ಗಾಯತ್ರಿ ಕಾಫಿ ಎಂಬ ಹಳೇ ಬೇರಿನಲಿ ಚಿಗುರೊಡೆದ ಗೆಟ್ ಕಾಫಿ

Published : Jul 31, 2025, 10:09 AM IST
Getcoffee

ಸಾರಾಂಶ

1956ರಲ್ಲಿ ಸತ್ಯನಾರಾಯಣ ಶೆಟ್ಟಿ ಅವರು ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಶುರು ಮಾಡಿದ ಗಾಯತ್ರಿ ಕಾಫಿ ಎಂಬ ಕಾಫಿ ಅಂಗಡಿಯು ಇಂದು ಬೆಂಗಳೂರಲ್ಲಿ ಗೆಟ್ ಕಾಫಿಯಾಗಿ ಬದಲಾಗಿದೆ

ಗಾಯತ್ರಿ ಕಾಫಿ ಎಂಬ ಹಳೇ ಬೇರಿನಲಿ ಗೆಟ್ ಕಾಫಿ ಚಿಗುರೊಡೆದು ಬೆಳವಾಗ.. 

1956ರಲ್ಲಿ ಸತ್ಯನಾರಾಯಣ ಶೆಟ್ಟಿ ಅವರು ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಶುರು ಮಾಡಿದ ಗಾಯತ್ರಿ ಕಾಫಿ ಎಂಬ ಕಾಫಿ ಅಂಗಡಿಯು ಇಂದು ಬೆಂಗಳೂರಲ್ಲಿ ಗೆಟ್ ಕಾಫಿಯಾಗಿ ಬದಲಾಗಿದೆ. ಬೆಳೆಯತೊಡಗಿದೆ. ಸತ್ಯನಾರಾಯಣ ಶೆಟ್ಟಿ ಅವರ ಪುತ್ರ ಲಕ್ಷ್ಮೀಪತಿ ಗಾಯತ್ರಿ ಕಾಫಿಯನ್ನು ಮಧುಗಿರಿಯಿಂದ ಬೆಂಗಳೂರಿನ ವಿದ್ಯಾಪೀಠ ಸಮೀಪದ ಶ್ರೀನಿವಾಸನಗರಕ್ಕೆ ತಂದು ನೆಲೆ ನಿಂತರು. 

ಈಗ ಲಕ್ಷ್ಮೀಪತಿ ಅವರ ಪುತ್ರ ಅಕ್ಷಯ್ ಮೇದಾ ತಮ್ಮ ಕುಟುಂಬದ ವ್ಯಾಪಾರಕ್ಕೆ ಉದ್ಯಮದ ರೂಪ ಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಶಾಲೆ ಮುಗಿದು ಕಾಲೇಜು ಸೇರಿದಾಗಲೇ ತಂದೆ ಲಕ್ಷ್ಮೀಪತಿ ಜೊತೆ ಕಾಫಿ ಅಂಗಡಿ ವ್ಯವಹಾರ ಗಮನಿಸುತ್ತಲೇ ಬಿಎಸ್ಸಿ ಪದವಿ ಪಡೆದರು ಅಕ್ಷಯ್ ಮೇದಾ. ತಮ್ಮ ಕುಟುಂಬದ ಕಾಫಿ ವ್ಯವಹಾರವನ್ನೇ ದೊಡ್ಡ ರೂಪದಲ್ಲಿ ಮಾಡಬೇಕು ಅನ್ನೋ ಕನಸ್ಸನ್ನು ಕಾಲೇಜು ದಿನಗಳಲ್ಲೇ ಕಂಡವರು ಅಕ್ಷಯ್​. 2008ರಲ್ಲಿ ಬಿಎಸ್ಸಿ ಪದವಿ ಮುಗಿಯತ್ತಿದ್ದಂತೆ ಪೂರ್ಣ ಪ್ರಮಾಣದಲ್ಲಿ ಕಾಫಿ ವ್ಯಾಪಾರದಲ್ಲಿ ತೊಡಗಿದರು. 

ತಾತ ಮತ್ತು ತಂದೆ ಮಾಡಿದ್ದಷ್ಟನ್ನೇ ಮುಂದುವರೆಸುವ ಬದಲು ದೊಡ್ಡದಾಗಿ ಬೆಳೆಸಬೇಕೆಂದು ಕಾಫಿ ಕುರಿತ ಅಧ್ಯಯನಗಳಲ್ಲಿ ತೊಡಗಿಕೊಂಡರು. ಕಾಫಿ ಬೋರ್ಡಿನ ಇನ್​ಕ್ಯೂಬೇಷನ್ ಸೆಂಟರ್​​ನಲ್ಲೂ ಸೇರಿಕೊಂಡರು. ಇದೆಲ್ಲದರ ಫಲವಾಗಿ 2016ರಲ್ಲಿ ಮಿಹಿರಾ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಸ್ಥಾಪಿಸಿದರು. ಅದರ ಮೂಲಕ ಮನೆ ಬಾಗಿಲಿಗೆ ಹೋಗಿ ಅವರಿಷ್ಟದ ಕಾಫಿ ಬ್ಲೆಂಡ್​ ಪೌಡರ್ ಮಾಡಿಕೊಡುವ ಮೊಬೈಲ್ ಸೇವೆ ಆರಂಭಿಸಿದರು ಅಕ್ಷಯ್​. 

ಕಾಫಿ ಅಂಗಡಿಯಲ್ಲಿರುವ ಎಲ್ಲ ಪರಿಕರಗಳನ್ನು ಒಂದು ಟ್ರಕ್ ನಲ್ಲಿ ಜೋಡಿಸಿ ಬೇಕಂದಲ್ಲಿಗೆ ಒಯ್ದು ಕಾಫಿ ಪುಡಿ ಮಾಡಿಕೊಡುವ ಆ ವ್ಯವಹಾರವು 3 ಸಾವಿರ ಗ್ರಾಹಕರನ್ನು ಪಡೆದುಕೊಂಡು ಒಂದು ಹಂತಕ್ಕೆ ಚನ್ನಾಗಿ ನಡೆಯುತಿತ್ತು. ಒಂದು ಮೂರು ನಾಲ್ಕು ವರ್ಷ ನಡೆಸಿದ ಮೇಲೆ ಟ್ರಕ್ ಸ್ವರೂಪ ಬದಲಾಯಿಸಲೆಂದು ಅದನ್ನು ನಿಲ್ಲಿಸಿದರು. 

ಆಗ ಶುರುವಾಗಿದ್ದೇ ಗೆಟ್​ಕಾಫಿ ಐಡಿಯಾ. 2020ರಲ್ಲಿ ಗೆಟ್ ಕಾಫಿ ಬ್ರ್ಯಾಂಡ್​​ನಲ್ಲಿ ಕಾಫೀಯ ವಿವಿಧ ಬ್ಲೆಂಡ್​ಗಳನ್ನು ಪ್ರಾಯೋಗಿಕವಾಗಿ ಸಿದ್ಧಪಡಿಸಿ ಮಾರತೊಡಗಿದರು. ಮಗ ಏನೋ ಮಾಡಲು ಹೋಗಿ ಏನು ಮಾಡಿಬಿಟ್ಟಾನು ಎಂಬ ಅಪ್ಪನ ಆತಂಕ ನಿವಾರಿಸಿಯೇ ಮುನ್ನಡೆದ ಅಕ್ಷಯ್​ ಕಪೆಕ್ ಮೂಲಕ ಪಿಎಂಎಫ್​ಎಂಇ ಯೋಜನೆಯಿಂದ 11 ಲಕ್ಷ ಸಾಲ ಪಡೆದರು. 

ಇದಕ್ಕೆ ಐದೂವರೆ ಲಕ್ಷ ರೂಪಾಯಿ ಸಬ್ಸಿಡಿ ಪಡೆದು, ಇದೀಗ ಕೇವಲ 20 ಸಾವಿರ ಸಾಲ ಬಾಕಿ ಉಳಿದಿದೆ ಎಂದು ಕನ್ನಡಪ್ರಭದೊಂದಿಗೆ ಖುಷಿ ಹಂಚಿಕೊಂಡರು ಅಕ್ಷಯ್ ಮೇದಾ. ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧಿಕಾರಿಗಳು ತುಂಬ ಸಲೀಸಾಗಿ ನನಗೆ ಯೋಜನೆ ರೂಪಿಸಿ, ಸಾಲ ಕೊಡಿಸಿಕೊಟ್ಟರು. ಜೊತೆಗೆ ಮಾರ್ಕೆಟಿಂಗ್ ಮತ್ತು ವಿವಿಧ ಬ್ಯೂಸಿನೆಸ್ ವ್ಯಕ್ತಿಗಳ ಪರಿಚಯವೂ ಕಪೆಕ್ ಮೂಲಕ ಆಯಿತು. ಕೇಟರಿಂಗ್ ಮಾಡುವವರು, ಅಮೆಜಾನ್​, ಬ್ಲಿಂಕಿಂಟ್​, ಜೀಯೋ ಆನ್ಲೈನ್ ತಾಣಗಳಲ್ಲು ಗೆಟ್ ಕಾಫಿ ಜನಪ್ರಿಯಗೊಂಡಿದೆ. 

ಮೂರು ವರ್ಷದ ಹಿಂದೆ 20 ಲಕ್ಷದೊಳಗಿದ್ದ ನಮ್ಮ ವಾರ್ಷಿಕ ವಹಿವಾಟು ಈಗ 92 ಲಕ್ಷ ರೂಪಾಯಿಗೆ ಏರಿದೆ. ಉದಯಂ, ಆರಂಭಂ, ಅಮೋಘ, ರಾಯಲ್ ಅರೋಮಾ, ಗೋಲ್ಡನ್ ಅರೋಮಾ, ರಾಯಲ್ ರೋಬಸ್ಟಾ ಎಂಬ ಆರು ವೈವಿಧ್ಯದ ಕಾಫಿ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿದೆ. ಕೊಡಗು ಮತ್ತು ಚಿಕ್ಕಮಗಳೂರಿಂದ ಕಾಫಿ ಕೊಂಡುಕೊಳ್ಳುತ್ತೇವೆ. ಜೊತೆಗೆ ಎರಡು ಬಗೆಯ ಟೀ ಕೂಡ ಮಾರುತ್ತಿದ್ದೇವೆ ಎಂದರು 

ಅಕ್ಷಯ್ ಮೇದಾ ಬೇಕಾದಂತೆ ಕಾಫಿ: ಇವರು ರೂಪಿಸಿರುವ ಬ್ಲೆಂಡ್ ಅಲ್ಲದೇ ಗ್ರಾಹಕರು ಬಯಸಿದಂತೆ, ಬಯಸಿದಷ್ಟು ಕಾಫಿ-ಚಿಕೋರಿ ಮಿಶ್ರಣ ಮಾಡಿಯೂ ಕಾಫಿ ಕೊಡಲಾಗುತ್ತದೆ. ಅವರ ಬ್ರ್ಯಾಂಡ್ ಹೆಸರು ಹಾಕಿಕೊಂಡು ಮಾರುವ ವೈಟ್ ಲೇಬಲಿಂಗ್​​ ಮೂಲಕವೂ ಕಾಫಿ ಮಾಡಿಕೊಡುತ್ತಿದ್ದೇವೆ. ಶ್ರೀನಿವಾಸ ನಗರದಲ್ಲಿರುವ ನಮ್ಮ ಗಾಯತ್ರಿ ಕಾಫಿಯೇ ಗೆಟ್ ಕಾಫಿಯ ಔಟ್ಲೆಟ್ ಮಾಡಿದ್ದೇವೆ. ಇದಲ್ಲದೆ ದೊಡ್ಡ ಎಕ್ಸಿಬಿಷನ್​ಗಳು, ಕಾರ್ಯಕ್ರಮಗಳಲ್ಲೂ ಸ್ಟಾಲ್ ಹಾಕಿ ಪ್ರಚಾರ ಕೈಗೊಂಡಿದ್ದೇವೆ. ನಮ್ಮ ಉತ್ಪನ್ನ ಬೇಕಾದವರು www.getcoffee.in ಗೆ ಲಾಗಿನ್ ಆಗಿಯೂ ಕಾಫಿ ಖರೀದಿಸಬಹುದು.

ಈಗ ಪ್ರತಿ ತಿಂಗಳು ಎರಡು ಟನ್ ಕಾಫಿ ಪುಡಿ ವ್ಯಾಪಾರ ಆಗುತ್ತಿದೆ. ಅದನ್ನು ಇನ್ನೆರಡು ವರ್ಷಗಳಲ್ಲಿ ಪ್ರತಿ ತಿಂಗಳು ಹತ್ತು ಟನ್​​ ಉತ್ಪಾದನೆ, ಮಾರಾಟ ಮಾಡುವ ಗುರಿ ಹಾಕಿಕೊಂಡಿದ್ದೇನೆ. ಕಾಫಿ ಡಿಕಾಕ್ಷನ್​ ಅನ್ನು ವಿಶೇಷ ರೂಪದಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಪ್ರಯೋಗ ನಡೆದಿದೆ. ಕಾಫಿ ಜೊತೆಗೆ ಮಿಹಿರಾ ಫುಡ್ಸ್ ಮೂಲಕ ಇಡ್ಲಿ, ದೋಸೆ ಹಿಟ್ಟು, ಬಾದಾಮ್ ಪೌಡರ್​, ಚಕ್ಲಿ ನಿಪ್ಟಟ್ಟು ತಿನಿಸುಗಳನ್ನೂ ಮಿಹಿರಾ ಫುಡ್ಸ್​ ಮೂಲಕ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ಮಾಡುತ್ತಿದ್ದೇನೆ. ಈಗಿರುವ ಜಾಗ ಚಿಕ್ಕದು ಅದಕ್ಕಾಗಿ ಹೊಸ ಜಾಗದ ಹುಡುಕಾಟದಲ್ಲಿದ್ದೇನೆ ಎಂದು ತಮ್ಮ ಭವಿಷ್ಯದ ಯೋಜನೆಗಳನ್ನು ವಿವರಿಸಿದರು ಅಕ್ಷಯ್​​. ಗೆಟ್​ಕಾಫಿ ಉತ್ಪನ್ನಗಳನ್ನು ಪಡೆಯಲು ಸಂಪರ್ಕಿಸಿ – 9986552253 ಅಥವಾ www.getcoffee.in ಗೆ ಲಾಗಿನ್ ಆಗಿ. 

15 ಲಕ್ಷ ರೂ. ಸಬ್ಸಿಡಿ ಪಡೆಯಿರಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ರಾಜ್ಯ ಸರ್ಕಾರ 9 ಲಕ್ಷ ಹಾಗೂ ಕೇಂದ್ರ ಸರ್ಕಾರ 6 ಲಕ್ಷ ಸೇರಿ ಒಟ್ಟು 15 ಲಕ್ಷ ರೂಪಾಯಿವರೆಗೂ ಸಹಾಯಧನ ದೊರೆಯಲಿದೆ. ಹೊಸ ಉದ್ಯಮ ಅಥವಾ ಉದ್ಯಮ ವಿಸ್ತರಣೆಗೂ ಯೋಜನೆಯಲ್ಲಿ ಅವಕಾಶವಿದೆ. ಬೆಲ್ಲ ತಯಾರಿಕೆ ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳು ಇದರ ಲಾಭ ಪಡೆಯಬಹುದು. ಆಹಾರ ಉದ್ಯಮಿಗಳಾಗಲು ಸಾಲ ಸಬ್ಸಿಡಿ ಪಡೆಯಲು ಹಾಗೂ ಮತ್ತಿತರ ವಿವರಗಳಿಗಾಗಿ ಕಪೆಕ್ ಹೆಲ್ಪ್​ಲೈನ್ ಸಂಪರ್ಕಿಸಿ - 080 – 22271192 ಅಥವಾ 22271193. ಕೆಲಸದ ದಿನಗಳಂದು ಬೆಳಗ್ಗೆ 10.30 ರಿಂದ ಸಂಜೆ 4ರವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಿರಿ. www.kappec.karnataka.gov.in ವೆಬ್​ಸೈಟ್​ನಲ್ಲೂ ಮಾಹಿತಿ ಪಡೆಯಬಹುದು.

PREV
Read more Articles on

Recommended Stories

100 ರೊಟ್ಟಿಯಿಂದ ಶುರುವಾದ ವ್ಯಾಪಾರ 10 ದೇಶಗಳಲ್ಲಿ ವಿಸ್ತರಣೆ
'ವಕೀಲರ ಅಂಕಪಟ್ಟಿ ಪರಿಶೀಲನೆ ಅಧಿಕಾರ ಇದೆ'