ಸಾಮಾಜಿಕ ಜಾಲತಾಣಗಳು ಮಕ್ಕಳ ಮೇಲುಂಟುಮಾಡಿರುವ ದುಷ್ಪರಿಣಾಮಕ್ಕೆ ಭಾರತ ತನ್ನದೇ ಆದ ಉತ್ತರಗಳನ್ನು ಕಂಡುಕೊಳ್ಳುವುದು ಇಂದಿನ ತುರ್ತು. ಡಿಜಿಟಲ್ ವೇದಿಕೆಗಳನ್ನು ಸುರಕ್ಷಿತ, ವಿಶ್ವಾಸಾರ್ಹ ಮತ್ತು ಹೊಣೆಗಾರರನ್ನಾಗಿ ಮಾಡಲು ಬಲವಾದ ನಿರ್ಧಾರ ತಳೆಯುವ ಸಮಯ ಬಂದಿದೆ.

-ರಾಜೀವ್‌ ಚಂದ್ರಶೇಖರ್‌

ಶಾಸಕ, ಕೇರಳ ಬಿಜೆಪಿ ಅಧ್ಯಕ್ಷ

ಯುನೈಟೆಡ್‌ ಸ್ಟೇಟ್ಸ್‌, ಅದರ ಪ್ರಾಂತ್ಯಗಳು ಹಾಗೂ ಡಿಸ್ಟ್ರಿಕ್ಟ್‌ ಆಫ್‌ ಕೋಲಂಬಿಯಾದ ಅಟಾರ್ನಿ ಜನರಲ್‌ಗಳ ದ್ವಿಪಕ್ಷೀಯ ಒಕ್ಕೂಟವು ಮಕ್ಕಳಿಗೆ ಹಾನಿಯುಂಟುಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಹೂಡಿದ್ದ ದಾವೆಗಳನ್ನು ಇತ್ಯರ್ಥಪಡಿಸಲು, ಆ.26ರಂದು ಮೆಟಾ ಸಂಸ್ಥೆಯು 17.1 ಶತಕೋಟಿ ಡಾಲರ್‌ ದಂಡವನ್ನು ಪಾವತಿಸಲು ಒಪ್ಪಿಕೊಂಡಿತು. ಇದು ಇಂಟರ್ನೆಟ್‌ ಇತಿಹಾಸದಲ್ಲೇ ಅತ್ಯಂತ ದೊಡ್ಡ ಗ್ರಾಹಕ ರಕ್ಷಣಾ ಒಪ್ಪಂದಗಳಲ್ಲಿ ಒಂದಾಗಿದೆ. ಅತ್ಯಂತ ಮುಖ್ಯವಾಗಿ, ಬೆಳವಣಿಗೆ ಮತ್ತು ಲಾಭದ ಅನ್ವೇಷಣೆಯಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳು ತಮಗೆ ತಿಳಿದೇ ಮಕ್ಕಳನ್ನು ಹಾನಿಗೆ ಒಡ್ಡಿವೆಯೇ ಎಂಬ ಚರ್ಚೆಗೆ ಇದು ನಿರ್ಣಾಯಕ ತಿರುವು ನೀಡುತ್ತದೆ.

ಕಟಕಟೆಯಲ್ಲಿ ಮೆಟಾಗೆ ಪರೀಕ್ಷೆ:

ಈ ಪ್ರಕರಣವು ಮೆಟಾ ಸಂಸ್ಥೆಯ ತಾಂತ್ರಿಕ ವಿನ್ಯಾಸದ ಆಯ್ಕೆಗಳನ್ನು ಕಾನೂನಿನ ಕಟು ಪರಿಶೀಲನೆಗೆ ಒಳಪಡಿಸಿತು. ಬಳಕೆದಾರರು ಗಂಟೆಗಟ್ಟಲೆ ಆ್ಯಪ್‌ನಲ್ಲೇ ಉಳಿದುಕೊಳ್ಳುವಂತೆ ಪ್ರಚೋದಿಸುವ ಪರಿ, ಹದಿಹರೆಯದವರ ಸುರಕ್ಷತಾ ಉಪಕ್ರಮಗಳ ಕುರಿತು ನೀಡಿದ ಕಣ್ಣೊರೆಸುವ ಹೇಳಿಕೆಗಳು ಮತ್ತು ತಮ್ಮ ಆ್ಯಪ್‌ಗಳು ಅಪ್ರಾಪ್ತ ಬಳಕೆದಾರರಿಗೆ ತಂದೊಡ್ಡುವ ಅಪಾಯಗಳ ಬಗ್ಗೆ ಸಂಸ್ಥೆಗೆ ಇದ್ದ ಸ್ಪಷ್ಟ ಅರಿವು- ಇವೆಲ್ಲವೂ ಕಟಕಟೆಯಲ್ಲಿ ವಿಚಾರಣೆಗೆ ಒಳಗಾದವು. ಮೆಟಾ ತಾನು ಯಾವುದೇ ತಪ್ಪು ಮಾಡಿಲ್ಲವೆಂದು ವಾದಿಸಿದೆಯಾದರೂ, ಈ ಒಪ್ಪಂದವು ಒಂದು ಸತ್ಯವನ್ನು ಬಹಿರಂಗಪಡಿಸಿದೆ. ಸ್ವಯಂಪ್ರೇರಿತ ನಿಯಂತ್ರಣವು ಕಾನೂನುಬದ್ಧ ಹೊಣೆಗಾರಿಕೆಗೆ ಎಂದಿಗೂ ಪರ್ಯಾಯವಾಗಲಾರದು.

ಈ ಒಪ್ಪಂದದ ಪ್ರಕಾರ, ಮೆಟಾ ಸಂಸ್ಥೆಯು 18 ವರ್ಷದೊಳಗಿನ ಬಳಕೆದಾರರಿಗೆ ಬಲವಾದ ಸುರಕ್ಷತಾ ಮಾನದಂಡಗಳನ್ನು ಜಾರಿಗೆ ತರಲೇಬೇಕು. ಇದರಲ್ಲಿ ದಿನನಿತ್ಯದ ಸ್ವಯಂಚಾಲಿತ ಸಮಯದ ಮಿತಿ, ರಾತ್ರಿ ವೇಳೆಯ ಬಳಕೆಗೆ ನಿರ್ಬಂಧ, ಶಾಲೆಯ ಅವಧಿಯಲ್ಲಿ ನೋಟಿಫಿಕೇಶನ್ ತಡೆ, ಕಟ್ಟುನಿಟ್ಟಾದ ವಯಸ್ಸಿನ ದೃಢೀಕರಣ ಮತ್ತು ಸ್ವತಂತ್ರ ಮೇಲ್ವಿಚಾರಣೆ ಸೇರಿವೆ. ಇವು ಕೇವಲ ಮೇಲ್ನೋಟದ ಬದಲಾವಣೆಗಳಲ್ಲ, ಬದಲಿಗೆ ಅಪ್ರಾಪ್ತರಿಗೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ನಿರ್ವಹಣೆಯ ಮೂಲ ಸ್ವರೂಪವನ್ನೇ ಬದಲಿಸುವಂತಹ ಕ್ರಾಂತಿಕಾರಿ ನಿಯಮಗಳು.

ಭಾರತದ ಮಕ್ಕಳ ರಕ್ಷಣೆ:

ಅಮೆರಿಕದ ಮಕ್ಕಳಿಗೆ ಕಾನೂನಿನ ಮೂಲಕ ಅಂತಹ ರಕ್ಷಣೆ ಸಿಗಬಹುದಾದರೆ, ಭಾರತೀಯ ಮಕ್ಕಳಿಗೆ ಅದೇ ಸುರಕ್ಷತೆಯ ಭರವಸೆ ಏಕೆ ಸಿಗಬಾರದು?

ಈ ಒಪ್ಪಂದದಿಂದ ಮೆಟಾ ಸಂಸ್ಥೆಯು ಸಂಪೂರ್ಣ ಸಮಸ್ಯೆಯನ್ನು ಪರಿಹರಿಸಿದೆ ಎಂದರ್ಥವಲ್ಲ. 2025ರಲ್ಲೇ 201 ಶತಕೋಟಿ ಡಾಲರ್ ಆದಾಯಗಳಿಸಿದ ಕಂಪನಿಗೆ, 10 ವರ್ಷಗಳ ಅವಧಿಯಲ್ಲಿ 17 ಶತಕೋಟಿ ಡಾಲರ್ ಪಾವತಿಸುವುದು ದೊಡ್ಡ ಹೊರೆಯೇನಲ್ಲ. ಒಪ್ಪಂದದ ಬೆನ್ನಲ್ಲೇ ಮೆಟಾ ಶೇರು ಮೌಲ್ಯ ಶೇ.5ರಷ್ಟು ಜಿಗಿದಿರುವುದೇ ಇದಕ್ಕೆ ಸಾಕ್ಷಿ. ಇಲ್ಲಿ ಜಾರಿಗೆ ತಂದ ಸುರಕ್ಷತಾ ಸುಧಾರಣೆಗಳು ಸ್ವಾಗತಾರ್ಹವಾದರೂ, ಇವು ಬಹುಕಾಲದ ಹಿಂದೆಯೇ ಬರಬೇಕಿತ್ತು. ಎಲ್ಲಕ್ಕಿಂತ ಮಿಗಿಲಾಗಿ, ಈ ಒಪ್ಪಂದವು ಅಮೆರಿಕದ ಪ್ರಾಸಿಕ್ಯೂಟರ್‌ಗಳ ಮೂಲಕ ಅಮೆರಿಕದ ಕಾನೂನಿನಡಿಯಲ್ಲಿ ಅಲ್ಲಿನ ಮಕ್ಕಳನ್ನು ಮಾತ್ರ ರಕ್ಷಿಸುತ್ತದೆ. ಇದು ಭಾರತದಲ್ಲಿರುವ 35 ಕೋಟಿ ಯುವ ಬಳಕೆದಾರರನ್ನು ಒಳಗೊಳ್ಳುವುದಿಲ್ಲ! ಇಲ್ಲೂ ಅದೇ ವೇದಿಕೆಗಳು ಕಾರ್ಯಾಚರಿಸುತ್ತಿವೆ, ಮಕ್ಕಳ ಗಮನವನ್ನು ಸೆಳೆಯಲು ಅದೇ ಶಿಫಾರಸು ಎಂಜಿನ್‌ಗಳು (Recommendation systems) ಕೆಲಸ ಮಾಡುತ್ತಿವೆ ಮತ್ತು ನಿರಂತರ ಬಳಕೆಗೆ ಪ್ರಚೋದಿಸುವ ಅದೇ ಆಲ್ಗಾರಿದಂಗಳು ಕಾರ್ಯನಿರ್ವಹಿಸುತ್ತಿವೆ. ಆದರೂ ಭಾರತದಲ್ಲಿ ಇಂತಹ ಗಂಭೀರ ಕಾನೂನು ಕ್ರಮಗಳಾಗಲಿ, ಪಾರದರ್ಶಕ ತನಿಖೆಯಾಗಲಿ ಅಥವಾ ನ್ಯಾಯಾಲಯದ ಮೇಲ್ವಿಚಾರಣೆಯ ಸುಧಾರಣೆಗಳಾಗಲಿ ಜರುಗಿಲ್ಲ.

ಇದರರ್ಥ ಭಾರತದಲ್ಲಿ ಹಾನಿಯ ಪ್ರಮಾಣ ಕಡಿಮೆಯಿದೆ ಎಂದಲ್ಲ. ಬಲಿಷ್ಠ ಕಾನೂನು ಕ್ರಮಗಳ ಕೊರತೆಯಿಂದಾಗಿ ನಮ್ಮಲ್ಲಿನ ಚರ್ಚೆಗಳು ಅಪೂರ್ಣವಾಗಿ ಉಳಿದುಬಿಡುತ್ತವೆ. ಯಾವುದೋ ಒಂದು ದುರಂತ ಸಂಭವಿಸುತ್ತದೆ, ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತದೆ, ಸಂಸ್ಥೆಯೊಂದು ಹೇಳಿಕೆ ಬಿಡುಗಡೆ ಮಾಡುತ್ತದೆ, ಸಂಸತ್ತಿನಲ್ಲಿ ಪ್ರಶ್ನೆಯೊಂದು ಮೂಡುತ್ತದೆ—ಬಳಿಕ ಮತ್ತೆ ಎಲ್ಲವೂ ಮೌನಕ್ಕೆ ಶರಣಾಗುತ್ತದೆ. ಅಮೆರಿಕದ ನ್ಯಾಯಾಂಗ ಹೋರಾಟವು ಈ ಚಕ್ರವನ್ನು ಮುರಿದುಹಾಕಿದೆ. ಭಾರತಕ್ಕೂ ಈಗ ಅಂತಹದ್ದೇ ಪಾರದರ್ಶಕತೆ ತರಬಲ್ಲ ಬಲವಾದ ಕಾನೂನು ಪ್ರಕ್ರಿಯೆಯ ಅಗತ್ಯವಿದೆ.

ಕೆಲವು ಮುಖ್ಯ ಪ್ರಶ್ನೆಗಳು:

ಅಮೆರಿಕ ಪ್ರಕರಣದ ಅತಿಮುಖ್ಯ ಫಲಿತಾಂಶವೆಂದರೆ ‘ಮಾಹಿತಿ ಬಹಿರಂಗಪಡಿಸುವಿಕೆ’ (Disclosure). ಕೋರ್ಟ್‌ನ ಕಟ್ಟುನಿಟ್ಟಿನ ಆದೇಶದಿಂದಾಗಿ ಮೆಟಾ ಸಂಸ್ಥೆಯು ಮಕ್ಕಳ ಸುರಕ್ಷತೆಯ ಕುರಿತಾದ ತನ್ನ ಆಂತರಿಕ ಸಂಶೋಧನೆ, ವಿನ್ಯಾಸ ದಾಖಲೆಗಳು ಮತ್ತು ರಹಸ್ಯ ಸಂವಹನಗಳನ್ನು ಪ್ರಮಾಣ ವಚನದೊಂದಿಗೆ ಸಾರ್ವಜನಿಕವಾಗಿ ಹೊರಹಾಕಬೇಕಾಯಿತು. ಭಾರತೀಯ ನ್ಯಾಯಾಲಯಗಳಲ್ಲಿ ಸೂಕ್ತ ಕಾನೂನು ಪ್ರಕ್ರಿಯೆ ನಡೆದರೆ ಮಾತ್ರ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಸಿಗಲು ಸಾಧ್ಯ:

*ಭಾರತೀಯ ಹದಿಹರೆಯದ ಹೆಣ್ಣುಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಬಿದ್ದಿರುವ ಪರಿಣಾಮಗಳ ಕುರಿತು ಮೆಟಾದ ಆಂತರಿಕ ವರದಿಗಳು ಏನು ಹೇಳುತ್ತವೆ?

*ರಾತ್ರಿ 11 ಗಂಟೆಯ ವೇಳೆಗೆ 14 ವರ್ಷದ ಮಗುವಿಗೆ ಹಿಂದಿ, ತಮಿಳು, ಬೆಂಗಾಲಿ ಅಥವಾ ಕನ್ನಡದಲ್ಲಿ ಶಿಫಾರಸು ಎಂಜಿನ್‌ಗಳು ಎಂತಹ ವಿಷಯಗಳನ್ನು ಪ್ರಸ್ತುತಪಡಿಸುತ್ತವೆ?

*13 ವರ್ಷಕ್ಕಿಂತ ಕೆಳಗಿನ ಎಷ್ಟು ಭಾರತೀಯ ಮಕ್ಕಳು ನಿಯಮಗಳನ್ನು ಮೀರಿ ಈ ಜಾಲತಾಣ ವೇದಿಕೆಗಳಲ್ಲಿ ಸಕ್ರಿಯರಾಗಿದ್ದಾರೆ?

*ಭಾರತೀಯ ಬಳಕೆದಾರರ ಮೇಲೆ ಪರಿಣಾಮ ಬೀರುತ್ತಿರುವ ಲೈಂಗಿಕ ಶೋಷಣಾತ್ಮಕ ವಿಷಯಗಳ ಪ್ರಮಾಣವೆಷ್ಟು ಮತ್ತು ಅದನ್ನು ಹೇಗೆ ವರದಿ ಮಾಡಲಾಗುತ್ತಿದೆ? (ಅಮೆರಿಕ ಒಂದರಲ್ಲೇ 7.5 ಮಿಲಿಯನ್ ಇಂತಹ ವಿಷಯಗಳು ಆಂತರಿಕ ಪರಿಶೀಲನೆಯಲ್ಲಿದ್ದವು).

*ಬಳಕೆದಾರರನ್ನು ದಾಸರನ್ನಾಗಿಸುವ ಅದೇ ವಿನ್ಯಾಸವನ್ನು ಭಾರತೀಯ ಬಳಕೆದಾರರ ಮೇಲೆಯೂ ಪ್ರಯೋಗಿಸಲಾಗಿದೆಯೇ? ಹೌದಾದರೆ, ಭಾರತೀಯ ಬಳಕೆದಾರರು ಯಾವುದೇ ರಕ್ಷಣೆಯಿಲ್ಲದೆ ಹಾನಿಗೆ ಈಡಾಗುತ್ತಿದ್ದಾರೆ.

ಈ ಪ್ರಶ್ನೆಗಳಿಗೆ ಉತ್ತರಗಳು ಮೆಟಾ ಸಂಸ್ಥೆಯ ಸರ್ವರ್‌ಗಳು, ಆಂತರಿಕ ದತ್ತಾಂಶಗಳು ಮತ್ತು ಹಿರಿಯ ಅಧಿಕಾರಿಗಳ ಸಂವಹನಗಳಲ್ಲಿ ಭದ್ರವಾಗಿವೆ. ಅವುಗಳನ್ನು ಹೊರತೆಗೆಯಲು ನ್ಯಾಯಾಲಯವೊಂದೇ ಮಾರ್ಗ. ಭಾರತದಲ್ಲಿ ಕ್ರಮ ಕೈಗೊಳ್ಳಲು ಕಾನೂನು ಅಡಿಪಾಯ ಈಗಾಗಲೇ ಇದೆ: ಗ್ರಾಹಕ ರಕ್ಷಣಾ ಕಾಯ್ದೆ-2019, ಐಟಿ (ಮಧ್ಯವರ್ತಿ ಮಾರ್ಗದರ್ಶಿ ಸೂತ್ರಗಳು) ನಿಯಮಗಳು-2021, ಪೋಕ್ಸೋ ಕಾಯ್ದೆ, ಬಾಲ ನ್ಯಾಯ ಕಾಯ್ದೆ ಮತ್ತು ಭಾರತದ ಸಂವಿಧಾನ. ನಾವು ಹೊಸ ಶಾಸನಕ್ಕಾಗಿ ಕಾಯಬೇಕಾದ ಅಗತ್ಯವೇ ಇಲ್ಲ.

2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ರೂಪಿಸಿದ ‘ಸುರಕ್ಷಿತ, ವಿಶ್ವಾಸಾರ್ಹ ಮತ್ತು ಹೊಣೆಗಾರಿಕೆ’ ಚೌಕಟ್ಟು (ಇದರಲ್ಲಿ ನಾನೂ ಭಾಗಿಯಾಗಿದ್ದೆ) ಇದೇ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಲ್ಪಟ್ಟಿದ್ದು. ಬೃಹತ್ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವ ಡಿಜಿಟಲ್ ವೇದಿಕೆಗಳು ತಮ್ಮ ತಾಂತ್ರಿಕ ವಿನ್ಯಾಸದ ಪರಿಣಾಮಗಳಿಗೆ ಕಾನೂನುಬದ್ಧ ಜವಾಬ್ದಾರಿಯನ್ನು ಹೊರಲೇಬೇಕು ಎನ್ನುವುದು ಇದರ ಆಶಯ. ಅಮೆರಿಕದ ಪ್ರಕರಣಗಳಲ್ಲಿ ಬಹಿರಂಗವಾಗಿರುವ ನಡವಳಿಕೆಯು ಈ ಮಾನದಂಡದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.

ಭಾರತವೇನು ಮಾಡಬಹುದು?:

1. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ: ಆಯೋಗವು ತನಿಖಾ ಅಧಿಕಾರ ಬಳಸಿ, ಭಾರತ ಕೇಂದ್ರಿತ ಸುರಕ್ಷತಾ ಸಂಶೋಧನೆ, ಆಲ್ಗಾರಿದಂ ದಾಖಲೆಗಳು, ಅಪ್ರಾಪ್ತ ಬಳಕೆದಾರರ ಡೇಟಾವನ್ನು ಒದಗಿಸಲು ಡಿಜಿಟಲ್ ವೇದಿಕೆಗಳಿಗೆ ಸಮನ್ಸ್ ನೀಡಬೇಕು.

2. ಗ್ರಾಹಕ ವೇದಿಕೆಗಳು ಹಾಗೂ ಹೈಕೋರ್ಟ್: ಸಂತ್ರಸ್ತ ಕುಟುಂಬಗಳು ನೇರವಾಗಿ ಗ್ರಾಹಕ ವೇದಿಕೆ ಮತ್ತು ಹೈಕೋರ್ಟ್‌ಗಳ ಮೆಟ್ಟಿಲೇರಬೇಕು.

3. ಸಂಸತ್ತಿನ ಶಾಸನ: ಡಿಜಿಟಲ್ ವೇದಿಕೆಗಳು ತಮ್ಮ ಕಂಟೆಂಟ್‌ ಬದಲಾವಣೆಯ ನೀತಿಗಳು, ಆಲ್ಗಾರಿದಂ ಮಾನದಂಡಗಳು ಮತ್ತು ಭಾರತೀಯ ಮಕ್ಕಳ ಸುರಕ್ಷತೆಯ ಸಂಶೋಧನೆಗಳನ್ನು ಕಡ್ಡಾಯವಾಗಿ ಸರ್ಕಾರದ ನಿಯೋಜಿತ ಪ್ರಾಧಿಕಾರಕ್ಕೆ ಬಹಿರಂಗಪಡಿಸುವ ಶಾಸನಬದ್ಧ ನಿಯಮವನ್ನು ಸಂಸತ್ತು ತರಬೇಕು.

4. ರಾಜ್ಯ ಸರ್ಕಾರಗಳು: ರಾಜ್ಯ ಸರ್ಕಾರಗಳು ಒಗ್ಗೂಡಿ ಈ ಸಂಸ್ಥೆಗಳ ವಿರುದ್ಧ ಗ್ರಾಹಕ ರಕ್ಷಣೆ ಮತ್ತು ಮಕ್ಕಳ ಸುರಕ್ಷತೆಯ ಅಡಿಯಲ್ಲಿ ನ್ಯಾಯಾಲಯಗಳಲ್ಲಿ ದೂರು ದಾಖಲಿಸಬೇಕು. ಒಂದೇ ಒಂದು ರಾಜ್ಯ ಮುಂಚೂಣಿ ಹೆಜ್ಜೆ ಇಟ್ಟರೂ ಅದೊಂದು ರಾಷ್ಟ್ರೀಯ ಚಳವಳಿಯಾಗಿ ರೂಪುಗೊಳ್ಳಬಲ್ಲದು.

ಅಮೆರಿಕದ ಈ ಒಪ್ಪಂದವು ಕೇವಲ ಮುನ್ನುಡಿ. ಜಾಗತಿಕ ಡಿಜಿಟಲ್ ಸಂಸ್ಥೆಗಳು ಪಾಶ್ಚಿಮಾತ್ಯ ದೇಶಗಳಲ್ಲಿ ಎದುರಿಸುವ ತನಿಖೆ ಮತ್ತು ಜಾಗೃತಿಗೆ ಹೋಲಿಸಿದರೆ, ಭಾರತದಲ್ಲಿ ಯಾವುದೇ ಕಟ್ಟುನಿಟ್ಟಿನ ಮೇಲ್ವಿಚಾರಣೆಯಿಲ್ಲದೆ ದೀರ್ಘಕಾಲದಿಂದ ಮುಕ್ತವಾಗಿ ಕಾರ್ಯಾಚರಿಸುತ್ತಿವೆ. ಕನಿಷ್ಠ ಕಾನೂನು ಹೊಣೆಗಾರಿಕೆಯೂ ಇಲ್ಲದೆ ಭಾರತದ ಯುವಜನತೆಯಿಂದ ಅವು ಅಪಾರ ಲಾಭ ಗಳಿಸಿವೆ.

ಸಾಮಾಜಿಕ ಜಾಲತಾಣಗಳು ತನ್ನ ಮಕ್ಕಳಿಗೆ ತಂದೊಡ್ಡಿದ ಅಪಾಯಕ್ಕೆ ಅಮೆರಿಕ ಕಂಡುಕೊಂಡ ಉತ್ತರ ಈ ಒಪ್ಪಂದ. ಭಾರತವೂ ಈಗ ತನ್ನದೇ ಆದ ಉತ್ತರಗಳನ್ನು ಹುಡುಕಿಕೊಳ್ಳಬೇಕು. ತೋರಿಕೆಯ ಚರ್ಚೆಗಳು ಮುಗಿಯಲೇಬೇಕು. ಹಾನಿ ಕಣ್ಣಮುಂದಿದೆ, ಸಂಸ್ಥೆಗಳಿಗೂ ಇದರ ಅರಿವಿದೆ, ಕಾನೂನು ಅಸ್ತ್ರಗಳು ನಮ್ಮ ಬಳಿಯಿವೆ. ಎಲ್ಲಾ ಡಿಜಿಟಲ್ ವೇದಿಕೆಗಳನ್ನು ಸುರಕ್ಷಿತ, ವಿಶ್ವಾಸಾರ್ಹ ಮತ್ತು ಹೊಣೆಗಾರರನ್ನಾಗಿ ಮಾಡಲು ನಿರ್ಣಾಯಕವಾಗಿ ವ್ಯವಹರಿಸುವ ಸಮಯ ಬಂದಿದೆ.