಡಿ ಸಿಗುತ್ತದೆ’ ಎಂದು ಹುಡುಕುವುದು. ಕೇವಲ ಹೆಚ್ಚಿನ ಬಡ್ಡಿದರ ನೋಡಿ ಹಣ ಹೂಡಿದರೆ, ನಿವೃತ್ತಿ ಹೊತ್ತಿಗೆ ನಮ್ಮ ಕೈಗೆ ಸಿಗುವ ಹಣ ಅಂದುಕೊಂಡಷ್ಟು ನೆರವಾಗುವುದಿಲ್ಲ.
ಯಾಕೆಂದರೆ ನಿಮ್ಮ ಗಮನ ಹಣದುಬ್ಬರದ ಮೇಲೆ ಇರಬೇಕು.
ಬೆಲೆ ಏರಿಕೆಇಂದು ಒಂದು ಲೀಟರ್ ಹಾಲಿಗೆ ಇರುವ ಬೆಲೆ ಇನ್ನು ಇಪ್ಪತ್ತು ವರ್ಷಗಳ ನಂತರ ಎಷ್ಟಿರಬಹುದು? ಖಂಡಿತಾ ದುಪ್ಪಟ್ಟು ಅಥವಾ ಮೂರು ಪಟ್ಟು ಹೆಚ್ಚಿರುತ್ತದೆ. ಇದನ್ನೇ ಹಣದುಬ್ಬರ ಅಥವಾ ಬೆಲೆ ಏರಿಕೆ ಅನ್ನುವುದು. ನಿಮ್ಮ ಠೇವಣಿಗೆ ಶೇ 7ರಷ್ಟು ಬಡ್ಡಿ ಸಿಗುತ್ತಿದ್ದು, ಮಾರುಕಟ್ಟೆಯಲ್ಲಿ ದಿನಬಳಕೆಯ ವಸ್ತುಗಳ ಬೆಲೆ ಶೇ 6ರಷ್ಟು ಏರಿಕೆಯಾಗುತ್ತಿದ್ದರೆ, ನಿಮ್ಮ ಜೇಬಿಗೆ ಸಿಗುವ ನಿಜವಾದ ಲಾಭ ಕೇವಲ ಶೇ 1 ಮಾತ್ರ. ಇದಕ್ಕೆ ತೆರಿಗೆಯ ಹೊರೆ ಸೇರಿದರಂತೂ ನಿಮ್ಮ ಉಳಿತಾಯದ ಮೌಲ್ಯ ಮತ್ತಷ್ಟು ಕುಗ್ಗುತ್ತದೆ.
ಯಾವ ಯೋಜನೆ ಹೇಗೆ?
1. ಬ್ಯಾಂಕ್ ಎಫ್‌ಡಿ ಮತ್ತು ಪೋಸ್ಟ್ ಆಫೀಸ್: ಇವು ನಿಮ್ಮ ಹಣಕ್ಕೆ ನೂರಕ್ಕೆ ನೂರು ರಕ್ಷಣೆ ನೀಡುತ್ತವೆ ನಿಜ. ಆದರೆ, ಇವುಗಳಿಂದ ಬರುವ ಬಡ್ಡಿಯ ಮೇಲೆ ನೀವು ಆದಾಯ ತೆರಿಗೆ ಕಟ್ಟಬೇಕು. ಹೀಗಾಗಿ, ಇವು ಮುಂದಿನ 2-3 ವರ್ಷಗಳಲ್ಲಿ ಬೇಕಾಗುವ ತುರ್ತು ಹಣಕ್ಕೆ ಸೂಕ್ತವೇ ಹೊರತು, 20 ವರ್ಷಗಳ ನಂತರದ ನಿವೃತ್ತಿ ಜೀವನಕ್ಕಲ್ಲ.
2. ಪಿಪಿಎಫ್: ಹೂಡುವ ಹಣ, ಬರುವ ಬಡ್ಡಿ ಮತ್ತು ಕೊನೆಗೆ ಕೈಸೇರುವ ಮೊತ್ತ ಎಲ್ಲವೂ ಸಂಪೂರ್ಣ ತೆರಿಗೆ ಮುಕ್ತ. ಆದರೆ ಇದರಲ್ಲಿ ವರ್ಷಕ್ಕೆ ಗರಿಷ್ಠ ₹1.5 ಲಕ್ಷ ಮಾತ್ರ ಹೂಡಲು ಸಾಧ್ಯ. ಇದು ಸುರಕ್ಷಿತ ನಿಧಿಗೆ ಒಳ್ಳೆಯದು, ಆದರೆ ನಿವೃತ್ತಿಯ ಇಡೀ ಖರ್ಚಿಗೆ ಇದು ಮಾತ್ರವೇ ಸಾಲದು.
3. ರಾಷ್ಟ್ರೀಯ ಪಿಂಚಣಿ ಯೋಜನೆ: ಇದರಲ್ಲಿ ನಿಶ್ಚಿತ ಬಡ್ಡಿ ಇರುವುದಿಲ್ಲ. ನಿಮ್ಮ ಹಣದ ಒಂದು ಪಾಲು ಷೇರು ಮಾರುಕಟ್ಟೆಯಲ್ಲಿ ತೊಡಗಿಸಲ್ಪಡುವುದರಿಂದ, ದೀರ್ಘಾವಧಿಯಲ್ಲಿ ಹಣದುಬ್ಬರವನ್ನು ಮೀರಿಸಿ ಶೇ.10 ರಿಂದ 12ರಷ್ಟು ಉತ್ತಮ ಲಾಭ ತಂದುಕೊಡುವ ಶಕ್ತಿ ಇದಕ್ಕಿದೆ. ನಿವೃತ್ತಿ ನಂತರ ಮಾಸಿಕ ಪಿಂಚಣಿಯೂ ಲಭ್ಯ.
ನೆಮ್ಮದಿಯ ನಿವೃತ್ತಿಗೆ ಸೂತ್ರವೇನು?
‘ಎಲ್ಲಾ ಮೊಟ್ಟೆಗಳನ್ನೂ ಒಂದೇ ಬುಟ್ಟಿಯಲ್ಲಿ ಇಡಬೇಡಿ’ ಎಂಬ ಗಾದೆ ಮಾತಿದೆ. ನಿಮ್ಮ ನಿವೃತ್ತಿ ಹೂಡಿಕೆಯೂ ಹೀಗೇ ಇರಬೇಕು.
ಸುರಕ್ಷತೆಗಾಗಿ, ಶೇ 40ರಷ್ಟು ಹಣವನ್ನು ಪಿಪಿಎಫ್ ಮತ್ತು ಉತ್ತಮ ಪೋಸ್ಟ್ ಆಫೀಸ್ ಯೋಜನೆಗಳಲ್ಲಿಡಬಹುದು.
ಬೆಳವಣಿಗೆಗಾಗಿ, ಉಳಿದ ಶೇ 60ರಷ್ಟು ಹಣವನ್ನು ಎನ್‌ಪಿಎಸ್ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ (ಎಸ್‌ಐಪಿ) ಹೂಡಬಹುದು.
ಹಾಗಾಗಿ ಕೇವಲ ಬಡ್ಡಿದರ ನೋಡಿ ಮರುಳಾಗಬೇಡಿ. ಲೆಕ್ಕಾಚಾರ ಹಾಕಿ, ಹಣದುಬ್ಬರವನ್ನು ಸೋಲಿಸುವ ಜಾಣ ಹೂಡಿಕೆ ಮಾಡಿ. ಪರಿಣತರ ಮಾರ್ಗದರ್ಶನ ಪಡೆದು ಮುಂದುವರಿಯಿರಿ.
