1960 ಅಥವಾ 1962ರ ಸುಮಾರಿನಲ್ಲಿ ನಮ್ಮಮ್ಮ ಮನೆಯಲ್ಲೇ ವಿವಿಧ ಮಸಾಲೆ ತಯಾರಿಸುವುದು, ತಿಂಡಿ – ತಿನಿಸು ಮಾಡಿ ಅಕ್ಕಪಕ್ಕದಲ್ಲೇ ಮಾರುತ್ತಿದ್ದರು. ಪರಿಚಿತರು, ಸಂಬಂಧಿಕರ ಮನೆ ಕಾರ್ಯಕ್ರಮಗಳಿಗೆ ಮಾಡಿಕೊಡುತ್ತಿದ್ದರು. ಅದಕ್ಕೆ ಯಾವ ಪ್ಯಾಕಿಂಗು, ಬ್ರ್ಯಾಂಡಿಂಗೂ ಇರಲಿಲ್ಲ. ರಕ್ಷಣಾ ಇಲಾಖೆಯ ಉಪಕರಣಗಳಿಗೆ ಎಂಜಿನಿಯರಿಂಗ್ ವಸ್ತು ಪೂರೈಸುವ ಕಾರ್ಖಾನೆ ನಡೆಸುವ ನಾನು ಅಮ್ಮನ ಮಸಾಲೆ, ಅಡುಗೆ ಕಲೆ, ರಹಸ್ಯ ಕಲಿತಿದ್ದೆ. ಅಮ್ಮ ತೀರಿಕೊಂಡ ಮೇಲೆ ನಮ್ಮ ಕುಟುಂಬದ ಗುರುತು, ಅಸ್ತಿತ್ವ ಆಗಿದ್ದ ಆಹಾರ ತಯಾರಿಕೆ ಬಿಡಬಾರದು ಅನಿಸಿ ಎಸ್ಸ್ ಬೀ ಆಗ್ರೋಟೆಕ್ ಹುಟ್ಟಿ ಬೆಳೆದ ಕಥೆ ಹೇಳುತ್ತಾ ಹೋದರು 60 ವರ್ಷದ ಬಾಲಾಜಿ ರಾವ್.
ಬಾಲಾಜಿ ರಾವ್ ಮತ್ತು ಅವರ ಪತ್ನಿ ಶಾರದಾ ಸೇರಿಕೊಂಡು 2022ರಲ್ಲಿ ಎಸ್ಸ್ ಬೀ ಆಗ್ರೋ ಟೆಕ್ ಕಂಪನಿ ಸ್ಥಾಪಿಸಿದರು. ಕುಟುಂಬದ ಹೆಗ್ಗುರುತಾದ ಆಹಾರ ತಯಾರಿಕೆ ಮತ್ತು ವ್ಯಾಪಾರಕ್ಕೆ ಉದ್ಯಮದ ರೂಪ ನೀಡುವ ಗುರಿಯೊಂದಿಗೆ ಶುರುವಾದ ಈ ಕಂಪನಿ ಈಗ ಕರ್ನಾಟಕಕ್ಕಿಂತ ಉತ್ತರ ಭಾರತದ ರಾಜ್ಯಗಳಲ್ಲೇ ಹೆಚ್ಚು ಜನಪ್ರಿಯಗೊಂಡಿದೆ.
ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳಲ್ಲಿ ESS BEE ಮಸಾಲೆ ಹಾಗೂ ತಿನಿಸುಗಳ ಉತ್ಪನ್ನವು ಭಾರೀ ಬೇಡಿಕೆಯೊಂದಿಗೆ ವ್ಯಾಪಾರ ಆಗುತ್ತಿದೆ.
ವಿಶೇಷ ಅಂದ್ರೆ ಇವರು ಯಾವುದೇ ಆನ್‌ಲೈನ್ ಮಾರ್ಕೆಂಟಿಂಗ್, ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸದೇ ಉತ್ತರ ಭಾರತದ ರಾಜ್ಯಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ. ಆಹಾರ ವಿತರಣಾ ವ್ಯವಹಾರದಲ್ಲಿರುವ ಸಿದ್ಧಾರ್ಥ್ ಗುಹಾ ಎಂಬುವರ ನೆರವಿನಿಂದ ಪಾರಂಪರಿಕ ರೀತಿಯಲ್ಲಿ ನಡೆಸಿದ ವ್ಯವಹಾರವೇ ಇವರ ಕೈ ಹಿಡಿದಿದೆ. ಉತ್ತರ ಭಾರತದ ರಾಜ್ಯಗಳಿಗೆ ವಿತರಣಾ ಜವಾಬ್ದಾರಿಯನ್ನು ಸಿದ್ಧಾರ್ಥ್ ನಿಭಾಯಿಸುತ್ತಿದ್ದಾರೆ. ESS BEEಯ 30ಕ್ಕೂ ಹೆಚ್ಚು ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಸ್ಕಂದ ಹೆಸರಿನಲ್ಲಿ ಉಪ್ಪಿನಕಾಯಿ ಮತ್ತು ಹಪ್ಪಳ ಬೆಂಗಳೂರಿನ ಮಾರುಕಟ್ಟೆಯಲ್ಲಿ ಮಾರಲಾಗುತ್ತಿದೆ. ಬೆಂಗಳೂರಲ್ಲಿ ಉಪ್ಪಿನಕಾಯಿ ಮತ್ತು ಹಪ್ಪಳಕ್ಕೆ ಹೆಚ್ಚು ಬೇಡಿಕೆ ಗಿಟ್ಟಿಸಿಕೊಂಡಿದೆ ESS BEE.
ಆಹಾರ ತಯಾರಿಸಲು ಬೇಕಾಗುವ ಮಸಾಲೆ ಪದಾರ್ಥಗಳು ಖರೀದಿ, ಸಾಗಾಣಿಕೆ, ತಯಾರಿಕೆ ಕೆಲಸಗಳನ್ನು ಬಾಲಾಜಿ ರಾವ್ ನೋಡಿಕೊಂಡರೆ, ಪತ್ನಿ ಶಾರದಾ ಅವರು ಎಂಜಿನಿಯರಿಂಗ್ ಕಂಪನಿಯ ಟೆಂಡರ್ ವ್ಯವಹಾರಗಳ ಜೊತೆಗೆ ESS BEEಯ ಉತ್ಪನ್ನಗಳ ಮಾರ್ಕೆಟಿಂಗ್ ಜವಾಬ್ದಾರಿ ನಿಭಾಯಿಸುತ್ತಾರೆ. ಪತಿ - ಪತ್ನಿ ನಿವೃತ್ತರಾಗುವ ಯೋಚನೆ ಪಕ್ಕಕ್ಕಿಟ್ಟು ಹೊಸ ಉದ್ಯಮ ಕಟ್ಟಿ ಬೆಳೆಸುವುದರಲ್ಲಿ ನಿರತರಾಗಿದ್ದಾರೆ. ಪ್ರಸ್ತುತ ESS BEEಯ ವಾರ್ಷಿಕ ವಹಿವಾಟು 2 ಕೋಟಿ ರೂಪಾಯಿ ತಲುಪಿದೆ.
ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ (ಕಪೆಕ್)ನ ಸಂಪನ್ಮೂಲ ವ್ಯಕ್ತಿಯಾದ ಅಭಿಷೇಕ್ ಅವರ ಮೂಲಕ ಪಿಎಂಎಫ್ಎಂಇ ಯೋಜನೆಯ ಮಾಹಿತಿ ತಿಳಿದು 24 ಲಕ್ಷ ರೂ. ಸಾಲ ಪಡೆದು ESS BEE ಉತ್ಪಾದನೆ ಆರಂಭಿಸಿದರು. ಕೇಂದ್ರದಿಂದ ಬರಬೇಕಾದ ಸಬ್ಸಿಡಿ ಬಂದಾಗಿದೆ. ರಾಜ್ಯದ ಸಬ್ಸಿಡಿ ಬರಬೇಕಿದೆ. ಈ ವ್ಯವಹಾರವನ್ನು ವಾರ್ಷಿಕ 100 ಕೋಟಿ ರೂ.ವರೆಗೆ ತಲುಪಿಸುವ ಆಸೆ ಇದೆ. ಆದರೆ, ಬ್ಯಾಂಕುಗಳಿಂದ ಇದರ ವಿಸ್ತರಣೆಗೆ ಸಾಲ ಸಿಗುತ್ತಿಲ್ಲ. ಉತ್ಪಾದನೆ ಮತ್ತು ಮಾರಾಟ ನಮಗೆ ಕಷ್ಟವಲ್ಲ. ಅದಕ್ಕೆ ಬಂಡವಾಳ ಹೊಂದಿಸುವುದೇ ಸವಾಲಾಗಿದೆ. ಹಂತ ಹಂತವಾಗಿ 20 ಕೋಟಿ ರೂ. ಸಾಲ ಸಿಕ್ಕರೆ ಐದು ವರ್ಷದಲ್ಲಿ ಇದನ್ನು 100 ಕೋಟಿ ವಹಿವಾಟಿನ ಕಂಪನಿ ಮಾಡಬಲ್ಲೆ ಎಂದು ಆತ್ಮವಿಶ್ವಾಸದಿಂದ ಹೇಳಿದರು ಬಾಲಾಜಿ ರಾವ್.
ಕೆಂಪು ಮಣಸಿನಕಾಯಿ ಪುಡಿ, ಅರಿಶಿಣ, ಬಜ್ಜಿ ಬೋಂಡ ಮಿಕ್ಸ್, ಬಿಸಿಬೇಳೆ ಬಾತ್ ಮಿಕ್ಸ್ ಪೌಡರ್ ಹೀಗೆ 30 ಬಗೆಯ ಉತ್ಪನ್ನಗಳು ನಮ್ಮಲ್ಲಿ ಸಿಗುತ್ತಿವೆ. ಮುಂದಿನ ದಿನಗಳಲ್ಲಿ ಫ್ರೋಜನ್ ಫುಡ್ಸ್ ಅಂದ್ರೆ ಇಡ್ಲಿ, ದೋಸೆ ಹಿಟ್ಟು, ಮೊಮೋ, ಪರೋಟ, ಚಪಾತಿಯನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುವ ಯೋಚನೆ ಇದೆ. ಬಂಡವಾಳದ ನೆರವು ಸಿಕ್ಕರೆ ವರ್ಷದಲ್ಲಿ ಎಲ್ಲ ಪದಾರ್ಥಗಳು ಮಾರುಕಟ್ಟೆಯಲ್ಲಿ ಇರಲಿದೆ. ಬೇಕಾದ ಬಹುತೇಕ ಪದಾರ್ಥಗಳನ್ನು ನೇರವಾಗಿ ರೈತರಿಂದಲೇ ಖರೀದಿಸುವೆ. ನಮ್ಮ ಪಶ್ಚಿಮ ಘಟ್ಟಗಳ ರೈತರಲ್ಲಿ ಕಾಳುಮೆಣಸು, ಏಲಕ್ಕಿ, ಲವಂಗ ಖರೀದಿಸುವೆ. ಉಳಿದ ಮಸಾಲೆ ಪದಾರ್ಥಗಳನ್ನು ಹೆಚ್ಚಾಗಿ ರಾಜಸ್ತಾನ ಮತ್ತು ಗುಜರಾತ್‌ನಿಂದ ಖರೀದಿಸುವೆ. ಪ್ರಸ್ತುತ 7 ಜನ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂಡಿಯಾ ಮಾರ್ಟ್‌ನಲ್ಲಿ ನಮ್ಮ ಉತ್ಪನ್ನವನ್ನು ಹಾಕಿದ್ದಾರೆ ಎಂದು ಕೇಳಿದ್ದೇನೆ. ನಾವು ನೇರವಾಗಿ ಯಾವುದೇ ಆನ್‌ಲೈನ್ ವ್ಯವಹಾರ ಮಾಡುತ್ತಿಲ್ಲ ಎಂದೂ ಸ್ಪಷ್ಟವಾಗಿ ವಿವರಿಸಿದರು ಬಾಲಾಜಿ ರಾವ್.
ವಿದೇಶದಲ್ಲೂ ಪ್ರಸಿದ್ಧಿ
ವಿದೇಶದಲ್ಲಿರುವ ಅನೇಕ ಕನ್ನಡಿಗರು ನೇರವಾಗಿ ನಮ್ಮ ಉತ್ಪನ್ನಗಳನ್ನು ಕಳಿಸಲಾಗುವುದು. ಬೆಂಗಳೂರಿಗೆ ಬಂದಾಗ ನಮ್ಮ ಉತ್ಪನ್ನಗಳನ್ನು ಖರೀದಿಸಿ ಅಲ್ಲಿ ಹೋಗಿ ಹಂಚಿಕೊಳ್ಳುವುದೂ ಉಂಟು. ಬೆಂಗಳೂರಿನ ಕೆಲವು ಅಂಗಡಿಗಳಲ್ಲಿ ನಮ್ಮ ಉತ್ಪನ್ನಗಳು ದೊರೆಯುತ್ತಿವೆ. ಬೆಂಗಳೂರಿನಲ್ಲಿ ನಮ್ಮ ಮಾರ್ಕೆಟಿಂಗ್ ಜಾಲ ಬೆಳೆಸಲು ಪ್ರಯತ್ನ ಮಾಡುತ್ತಿದ್ದೇವೆ. ವಿದೇಶದ ಅಂಗಡಿಗಳಿಗೆ ರಫ್ತು ಮಾಡುವ ಲೈಸೆನ್ಸ್, ಸರ್ಟಿಫಿಕೇಶನ್ ಇನ್ನಷ್ಟೇ ಮಾಡಿಸಬೇಕಿದೆ ಎಂದು ಹೇಳಿದರು ಬಾಲಾಜಿ ರಾವ್.
15 ಲಕ್ಷ ರೂ. ಸಬ್ಸಿಡಿ ಪಡೆಯಿರಿ
ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ ರೂಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್ಲೈನ್ ಸಂಪರ್ಕಿಸಿ - 080 – 22271192 ಅಥವಾ 22271193. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ. www.kappec.karnataka.gov.in ವೆಬ್ಸೈಟ್ನಲ್ಲೂ ಮಾಹಿತಿ ಪಡೆಯಬಹುದು.