ಮಳವಳ್ಳಿ: ತಾಲೂಕಿನ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಉದ್ಘಾಟನೆ ನೆರವೇರಿಸಲು ಅ.9 ರಂದು ಸಂಸದೆ ಸುಮಲತಾ ಅಂಬರೀಶ್ ತಾಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅಂದು ಬೆಳಗ್ಗೆ 11ಗಂಟೆಗೆ ಪಟ್ಟಣದ ಶಾಂತಿ ಸಮುದಾಯ ಭವನದಲ್ಲಿ ಸಂಸದರ ನಿಧಿ ಯೋಜನೆಯಡಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸುವರು. ನಂತರ 2023-24ನೇ ಸಾಲಿನ ಸಂಸದರ ಆದರ್ಶ ಗ್ರಾಮವಾಗಿ ಆಯ್ಕೆ ಮಾಡಿಕೊಂಡಿರುವ ತಾಲೂಕಿನ ನಾಗೇಗೌಡನದೊಡ್ಡಿಯಲ್ಲಿ ಗ್ರಾಮದ ಅಭಿವೃದ್ಧಿ ಕುರಿತು ಸಭೆ ಹಾಗೂ ತಾಲೂಕಿನ ಬಾಚನಹಳ್ಳಿ ಹಾಗೂ ನೆಟ್ಕಲ್ ಗ್ರಾಮಗಳಲ್ಲಿ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ರಾವಣಿ ಗ್ರಾಮದ ಮಹಾಲಿಂಗೇಶ್ವರಸ್ವಾಮಿ ದೇವಸ್ಥಾನದ ಬಳಿ ಸಂಸದರ ನಿಧಿ ಯೋಜನೆಯಡಿ ಅಶ್ವಥಕಟ್ಟೆ ಮತ್ತು ರಸ್ತೆ ಅಭಿವೃದ್ಧಿ ಹಾಗೂ ಪಟ್ಟಣದ ಕೊಳ್ಳೇಗಾಲ - ಮದ್ದೂರು ರಸ್ತೆಯಲ್ಲಿ ಬಸ್ ತಂಗುದಾಣ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.