ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಕೋಗಿಲು 14.36 ಎಕರೆ ಜಮೀನಿನಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯಿಂದ ಬಯೋ ಮೆಥನೈಸೇಶನ್ ಪ್ಲಾಂಟ್, ಅನಿಮಲ್ ರೆಂಡರಿಂಗ್, ಅನಿಮಲ್ ಇನ್ಸಿನರೇಷನ್, ಎಳನೀರು ಬುರುಡೆ ಸಂಸ್ಕರಣಾ ಮತ್ತು ಸ್ಯಾನಿಟರಿ ತ್ಯಾಜ್ಯ ಸಂಸ್ಕರಣಾ ಸೌಲಭ್ಯಗಳನ್ನು ಕಾರ್ಯಗತಗೊಳಿಸಲು ಯೋಜಿಸಲಾಗಿತ್ತು.
ಈ ಪ್ರದೇಶದಲ್ಲಿ ಸುಮಾರು 5 ಎಕರೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ತಾತ್ಕಾಲಿಕ 150 ಕ್ಕೂ ಹೆಚ್ಚು ಶೆಡ್, ಮನೆಗಳನ್ನು 9 ಟ್ರ್ಯಾಕ್ಟರ್, 9 ಜೆಸಿಬಿ ಯಂತ್ರ ಬಳಸಿ ನೆಲಸಮಗೊಳಿಸಲಾಗಿದೆ.ಶನಿವಾರ ಅಧಿಕಾರಿಗಳ ನೇತೃತ್ವದ ತಂಡವು ಜಾಗದಲ್ಲಿದ್ದ ಎಲ್ಲಾ ಒತ್ತುವರಿಯನ್ನು ಸಂಪೂರ್ಣವಾಗಿ ತೆರವುಗೊಳಿಸಿ ಜಾಗವನ್ನು ವಶಕ್ಕೆ ಪಡೆಯಲಾಗಿದೆ.
80 ಕೋಟಿ ಮೌಲ್ಯ: ಒತ್ತುವರಿ ತೆರವುಗೊಳಿಸಿ ವಶಕ್ಕೆ ಪಡೆಯಲಾದ 5 ಎಕರೆ ಜಾಗದ ಸರ್ಕಾರಿ ಮಾರ್ಗಸೂಚಿ ದರ ಪ್ರಕಾರ ಸುಮಾರು 15 ಕೋಟಿ ರು. ಗಳಾಗಿದ್ದು, ಪ್ರಸ್ತುತ ಮಾರುಕಟ್ಟೆ ಮೌಲ್ಯದಲ್ಲಿ 80 ಕೋಟಿ ರು. ಆಗಿದೆ. ಕಾರ್ಯಾಚರಣೆಯ ಮೂಲಕ ಕೋಟ್ಯಂತರ ರುಪಾಯಿ ಮೌಲ್ಯದ ಸರ್ಕಾರಿ ಸ್ವತ್ತನ್ನು ರಕ್ಷಿಸಲಾಗಿದ್ದು, ಮುಂದಿನ ದಿನಗಳಲ್ಲಿ ಉದ್ದೇಶಿತ ಘನತ್ಯಾಜ್ಯ ನಿರ್ವಹಣಾ ಯೋಜನೆಗಳಿಗೆ ಈ ಜಾಗವನ್ನು ಬಳಸಿಕೊಳ್ಳಲಾಗುವುದು ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕರೀಗೌಡ ತಿಳಿಸಿದ್ದಾರೆ.ಈ ವೇಳೆ ಮುಖ್ಯ ಕಾರ್ಯಾಚರಣೆ ಅಧಿಕಾರಿ ರಮಾಮಣಿ, ಮುಖ್ಯ ಪ್ರಧಾನ ವ್ಯವಸ್ಥಾಪಕ ಡಾ.ರಾಘವೇಂದ್ರ ಪ್ರಸಾದ್ ಮೊದಲಾದವರಿದ್ದರು.ಅಧಿಕಾರಿಗಳ ಮೇಲೆ ಮಣ್ಣು ತೂರಿ ಆಕ್ರೋಶ:
ಮನೆ ತೆರವುಗೊಳಿಸುವುದಕ್ಕೆ ಹೋಗಿದ್ದ ಅಧಿಕಾರಿಗಳ ಮೇಲೆ ಮನೆ ಕಳೆದುಕೊಂಡ ಮಹಿಳೆಯೊಬ್ಬರು ಮಣ್ಣೆರಚಿ ಆಕ್ರೋಶ ವ್ಯಕ್ತಪಡಿಸಿದರು. ಮನೆ ನೆಲಸಮವಾಯಿತು. ನಾವು ಏನು ಮಾಡಬೇಕೆಂದು, ಎಲ್ಲಿಗೆ ಹೋಗಬೇಕು ಎಂದು ಕಣ್ಣೀರು ಹಾಕಿ ಗೋಳಾಡಿದರು.